Memories

13. ಸ್ವಾಮಿಗಳ ಕೃಪೆಯಿಂದ ನನಗೆ ಪುತ್ರರತ್ನ ಲಭಿಸಿತು

(ನಿರೂಪಣೆ : ಶ್ರೀಧರಭಕ್ತೆ ಸೌ. ಸುಶೀಲಾ ಕುಲಕರ್ಣಿ, ಹೈದರಾಬಾದ)

ಇದಾಗಿ ಒಂದು ಯುಗವೇ ಕಳೆಯಿತೆನ್ನಬೇಕು.

ಹೈದರಾಬಾದಿನ ಕಾಚೀಗುಡಾದಲ್ಲಿನ ತುಳಜಾಭುವನದ ಶ್ರೀರಾಮಮಂದಿರದಲ್ಲಿ ಭಗವಾನ ಶ್ರೀಧರಸ್ವಾಮಿಯೆಂಬ ಒಬ್ಬ ಮಹಾನ ಸತ್ಪುರುಷ ಬಂದಿದ್ದಾರೆ, ಎಂದು ಕೇಳಿಬರಲು, ಅವರ ದರ್ಶನಕ್ಕೆ ನಾವಿಬ್ಬರೂ ಹೋದೆವು. ಮೊದಲ ದರ್ಶನದಲ್ಲೇ ಅವರು, ‘ಮನೆಯಂಗಳದಲ್ಲಿ ಮಾವಿನ ಮರವಿದೆ, ಮನೆಯಿಂದ ಹೊರಬಿದ್ದಂತೆಯೇ ಬಲಭಾಗದಲ್ಲಿ ದೇವಸ್ಥಾನವಿದೆ’, ಎಂದೆಲ್ಲ ನಮ್ಮ ಮನೆಯ ಗುರುತುಗಳನ್ನು ಕಣ್ಣಲ್ಲಿ ನೋಡಿದಂತೆಯೇ ಸ್ಪಷ್ಟವಾಗಿ ಹೇಳಿದರು. ನಮ್ಮ ಮನೆಯಲ್ಲಿ ಅವರಂದಂತೆಯೇ, ಮಾವಿನ ಮರ ಮತ್ತು ಮನೆಯಿಂದ ಹೊರಬಂದಂತೆ ಶ್ರೀ ಶಾರದಾಂಬೆಯ ದೇವಸ್ಥಾನವಿದೆ.

ನಮ್ಮ ವಿವಾಹವಾಗಿ ೪ – ೫ ವರ್ಷಗಳಾಗಿದ್ದವು. ಆದರೆ ಸಂತತಿಯಿರಲಿಲ್ಲ. ಸ್ವಾಮಿಗಳ ಪ್ರೇಮಭಾವ ಮತ್ತು ಪ್ರಸನ್ನ ಮುಖ ನೋಡಿ, ನಾವು ನಮ್ಮ ಮನದಳಲನ್ನು ಸ್ವಾಮಿಗಳ ಮುಂದೆ ತೋಡಿಕೊಂಡೆವು. ಅದಕ್ಕೆ ಸ್ವಾಮಿಗಳು ಹೇಳಿದ ಉಪಾಯ ಹೀಗಿತ್ತು….

