Letters

Letters 29 – Guidance to Spiritual Seekers

೨೯. ‘ಈ ಜಗತ್ತಿನಲ್ಲಿ ಸರ್ವಸುಖಿಯೆಂಬವರು ಯಾರಿದ್ದಾರೆ?’ …. ಹೀಗೆ ಕೇಳುವಂತ ಸ್ಥಿತಿ ಈ ಜಗತ್ತಿನಲ್ಲಿ ಯಾಕಿದೆ?

(ಇಸವಿ ಸನ ೧೯೪೫ರಲ್ಲಿ ಡಾ|ರಮಾ ಮತ್ತು ಸುಶೀಲಾರವರಿಗೆ ಬರೆದ ಪತ್ರ)

ಮಂಗಳೂರು
೨೫- ೧೧- ೧೯೪೫

||ಶ್ರೀರಾಮ ಸಮರ್ಥ||

ಸರ್ವ ಭಾವಾನ್ತರಸ್ಯಾಯ ಚೈತ್ಯಮುಕ್ತ ಚಿದಾತ್ಮನೇ|
ಪ್ರತ್ಯಕ್ಚೈತನ್ಯರೂಪಾಯ ಮಹ್ಯಮೇವ ನಮೋನಮಃ||
ಚಿ.ಡಾ|ಸೌ|ರಮಾ, ಸುಶೀಲಾ ಮತ್ತು ರಾಜಾ ನಿಮಗೆಲ್ಲರಿಗೂ ಆಶೀರ್ವಾದ,
‘ನಿಮಗಾದರೋ ದೊಡ್ಡ ಸಂಸಾರವಿದೆ. ನಮಗಾದರೋ ನಿಮ್ಮ ಹೊರತು ಬೇರಾರಿಲ್ಲ’
ಶ್ರೀ ಸಮರ್ಥರು ತಮ್ಮ ಒಂದು ಕುಟುಂಬವತ್ಸಲ ಶಿಷ್ಯನಿಗೆ ಬರೆದ ಪತ್ರದ ಈ ವಾಕ್ಯ … ನೆನಪಾಯಿತು. ಬಹಳ ದಿನಗಳಾದವು. ನಿಮ್ಮ ಕಡೆಯಿಂದ ಪತ್ರ ನನಗೆ ಬರಲೇ ಇಲ್ಲ.

