Memories

20. ವರದಪುರದ ಸಮಾಧಿಸ್ಥ ಗುರುಗಳಿಂದ ಬ್ರಹ್ಮಪಿಶಾಚಿಗೆ ಮುಕ್ತಿ; ಬಾಧಿತನಿಗೆ ಬಾಧೆಯಿಂದ ಬಿಡುಗಡೆ

(ನಿರೂಪಣೆ : ಶ್ರೀಧರಭಕ್ತ ಶ್ರೀ ಕು.ಗೋ.ಘಾಣೇಕರ, ಪುಣೆ)

ಏಳು ವರ್ಷಗಳ ಹಿಂದೆ, ನನ್ನ ಮೊಮ್ಮಗ ಚಿ. ಕಿಶೋರ ಯಶವಂತ ಘಾಣೇಕರ, ಅಂಧೇರಿ, ಮುಂಬಾಯಿ ರಹವಾಸಿ, ಬಾಹ್ಯಬಾಧೆ(ಭೂತಬಾಧೆ)ಯಿಂದ ಅಸ್ವಸ್ಥನಾಗಿದ್ದನು. ಆತನಿಗೆ ಆ ಬಾಧೆ ಸಂಚಾರವಾದಾಗ, ಅವನು ತನ್ನ ಎದೆಗೆ ತಾನೇ ಗುದ್ದುಕೊಳ್ಳುತ್ತಿದ್ದನು. ಆ ವೇಳೆ ಅವನನ್ನು ತಡೆಯಲು ಯಾರಾದರೂ ಬಂದರೆ, ಅವರಿಗೆ ಅವನು ಒದೆಯುತ್ತಿದ್ದನು ಮತ್ತು ಸಂಚಾರ ಜೋರಾಗಿದ್ದಾಗ, ನಾಲ್ಕು ಗಟ್ಟಿಮುಟ್ಟ ಆಳುಗಳಿಗೂ ಆತನನ್ನು ಹಿಡಿದಿಡಲಾಗುತ್ತಿರಲಿಲ್ಲ. ಆಗ ಆತನು ಕೇವಲ ಹತ್ತು ವರ್ಷದವನಾಗಿದ್ದನು. ನನ್ನ ಮಗನು ಆತನ ಉಪಚಾರಕ್ಕೆಂದು ಸಾಯನ ಹಾಸ್ಪಿಟಲನಲ್ಲಿ ಹದಿನೈದು ದಿನ ಮತ್ತು ಕೆ.ಇ.ಎಮ್. ಹಾಸ್ಪಿಟಲನಲ್ಲಿ ಹದಿನೈದು ದಿನ ಇಟ್ಟಿದ್ದನು. ಅಲ್ಲಿಯ ಡಾಕ್ಟರರ ಅಭಿಪ್ರಾಯ, ‘ಆತನಿಗೆ ಏನೂ ಆಗಿಲ್ಲ; ಆತನು ಬೇಕೆಂತಲೇ ಮಾಡುತ್ತಾನೆ’ ಎಂದೇ ಆಗಿತ್ತು. ಆಗ ನನ್ನ ಮಗನು ಫೋನ ಮಾಡಿ ನಮ್ಮನ್ನು ಕರೆಸಿಕೊಂಡನು ಮತ್ತು ಅದರಂತೆ ನಾವು ಮುಂಬಾಯಿಗೆ ಕೆ.ಇ.ಎಮ್ ಹಾಸ್ಪಿಟನಲ್ಲಿ ಆತನನ್ನು ನೋಡಲು ಹೋದೆವು. ಅವನನ್ನು ನೋಡುತ್ತಲೇ ಅವನಿಗೆ ಬಾಹ್ಯಬಾಧೆಯ ತೊಂದರೆಯಾಗುತ್ತಿರುವ ಬಗ್ಗೆ ನಮಗೆ ನಿಶ್ಚಯವಾಗಿ ಅನಿಸಿತು. ಸುಮಾರು ೨೭ ವರ್ಷಗಳ ಹಿಂದೆ ನನ್ನ ಕೊನೆಯ ಮಗಳು ಬಾಹ್ಯಬಾಧೆಯಿಂದ ಕಷ್ಟಪಟ್ಟಿದ್ದಳು. ಅವಳಿಗೆ ಸಂಚಾರವಾದಾಗ, ಅವಳು