ತಿರುಪತಿಗೆ ಹೋಗಿ ಶ್ರೀವೆಂಕಟೇಶ ಭಗವಂತನ ದರ್ಶನ ತೆಗೆದುಕೊಳ್ಳಬೇಕು. ಅಲ್ಲಿಂದ ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ಶಕ್ತಿಪೀಠ ಶ್ರೀಕ್ಷೇತ್ರ ಕೊಲ್ಹಾಪುರಕ್ಕೆ ಹೋಗಿ ಭಗವತಿ ಲಕ್ಷ್ಮಿಯ ದರ್ಶನ ಪಡೆದು, ಅದರ ನಂತರವೇ ಮನೆಗೆ ತಿರುಗಿ ಬರಬೇಕು. ಸ್ವಾಮಿಗಳ ಕೃಪೆಯಿಂದ ನಮಗೆ ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀ ವೆಂಕಟೇಶನ ದರ್ಶನದ ಯೋಗ ಬೇಗನೇ ಕೂಡಿಬಂತು ಮತ್ತು ಯಥಾಕಾಲ ಸ್ವಾಮಿಗಳೆಂದಂತೆ ಪುತ್ರರತ್ನವೂ ಲಭಿಸಿತು.
ಪುತ್ರಪ್ರಾಪ್ತಿಯ ಆನಂದದಲ್ಲೇ ಸ್ವಾಮಿಯವರ ದರ್ಶನಕ್ಕೆ ಮತ್ತೆ ಒಮ್ಮೆ ಹೋಗಬೇಕು ಮತ್ತು ಮಗನಿಗೂ ಅವರ ಪಾದಗಳ ಮೇಲೆ ಹಾಕಬೇಕು, ಎಂಬ ಉದ್ದೇಶದಿಂದ ನಾವು ಬಹಳ ಸಲ ಪ್ರಯತ್ನ ಮಾಡಿದೆವು. ಆದರೆ ಒಂದೆಲ್ಲಾ ಒಂದು ಅಡಚಣಿ ಬಂದು, ಹೋಗುವ ವಿಚಾರ ಸ್ಥಗಿತ ಮಾಡಬೇಕಾಗಿ ಬಂದಿತು. ಒಂದೇ, ಸ್ವಾಮಿಗಳು ಎಲ್ಲಿದ್ದಾರೆಂದು ಯಾರಿಗೂ ಗೊತ್ತಿಲ್ಲವೆಂದೂ, ಅಥವಾ ಸ್ವಾಮಿಗಳು ಸಧ್ಯ ಏಕಾಂತವಾಸದಲ್ಲಿದ್ದಾರೆ, ಯಾರಿಗೂ ದರ್ಶನವಿಲ್ಲ, ಎಂದು ಮುಂತಾಗಿ ಸಮಾಚಾರಗಳನ್ನು ಜನರು ಹೇಳುತ್ತಿದ್ದರು. ಕೆಲ ದಿನಗಳ ನಂತರ ನಾವು ಸಜ್ಜನಗಡಕ್ಕೆ ಹೋಗಿಬರಬೇಕೆಂದು ವಿಚಾರ ಮಾಡಿದೆವು. ಆದರೆ ಅದೂ ಕೂಡ ಏನೋ ಕಾರಣಗಳಿಂದ ಕೈಗೂಡಲಿಲ್ಲ. ಹೀಗೇ ಎಷ್ಟೋ ಕಾಲ ಕಳೆದೇ ಹೋಯಿತು ಮತ್ತು ಒಂದು ದಿನ ಸ್ವಾಮಿಗಳು ಬ್ರಹ್ಮಲೀನರಾದರೆಂಬ ವಾರ್ತೆ ಕೇಳಿದೆವು. ಇಂದಲ್ಲ ನಾಳೆ ದರ್ಶನವಾಗುವದೆಂಬ ಆಶೆಯ ಅಂಕುರದ ಮೂಲಕ್ಕೇ ಪೆಟ್ಟು ಬಿತ್ತು. ತುಂಬಾ ಬೇಸರವಾಯಿತು. ಆದರೆ ದೈವನಿರ್ಣಯಕ್ಕೇನು ಮಾಡುವದು?

