Letters

Letters 49 – Travelogue and Answers to Wordly Problems

೪೯. ನೋಡಿ! ಎಷ್ಟಾಗುತ್ತದೆಯೋ ಅಷ್ಟು ನಿಮ್ಮ ಜೀವನವನ್ನು ದಿವ್ಯ ಮಾಡಿಕೊಳ್ಳಿರಿ! ನಿಮ್ಮ ಭಾವನೆ ಮತ್ತು ಕ್ರಿಯೆ ಎಲ್ಲ ದೃಷ್ಟಿಯಿಂದಲೂ ಸ್ವಪರತಾರಕ ಆಗಬೇಕು. ಇದನ್ನು ಅರ್ಥಮಾಡಿಕೊಂಡು ನಡೆಯುವವರಿಗೆ ಮೋಕ್ಷ ಸಿಗುತ್ತದೆ.

(ಇಸವಿ ಸನ ೧೯೪೮ರ ಸುಮಾರಿಗೆ ಚಿ. ದಿನಕರ ಬುವಾ ರಾಮದಾಸಿ ಸಜ್ಜನಗಡ ಇವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||

ಚಿ. ದಿನಕರನಿಗೆ ಆಶೀರ್ವಾದ,
ನಾನು ಮಂಗಳೂರಿಗೆ ಬಂದ ಮೇಲೆ ನಿನ್ನ ಎರಡು ಪತ್ರಗಳು ಬಂದವು. ಶ್ರೀಧರಕುಟಿಯ ಖರ್ಚಿಗೆಂದು ಎಂಟು ನೂರು ರೂಪಾಯಿ ಚಿ. ಗಂಗಕ್ಕನ ಹತ್ತಿರ ಕೊಟ್ಟಿದ್ದೇನೆ. ಸೌ. ಸಾವಿತ್ರಿಯೂ ಕಾಶಿಗೆ ಹೋಗಿದ್ದಾಳೆ. ಬಂದು ಹೋಗುವವರ ಮತ್ತು ಅಲ್ಲಿ ಕಾಯಂ ಇರುವವರ ೭-೮ ಜನರ ಲೆಕ್ಕದಂತೆ, ಹಾಗೆಯೇ ಅವರ ಬಟ್ಟೆಬರೆ ಎಂದು, ಮುಂದೆ ನನ್ನ ಹತ್ತಿರ ಹಣ ಉಳಿಯುತ್ತದೆಯೋ ಇಲ್ಲವೋ ಎಂಬ ದೃಷ್ಟಿಯಿಂದ ಒಂದೇ ಸಲ ಆ ಹಣ ಕೊಟ್ಟಿದ್ದೇನೆ. ನನಗೆ ಇಲ್ಲಿ ಬಹಳ ಖರ್ಚು ಇರುತ್ತದೆ. ಅದರಲ್ಲೇ ಆ ಆ ಜನರು ಹೇಳಿದ ಸೇವೆ ಅವರು ಮಾಡದೇ ಹೋದರೆ ಪ್ರಸಂಗ ಬಿದ್ದಲ್ಲಿ ಪಾದಪೂಜೆಯ ರೊಕ್ಕದಿಂದಲೇ ದೇವಾದಿಗಳ ಕಾರ್ಯ ಮಾಡಬೇಕಾಗುತ್ತದೆ. ಈ ವರ್ಷ ಹಾಗೇ ಆಯಿತು. ಈ ಸಲ ಹಣ ಹೆಚ್ಚಾಗಿ ಬರದೇ ಹೋದದ್ದರಿಂದ ಇದ್ದ ಬಿದ್ದ ಎಲ್ಲ ದುಡ್ಡೂ ಖರ್ಚಾಗಿ ಕೈಗೆತ್ತಿಕೊಂಡ ಕಾರ್ಯ ಮಳೆ ಪ್ರಾರಂಭವಾಗುವ ಮೊದಲೇ ಮಾಡಿ ಮುಗಿಸಲಿಕ್ಕೆ ೫-೬ಸಾವಿರ ರೂಪಾಯಿಗಳ ಸಾಲ ತೆಗೆಯಬೇಕಾಯಿತು. ಸಧ್ಯ ಶ್ರೀವದ್ದಳ್ಳಿಯ ಕೆಲಸ ಪ್ರಾರಂಭವಾಗಿದೆ. ಶ್ರೀಕರಿಕಾನ ಪರಮೇಶ್ವರಿಯ ಕಾರ್ಯ ಪೂರ್ತಿಗೊಂಡಿತು. ಆ ದೇವಸ್ಥಾನದ ಸಂದರ್ಭದಲ್ಲಿ ಒಟ್ಟಿನ ಮೇಲೆ ೮೩ಸಾವಿರದ ವರೆಗೆ ಖರ್ಚಾಯಿತು. ಇಷ್ಟು ಖರ್ಚು ಮಾಡಿ ಕೇವಲ ದೇವಸ್ಥಾನದ ಕೆಲಸಕ್ಕಷ್ಟೇ ಸಾಕಾಯಿತು. ಪೂಜಾರಿಗಳ ಬಗ್ಗೆ ಮತ್ತು ಬಂದು ಹೋಗುವವರ ಬಗ್ಗೆ ಎಂದು ಇನ್ನೂ ೩೦-೪೦ಸಾವಿರದ ಕೆಲಸ ಹಾಗೇ ಉಳಿದಿದೆ. ಈ ಕೆಲಸ ಅಲ್ಲಿಯ ಜನರ ಹತ್ತಿರ ಒಪ್ಪಿಸಿ ನಾನು ಆ ಕಾರ್ಯದಿಂದ ಬಿಡುಗಡೆ ಹೊಂದಿದ್ದೇನೆ. ಚಿ.ಗಂಗಕ್ಕಾನ ಹತ್ತಿರ ಶ್ರೀಧರ ಕುಟಿಯ ಖರ್ಚಿಗಾಗಿ ಹಣ ಕೊಟ್ಟಿದ್ದರಿಂದ ಚಿ.ಸಬನೀಸನಿಂದ ಬಂದ ಹಣ ಅಲ್ಲಿ ಕೊಡುವ ಅವಶ್ಯಕತೆ ಇಲ್ಲ. ಆ ಹಣ ಹಾಗೇ ಕೂಡಿಸಿ ಇರಲಿ. ಅದನ್ನೇನು ಮಾಡಬೇಕೆಂಬುದನ್ನು ಮುಂದೆ ತಿಳಿಸುತ್ತೇನೆ. ಎಲ್ಲಿ ಕಡಿಮೆಯಾಗುತ್ತದೆಯೋ ಅಲ್ಲಿ ಅದನ್ನು ಉಪಯೋಗಿಸಬಹುದು. ಚಿ.ಖರೇ ಶಾಸ್ತ್ರಿ ಬರುವ ಹುಣ್ಣಿವೆಯ ಸುಮಾರಿಗೆ ಶ್ರೀಗಡಕ್ಕೆ ಬಂದು ತಲುಪಬಹುದು. ವೇದಪಾಠ, ಆತ್ಮಪುರಾಣಾದಿ ಕಾರ್ಯಕ್ರಮ ನಡೆಯಬಹುದು. ನನ್ನ ಪ್ರಕೃತಿ ವಿಶ್ರಾಂತಿಯಿಂದ ಸಾವಕಾಶ ಸುಧಾರಿಸಹತ್ತಿದೆ. ನಾವೂ ಈಸಾಡಿ ತೇಲುತ್ತ, ಸರ್ವತೋಪರಿ ನಮ್ಮಆಚರಣದಿಂದ ಬೇರೆಯವರಿಗೂ ತಾರಕರಾದೆವೆಂದರೇನೇ ನಮ್ಮ ಜೀವನದ ಉದ್ಧಾರವಾಗುವದು. ಕೊನೆಯಲ್ಲಿ ಒಂದೇ ಆನಂದಸ್ವರೂಪ ಬಿಟ್ಟು ಮತ್ತಿನ್ನೇನು ಇಲ್ಲ ಎಂಬ ಅನುಭವ ಸ್ಥಿರವಾಗುವದು.