‘ಆಕಾಶದಲ್ಲಿ ಅತಿ ಎತ್ತರದಲ್ಲಿ ಗಿಡುಗ ಸುತ್ತುತ್ತಿರುತ್ತಿದ್ದರೂ ಅದರ ಲಕ್ಷವೆಲ್ಲಾ ಕೆಳಗೆ ಗಿಡದ ಮೇಲಿರುವ ತನ್ನ ಮರಿಗಳ ಮೇಲೆಯೇ ಇರುತ್ತದೆ’
‘ಮಕ್ಕಳ ಮೇಲಿನ ತಾಯ್ತಂದೆಗಳ ಪ್ರೀತಿ ಮಕ್ಕಳಿಗೇನು ಗೊತ್ತು?’
ಇಷ್ಟು ದಿನ ನನಗೆ ನಿಮ್ಮ ವಿಳಾಸವೇ ಗೊತ್ತಾಗಲಿಲ್ಲ. ಕೊನೆಗೆ ಆ ಭಕ್ತವತ್ಸಲ ಪರಮೇಶ್ವರನ ಅಚಿಂತ್ಯಶಕ್ತಿಯ ಮೇಲೆಯೇ ಭಾರ ಹಾಕಿ ನಾನು ಸುಮ್ಮನೇ ಕುಳಿತುಕೊಳ್ಳಬೇಕಾಯಿತು. ಅದಲ್ಲದೇ ಮತ್ತೇನು ಮಾಡಲಿಕ್ಕೆ ಶಕ್ಯವಿತ್ತು? ಪರಮೇಶ್ವರನನಂತಹ ಸರ್ವಜ್ಞ ಮತ್ತು ಸರ್ವಸಮರ್ಥ ಮತ್ತಾರಿದ್ದಾರೆ?
ಮುಂದೆ ನಾನು ಏಕಾಂತಕ್ಕೆ ಹೋದೆ.
ಈಗ ಚಿ. ದಿನಕರನ ಪತ್ರ ಕೈಗೆ ಸಿಕ್ಕಿತು. ‘ಅದೇನು ಬರೆದಿದ್ದಾನೆ?’ ಎಂದು ಆಶೆಯಿಂದ ನೋಡುತ್ತಿರುವಾಗ, ಪತ್ರದಲ್ಲಿನ ‘ಆದರೆ’ ಎಂಬ ಶಬ್ಧ ಮತ್ತು ಅದರ ಮುಂದಿನ ಹೇಳಿಕೆ ಓದಿ, ತುಂಬಾ ಸಂಭ್ರಮದಿಂದ ನಡೆಯುತ್ತಿರುವಾಗ, ಅಕಸ್ಮಾತ್ ಮುಗ್ಗರಿಸಿದಂತೆ, ಅವಸ್ಥೆಯಾಯಿತು. ಆದರೂ, ದುಃಖದಲ್ಲೂ ಸುಖವೆನ್ನುವಂತೆ, ಇದ್ದದ್ದರಲ್ಲೇ ಚಿ.ಡಾಕ್ಟರ ಮತ್ತು ರಾಜಾ ಇವರಿಬ್ಬರೂ ಸುಧಾರಿಸಹತ್ತಿದ್ದಾರೆ, ಕೆಲ ದಿನಗಳಲ್ಲಿ ದೇಹಪ್ರಕೃತಿ ಮೊದಲಿನಂತಾಗಬಹುದು, ಎಂದು ಓದಿ ಸಮಾಧಾನವಾಯಿತು.
‘ಈ ಜೀವನದಲ್ಲಿ ಅತ್ಯಂತ ಬೇಸರ ಬಂದುಹೋಗಿದೆ’ ಎಂಬ ಪತ್ರದಲ್ಲಿನ ವಾಕ್ಯ ನೋಡಿ, ಲೌಕಿಕ ಜೀವನವನ್ನು ಇಷ್ಟು ಅಸಹ್ಯವಾಗಿ ಮಾಡುವ ಆ ದೇವರು, ತನ್ನ ಭಕ್ತರಿಗೆ, ಅಲೌಕಿಕ ಸುಖ ಕೊಡಲಿಕ್ಕೆಂದೇ ಹೀಗೆ ಮಾಡಿರಬೇಕು ಎಂದು ಮನಸ್ಸಿನಲ್ಲಿ ಬಂತು. ಹಾಗಲ್ಲದೇ ಇದ್ದರೆ, ‘ದೇವರಿಗೆ ಭಕ್ತರ ಚಿಂತೆ’ ‘ಶರಣಾಗತನಾದ ಮೇಲೆ ದೇವರದೇ ವಜ್ರಮುಷ್ಟಿಯಲ್ಲಿ’ ಈ ರೀತಿಯ ವಾಕ್ಯಗಳ ಮತ್ತು ‘ದಯಾಸಾಗರ, ಆಪ್ತಬಂಧು, ದೀನಾನಾಥ, ಭಕ್ತವತ್ಸಲ’ ಈ ರೀತಿಯ ಶಬ್ಧಗಳ ಅರ್ಥವನ್ನೆಂತು ಮಾಡಬೇಕು?
ಈ ಜಗತ್ತಿನ ಜೀವನದಲ್ಲಿ ಯಾವ ಅಡೆತಡೆ ಪರಮಾತ್ಮನು ನಿರ್ಮಾಣ ಮಾಡಿದ್ದಾನೋ, ಆ ಅಡ್ಡಿ – ಅಡಚಣಿಗಳು, ಭಗವಂತನು ಉದ್ಘೋಷಿಸಿದ ‘ಎಲ್ಲವನ್ನೂ ಬಿಟ್ಟು ನನ್ನನ್ನು ಗುರುತಿಸು’ , ‘ಅನಿತ್ಯಮ್ ಸುಖಂ ಲೋಕಮ್ ಇಮಂ ಪ್ರಾಪ್ಯ ಭಜಸ್ವಮಾಮ್’ ಈ ಮೊದಲಾದ ಭಗವಂತನ ಉಪದೇಶಗಳ ಅರಿವು ಮೂಡಿಸಿ ಮುಂದೊಯ್ಯಲೆಂದೇ, ಅವರವರಿಗೆ ತಕ್ಕಾಗಿ ಒದಗಿಸುವ ಅನುಭವಗಳು, ಎಂದು ಒಬ್ಬ ಸತ್ಪುರುಷರ ಬಾಯಿಂದ ನಾನು ಸಣ್ಣವನಿರುವಾಗ ಕೇಳಿದ್ದೆ. ಅದಲ್ಲದಿದ್ದರೆ, ಜೀವಿಯು ಈ ಭೋಗಭೂಮಿಯಲ್ಲಿ ದುಃಖ-ದಾರುಣ್ಯ, ಬವಣೆ ಯಾಕೆ ಕಾಣಬೇಕು?

‘ಈ ಜಗತ್ತಿನಲ್ಲಿ ಸರ್ವಸುಖಿಯೆಂಬವರು ಯಾರಿದ್ದಾರೆ?’ ….. ಹೀಗೆ ಕೇಳುವಂತ ಸ್ಥಿತಿ ಈ ಜಗತ್ತಿನಲ್ಲಿ ಯಾಕಿದೆ?’ ‘ಒಂದೆಡೆ ಒಂದು ರೀತಿಯಾದರೆ ಇನ್ನೊಂದೆಡೆ ಇನ್ನೊಂದು ರೀತಿ’…. ಎಲ್ಲೆಡೆಯೂ ‘ಒಂದಿದ್ದರೆ ಒಂದಿಲ್ಲ’ ಈ ರೀತಿ ಕೊರತೆಯೇ ಯಾವಾಗಲೂ ಏಕೆ ಸರ್ವತ್ರ ಕಾಣಬೇಕು?

(ಈ ಪತ್ರ ಮುಂದುವರಿಯುವದು)

home-last-sec-img