ಅರಚಿಕೊಳ್ಳಹತ್ತಿದರೆ, ನಾಲ್ಕು ಜನರಿಗೂ ಸಂಭಾಳಿಸಲು ಆಗುತ್ತಿರಲಿಲ್ಲ. ಆಗ, ‘ಶ್ರೀಧರ ಸ್ವಾಮಿಗಳ ಹೊರತು, ಅವಳನ್ನು ಮತ್ತಾರೂ ಗುಣಪಡಿಸಲಿಕ್ಕೆ ಶಕ್ಯವಿಲ್ಲ’ ಎಂದು ಎಲ್ಲರೂ ನಮಗೆ ಹೇಳಿದ್ದರು. ಆದರೆ ಆಗ ಸ್ವಾಮಿಗಳು ಎಲ್ಲಿದ್ದಾರೆ ಎಂಬ ಬಗ್ಗೆ ನಮಗೆ ಏನೇನೂ ತಿಳಿಯದೇ ಹೋಗಿದ್ದರಿಂದ, ಸ್ವಾಮಿಗಳ ಬಳಿಗೆ ಕರೆದುಕೊಂಡು ಹೋಗಲು ಶಕ್ಯವಾಗದೇ ಹೋಯಿತು. ಅವಳಿಗೆ ಎರಡು ವರ್ಷ ಬಹಳ ಕಷ್ಟವಾಯಿತು. ಎರಡು ವರ್ಷಗಳಾದ ಮೇಲೆ ರತ್ನಾಗಿರಿಯ ಒಬ್ಬ ವೃದ್ಧ ಸನ್ಯಾಸಿ ಪುಣೆಗೆ ಮೊದಲನೆಯ ಸಲ ಬಂದಿದ್ದರು. ಅವರು, ಅವಳ ಕುತ್ತಿಗೆಗೆ ಕಟ್ಟಲು ತಾಯಿತ ಕೊಟ್ಟರು ಮತ್ತು ಆಕೆ ಗುಣಹೊಂದಿದಳು. ಅಂತಹದೇ ಲಕ್ಷಣಗಳು ಮೊಮ್ಮಗನ ವಿಷಯದಲ್ಲೂ ಕಂಡುಬಂದಿದ್ದರಿಂದ, ಅವನಿಗೆ ಬಾಹ್ಯಬಾಧೆಯ ತೊಂದರೆಯೇ ಆಗಿದೆಯೆಂಬ ಬಗ್ಗೆ ನಮಗೆ ನಿಶ್ಚಯವಾಯಿತು. ಆಗ ಸ್ವಾಮಿಗಳ ಶಿಷ್ಯ ಗೋಡಸೆಬುವಾ ಮತ್ತು ಡಾ|ಭಾವೆಯವರು, ನನ್ನ ಮೊಮ್ಮಗನನ್ನು ಸ್ವಾಮಿಗಳ ಹತ್ತಿರ ಕರೆದೊಯ್ಯುವ ಸಲಹೆ ಮಾಡಿದರು ಮತ್ತು ನಾವು ವರದಹಳ್ಳಿಗೆ ಹೋಗುವ ತೀರ್ಮಾನ ಮಾಡಿದೆವು. ಪ್ರವಾಸದ ವೇಳೆ ನನ್ನ ಮೊಮ್ಮಗನಿಗೆ ದೇಹದಲ್ಲಿ ಸಂಚಾರವಾಗಬಹುದೇ ಎಂಬ ಚಿಂತೆ ಬಾಧಿಸುತ್ತಿತ್ತು. ಆದರೆ ಸ್ವಾಮಿಗಳ ಕೃಪೆಯಿಂದ ಪ್ರವಾಸದಲ್ಲಿ ಏನೂ ತೊಂದರೆಯಾಗಲಿಲ್ಲ. ಅಲ್ಲಿ ಮುಟ್ಟಿದ ಮೇಲೆ, ಸ್ವಾಮಿಗಳ ಸೇವಕ ಶಿಷ್ಯ ಜನಾರ್ಧನರವರ ಹತ್ತಿರ ಎಲ್ಲ ಮಾಹಿತಿ ಬರೆದುಕೊಟ್ಟು, ಆ ಕಾಗದ ಸ್ವಾಮಿಯವರ ಹತ್ತಿರ ಕಳುಹಿಸಿದೆವು. ಆಗ ಸ್ವಾಮಿಗಳು, ‘ಅವನಿಗೆ ಗುಣವಾಗುತ್ತದೆ; ಕೆಳಗೆ ಬರೆದ ಕಟ್ಟುಪಾಡುಗಳನ್ನು ತಪ್ಪದೇ ಪಾಲಿಸಬೇಕು’ ಎಂದು ತಿಳಿಸಿದರು. ಆ ನಿಯಮಗಳೇನೆಂದರೆ,