‘ನಿರತಿಶಯಾನಂದಾವಾಪ್ತಿ ಮೋಕ್ಷಸ್ಯ ಲಕ್ಷಣಮ್’
ನೋಡಿ! ಎಷ್ಟಾಗುತ್ತದೆಯೋ ಅಷ್ಟು ನಿಮ್ಮ ಜೀವನವನ್ನು ದಿವ್ಯ ಮಾಡಿಕೊಳ್ಳಿರಿ! ನಿಮ್ಮ ಭಾವನೆ ಮತ್ತು ಕ್ರಿಯೆ ಎಲ್ಲ ದೃಷ್ಟಿಯಿಂದಲೂ ಸ್ವಪರತಾರಕ ಆಗಬೇಕು. ಇದನ್ನು ಅರ್ಥಮಾಡಿಕೊಂಡು ನಡೆಯುವವರಿಗೆ ಮೋಕ್ಷ ಸಿಗುತ್ತದೆ.
‘ಯೇ ತು ವೃತ್ತಿ ವಿಜಾನಂತಿ ಜ್ಞಾತ್ವಾಪಿವರ್ಧಯಂತಿ ಯೇ|
ತೇ ವೈ ಸನ್ಯಾಸಿನೋ ಧನ್ಯಾ ವಂದ್ಯಾಸ್ವೇ ಭುವನತ್ರಯೇ||’
‘ಜಗತ್ತಿನಲ್ಲಿ ಧನ್ಯನು ಆ ದಾಸ ಸರ್ವೋತ್ತಮನು’

ಹಾಗಿದ್ದರಿಂದ ‘ಯಾವ ಉತ್ತಮ ಲಕ್ಷಣಗಳನ್ನು ಶ್ರೀಸಮರ್ಥರು ಹೇಳಿದ್ದಾರೋ ಆ ಎಲ್ಲ ಉತ್ತಮ ಲಕ್ಷಣಗಳು ನಿಮ್ಮೆಲ್ಲರಲ್ಲಿ ಅಂತರ್ಗತವಾಗಲಿ’ ಹೀಗೆ ಶ್ರೀಸಮರ್ಥರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಎಲ್ಲರಿಗೂ ಆಶೀರ್ವಾದಗಳು.

||ಸರ್ವೇ ಜನಾಃ ಸುಖಿನೋ ಭವಂತು||

ಇತಿ ಶಮ್|
ಶ್ರೀಧರ

home-last-sec-img