Literature

ಶ್ರೀರಾಮನ ಸಮದೃಷ್ಟಿ

ಶ್ರೀರಾಮನು ವನಕ್ಕೆ ಹೋಗುವನೆಂದು ತಿಳಿದ ನಂತರ ‘ಆರ್ತ ಮಹಾನ್ ಜಜ್ಞೇ’, ಅರಮನೆಯ ಅಂತಃಪುರದಲ್ಲಿ ದೊಡ್ಡ ಹಾಹಾಕಾರವಾಯಿತು. ಆ ದುಃಖದಲ್ಲಿ ರಾಮನ ತಾಯಂದಿರ ಮುಖದಿಂದ ಹೊರಟ ಶಬ್ದಗಳಿವು.

ಕೌಸಲ್ಯಾಯಾಂ ಯಥಾ ಯುಕ್ತೋ ಜನನ್ಯಾಂ ವರ್ತತೇ ಸದಾ|
ತಥೈವ ವರ್ತತೇಽಸ್ಮಾಸು ಜನ್ಮಪ್ರಭತಿ ರಾಘವಃ|
ನ ಕ್ರುದ್ಧ್ಯತ್ಯಭಿಪ್ತೋಽಪಿ ಕ್ರೋಧನೀಯಾನಿ ವರ್ಜಯನ್|
ಕ್ರುದ್ಧಾನ್ಸ್ರ ಸಾದಯನ್ ಸರ್ವಾನ್ ಸ ಇತೋಽದ್ಯ ಪ್ರವತ್ಸ್ಯತಿ||

‘ಶ್ರೀರಾಮನು ಕೌಸಲ್ಯೆಯ ಸಂಗಡ ಎಷ್ಟು ವಿಧೇಯತೆಯಿಂದ ವರ್ತಿಸುವನೋ ಅಷ್ಟೇ ವಿಧೇಯತೆಯಿಂದ ಆತನು ನಮ್ಮೆಲ್ಲರ ಸಂಗಡವೂ ವರ್ತಿಸುವನು. ಆತನ ಮಾತೃಪ್ರೇಮದಲ್ಲಿ ತಾರತಮ್ಯಭಾವವು ಇಲ್ಲ. ಬಾಲ್ಯದಿಂದಲೂ ಅದು ಒಂದೇ ಪ್ರಕಾರ ಇದೆ. ಯಾರಾದರೂ ಕಠಿನ ಮಾತನಾಡಿದರೂ ಕೋಪಿಸುವದಿಲ್ಲ. ಸಿಟ್ಟಿಗೆ ಕಾರಣವಾಗುವ ಆಚರಣೆಯನ್ನು ತಾನು ಸ್ವತಃ ಎಂದೂ ಇಟ್ಟು ಕೊಳ್ಳದೆ, ಉದ್ದೇಶಪೂರ್ವಕವಾಗಿ ಆಗ್ರಹ ಪಟ್ಟು ಕೋಪಗೊಂಡವರನ್ನೂ ತನ್ನ ನಯವಾದ ಸಿಹಿ ಮಾತಿನಿಂದ ಸಂತೈಸುವನು.’
ಮೊದಲು ಕೈಕೇಯಿಯ ವಾಕ್ಯಗಳೂ ಸಹ ಇದೇ ರೀತಿ ಇವೆ. ಮಂಥರೆಯ ಬಗೆಬಗೆಯ ಮಾತುಗಳನ್ನು ಸಹ ಕೇಳದೆ ಕೈಕೇಯಿಯು ಶ್ರೀರಾಮನನ್ನೇ ಹೊಗಳಿದ್ದಳು.

ರಾಮೇ ವಾ ಭರತೇ ವಾಹಂ ವಿಶೇಷಂ ನೋಪಲಕ್ಷಯೇ|
ತಸ್ಮಾತ್ತುಷ್ಟಾಸ್ಮಿ ಯದ್ರಾಜಾ ರಾಮಂ ರಾಜ್ಯೇಽಭಿಷೇಕ್ಷತಿ||
ಧರ್ಮಜ್ಞೋ ಗುರುಭಿರ್ದಾಂತಃ ಕೃತಜ್ಞಃಸತ್ಯವಾಞ್ ಛುಚಿಃ|
ರಾಮೋ ರಾಜ್ಞಸ್ಸುತೋ ಜ್ಯೇಷ್ಟೋ ಯೌವರಾಜ್ಯ ಮತೋಽರ್ಹತಿ||
‘ಶ್ರೀರಾಮ ಮತ್ತು ಭರತ ಈ ಈರ್ವರಲ್ಲಿಯೂ ನನಗೆ ಭೇದವಿಲ್ಲ. ಆದುದರಿಂದ ಮಹಾರಾಜರು ಶ್ರೀರಾಮನಿಗೆ ಪಟ್ಟಾಭಿಷೇಕವನ್ನು ಮಾಡುವರೆಂಬುದನ್ನು ಕೇಳಿ ತಂಬಾ ಸಂತೋಷವಾಗಿದೆ’

‘ಶ್ರೀರಾಮನು ಧರ್ಮಜ್ಞನು. ವಸಿಷ್ಟರಿಂದ ಒಳ್ಳೇ ಶಿಕ್ಷಿತನೂ, ಕೃತಜ್ಞನೂ, ಸತ್ಯಭಾಷಿಯೂ, ಪರಿಶುದ್ಧನೂ ಆಗಿರುವನು. ಮಹಾರಾಜರ ಜ್ಯೇಷ್ಟಪುತ್ರನು ಸಹ ಈತನಾದುದರಿಂದ ಯುವರಾಜನ ಅಧಿಕಾರವು ಈತನಿಗೆ ಇದೆ. ತಂದೆಯಂತೆ ಈತನು ತನ್ನ ಬಂಧು ಮತ್ತು ಭೃತ್ಯರನ್ನು ಪರಿಪಾಲಿಸುವನು. ನನ್ನ ಮುದ್ದಿನ ಮಗುವು ದೀರ್ಘಾಯುವಾಗಲಿ. ರಾಮರಾಜ್ಯಾಭಿಷೇಕ ವಾರ್ತೆಯನ್ನು ಕೇಳಿ ನೀನೇಕೆ ಇಷ್ಟು ಉರಿಯುತ್ತೀಯೆ? ಭರತನಿಗಿಂತಲೂ ಶ್ರೀರಾಮನ ಮೇಲೆಯೇ ನನಗೆ ಪ್ರೀತಿ ಹೆಚ್ಚು. ಆತನೂ ಸಹ ನನ್ನನ್ನು ಕೌಸಲ್ಯೆಗಿಂತಲೂ ಹೆಚ್ಚಾಗಿಯೇ ಕಾಣುವನು. ನನ್ನ ಸೇವೆ ಮಾಡುವನು. ಶ್ರೀರಾಮನ ರಾಜ್ಯವಾದರೆ ಅದು ಭರತನ ರಾಜ್ಯವೂ ಆಗುವದು!’
ಇವೆಲ್ಲ ದ್ಯೋತಿಸುವದು ಶ್ರೀರಾಮನ ದಿವ್ಯ ಸ್ವಭಾವ, ಆಚರಣೆ!

home-last-sec-img