Memories

19. ಸಂತರ ಬಾಹ್ಯ ವ್ಯವಹಾರದ ನಿಜಾರ್ಥವನ್ನು ಯಾರೂ ಅರಿಯಲಾರರು

(ನಿರೂಪಣೆ : ಶ್ರೀಧರಭಕ್ತೆ ಕು. ಪಿಂಕಿ ಭಾವೆ, ರಾಮದಾಸಿ)

|ಶ್ರೀರಾಮ ಸಮರ್ಥ|

ಶ್ರೀಮತ್ ಪ.ಪ. ಭಗವಾನ ಸದ್ಗುರು ಶ್ರೀಧರಸ್ವಾಮಿ ಮಹಾರಾಜರ ಚಾತುರ್ಮಾಸ ಕಾಶಿ ಕ್ಷೇತ್ರದಲ್ಲಿ ಸಿಂಧಿಯಾಘಾಟದ ಗಂಗಾಮಹಲಿನಲ್ಲಿ ನಡೆಯುತ್ತಿರುವಾಗಿನ ಘಟನೆಯಿದು. ಶ್ರೀಸಮರ್ಥರ ಚರಣ ಪಾದುಕೆಗಳೊಂದಿಗೆ, ಸಮರ್ಥ ಸೇವಾಮಂಡಳದ ಉಪಾಧ್ಯಕ್ಷ ಕೈ. ಬಾಬೂರಾವ ವೈದ್ಯ ಮೊದಲಾದವರು, ಶ್ರೀ ಬದರೀನಾರಾಯಣ ಕ್ಷೇತ್ರಕ್ಕೆ ಹೋಗಿದ್ದಾಗ ಈ ಘಟನೆ ನಡೆಯಿತು.ಆ ವೇಳೆ ಭಾಸ್ಕರಬುವಾ ರಾಮದಾಸಿಯವರೂ ಹಿಮಾಲಯದಲ್ಲಿನ ತೀರ್ಥಕ್ಷೇತ್ರಗಳ ಯಾತ್ರೆ ಮಾಡುತ್ತಿದ್ದರು. ಹರಿದ್ವಾರದಲ್ಲಿ ಅವರಿಗೆ ಒಬ್ಬ ಸಾಧುವಿನ ವೇಶಧಾರಿಯು ಪ್ರಸಾದವೆಂದು, ಹಾಲಿನಲ್ಲಿ ನಶೆಯೇರುವ ಪದಾರ್ಥವನ್ನು ಕೊಟ್ಟನು ಮತ್ತು ಅದನ್ನು ಸೇವಿಸಿದ್ದರಿಂದ ಬುವಾ ಎಚ್ಚರತಪ್ಪಿ ಬಿದ್ದಾಗ ಒಂದು ಲಂಗೋಟಿ ಬಿಟ್ಟು ಉಳಿದ ವಸ್ತುಗಳನ್ನು ಕದ್ದೊಯ್ದರು ಮತ್ತು ನಂತರ ಭಾಸ್ಕರ ಬುವಾರು ಹಾಗೆಯೇ ಹಿಮಾಲಯದಲ್ಲಿ ತಿರುಗುತ್ತಿದ್ದರು. ಯಾತ್ರೆ ಸಂಪೂರ್ಣವಾದ ಮೇಲೆ ಹರಿದ್ವಾರದ ಸ್ಟೇಶನ ಮಾಸ್ತರರು ವ್ಯವಸ್ಥೆ ಮಾಡಿ ಕೊಟ್ಟಿದ್ದರಿಂದ ಬುವಾರು ಕಾಶೀ ಕ್ಷೇತ್ರಕ್ಕೆ ಬಂದರು.

