Memories

14. ಗುರುಕೃಪೆಯಿಂದ ಬುದ್ಧಿವಾದ ನಶಿಸಿ, ಶ್ರದ್ಧಾಬುದ್ಧಿ ಉದ್ಭವವಾಗಿ ಜೀವನದಲ್ಲಿ ಮೂಲಭೂತ ಕ್ರಾಂತಿಯಾಯಿತು

(ನಿರೂಪಣೆ : ಶ್ರೀಧರಭಕ್ತ ಡಾ| ವಾಸುದೇವ ಬಳವಂತ ದಿವೇಕರ, ಹೈದರಾಬಾದ)

ಮನುಷ್ಯನಿಗೆ ತನ್ನ ‘ಅಹಂ’ನಿಂದಾಗಿ ಬರುವ ಸೊಕ್ಕು, ತನ್ನ ಬುದ್ಧಿಯಿಂದ ವಾದಮಾಡಿ, ತನ್ನನ್ನು ಪ್ರಸ್ತುತ ಪಡಿಸುವ ನಿಷ್ಫಲ ಪ್ರಯತ್ನ ಮಾಡುತ್ತಿರುತ್ತದೆ. ಆದರೆ ನಿಜವಾದ ಬುದ್ಧಿವಾದ ಅವನಿಗೆ ಅರ್ಥವೇ ಆಗಿರುವದಿಲ್ಲ. ಇನ್ನು ಶ್ರದ್ಧೆ ನಿರ್ಮಾಣವಾಗುವದಂತೂ ದೂರವೇ ಉಳಿಯುತ್ತದೆ. ಈ ಅಸಂಗತ, ದುಷ್ಟ ಬುದ್ಧಿವಾದವನ್ನು ಕತ್ತರಿಸಿ, ಅಲ್ಲಿ ಶ್ರದ್ಧೆ ನಿರ್ಮಾಣ ಮಾಡುವದು, ಸಂತರ ಜೀವನದ ಸಹಜಧರ್ಮವೇ ಆಗಿರುತ್ತದೆ. ಇದು ಸ್ಪಷ್ಟವಾಗಿ ಅರ್ಥವಾಗುವಂತಹ ಪ್ರಸಂಗ ನನ್ನ ಜೀವನದಲ್ಲಿ ಅನುಭವಕ್ಕೆ ಬಂದಿದ್ದನ್ನು ನಾನು ಇಲ್ಲಿ ಬರೆಯುತ್ತಿದ್ದೇನೆ.