೧. ಮುಟ್ಟಾದಾಗ ಮೂರು ದಿನ ಮನೆಯ ಹೆಂಗಸರು ಮೈಲಿಗೆ ಪಾಲಿಸಬೇಕು.
೨. ಮಂತ್ರಿಸಿ ಕೊಟ್ಟ ತಾಮ್ರದ ತಗಡಿನ ಸುರುಳಿಯನ್ನು ತಾಯಿತದಲ್ಲಿಟ್ಟು ಕುತ್ತಿಗೆಯಲ್ಲಿ ಧರಿಸಿರಬೇಕು ಮತ್ತು ಆ ತಾಯಿತಕ್ಕೆ ಮಗುವು ಪ್ರತಿದಿನ ‘ನಮಃ ಶಾಂತಾಯ … ‘ ಮಂತ್ರವನ್ನು ಹದಿಮೂರು ಸಲ ಹೇಳಿ ಅಭಿಷೇಕ ಮಾಡಿ ಪುನಃ ಧರಿಸಬೇಕು.
ಈ ಎರಡೂ ಕಟ್ಟಳೆಗಳನ್ನು ಪಾಲಿಸುವುದಕ್ಕೆ ನಾವು ಒಪ್ಪಿಕೊಂಡೆವು ಮತ್ತು ನಾವು ವರದಹಳ್ಳಿಯಲ್ಲಿ ಮೂರು ದಿನ ಉಳಿದುಕೊಂಡಿದ್ದೆವು.
ಆ ಸಮಯದಲ್ಲಿ ಶ್ರೀ ಸ್ವಾಮಿಗಳು ಈಗಿನ ಸಮಾಧಿ ಮಂದಿರದ ಹತ್ತಿರದ ‘ಗುಹಾಕುಟಿ’ ಯಲ್ಲಿ ಇದ್ದರು ಮತ್ತು ‘ಶ್ರೀಧರ ತೀರ್ಥ’ದ ಮೇಲಿರುವ ಕುಟಿಯವರೆಗೆ ಹೋಗಲು, ಭಕ್ತರಿಗೆ ಅನುಮತಿ ಇತ್ತು. ಅಲ್ಲಿ ಮೊಮ್ಮಗನೊಂದಿಗೆ ನಾವು ಕೆಲ ಸಮಯ ಕುಳಿತುಕೊಳ್ಳುತ್ತಿದ್ದೆವು. ಆ ವೇಳೆ ನಮ್ಮ ಮೊಮ್ಮಗನು ಧ್ಯಾನಸ್ಥನಾಗಿರುವಾಗ ಸ್ವಾಮಿಗಳ ದರ್ಶನವಾಗುತ್ತಿತ್ತು. ಆ ಕಾಲದಲ್ಲಿ ಭೋಜನಾದಿ ವ್ಯವಸ್ಥೆ ಶ್ರೀದುರ್ಗಾಂಬಾ ಮಂದಿರದ ಹತ್ತಿರ ಇತ್ತು. ಆ ಮಂದಿರಕ್ಕೆ ಬಂದು ಕುಳಿತ ಮೇಲೂ ನಮ್ಮ ಮೊಮ್ಮಗ ಕೆಲ ಹೊತ್ತು ಧ್ಯಾನಸ್ಥನಾಗಿರುವಾಗ, ಆತನಿಗೆ, ಶ್ರೀ ಸ್ವಾಮಿಗಳು ತನ್ನನ್ನು ಬೆರಳು ಹಿಡಿದು ದೂರ ಕರೆದೊಯ್ದ ಹಾಗೆ ಮತ್ತು ಒಂದು ಬಂಡೆಯ ಮೇಲೆ ಸ್ವಾಮಿಗಳು ಮಂತ್ರಿಸಿದ ನೀರು ಪ್ರೋಕ್ಷಣೆ ಮಾಡಿದೊಡನೆ ಆ ಬಂಡೆಯಿಂದ ಶ್ರೀದತ್ತಮೂರ್ತಿ ಮೇಲೆದ್ದು ಬಂದಂತೆ ಕಾಣಿಸಿತು.

