Memories

16. ತಮಗೆ ಕಡುತರ ನಿಯಮ, ಭಕ್ತರಿಗೆ ದಯಾಸಾಗರ ನಮ್ಮ ಸ್ವಾಮಿಗಳು

(ನಿರೂಪಣೆ : ಶ್ರೀಧರಭಕ್ತೆ ಕು. ಲೀಲಾ ಪೂಜಾರಿ, ಬಿ. ಎ. ಕರಾಡ)

ಇಸವಿ ಸನ ೧೯೬೩… ಶಕೆ ೧೮೯೫

ಒಮ್ಮೆ ಮಹಾಬಳೇಶ್ವರದಲ್ಲಿ ಸ್ವಾಮಿಗಳ ಕಡುತರ ನಿಯಮ ಪಾಲನೆಯ ಪ್ರಚೀತಿ ನನಗೆ ಬಂತು. ಅದು ಆದದ್ದು ಹೀಗೆ …
ಆ ದಿನ ಗುರುಭಕ್ತೆ ಕರ್ಕಿ ಗಂಗಕ್ಕ ಕ್ಷೌರ ಮಾಡಿಕೊಂಡಿದ್ದರಿಂದ, ಆ ದಿನ ಅವರ ಕೈ ಅಡುಗೆ ಸ್ವಾಮಿಗಳಿಗೆ ಸಲ್ಲದಿರುವದರಿಂದ ಆ ಕೆಲಸ ನನ್ನ ಹತ್ತಿರ ಬಂತು. ಸ್ವಾಮಿಗಳಿಗಾಗಿ ಅಡುಗೆ ಸೇವೆ ಮಾಡುವ ಯೋಗ ಇಂದು ಬಂದಿದ್ದರಿಂದ ನನಗೆ ತುಂಬಾ ಆನಂದವಾಯಿತು. ಸ್ವಾಮಿಗಳು ಬೆಳಿಗ್ಗೆ ೧೦ ಗಂಟೆಗೆ ಮಜ್ಜಿಗೆ ತೆಗೆದುಕೊಳ್ಳುತ್ತಿದ್ದರು. ನಾನು ತಾಜಾ ಮಜ್ಜಿಗೆ ಕಡೆದು, ಬೆಳ್ಳಿಯ ತಟ್ಟೆಯಲ್ಲಿ ಸ್ವಾಮಿಗಳಿಗೆ ಕೊಟ್ಟೆ. ಅದರಲ್ಲಿ ಹಿಮಾಲಯದಿಂದ ತಂದ ಉಪ್ಪಿನಾಂಶವಿರುವ ಎಲೆಯ ಪುಡಿ ಹಾಕಲು ಹೇಳಿದರು. ತಟ್ಟೆ ಸ್ವಾಮಿಗಳ ಕೈಯಲ್ಲಿತ್ತು ಮತ್ತು ನಾನು ಅದರಲ್ಲಿ ಪುಡಿ ಹಾಕಿ, ಚಮಚದಿಂದ ತಿರುಗಿಸಲು ಪ್ರಾರಂಭಿಸಿದೆ. ಸ್ವಾಮಿಗಳು ತಕ್ಷಣ ತಟ್ಟೆ ಕೆಳಗಿಟ್ಟರು ಮತ್ತು ಮಜ್ಜಿಗೆಯನ್ನು ವಿರುದ್ಧ ದಿಕ್ಕಿನಲ್ಲಿ ತಿರುಗಿಸಿದರು. ಮಜ್ಜಿಗೆಯನ್ನು ಬಲದಿಂದ ಎಡಕ್ಕೆ ತಿರುಗಿಸುವದರ ಬದಲು ನಾನು ಎಡದಿಂದ ಬಲಕ್ಕೆ ತಿರುಗಿಸಿದ್ದೆ. ವಿರುದ್ಧ ತಿರುಗಿಸಿದ ಮಜ್ಜಿಗೆಯನ್ನು ಸ್ವಾಮಿಗಳು ತೆಗೆದುಕೊಳ್ಳಲಿಲ್ಲ. ನನಗೆ ಅತ್ಯಂತ ದುಃಖವಾಯಿತು. ಅಲ್ಲಿದ್ದ ಶಿಷ್ಯರು ನನಗೆ ಕನಿಕರಿಸಿ, ಸ್ವಾಮಿಗಳಿಗೆ ಮಜ್ಜಿಗೆ ತೆಗೆದುಕೊಳ್ಳಲು ವಿನಂತಿಸಿದರು ಮತ್ತು, ‘ಮಜ್ಜಿಗೆಯಲ್ಲದಿದ್ದರೆ ಬೇರೆ ಪಾನಕವನ್ನಾದರೂ ತೆಗೆದುಕೊಳ್ಳಿ. ಸ್ವಾಮಿ ಮಹಾರಾಜ! ಅವಳು ತುಂಬಾ ಅಳುತ್ತಿದ್ದಾಳೆ. ಎಂದು ಹೇಳಿದರು. ಕೊನೆಗೆ, ದಯಾಮಯಿ ಸ್ವಾಮಿಗಳು ಪಾನಕ ಕುಡಿದರು. ಸ್ವಾಮಿಗಳು ಆ ದಿನ, ‘ಆಚಾರಃ ಪ್ರಥಮೋ ಧರ್ಮಃ’ ಎಂಬ ವಿಷಯದ ಮೇಲೆ ಪ್ರವಚನ ಮಾಡಿದರು ಮತ್ತು ಅದರಿಂದ ನನ್ನ ಮನಸ್ಸಿಗೆ ಸಮಾಧಾನವಾಯಿತು. ಆ ದಿನ ಗುರುಮಾಯಿಯ ನಿಯಮಪಾಲನೆಯ ಆದರೆ ಅಷ್ಟೇ ದಯಾವಂತ ಸ್ವಭಾವದ ದರ್ಶನ ಎಲ್ಲರಿಗೂ ಆಯಿತು. ‘ಇದರಿಂದೇನು ಆಗುತ್ತದೆ, ಅದರಿಂದೇನು ಆಗುತ್ತದೆ’, ಎನ್ನುವ ನಮ್ಮ ಸ್ವಭಾವದಿಂದಲೇ ನಾವು ಅಧೋಗತಿಗೆ ಬೀಳುತ್ತಿರುತ್ತೇವೆ. ಸ್ವಾಮಿಗಳು, ತಮ್ಮ ಸಾನಿಧ್ಯದಲ್ಲಿ ಯಾರದೇ ಆಚಾರ ತಪ್ಪಿದರೂ, ಅದರ ಪ್ರಾಯಶ್ಚಿತ ಸ್ವತಃ ತೆಗೆದುಕೊಳ್ಳುತ್ತಿದ್ದರೇ ಹೊರತು, ಆ ತಪ್ಪಿತಸ್ಥರ ಮೇಲೆ ಸಿಟ್ಟು ಮಾಡುತ್ತಿರಲಿಲ್ಲ. ಇದು ನಮ್ಮ ಗುರುಮಾಯಿಯ ವೈಶಿಷ್ಠ್ಯವೇ ಆಗಿತ್ತು. ನಾವು ಶಿಷ್ಯರು ಯಾರಾದರೂ ಆ ತಪ್ಪಿತಸ್ಥನಿಗೆ ಸಿಟ್ಟು ಮಾಡಿದರೆ, ಗುರುಮಾಯಿ ನಮ್ಮನ್ನು ಶಾಂತ ಪಡಿಸುತ್ತ, ‘ಅರೇ! ಸ್ವಲ್ಪ ತಡೆ! ಇರಲಿ ಬಿಡು! ಒಳ್ಳೇದು! ಅವನು ದರ್ಶನ ತೆಗೆದು ಕೊಳ್ಳಲಿ! ನಾನು ಮತ್ತೆ ಸ್ನಾನ ಮಾಡುತ್ತೇನೆ!’ ಹೀಗೆ ಹೇಳಿ, ನಂತರ ಸ್ನಾನ ಮಾಡುತ್ತಿದ್ದರು.