ನಾನು ಶ್ರೀಪಂಚಾಯತನ ಮತ್ತು ಸ್ಥಾಪಿತ ಗಂಗಾ-ಯಮುನಾ ಬಾಣದ ನಿತ್ಯಪೂಜೆ ಮಾಡುತ್ತಿದ್ದೆ. ಆದರೆ ಆ ಪೂಜೆಯಿಂದ ಸಿಗಬೇಕಾದ ಫಲ ಸರಿಯಾಗಿ ಸಿಗುತ್ತಿಲ್ಲವೆಂದು ನನಗೆ ಅನಿಸುತ್ತಿತ್ತು. ಒಮ್ಮೆ ನಾಂದೇಡದಲ್ಲಿದ್ದಾಗ ನನಗೆ ಈ ರೀತಿ ಸ್ವಪ್ನ ಬಿತ್ತು ….. ನಾನು ಅಭಿಷೇಕ ಸಂಪನ್ನ ಮಾಡಿ, ಇನ್ನೇನು ಮುಂದಿನ ಪೂಜೆಗೆ ಪ್ರಾರಂಭ ಮಾಡುವವನಿದ್ದಾಗ, ಒಬ್ಬ ಜಟಾಧಾರಿ, ಶ್ವೇತ ನೀಳ ಗಡ್ಡ, ಬಿಳಿ ಶುಭ್ರ ಪಂಜೆ ಮತ್ತು ಉತ್ತರೀಯ ಧರಿಸಿರುವ ಒಬ್ಬ ಸಾತ್ವಿಕ ಬ್ರಾಹ್ಮಣ ನನ್ನ ಮುಂದೆ ಬಂದು, ‘ಅಭಿಷೇಕವಾಯಿತೆನಿಸುತ್ತದೆ. ಯಾವ ದೇವರ ಪೂಜೆ ಮಾಡುತ್ತಿದ್ದೀಯೆ?’ ಎಂದು ವಿಚಾರಿಸಿದನು. ಆಗ ದೇವರ ವಿಗ್ರಹವು ಅಭಿಷೇಕದ ನೀರಿನಲ್ಲಿ ಮುಳುಗಿದ್ದಿತ್ತು. ನಾನು ಅವರಿಗೆ, ‘ಬಾಣದ ಪೂಜೆ ಮಾಡುತ್ತಿದ್ದೇನೆ. ಆದರೆ, ಈ ಬಾಣ ಅದೇಕೋ ಏನೂ ಉತ್ತಮ ಫಲ ಕೊಡುತ್ತಿಲ್ಲ’ ಎಂದು ಹೇಳಿದೆ. ಆತನು ಪೂಜಾಪಾತ್ರದಲ್ಲಿ ಕೈಹಾಕಿ ಆ ಬಾಣ ಮೇಲೆ ತೆಗೆದು, ಮತ್ತು ಅದನ್ನು ಚೆನ್ನಾಗಿ ನಿರೀಕ್ಷಿಸಿ, ನಂತರ ನನಗೆ, ‘ಬಾಣವನ್ನು ನೀನು ಪೂಜಾಪೆಟ್ಟಿಗೆಯಲ್ಲಿ ಯಾವ ರೀತಿ ಇಡುತ್ತೀಯೆ?’ ಎಂದು ಪ್ರಶ್ನೆ ಕೇಳಿದನು. ನಾನು, ‘ಕೃಷ್ಣ ಭಾಗ ಮುಂದೆ ಮತ್ತು ಶುಭ್ರ ಭಾಗ ಹಿಂದೆ ಮಾಡಿ ಇಡುತ್ತೇನೆ’, ಎಂದು ಹೇಳಿ, ನಾನು ನನ್ನ ನಿರಾಶೆಯನ್ನು ಮತ್ತೆ ಪ್ರಕಟಿಸಿದೆನು. ಅದಕ್ಕೆ ಅವರು, ‘ಈ ಬಾಣ ಉತ್ತಮ ಶುಭದಾಯಿಯಾಗಿದೆ. ಅದು ಶೀಘ್ರದಲ್ಲೇ ಶುಭ ನೀಡುತ್ತದೆ. ಆದರೆ ಬಾಣದ ಶ್ವೇತ ಭಾಗವನ್ನು ಮುಂದೆ ಮತ್ತು ಕೃಷ್ಣ ಭಾಗವನ್ನು ಹಿಂದೆ ಮಾಡಿ ಅದನ್ನು ಇಡಬೇಕು’, ಎಂದು ಹೇಳಿ ಅವರು ಅಂತರ್ಧಾನರಾದರು ಮತ್ತು ಸ್ವಪ್ನ ಅಲ್ಲಿಗೇ ಮುಗಿಯಿತು. ಇದು ಕೇವಲ ಸ್ವಪ್ನವೆಂದು ನಾನು ಅದರ ಬಗ್ಗೆ ವಿಚಾರವನ್ನೂ ಮಾಡಲಿಲ್ಲ.

