Memories

12. ಸ್ವಾಮಿಗಳು ತಮ್ಮ ಮೈಮೇಲಿನ ವಸ್ತ್ರವನ್ನು ನನಗೆ ಪ್ರಸಾದರೂಪದಲ್ಲಿ ಕೊಟ್ಟರು

(ನಿರೂಪಣೆ : ಶ್ರೀಧರಭಕ್ತ ಶ್ರೀ ರಾಮಭಾವು ರಾಜಪುರೋಹಿತ)

ನಾನು ಮಾಣಿಕನಗರದ ರಹವಾಸಿಯು. ಇಸವಿ ಸನ ೧೯೪೯ರ ಫೆಬ್ರುವರಿಯಲ್ಲಿ ಶ್ರೀಕ್ಷೇತ್ರ ಗಾಣಾಪುರದಲ್ಲಿ ಶ್ರೀ ನರಸಿಂಹ ಸರಸ್ವತಿಯವರ ಪಂಚ ಶತಾಬ್ಧಿಯ ಮಹೋತ್ಸವವಾಯಿತು. ಆ ವೇಳೆ ನಾನು ಅಲ್ಲಿಗೆ ಹೋಗಿದ್ದೆ. ರಸ್ತೆಯಲ್ಲಿ ಕಾಲಿಡಲಾಗದಷ್ಟು ಜನದಟ್ಟಣೆಯಾಗಿತ್ತು. ಈ ಉತ್ಸವ ಎಂಟು ವಾರ ನಡೆಯಿತು ಮತ್ತು ಒಂದೊಂದು ವಾರ ಒಬ್ಬೊಬ್ಬ ಮಹಾಪುರುಷರ ಕಾರ್ಯಕ್ರಮಕ್ಕೆಂದು ಕಾದಿಟ್ಟಿದ್ದರು. ಅದರಂತೆ ಒಂದು ವಾರ ಭಗವಾನ ಶ್ರೀಧರಸ್ವಾಮಿಗಳು ಕೂಡ ತಮ್ಮ ನಿರ್ಧರಿತ ವಾರದ ಪ್ರಾರಂಭದಲ್ಲಿ ಗಾಣಗಾಪುರಕ್ಕೆ ಬಂದಿದ್ದರು.

ಒಂದು ದಿನ ನಾನು ನದೀತೀರದ ರಸ್ತೆಯ ಬದಿಯ ಒಂದು ಬಂಡೆಗಲ್ಲ ಮೇಲೆ ಕುಳಿತು ತಂಬೂರಿ ಬಾರಿಸುತ್ತ, ಬಾಯಲ್ಲಿ ಏನೋ ಒಂದು ಗಾಯನ ಗುಣಗುಣಿಸುತ್ತಿದ್ದೆ. ಆಗ ಸ್ವಾಮಿ ಮಹಾರಾಜರು ಅಲ್ಲಿ ನನ್ನ ಬಳಿಗೆ ಯಾವಾಗ ಬಂದು ನಿಂತರೆಂಬುದು ನನಗೆ ತಿಳಿಯಲೇ ಇಲ್ಲ. ೫-೧೦ ನಿಮಿಷ ಆಗಿರಬೇಕು. ಅವರು ಅಲ್ಲೇ ನಿಂತು ನನ್ನ ಗಾಯನ ಕೇಳಿದರು ಮತ್ತು ನಂತರ ನನ್ನನ್ನು ವಿಚಾರಿಸಿ, ಅತ್ಯಂತ ಪ್ರಸನ್ನತೆಯಿಂದ ತಮ್ಮ ಮೈ ಮೇಲಿನ ವಸ್ತ್ರ ನನಗೆ ಪ್ರಸಾದವೆಂದು ಕೊಟ್ಟರು. ನಾನು ಎಚ್ಚತ್ತು ಸ್ವಾಮಿಮಹಾರಾಜರ ಚರಣಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದೆ. ಪ್ರಸಾದವೆಂದು ಕೊಟ್ಟ ವಸ್ತ್ರವನ್ನು ನಾನು ಈಗಲೂ ಕಾಳಜೀಪೂರ್ವಕ ಇಟ್ಟುಕೊಂಡಿದ್ದೇನೆ. ಆ ದಿನದಿಂದ ನನಗೆ ಹಾಡಲು ಉತ್ಸಾಹವೆನಿಸ ಹತ್ತಿತಲ್ಲದೇ ತುಂಬಾ ಸಮಾಧಾನವೂ ಅನಿಸಹತ್ತಿದೆ.

ನಿಜವಾಗಿ ನೋಡಿದರೆ, ನಾನಾದರೋ ಒಬ್ಬ ಸಾಮಾನ್ಯ ಮನುಷ್ಯ. ಆದರೆ ಸಾಮಾನ್ಯರಲ್ಲಿಯೂ ಅದೇನೋ ವಿಶೇಷವನ್ನು ಸಂತರು ಹುಡುಕಿ ತೆಗೆಯುತ್ತಾರೆ. ಸಂತರು ಸಾಮಾನ್ಯರ ಸಾಸಿವೆಯ ಕಾಳಿನಷ್ಟು ಗುಣವನ್ನೂ ತಾಯಿ ತನ್ನ ಮಮತೆಯಿಂದ ಗುರುತಿಸಿ ಮನ್ನಿಸುವಂತೆ ಮನ್ನಿಸಿ, ಗೌರವಿಸುತ್ತಾರೆ, ಎನ್ನುವದಂತೂ ನೂರಕ್ಕೆ ನೂರು ಸರಿ.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಸಂಚಿಕೆಗಳ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img