ಮುಂಬಾಯಿಗೆ ತಿರುಗಿ ಬಂದ ಮೇಲೆ, ಸ್ವಾಮಿಗಳು ಮೇಲೆ ಹೇಳಿದ ನಿಯಮವನ್ನು ಹೆಚ್ಚು ಕಡಿಮೆ ಒಂದು ವರ್ಷದ ವರೆಗೆ ನಮ್ಮ ಮೊಮ್ಮಗನ ತಾಯಿ ಆಚರಿಸಿದಳು ಮತ್ತು ನನ್ನ ಮೊಮ್ಮಗನು ಎಲ್ಲರಂತೆ ಸಂಪೂರ್ಣ ಸಾಮಾನ್ಯ ರೀತಿಯಿಂದ ಸಹಜವಾಗಿ ಇದ್ದನು. ಆದರೆ ನಂತರ ಮುಟ್ಟಿನ ಕಾಲದಲ್ಲಿ ಮಗನಿಗೆ ಮೈಲಿಗೆಯಾಗಬಾರದೆಂಬ ನಿಯಮ ಪಾಲಿಸುವದು ಕಷ್ಟವಾಗಹತ್ತಲು, ನಮ್ಮ ಮೊಮ್ಮಗನ ತಾಯಿ, ಮಗನಿಗೆ ಕುತ್ತಿಗೆಯಲ್ಲಿದ್ದ ತಾಯಿತವನ್ನು ಮೂರು ದಿನ ತೆಗೆದು, ದೇವರ ಪೀಠದಲ್ಲಿಡಲು ಹೇಳಿದಳು. ಒಮ್ಮೆ, ಆ ಮೂರು ದಿನ ಕುತ್ತಿಗೆಯಲ್ಲಿ ತಾಯಿತವಿಲ್ಲದೇ ನಮ್ಮ ಮೊಮ್ಮಗನು ಸಾಯಂಕಾಲ ಹೊರಗೆ ತಿರುಗಲು ಹೋದಾಗ ಮತ್ತೆ ಆತನ ದೇಹದಲ್ಲಿ ಭೂತ ಪ್ರವೇಶವಾಗಲು ಮೊದಲಿನಂತೆಯೇ ಸಮಸ್ಯೆ ತಿರುಗಿ ಪ್ರಾರಂಭವಾಯಿತು.