ಹೀಗೆಯೇ ಎಷ್ಟೋ ಕಾಲ ಸರಿಯಿತು. ಒಂದು ದಿನ ನನ್ನ ಮೊದಲ ಮಗನಿಗೆ ರಾತ್ರಿ ಸ್ವಪ್ನದಲ್ಲಿ ಸ್ವಾಮಿಗಳು ದರ್ಶನವಿತ್ತರು.
ಆ ಸ್ವಪ್ನದಲ್ಲಿ …

ಅವನು ದೇವಿಯ ದರ್ಶನಕ್ಕೆ ಹೋಗಿದ್ದನು. ಆಗ ದೇವಿದರ್ಶನ ಮಾಡಿ, ಕುಳಿತುಕೊಂಡಿರುವಾಗ, ಒಬ್ಬ ಸಾಧಾರಣ ಪ್ರೌಢ ವಯಸ್ಸಿನ ಒಬ್ಬ ಗ್ರಹಸ್ಥ ಬಂದು ಆತನ ಹತ್ತಿರ ನಿಂತುಕೊಂಡನು. ಅವರನ್ನು ನೋಡಿ, ಹುಡುಗನು ಚಕಿತನಾದನು. ಆ ಗ್ರಹಸ್ಥ ಅವನಿಗೆ, ‘ನಡೆ, ನಡೆಯಪ್ಪಾ!’ ಎಂದು ಹೇಳಿದನು. ಆಗ ಹುಡುಗ ಆಶ್ಚರ್ಯದಿಂದ ಕೇಳಿದನು, ‘ಎಲ್ಲಿಗೆ?’ ಆಗ ಆ ಗ್ರಹಸ್ಥ ಹೇಳಿದನು, ‘ವರದಹಳ್ಳಿ’, ಅದಕ್ಕೆ ಹುಡುಗನು ಹೇಳಿದನು, ‘ನನ್ನ ತಂದೆ – ತಾಯಿಯರನ್ನು ಕರೆದುಕೊಂಡು ಬರುತ್ತೇನೆ’ ಮತ್ತು ಆತನು ತಂದೆ – ತಾಯಿಯವರನ್ನು ಕೇಳಲು, ಓಡುತ್ತ ಹೊರಟನು. ಅಷ್ಟರಲ್ಲಿ ಅವನಿಗೆ ಎಚ್ಚರವಾಯಿತು.

ಬೆಳಿಗ್ಗೆ ನನ್ನ ಮಗನು ಎದ್ದವನು, ‘ಆಯಿ! ವರದಹಳ್ಳಿ ಎಲ್ಲಿದೆ? ಹೇಳು’, ಎಂದು ನನ್ನ ಬೆನ್ನ ಹಿಂದೆ ಬಿದ್ದನು. ‘ನಿನಗೆ ಅದನ್ನು ತಿಳಿದುಕೊಂಡು ಏನು ಮಾಡುವದಿದೆ?’, ಎಂದು ನಾನು ಕೇಳಲು, ಆತನು ತನಗೆ ಬಿದ್ದ ಸ್ವಪ್ನದ ವಿಷಯ ತಿಳಿಸಿದನು. ಅದನ್ನು ಕೇಳುತ್ತಿದ್ದಂತೆಯೇ, ಅಲ್ಲಿ ಶ್ರೀಧರ ಸ್ವಾಮಿ ಮಹಾರಾಜರು ಸಮಾಧಿಸ್ಥರಾದ ವಿಚಾರ ನೆನಪಾಗಿ, ಅವರೇ ನನ್ನ ಮಗನಿಗೆ ಸ್ವಪ್ನ ದೃಷ್ಟಾಂತ ಕೊಟ್ಟಿದ್ದಾರೆಂಬುದು ಮನಸ್ಸಿಗೆ ಹೊಳೆದು, ಅತ್ಯಂತ ಆನಂದವಾಯಿತು. ಸ್ವಾಮಿಗಳು ಏನು ಹೇಳಿದ್ದಾರೋ, ಅದೇ ರೀತಿ ಚಾಚೂ ತಪ್ಪದೇ ಮಾಡಿದರೆ ಅದರ ಫಲ ಸಿಗದೇ ಹೋಗುವದು ಎಂಬುದು ಇಲ್ಲವೇ ಇಲ್ಲ. ಇದಂತೂ ಸತ್ಯ ಮಾತು!

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ – ಚೈತ್ರ ೧೯೦೨, ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img