ಇದಾದ ಒಂದು ತಿಂಗಳಿನಲ್ಲಿ, ಮಾರ್ಗಶೀರ್ಷ ಮಾಸದಲ್ಲಿ ಭಗವಾನ ಶ್ರೀಧರ ಸ್ವಾಮಿಗಳು ನಮ್ಮ ಮನೆಯಲ್ಲಿ ಉಳಿದುಕೊಂಡಿದ್ದರು. ನನ್ನ ಮನಸ್ಸು ಶೃದ್ಧಾ, ಭಕ್ತಿ, ಧ್ಯಾನಗಳಿಂದ ರಹಿತವಾಗಿದ್ದ ಆ ಕಾಲದಲ್ಲಿ, ಮನೆಯಿಂದ ಸ್ವಾಮಿ ದರ್ಶನಕ್ಕೆ ಬರಲು ಪತ್ರ ಬಂದು ತಲುಪಿತು. ಮಾನಸಿಕ ಉನ್ನತಿ ಯೋಗ್ಯ ರೀತಿಯಿಂದ ಆಗಿದ್ದಾದರೆ ಗುರು ಶಿಷ್ಯನ ಕಡೆಗೆ ತಾನಾಗಿಯೇ ಓಡುತ್ತ ಬರುತ್ತಾನೆ, ಎಂದು ನನ್ನ ಭಾವನೆಯಿದ್ದುದರಿಂದ ನಾನು ಹೈದರಾಬಾದಿಗೆ ಹೋಗಬೇಕೆಂಬ ಬಗ್ಗೆ ಏನೂ ನಿಶ್ಚಯ ಮಾಡಲಿಲ್ಲ. ಆದರೆ ನನ್ನ ಒಂದು ಗುರುಭಕ್ತ ಮಿತ್ರನ ಆಗ್ರಹದಿಂದ, ಹೈದರಾಬಾದಿಗೆ ಹೋಗುವಂತೆ ಆಯಿತು. ನಾನು ಹೈದರಾಬಾದಿಗೆ ಹೋಗುವಾಗ ನನ್ನ ಪೂಜೆಯ ಪಂಚಾಯತನ ಮತ್ತು ಬಾಣ ತೆಗೆದುಕೊಂಡು ಹೋಗುತ್ತಿದ್ದೆ. ನಾನು ರವಿವಾರ ಹೈದರಾಬಾದಿಗೆ ಬಂದೆ ಮತ್ತು ಸ್ನಾನಾದಿ ಆಹ್ನಿಕ ಮುಗಿಸಿ, ಪೂಜೆ ಮಾಡಹತ್ತಿದೆ. ಸ್ವಾಮಿಗಳ ದರ್ಶನ ಸಹಜರೀತಿಯಿಂದಲೇ ಆಗಬೇಕು, ನಾನಾಗಿಯೇ ಹೋಗಿ ದರ್ಶನ ತೆಗೆದುಕೊಳ್ಳಬಾರದು, ಎಂದು ನನ್ನ ಭಾವನೆಯಾಗಿತ್ತು. ಪೂಜೆ ನಡೆಯುತ್ತಿದ್ದಾಗ, ಸ್ವಾಮಿಗಳ ಪಟ್ಟಶಿಷ್ಯ ಶ್ರೀ ಅಷ್ಟೇಕರ ಅಲ್ಲಿಗೆ ಬಂದರು ಮತ್ತು ನನ್ನ ದೇವತಾ ವಿಗ್ರಹಗಳನ್ನು ನೋಡಿ, ಅವರು ಆಗಲೇ ನನಗೆ ಆಗ್ರಹದಿಂದ, ‘ಈ ದೇವತಾ ವಿಗ್ರಹಗಳನ್ನು ಶ್ರೀಧರಸ್ವಾಮಿಗಳ ಕೈಯಲ್ಲಿ ಇಡು. ನಾಳೆ ಹೇಗಿದ್ದರೂ ತಾನಾಗಿಯೇ ದತ್ತಜಯಂತಿಯೂ ಕೂಡಿ ಬಂದಿದೆ’ ಎಂದು ಹೇಳಿದರು. ಇದನ್ನು ಕೇಳಿದ ನಾನೊಮ್ಮೆ ಬೆಚ್ಚಿದೆ. ಆದರೆ ಅಷ್ಟೇಕರರು ನನಗೆ ಇಷ್ಟು ಆಗ್ರಹ ಮಾಡಿದರೆಂದರೆ ನನಗೆ ಅವರು ಹೇಳಿದಂತೆ ಕೇಳಲೇ ಬೇಕಾಯಿತು.