ಅಷ್ಟರೊಳಗೆ, ಸ್ವಾಮಿಗಳು ಬ್ರಹ್ಮೀಭೂತರಾಗಿದ್ದರು ಮತ್ತು ನಮ್ಮ ಮೊಮ್ಮಗನನ್ನು ಎರಡು ತಿಂಗಳು ಪುಣೆಯಲ್ಲಿ ಉಪಚಾರಕ್ಕೆಂದು ನಮ್ಮ ಹತ್ತಿರ ತಂದಿಟ್ಟರು. ಪುಣೆಯಲ್ಲಿ ಆ ಕಾಲಾವಧಿಯಲ್ಲಿ ಅನೇಕರಿಂದ ಸಣ್ಣ ದೊಡ್ಡ ಉಪಚಾರವಾಯಿತು. ಆದರೆ, ಯಾರೂ ಪೂರ್ಣ ಗುಣಪಡಿಸಲು ಶಕ್ತರಾಗಲಿಲ್ಲ. ಪ್ರತಿಯೊಬ್ಬರೂ, ‘ಅವನಿಗೆ ಬ್ರಹ್ಮಪಿಶಾಚಿ ಹಿಡಿದಿದ್ದು, ಸಂಪೂರ್ಣ ತೆಗೆದು ಹಾಕುವ ಸಾಮರ್ಥ್ಯ ನಮ್ಮಲ್ಲಿ ಇಲ್ಲ. ನಾವು ಅವನ ಕಷ್ಟವನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಬಹುದು’ ಎಂದೇ ಹೇಳುತ್ತಿದ್ದರು. ಹಾಗಾಗಿ ಇನ್ನು ಏನೂ ಉಪಚಾರ ಶಕ್ಯವಿಲ್ಲವೆಂಬ ನಿರಾಶೆಯಿಂದ ಅವನನ್ನು ಅಂಧೇರಿಗೆ ತಿರುಗಿ ಕಳುಹಿಸಿದೆವು.

ನಂತರ ಅಲ್ಲಿ ಪದೇ ಪದೇ ಸಂಚಾರವಾಗಹತ್ತಿತು ಮತ್ತು ಆತನ ತಾಯಿಗೆ ಬಹಳ ಕಷ್ಟಪಡಬೇಕಾಯಿತು. ಒಂದು ದಿನವಂತೂ ತಾಯಿಗೇ ಚಾಕು ತೆಗೆದುಕೊಂಡು ಇರಿಯಲು ಓಡಿಬಂದಾಗ, ಆತನ ತಾಯಿ, ಅವನ ತಂದೆಯನ್ನು ಠಾಣಾದಿಂದ, ಫೋನ ಮಾಡಿ ಕರೆಸಿಕೊಳ್ಳಬೇಕಾಯಿತು. ತಂದೆ ಮನೆ ತಲುಪುವವರೆಗೆ ಆತನು ಶಾಂತನಾಗಿದ್ದನು. ಮಾಲಾಡದಲ್ಲಿ ಮರಾಠೆ ಎಂಬ ಅಡ್ಡ ಹೆಸರಿನ ಒಬ್ಬ ಮಹಿಳೆ ಇಂತಹ ಸಮಸ್ಯೆಗೆ ಉಪಚಾರ ಮಾಡುತ್ತಾರೆಂದು ತಿಳಿದು ಬರಲು, ಅವರ ಬಳಿ ಆತನನ್ನು ಕರೆದೊಯ್ದರು. ಆಗ ಆ ಹುಡುಗ ತನ್ನ ತಂದೆಗೆ, ‘ನಾನು ಸ್ವಾಮಿಗಳ ಫೋಟೋ ಮುಂದೆ ಕುಳಿತುಕೊಳ್ಳಲೋ?’ ಎಂದು ಕೇಳಿದನು. ಅದಕ್ಕೆ ನನ್ನ ಮಗನು, ‘ಕುಳಿತುಕೋ, ಆದರೆ ಮತ್ತೇಕೆ ತೊಂದರೆಯಾಗುತ್ತಿದೆ, ಎಂದು ಕೇಳಿಕೋ’ ಎಂದು ಹೇಳಿದನು. ಆತನು ಸ್ವಾಮಿಗಳ ಫೋಟೋ ಮುಂದೆ ಕುಳಿತು ಧ್ಯಾನಸ್ಥನಾದನು ಮತ್ತು ತನಗೆ ಮತ್ತೇಕೆ ಹೀಗೆ ತೊಂದರೆ ಆಗುತ್ತಿದೆ, ಎಂದು ಸ್ವಾಮಿಗಳಲ್ಲಿ ಕೇಳಿದನು. ಅದಕ್ಕೆ ಸ್ವಾಮಿಗಳು, ‘ಮಗಾ! ನಾನು ಹೇಳಿದ ನಿಯಮ ಪಾಲನೆಯಾಗುತ್ತಿಲ್ಲ. ಹಾಗಾಗಿ ನಿನಗೆ ತೊಂದರೆ ಆಗುತ್ತಿದೆ. ಇಂದಿನಿಂದ ನಾನು ಎಲ್ಲ ವ್ಯವಸ್ಥೆ ಮಾಡಿದ್ದೇನೆ. ಎಲ್ಲ ನಿಯಮಗಳನ್ನು ಪಾಲಿಸುತ್ತಿರು. ಇನ್ನು ನಿನಗೆ ತೊಂದರೆಯಾಗುವದಿಲ್ಲ. ಹಾಗೇ, ದೀಪಾವಳಿಯ ಮೊದಲು ಒಂದು ಗುರುವಾರ ವರದಹಳ್ಳಿಗೆ ಹೋಗಿ ಸಮಾಧಿಯ ಮೇಲೆ ನಿನ್ನ ಹಣೆ ತಾಗಿಸು’, ಎಂದು ಹೇಳಿದರು. ಆ ದಿನದಿಂದ ಅವನ ಆ ತೊಂದರೆ ಸಂಪೂರ್ಣ ನಿಂತಿತು. ಸ್ವಾಮಿಗಳು ಹೇಳಿದಂತೆ, ನನ್ನ ಮೊಮ್ಮಗ ಅವನ ತಾಯಿ, ತಂದೆ ಮತ್ತು ಆತನ ತಮ್ಮ, ಹೀಗೆ ನಾಲ್ಕು ಜನ ವರದಹಳ್ಳಿಗೆ ಹೋಗಿ, ಸಮಾಧಿಯ ಮೇಲೆ ತಮ್ಮ ಹಣೆ ತಗಲಿಸಿ ನಮಸ್ಕಾರ ಮಾಡಿ ತಿರುಗಿ ಬಂದರು. ಅದರ ನಂತರ ಇಂದಿನವರೆಗೂ ಏನೂ ತೊಂದರೆ ಮತ್ತೆ ಆಗಲಿಲ್ಲ. ‘ಸ್ವಾಮಿಗಳು ಈಗಿಲ್ಲ’, ಎಂದು ನಾವು ಹೇಳುತ್ತೇವೆ. ಆದರೆ ಬ್ರಹ್ಮೀಭೂತವಾದ ಮೇಲೂ, ಸ್ವಾಮಿಗಳು ನನ್ನ ಮೊಮ್ಮಗನನ್ನು ಪೂರ್ಣ ಗುಣ ಮಾಡಿದರು ಮತ್ತು ಆತನ ದೇಹದಲ್ಲಿ ಸಂಚರಿಸುತ್ತಿದ್ದ ಬ್ರಹ್ಮಪಿಶಾಚಿಗೆ ಅವರು ಮುಕ್ತಿ ಕೊಟ್ಟರು. ಇದು ಅದೆಷ್ಟು ದೊಡ್ಡ ಚಮತ್ಕಾರ! ಇದರಿಂದ ಅಣು-ರೇಣುವಿನಲ್ಲಿಯೂ ಸ್ವಾಮಿಗಳ ಉಪಸ್ಥಿತಿ ಇದೆ ಮತ್ತು ನಾವು ದೃಢ ಚಿತ್ತದಿಂದ, ಏಕನಿಷ್ಠೆಯ ಮನೋಭಾವನೆಯಿಂದ ಸ್ವಾಮಿಗಳ ಸ್ಮರಣ ಮಾಡಿದರೆ, ಅವರು ನಮ್ಮ ಮೇಲೆ ಕೃಪೆ ಮಾಡೇ ಮಾಡುತ್ತಾರೆ. ನಾವಿಬ್ಬರೂ ಪತಿ ಪತ್ನಿ ಸ್ವಾಮಿಗಳಿಂದ ಅನುಗ್ರಹೀತರಾಗಿದ್ದು, ಸ್ವಾಮಿಗಳು ನಮ್ಮ ಕುಟುಂಬದವರ ಮೇಲೆ ಇಲ್ಲಿಯವರೆಗೆ ಅನಂತ ಉಪಕಾರ ಮಾಡಿದ್ದಾರೆ ಮತ್ತು ಅವುಗಳ ಪ್ರಚೀತಿ ನಮಗೆ ಪದೇ ಪದೇ ಆಗುತ್ತಿರುತ್ತದೆ. ಅಂತಹ ಪ್ರಚೀತಿಗಳ ಒಂದೆರಡು ಉದಾಹರಣೆ ಕೆಳಗೆ ಬರೆದಿದ್ದೇನೆ.

