Literature

ಭರತನಿಗೆ ಉಪದೇಶ

ಭರತ! ನನ್ನ ವನವಾಸಕ್ಕೆ ತಾಯಿ ಕೈಕೇಯಿಯಾಗಲೀ, ತಂದೆ ದಶರಥ ಮಹಾರಾಜನಾಗಲೀ ಕಾರಣರಾಗುವದಿಲ್ಲ. ಯೋಗವೆಂಬುದೊಂದು ಪ್ರತಿಯೊಬ್ಬರಿಗೂ ಇದ್ದೇ ಇರುವದು. ಅದು ಯಾರನ್ನಾದರೂ ಮುಂದುಹಾಕಿ ತನ್ನ ಕಾರ್ಯವನ್ನು ಮಾಡಿಸುವದು. ಈ ಯೋಗಕ್ಕೆ ಈಶಸಂಕಲ್ಪ, ಭವಿತವ್ಯ, ದೈವ, ಪ್ರಾರಬ್ದಾದಿ ಹೆಸರುಗಳು ಇರುವವು. ಎಲ್ಲರೂ ಇದಕ್ಕೆ ಒಳಪಟ್ಟವರೇ ಸರಿ. ತಾಯಿಯ ಮೇಲೆ ಬೇಸರ ಬೇಡ. ಇದನ್ನು ಮನಸ್ಸಿಲ್ಲಿಟ್ಟು ವ್ಯಥೆಪಡಬೇಡ.

ಸರ್ವೇಕ್ಷಯಾಂತಾ ನಿಚಯಾಃ ಪತನಾಂತಾಃ ಸಮುಚ್ಛ್ರಯಾಃ|
ಸಂಯೋಗಾ ವಿಪ್ರಯೋಗಾಂತಾಃ ಮರಣಾಂತಂ ಚ ಜೀವಿತಂ||

ಇಲ್ಲಿ ಯಾವುದೊದೂ ಶಾಶ್ವತವಲ್ಲ. ನಶಿಸುವ ಕಾಲದವರೆಗೆ ಮಾತ್ರ ಇದ್ದು ನಂತರ ಇಲ್ಲವಾಗುವದು. ಕಷ್ಟಪಟ್ಟು ಶೇಖರಿಸಿದ ಹಣವೂ ಅದರ ಅವಧಿಯು ತೀರಿದೊಡನೆ ಆಶ್ಚರ್ಯಕರವಾಗಿ ಇಲ್ಲದಂತಾಗುವದು. ಪ್ರಯತ್ನಪಟ್ಟು ಬ್ರಹ್ಮಪಟ್ಟವನ್ನೇ ದೊರಕಿಸಿಕೊಂಡರೂ ಅದಕ್ಕೂ ಕಾಲದ ಅವಧಿ ಇದೆ. ಕಾಲ ಬಂದರೆ ಸಾಕು. ತಂದೆ-ಮಕ್ಕಳು, ತಾಯಿ-ಮಕ್ಕಳು, ಸತಿ-ಪತಿಗಳು ತಾನಾಗಿ ಅಗಲುವರು. ಕೊನೆಗೆ ಮರಣವಂತೂ ಯಾರಿಗೂ ಬಿಟ್ಟಿದ್ದಲ್ಲ. ಇಲ್ಲಿ ಯಾವುದು ಶಾಶ್ವತವಿದೆ? ಒಂದು ದಿನ ನಷ್ಟವಾಗಿ ಹೋಗುವುದೇ ಈ ಎಲ್ಲದರ ಸ್ವಭಾವ ಎಂದಾದಾಗ, ಇಲ್ಲವೆಂದು ವ್ಯಸನ ಪಡುವುದಾಗಲೀ, ಇದೆ ಎಂದು ಹಿಗ್ಗುವದಾಗಲೀ ಯಾವ ಪ್ರಯೋಜನವುಳ್ಳದ್ದು?
ತಂದೆಯವರ ಬಗ್ಗೆ ವ್ಯಸನಮಾಡಬೇಡ. ನಮ್ಮ ಬಾಳೂ ಶಾಶ್ವತವೆಂದು ಗ್ರಹಿಸಬೇಡ. ಜಗತ್ತಿನ ಬೆಡಗು-ಬಿನ್ನಾಣಗಳಲ್ಲಿ ಹುರುಳಿಲ್ಲ. ಜನ್ಮತಾಳಿದ ಕ್ಷಣದಿಂದಲೇ ಆಯುಷ್ಯ ಗತಿಸಲು ಪ್ರಾರಂಭಿಸುವದು.

ಯಥಾ ಕಾಷ್ಟಂ ಚ ಕಾಷ್ಟಂ ಚ ಸಮೇಯಾತಾಂ ಮಹಾರ್ಣವೇ|
ಸಮೇತ್ಯ ಚ ವ್ಯಪೇಯಾತಾಂ ಕಾಲಮಾಸಾದ್ಯ ಕಂಚನ||
ಏವಂ ಭಾರ್ಯಾಶ್ಚ ಪುತ್ರಾಶ್ಚ ಜ್ಞಾತಯಶ್ಚ ಧನಾನಿ ಚ|
ಸಮೇತ್ಯ ವ್ಯವಧಾವನ್ತಿ ಧ್ರವೋಹ್ಯೇಷಾಂ ವಿನಾಭವಃ||

ಎಲ್ಲಿಂದಲೋ ಬಂದ ಎರಡು ಮರದ ತುಂಡು ಸಮುದ್ರದಲ್ಲಿ ಹೇಗೆ ಸ್ವಲ್ಪ ಕಾಲದವರೆಗೆ ಒಂದು ಕಡೆಗೆ ಸೇರಿ, ಅಗಲುವುವೋ ಅದರಂತೆ ಎಲ್ಲೆಲ್ಲಿಂದಲೋ ಬಂದು, ಸಂಸಾರದಲ್ಲಿ ಕೆಲಕಾಲ ಸೇರಿ ಇದ್ದು, ಕಾಲ ಬಂದೊಡನೆಯೇ ಆ ಹೆಣ್ಣು, ಹೊನ್ನು, ಮಣ್ಣು, ಮಕ್ಕಳು, ನೆಂಟರೆಲ್ಲಾ ಅಗಲುವರು. ಮೃತ್ಯುವಿನ ನಂತರ ಯಾರ ಸಂಬಂಧವು ಯಾರಿಗಿರುವದು?
ಭರತ! ಯಾವುದನ್ನು ಹೋಗಲಾಡಿಸಲು ಸಾಧ್ಯವಾಗದೋ ಅಂತಹ ಮೃತ್ಯುವಿನ ಬಗ್ಗೆ ವ್ಯರ್ಥಶೋಕಮಾಡುತ್ತ ಆಯುಷ್ಯ ಹಾಳುಮಾಡುವದಕ್ಕಿಂತಲೂ ಪರಮಾರ್ಥ ಪ್ರಾಪ್ತಿಯ ಸಾಧನೆ ಮಾಡಿದರೆ ಯಾವ ಮನುಷ್ಯನು ತಾನೆ ಮುಕ್ತನಾಗಲಿಕ್ಕಿಲ್ಲ?

home-last-sec-img