ದತ್ತಜಯಂತಿಯ ದಿನ ಸ್ವಾಮಿಗಳ ಮುಂದೆ ಇಟ್ಟ ಪಾದುಕೆಗಳ ಮೇಲೆ ಹೂವು ಮತ್ತು ತುಳಸಿ ಏರಿಸಿ, ಕಣ್ಣು ಮುಚ್ಚಿ ಕೈಮುಷ್ಟಿಯಲ್ಲಿ ಹಿಡಿದಿದ್ದ ಪಂಚಾಯತನ ಮತ್ತು ಬಾಣಗಳನ್ನು ನಾನು ಸ್ವಾಮಿಗಳ ಕೈಗಳಲ್ಲಿ ಇಟ್ಟೆ. ಹತ್ತಿರದಲ್ಲೇ ಅಷ್ಟೇಕರ, ಗೋಡಸೇ ಮೊದಲಾದ ಭಕ್ತಜನರು ನಿಂತುಕೊಂಡಿದ್ದರು. ‘ಅರೇ! ಅರೇ!’ ಎನ್ನುತ್ತ ಸ್ವಾಮಿಗಳು, ಆ ಪಂಚಾಯತನ ಮತ್ತು ಬಾಣ ಕೈಯಲ್ಲಿ ಹಿಡಿದು ನೋಡಿ, ಕಮಂಡಲದಿಂದ ನೀರನ್ನು ಅವುಗಳ ಸುತ್ತಲೂ ತಿರುಗಿಸಿ, ಅವುಗಳನ್ನು ನನಗೆ ತಿರುಗಿ ಕೊಟ್ಟರು ಮತ್ತು ನಾನು ಅವುಗಳನ್ನು ತೆಗೆದುಕೊಂಡೆ. ಮುಂದೆ ಎರಡು ಮೂರು ದಿನಗಳಲ್ಲಿ ನನ್ನ ಚಿಕ್ಕಪ್ಪ, ಸ್ವಾಮಿಗಳ ಭಿಕ್ಷಾ ಸಮಾರಂಭ ಮಾಡಿ, ಸ್ವಾಮಿಗಳಿಂದ ದೀಕ್ಷೆ ಪಡೆದರು. ದೀಕ್ಷಾಸಮಾರಂಭದ ನಂತರ ನಾನು ಅಂಗಳದಲ್ಲಿ ನಿಂತಿರುವಾಗ, ಸ್ವಾಮಿಗಳ ಒಬ್ಬ ಶಿಷ್ಯನು ನನ್ನನ್ನು ಒಳಗೆ ಕರೆದನು. ಒಳಗೆ ಹೋಗಿ ನೋಡಿದರೆ, ಆ ನನ್ನ ಪೂಜೆಯ ಪಂಚಾಯತನ ಸ್ವಾಮಿಗಳ ಮುಂದಿದ್ದು, ಬಾಣ ಸ್ವಾಮಿಗಳ ಕೈಯಲ್ಲಿ ಇತ್ತು ಮತ್ತು ಸ್ವಾಮಿಗಳು ಮತ್ತು ಅಷ್ಟೇಕರ ಏನೋ ಮಾತುಕತೆಯಲ್ಲಿ ತೊಡಗಿದಂತೆ ಕಂಡುಬಂತು. ನನಗೆ ಆಶ್ಚರ್ಯದಿಂದ ಆಘಾತವೇ ಆಯಿತು. ಸ್ವಾಮಿಗಳು ಅಷ್ಟೇಕರನಿಗೆ, ‘ಈ ಬಾಣ ಚೆನ್ನಾಗಿದೆ. ಆದರೆ ಸ್ವಲ್ಪ ದೋಷವಿದೆ. ಅದನ್ನು ತೆಗೆದು ಹಾಕುತ್ತೇನೆ’, ಎಂದು ಹೇಳುತ್ತಿದ್ದರು. ಅಷ್ಟೇಕರರು ಸ್ವಾಮಿಗಳ ಹತ್ತಿರ ಬಾಣದ ಸ್ತುತಿ ಪದೇ ಪದೇ ಮಾಡುತ್ತಿದ್ದರು. ಸ್ವಾಮಿಗಳು ತಮ್ಮ ಬೆರಳುಗಳಿಂದ ಬಾಣವನ್ನು ಬಹಳಿಷ್ಟು ತಿಕ್ಕಿದರು ಮತ್ತು ನನಗೆ , ‘ನೀನು ಈ ಬಾಣ ಹೇಗೆ ಇಡುತ್ತೀಯೆ?’ ಎಂದು ಕೇಳಿದರು. ಇದು ಸ್ವಪ್ನದಲ್ಲಿ ಬಂದ ಬ್ರಾಹ್ಮಣನು ಹೇಗೆ ಕೇಳಿದ್ದನೋ, ಅದೇ ರೀತಿ ಇತ್ತು. ನಾನು, ‘ಕೃಷ್ಣ ಭಾಗ ಮುಂದೆ ಮತ್ತು ಶ್ವೇತ ಭಾಗ ಹಿಂದೆ’ ಎಂದು ಉತ್ತರಿಸಿದ ಕೂಡಲೇ, ಸ್ವಾಮಿಗಳು, ‘ಶ್ವೇತ ಭಾಗ ಮುಂದೆ ಮತ್ತು ಕೃಷ್ಣ ಭಾಗ ಹಿಂದೆ ಮಾಡಿ ಇಡು’, ಎಂದು ಆದೇಶ ಮಾಡಿದರು. ಸ್ವಾಮಿಗಳ ಈ ಆದೇಶ ಮತ್ತು ಸ್ವಪ್ನದಲ್ಲಿನ ಆದೇಶ ಒಂದೇ ಆಗಿತ್ತು, ಎಂಬುದು ನನ್ನ ಲಕ್ಷಕ್ಕೆ ಬಂದು, ನಾನು ಆಶ್ಚರ್ಯಚಕಿತನಾದೆ. ಇದೊಂದು ಸಣ್ಣ ಘಟನೆ! ಆದರೆ ಅದು ನನ್ನ ಸಂಪೂರ್ಣ ಆಯುಷ್ಯದಲ್ಲಿ ಒಂದು ಕ್ರಾಂತಿಯನ್ನೇ ಮಾಡಿಬಿಟ್ಟಿತು. ಬುದ್ಧಿಯ ಪ್ರಾಬಲ್ಯವು ಸುಪ್ತಾವಸ್ಥೆಗೆ ಸರಿದು, ಅದರ ಬದಲು ಶೃದ್ಧಾಭಾವವು ಅಲ್ಲಿ ಉದ್ಭವಿಸಿ,

ದೃಢವಾಯಿತು. |ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಜ್ಯೇಷ್ಠ, ೧೯೦೧ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img