೧. ಐದು ವರ್ಷಗಳ ಹಿಂದೆ, ನನ್ನ ಮಗಳ ಮಗ, ಅಮಾವಾಸ್ಯೆಯ ಮಧ್ಯಾಹ್ನ ಹನ್ನೆರಡು ಗಂಟೆಗೆ, ನಮ್ಮ ಮನೆಯ ಆವಾರದಲ್ಲಿರುವ ಮಾವಿನ ಮರ ಹತ್ತಿ, ಮರದ ತುದಿಗೆ, ಸುಮಾರು ೫೦ ಫುಟ ಎತ್ತರದ ಮೇಲಿದ್ದ ಮಾವಿನ ಕಾಯಿ ತೆಗೆಯಹತ್ತಿದನು. ಆದರೆ, ಕೆಳಗಡೆ ನೋಡಿದ್ದರಿಂದ, ಆತನಿಗೆ ಕಣ್ಗತ್ತಲು ಕವಿದು, ಅವನು ಟೊಂಗೆಯನ್ನು ಹಿಡಿದಿದ್ದ ಕೈ ಸಡಿಲವಾಗಲು, ಅವನು ಕೆಳಗೆ ನೆಲದ ಮೇಲಿದ್ದ ಒಂದು ಡ್ರಮ್ ಮೇಲೆ ಬಿದ್ದನು. ಕಬ್ಬಿಣದ ಡ್ರಮ್ಮಿನ ಮೇಲೆ ಇಷ್ಟು ಎತ್ತರದಿಂದ ಬಿದ್ದರೂ, ಆತನಿಗೆ ಏನೂ ಆಗಲಿಲ್ಲ. ಎಲುಬು ಮುರಿಯಲಿಲ್ಲ, ಹನಿ ರಕ್ತವೂ ಹರಿಯಲಿಲ್ಲ, ಕೇವಲ ಬಿದ್ದ ನೋವಿನ ಪೆಟ್ಟಿನಲ್ಲೇ ಆ ಅಪಘಾತ ಮುಕ್ತಾಯವಾಯಿತು. ಆತನು ಒಂದು ಚೂರೂ ಧಕ್ಕೆಯಿಲ್ಲದೇ, ಸುಖರೂಪ ಆ ಅನಾಹುತದಿಂದ ಪಾರಾದದ್ದು, ಸ್ವಾಮಿಗಳ ಅಪಾರ ಕೃಪೆಯಲ್ಲದೇ ಇನ್ನೇನು?
೨. ಇದು ಆರು ವರ್ಷಗಳ ಹಿಂದೆ ನಡೆದ ಘಟನೆ.
ಆಗ ನನ್ನ ಮಗಳು ಸೌ. ಸುನಂದಾ ದೇವಧರಳು ಪುಣೆಯ ಅಪ್ಪಾ ಬಳವಂತ ಚೌಕದಲ್ಲಿನ ಮೋರೋಬಾ ದಾದಾರ ವಾಡಾದಲ್ಲಿ ಇರುತ್ತಿದ್ದಳು. ಆ ವಾಡಾದಲ್ಲಿ ಅವಳ ಕುಟುಂಬ ವೃದ್ಧ ಅತ್ತೆಯೊಂದಿಗೆ ಎರಡನೆಯ ಮಾಳಿಗೆಯಲ್ಲಿ ಉಳಿದುಕೊಂಡಿದ್ದರು. ವಾಡಾ ತುಂಬಾ ಹಳೆಯದಾಗಿತ್ತು.
