Memories

15. ಸಾಕ್ಷಾತ್ಕಾರೀ ಸಂತರ ಪಾದುಕೆಯು ದೇವತೆಗಳಿಗೂ ಪೂಜಾರ್ಹವೆನಿಸುತ್ತದೆ

(ನಿರೂಪಣೆ : ಶ್ರೀಧರಭಕ್ತೆ ಕು.ಪಿಕಿ ಭಾವೆ, ರಾಮದಾಸಿ)

|ಶ್ರೀರಾಮಸಮರ್ಥ|

ಶ್ರೀ ಶ್ರೀಪಾದ ಶ್ರೀವಲ್ಲಭರ ಸಮಾಧಿಸ್ಥಳ, ಕೃಷ್ಣಾ ಜಿಲ್ಹೆಯ ಕುರುವಪುರ ಅಥವಾ ಕುರುಗಡ್ಡಿಯಲ್ಲಿನ ಇದೊಂದು ಸತ್ಯ ಘಟನೆ.
ಇಲ್ಲಿ ಶ್ರೀಮತ ಪ.ಪ.ಭಗವಾನ ಸದ್ಗುರು ಶ್ರಿಧರಸ್ವಾಮಿ ಮಹಾರಾಜರ ಚಾತುರ್ಮಾಸ ಆಗುವದಿತ್ತು. ಆ ಚಾತುರ್ಮಾಸದ ವೇಳೆ ಸ್ವಾಮಿಗಳ ನಿತ್ಯ ಹಸ್ತಪ್ರಕ್ಷಾಲನಾದಿಗಳಿಗಾಗಿ ಶುದ್ಧ ಮಣ್ಣಿನ ಮುದ್ದೆ ಮೊದಲಾದ ಸಾಹಿತ್ಯ ಸಿದ್ಧ ಮಾಡಿ ಇಡಲು ಭಾಸ್ಕರಬುವಾ ರಾಮದಾಸಿ ಮತ್ತು ದತ್ತಾಬುವಾ ರಾಮದಾಸಿಯವರು ಸ್ವಾಮಿಗಳೊಂದಿಗೆ ಹೋಗಿದ್ದರು. ಒಮ್ಮೆ ಚಾತುರ್ಮಾಸ ಪ್ರಾರಂಭವಾದ ಮೇಲೆ ಸ್ವಾಮಿಗಳು ಅಲ್ಲಿ ಒಬ್ಬರೇ ಇರುವರಿದ್ದರು. ಒಂದು ಗುಹೆಯಲ್ಲಿ ಸಾ್ವಮಿಗಳ ಧ್ಯಾನಾದಿಗಳಿಗೆ ವ್ಯವಸ್ಥೆ ಮಾಡಿ, ಗುಹೆ ಮುಂದಿನ ಸಣ್ಣ ಜಾಗದಲ್ಲಿ ಸಂಪೂರ್ಣ ಚಾತುರ್ಮಾಸಕ್ಕೆ ಸಾಕಾಗುವಷ್ಟು ಮಣ್ಣಿನ ಮುದ್ದೆ ಮಾಡಿಡುವ ಕಾರ್ಯ ನಡೆದಿತ್ತು. ಪ್ರತಿನಿತ್ಯ ತ್ರಿಕಾಲ ಕೃಷ್ಣಾಮಾತೆಯಲ್ಲಿ ಸ್ನಾನಕ್ಕಾಗಿ ಎಲ್ಲರೂ ಹೋಗುತ್ತಿದ್ದರು. ಒಂದು ದಿನ… ನದೀತೀರದ ಪ್ರದೇಶದಲ್ಲಿ ತಮ್ಮ ಪಾದುಕೆಯನ್ನು ತೆಗೆದಿಟ್ಟು ನಿತ್ಯವಿಧಿಗಳನ್ನು ಪೂರೈಸಿ, ಸ್ವಾಮಿಗಳು ಸ್ನಾನಕ್ಕಾಗಿ ನದಿಗಿಳಿದರು. ಸ್ನಾನವಾದ ಮೇಲೆ, ಭಾಸ್ಕರ ಬುವಾನು ಸ್ವಾಮಿಗಳ ಅಂಗವಸ್ತ್ರ ಮೊದಲಾದವುಗಳನ್ನು ತೊಳೆದು, ತನ್ನ ಸಂಧ್ಯಾ ಕ್ರಿಯೆಗಳನ್ನು ಮುಗಿಸಿ, ತಿರುಗಿ ಹೋಗಲು ತಯಾರಿ ನಡೆಸುತ್ತಿದ್ದನು. ಹೋಗುವಾಗ ಯಾವ ಸ್ಥಳದಲ್ಲಿ ಸ್ವಾಮಿಗಳು ಪಾದುಕೆ ತೆಗೆದಿಟ್ಟಿದ್ದರೋ ಅಲ್ಲಿ ಅದು ಕಾಣಲಿಲ್ಲ. ಆಚೆ ಈಚೆ ಎಷ್ಟೇ ಹುಡುಕಿದರೂ ಎಲ್ಲೂ ಕಾಣಿಸಲಿಲ್ಲ. ಒಂದಾನುವೇಳೆ, ನದಿ ನೀರಿನ ಪ್ರವಾಹಕ್ಕೆ ಸಿಲುಕಿ, ಕೆಳಗಡೆ ಹರಿದು ಹೋಗುವ ಶಕ್ಯತೆಯಿರಬಹುದೆಂದು, ನದಿಯಲ್ಲಿದ್ದ ನಾವಿಕರಿಗೆ ಪಾದುಕೆಯೇನಾದರೂ ಕಾಣುತ್ತಿದೆಯೋ ಎಂದು ಹುಡುಕಲು ಕೇಳಿಕೊಂಡರು. ಅವರು ಪ್ರವಾಹದ ದಿಕ್ಕಿನಲ್ಲಿ ೪-೫ ಮೈಲು ಹುಡುಕಿದರೂ ಎಲ್ಲೂ ಕಾಣಿಸಲಿಲ್ಲ. ಸ್ವಾಮಿಗಳು ಬರಿಗಾಲಲ್ಲಿರಬೇಕಾಗುವದೆಂಬ ಚಿಂತೆಯಿಂದ, ಭಾಸ್ಕರಬುವಾ ನದಿಯ ಆ ತಟದಲ್ಲಿರುವ, ಒಂದು ಹಳ್ಳಿಗೆ ಹೋಗಿ, ಸಿಕ್ಕ ಆಯುಧೋಪಕರಣದಿಂದ ಏನೋ ಒಂದು ಆಕಾರದ ಪಾದುಕೆಗಳ ಜೋಡಿ ತಯಾರಮಾಡಿಕೊಂಡು ಬಂದನು. ಅದನ್ನೇ ಸ್ವಾಮಿಗಳು ಮುಂದೆ ಎಂಟು ದಿನ ಉಪಯೋಗಿಸುತ್ತಿದ್ದರು.