ಅಲ್ಲಿ ಸ್ವಾಮಿಗಳ ಚಾತುರ್ಮಾಸ ಗಂಗಾಮಹಲಿನಲ್ಲಿ ಇದೆ, ಎಂದು ತಿಳಿದಿದ್ದರಿಂದ, ಸಹಜವಾಗಿಯೇ ದರ್ಶನದ ಇಚ್ಛೆಯಾಗಿ ಬುವಾ ಗಂಗಾಮಹಲಿಗೆ ಹೋದರು. ಅಲ್ಲಿ ಉಳಿದ ಸೇವಕ ಶಿಷ್ಯರಿಂದ, ‘ಸ್ವಾಮಿಗಳ ಚಾತುರ್ಮಾಸ ತಪಸ್ಸು ತುಂಬಾ ಕಡುತರವಿದೆ. ಮೂರನೆಯ ಮಾಳಿಗೆಯ ಒಂದು ಸಣ್ಣ ಕೋಣೆಯಲ್ಲಿ ಅವರ ವಾಸ್ತವ್ಯವಿದ್ದು, ಸಂಪೂರ್ಣ ಮೌನವಿದೆ. ಯಾರಿಗೂ ದರ್ಶನವಿಲ್ಲ. ಸೇವಕ ಶಿಷ್ಯರು ಕೋಣೆಯ ಹೊರಗೆ ಹಾಲು ಮೊದಲಾದವುಗಳನ್ನು ಇಡುತ್ತಾರೆ ಮತ್ತು ಸ್ವಾಮಿಗಳು ತಮ್ಮ ಇಚ್ಛೆಯಾದಾಗ ಯಾವಾಗಾದರೂ ಬಾಗಿಲು ತೆಗೆದು ಅದನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚಾಗಿ ನಿರಾಹಾರವೇ ನಡೆಯುತ್ತದೆ’, ಎಂದು ತಿಳಿದುಬಂತು. ಗಂಗಾತಟದಲ್ಲಿ ಮಹಲ ಇರುವದರಿಂದ, ಸ್ವಾಮಿಗಳು ಸೂರ್ಯೋದಯಕ್ಕಿಂತ ಮೊದಲೇ, ಗುಪ್ತರೀತಿಯಿಂದ ಗಂಗಾಸ್ನಾನ ಮಾಡುತ್ತಿರಬೇಕು, ಎಂದು ಬುವಾರಿಗೆ ಅನಿಸಿತು. ಹಾಗಿದ್ದಲ್ಲಿ, ಸ್ನಾನದ ವೇಳೆ ದೂರದಿಂದಲಾದರೂ ದರ್ಶನವಾಗಬಹುದು, ಎಂಬ ಆಶೆಯಿಂದ ಬುವಾ ಗಂಗಾ ಸ್ನಾನ ಘಾಟಿನಲ್ಲಿಯೇ ಕುಳಿತಿದ್ದರು ಮತ್ತು ಹಾಗೆಯೇ ನಿಜವಾಗಲೂ ರಾತ್ರಿ ಎರಡೂವರೆ ಮೂರರ ಸುಮಾರಿಗೆ ಸ್ವಾಮಿಗಳು ಒಬ್ಬರೇ ಘಾಟಿಗೆ ಇಳಿಯುತ್ತಿರುವದು ಕಾಣಿಸಿತು. ಬುವಾ ದೂರದಿಂದಲೇ ನಮಸ್ಕಾರ ಮಾಡಿದರು. ಇನ್ನೇನು ತಿರುಗಿ ಹೋಗಬೇಕೆನ್ನುವದರೊಳಗಾಗಿ, ಸ್ವಾಮಿಗಳೇ ಕೇಳಿದರು, ‘ನೀನು ಇಲ್ಲಿ ಹೇಗೆ? ವಸ್ತ್ರಗಳೆಲ್ಲಾ ಎಲ್ಲಿವೆ? ಹೀಗೆ ಬರೇ ಲಂಗೋಟಿ ಮೇಲೆ ಏತಕ್ಕೆ?’ ಸ್ವಾಮಿಗಳ ಈ ಮಾತು ಕೇಳಿ ಬುವಾ, ‘ತಮ್ಮ ಮೌನ ಮತ್ತು ಏಕಾಂತವಿದೆ, ಎಂದು ನಾನು ದೂರದಿಂದಲೇ ದರ್ಶನ ತೆಗೆದುಕೊಂಡೆ. ಆದರೆ ನೀವು ಮಾತನಾಡುತ್ತಿದ್ದೀರಿ. ಇದು ಹೇಗೆ?’ ಎಂದು ಹೇಳಿದರು. ಆಗ ಸ್ವಾಮಿಗಳು ಹಸುನಗು ನಕ್ಕರು ಮತ್ತು ಭಾಸ್ಕರಬುವಾ ಸ್ವಾಮಿಗಳು ಕೇಳಿದ ಪ್ರಶ್ನೆಗುತ್ತರವಾಗಿ, ಹರಿದ್ವಾರದಲ್ಲಾದ ಎಲ್ಲ ಪ್ರಸಂಗಗಳನ್ನು ಸ್ವಾಮಿಗಳಿಗೆ ಹೇಳಿದರು. ಸ್ವಾಮಿಗಳು ಗಂಗಾಸ್ನಾನ ಮಾಡಿದರು ಮತ್ತು ಸ್ವಾಮಿಗಳ ಅಪ್ಪಣೆಗನುಸಾರ, ಬುವಾನು ಅವರ ಅಂಗವಸ್ತ್ರಗಳನ್ನು ತೊಳೆದು ತಗೆದುಕೊಂಡನು ಮತ್ತು ಸ್ವಾಮಿಗಳು ಅತಿಪ್ರೇಮದಿಂದ ಬುವಾನ ಸೊಂಟವನ್ನು ತಮ್ಮ ಕೈಯಿಂದ ಬಳಸಿರಲು, ಇಬ್ಬರೂ ಮಾತನಾಡುತ್ತಾ ಗಂಗಾಮಹಲಿಗೆ ಬಂದರು. ನಂತರ ಭಾಸ್ಕರ ಬುವಾ ಒಂದು ತಿಂಗಳು ಸ್ವಾಮಿಗಳ ಸಹವಾಸದಲ್ಲಿ ಪಾರಮಾರ್ಥಿಕ ಸಂವಾದ ಮಾಡುತ್ತಾ ಅಲ್ಲಿ ಇದ್ದನು.

ಇದು ನಿಜವೇ ಅಲ್ಲವೇ!
ಜನಾಚಿ ಜನಾ ಲಾಜವೀ ವೃತ್ತೀ| ತೆವ್ಹಾ ಯೋಗೇಶ್ವರ|
ಈ ಸಮರ್ಥೋಕ್ತಿಯಂತೆ ಸಂತರ ಬಾಹ್ಯ ವ್ಯವಹಾರದ ನಿಜಾರ್ಥವನ್ನು ಯಾರೂ ಅರಿಯಲಾರರು.
ವಜ್ರಾದಪಿ ಕಠೋರಾಣಿ| ಮೃದೂನಿ ಕುಸುಮಾದಪಿ|
ಹೀಗೆಯೇ ಸಂತ ಚರಿತ್ರವಿರುತ್ತದೆ. ಶ್ರೀಗುರುಕೃಪೆಯ ಪ್ರೇಮಾಮೃತದ ಇದೊಂದು ವಿಲಕ್ಷಣ ಅನುಭವವಾಗಿದೆ.

||ಜಯ ಜಯ ರಘುವೀರ ಸಮರ್ಥ||

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಸಂಚಿಕೆಗಳ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img