ಆ ವರ್ಷದ ಮಳೆಗಾಲದ ಒಂದು ರಾತ್ರಿ…
ನನ್ನ ಮಗಳು ತನ್ನ ಗಂಡ ಮತ್ತು ಮಕ್ಕಳೊಂದಿಗೆ ಒಂದು ಕೋಣೆಯಲ್ಲಿ ಮತ್ತು ಅತ್ತೆ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು.
ರಾತ್ರಿ ಒಂದು ಗಂಟೆ …

ಮಳೆ ಸತತ ಸುರಿಯುತ್ತಲೇ ಇತ್ತು. ನನ್ನ ಮಗಳ ಅತ್ತೆಗೆ ಅಕಸ್ಮಾತ್ ಎಚ್ಚರವಾಯಿತು ಮತ್ತು ಎಲ್ಲಿ ಸೋರುತ್ತಿದೆಯೆಂದು ನೋಡಲು ಅವರು ದೀಪ ಹಚ್ಚಿ, ಆ ಕೋಣೆಯ ಒಂದು ಬದಿಗೆ ಸರಿದರು. ಅಷ್ಟರಲ್ಲಿ, ಮೂರನೆಯ ಮಾಳಿಗೆಯು ಕುಸಿದು ಬಿದ್ದು, ಅಲ್ಲಿ ಮಲಗಿದ್ದ ಬಾಡಿಗೆದಾರ ತಾನು ಮಲಗಿದ್ದ ಮಂಚದೊಂದಿಗೆ, ಎರಡನೆಯ ಮಾಳಿಗೆಯಲ್ಲಿ ಅವಳ ಅತ್ತೆ ಮಲಗಿದ್ದ ಸ್ಥಳದಲ್ಲೇ ದೊಪ್ಪನೆ ಬಿದ್ದನು. ನನ್ನ ಮಗಳ ಅತ್ತೆ ಸ್ವಲ್ಪದರಲ್ಲೇ ಆ ಅಪಘಾತದಿಂದ ಏನೂ ಪೆಟ್ಟಾಗದೇ ಬದುಕುಳಿದರು. ನನ್ನ ಮಗಳು ತನ್ನ ಗಂಡ, ಮಕ್ಕಳೊಂದಿಗೆ ಮಲಗಿದ್ದ ಕೋಣೆಗೆ ಸ್ವಾಮಿಗಳ ಕೃಪೆಯಿಂದ ಏನೂ ಧಕ್ಕೆಯಾಗಿಲ್ಲ. ಅಲ್ಲಿ ಸ್ವಾಮಿಗಳ ಫೋಟೋ ಇತ್ತು.

ನಂತರ ಎರಡು ದಿನಗಳಾದ ಮೇಲೆ, ಸ್ವಾಮಿಗಳ ಆ ಫೋಟೋ ತೆಗೆದುಕೊಂಡು ಹೋಗಲು ನನ್ನ ಮಗಳು ಅಲ್ಲಿಗೆ ಹೋದಳು. ಆಗ, ಆ ಫೋಟೋ ತೆಗೆದುಕೊಂಡು ಕೋಣೆಯಿಂದ ಸುರಕ್ಷಿತ ಹೊರಗೆ ಬಂದ ಕೂಡಲೇ ಆ ಕೋಣೆಯ ಮೇಲ್ಛಾವಣಿಯೂ ಕುಸಿದು ಬಿತ್ತು.
ಈ ರೀತಿ ಸ್ವಾಮಿಗಳ ಕೃಪೆಯನ್ನು ಹೇಳಿದಷ್ಟೂ ಕಡಿಮೆಯೇ!

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಶಕೆ ೧೯೦೧ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img