ತನ್ಮಧ್ಯೆ, ಒಂದು ದಿನ ಮಾಧ್ಯಾಹ್ನಸ್ನಾನಕ್ಕೆ ನದೀತೀರಕ್ಕೆ ಹೋಗಿರುವಾಗ, ಮೊದಲು ಇಟ್ಟಿದ್ದ ಸ್ಥಳದಲ್ಲಿಯೇ, ಅದೇ ಪಾದುಕೆಗಳನ್ನು ಗಂಧ, ತುಳಸಿಗಳಿಂದ ಪೂಜಿಸಿ, ವ್ಯವಸ್ಥಿತವಾಗಿ ಇಟ್ಟಿರುವದು ಕಂಡುಬಂತು. ಈ ಆಶ್ಚರ್ಯಜನಕ ಘಟನೆಯ ಬಗ್ಗೆ ಸ್ವಾಮಿಗಳನ್ನು ಕೇಳಿದಾಗ, ‘ಸ್ಥಾನದೇವತೆಗಳು ಈ ರೀತಿ ಪಾದುಕೆಗಳನ್ನು ಒಯ್ದು ಪೂಜೆ ಇತ್ಯಾದಿಗಳನ್ನು ಮಾಡಿ ತಿರುಗಿ ತಂದಿಡುತ್ತಾರೆ. ಹೀಗೆ ಅನೇಕ ವೇಳೆ ಅನುಭವಕ್ಕೆ ಬಂದಿದೆ’, ಎಂದು ಸ್ವಾಮಿಗಳು ಹೇಳಿದರು. ‘ಯೋಗಾಭ್ಯಾಸವು ಹಾಸು ಹೊಕ್ಕಾಗಿರಲು|ಮೇಲೆ ಅತ್ಯುಚ್ಚ ತತ್ವಜ್ಞಾನ ಸಂಗತವಿರಲು| ಅದಕ್ಕೂ ಹೆಚ್ಚಿನ ಆತ್ಮಜ್ಞಾನಿಯಾಗಿರಲು| ನೋಡಬೇಕವರ ಮಹಿಮೆ|’

– ಇದು ನಿಜವೇ ಆಗಿದೆ.
ಶ್ರೀದಾಸಬೋಧದಲ್ಲಿನ ಮೇಲಿನ ಸಮರ್ಥೋಕ್ತಿಯಂತೆ ಆತ್ಮಜ್ಞಾನದ ಮಹಿಮೆ ಅಗಾಧವಾಗಿದೆ. ಆತ್ಮಸಾಕ್ಷಾತ್ಜಾರೀ ಸಂತರು ಕೇವಲ ಪರಬ್ರಹ್ಮಸ್ವರೂಪವಾಗಿರುವದರಿಂದ, ಮಾಯಾಮಯ ಸೃಷ್ಟಿಯ ದೇವದೇವತೆ ಮೊದಲಾದ ಶಕ್ತಿಗಳಿಗೆ, ಅವರು ಪೂಜ್ಯರೆನಿಸಿದರೆ, ಅದರಲ್ಲಿ ಆಶ್ಚರ್ಯವೇನಿದೆ? ಪ್ರತ್ಯಕ್ಷ ಸತ್ಸಂಗ ಆಗದೇ ಇದ್ದಾಗ ಸಂತರು ಉಪಯೋಗಿಸಿದ ವಸ್ತುಗಳ ಸಂಗವೂ ತದ್ರೂಪ ಎಂದೇ ಗ್ರಹಿಸಬೇಕೆಂದು ಈ ಪ್ರಸಂಗದಿಂದ ಕಂಡುಬರುತ್ತದೆ.

|ಜಯ ಜಯ ರಘುವೀರ ಸಮರ್ಥ|

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|
(ಗತಕಾಲದ ‘ಶ್ರೀಧರ ಸಂದೇಶ’ ಸಂಚಿಕೆಗಳ ಪುಟಗಳಿಂದ)

home-last-sec-img