ವಿಶೇಷ ಟಿಪ್ಪಣಿ: ಗುರುಭಕ್ತೆ ಪ.ಪೂ. ಲೀಲಾತಾಯಿ ಪೂಜಾರಿಯವರು ಬರೆದ ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳ ಮರಾಠಿ ಆರತಿ ಹಾಡು
ಶ್ರೀಧರ ಸ್ವಾಮಿ ಆರತಿ ಕರಿತೊ ತುಜಲಾ ಗುರುರಾಯಾ|
ಮನ್ಮಾನಸ ಹೇ ಚರಣೀ ಅರ್ಪುನಿ ಓವಾಳಿನ ಸದಯಾ||
ತೂ ವಿಶ್ವಂಬರ ಪೂರ್ಣ ಸನಾತನ ತೂ ಸರ್ವಸಾಕ್ಷೀ|
ಭಕ್ತಾಸಾಠಿ ಧಾವುನ ಯೇಸೀ ಪರಬ್ರಹ್ಮ ರಕ್ಷೀ|
ತುಝ್ಯಾ ಕೃಪೇಚಾ ಮಹಿಮಾ ವರ್ಣೀ ಭೋಳಾ ಶಂಕರ|
ಚಿನ್ಮಯ ವ್ಯಾಪಕ ಸರ್ವಚರಾಚರ ತೂ ವಿಶ್ವಂಬರ ||೧||
ಭಕ್ತಾಂಚೇ ತೂ ಹಟ್ಟ ಪುರವಿಸೀ ಭಕ್ತಿ ಪಾಹೋನೀ|
ದಯಾಸಾಗರಾ ದೀನಾನಾಥಾ ಯೇಸೀ ಧಾವೋನೀ|
ಶಾಂತಿ ಸುಖಾಚೀ ಅಖಂಡ ಮೂರ್ತಿ ಸದ್ಗುರು ಶ್ರೀಧರಾ|
ಭಕ್ತಾವರತೀ ಕೃಪಾ ಕರೂನಿಯಾ ಚುಕವೀ ಹಾ ಫೇರಾ||೨||
|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಆಷಾಢ, ೧೯೦೧ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img