Memories

24. ‘ಸ್ವಾಮಿಗಳಿಂದ ಅನುಗ್ರಹೀತನಾದೆ … ಸ್ವಾಮಿಗಳು ಕೃಪೆಮಾಡಿ ನನಗೆ ಎಲ್ಲದರಿಂದಲೂ ಮುಕ್ತಮಾಡಿದರು … ನಾನು ಸಣ್ಣ ಬಾಲಕನಂತೆ ಆದೆ; ನಾನು ಸುಖಿಯಾದೆ!’

(ನಿರೂಪಣೆ : ಶ್ರೀಧರಭಕ್ತ ಶ್ರೀ ಗ. ಜ್ಞಾ. ಪಾಟೀಲ, ಔದುಂಬರ )

ಪರಮಪೂಜ್ಯ ಪ. ಪ. ಶ್ರೀಧರಸ್ವಾಮಿ ಮಹಾರಾಜ ಅಂದರೆ ಸಾಕ್ಷಾತ್ ಶ್ರೀ ಗುರುದೇವ ದತ್ತಮಹಾರಾಜರೇ. ಅವರ ದರ್ಶನಕ್ಕಾಗಿ ನಾನು ಔದುಂಬರದಿಂದ ಸಜ್ಜನಡಕ್ಕೆ ಹೊರಟೆ. ರಾತ್ರಿಯ ವೇಳೆ ಗಡದ ಮೆಟ್ಟಲುಗಳನ್ನು ಹತ್ತಲಿಕ್ಕೆ ಪ್ರಾರಂಭಿಸಿದೆ. ಮಾರ್ಗಮಧ್ಯೆ ಪ್ರಚಂಡ ಮಳೆ ಪ್ರಾರಂಭವಾಗಲು, ಅಲ್ಲಿಯೇ ಮಾರ್ಗಮಧ್ಯದಲ್ಲಿ ಕಟ್ಟಿದ ವಿಶ್ರಾಂತಿಗೃಹದಲ್ಲಿ ಆಶ್ರಯ ಪಡೆದೆ. ಈ ಆಶ್ರಯದ ನಿಜ ಬೆಲೆ ನನಗೆ ಆ ವೇಳೆಯಲ್ಲಿ ಅರಿವಾಯಿತು. ಮಹಾರಾಜರ ಪ್ರತಿಯೊಂದು ಯೋಜಿತ ಕಾರ್ಯಕ್ಕೂ ಎದುರು ಮಾತಿಲ್ಲ.

ಮಳೆ ನಿಂತ ಮೇಲೆ ರಾತ್ರಿ ಹನ್ನೊಂದೂವರೆಗೆ ಶ್ರೀಧರ ಕುಟಿಯನ್ನು ತಲುಪಿದೆ. ಸ್ವಾಮಿಗಳು ಪ್ರವಚನ ಮುಗಿಸಿ ಆಗಮಾತ್ರ ತಿರುಗಿ ಬಂದಿದ್ದರು. ನಾನು ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದೆ. ಅವರ ಪಾದ ಧೂಳಿ ನನ್ನ ಹಣೆಗೆ ತಾಗಿತು; ನಾನು ಧನ್ಯನಾದೆ. ನಾನು ಅವರಿಗೆ, ‘ತಾವು ಔದುಂಬರಕ್ಕೆ ಯಾವಾಗ ಬರುತ್ತೀರಿ?’ ಎಂದು ಕೇಳಿದೆ. ಸ್ವಾಮಿಗಳು ಇದಕ್ಕೆ ಏನೂ ಹೇಳಲಿಲ್ಲ. ಹಾಗಾಗಿ, ನನ್ನ ಮನಸ್ಸಿಗೆ ಧಕ್ಕೆಯಾದಂತಾಯಿತು.
ಸ್ವಾಮಿಗಳಿಂದ ಉಪದೇಶ ಸಿಗಲೆಂದು ನಾನು ಆರ್ತನಾಗಿದ್ದೆ. ಬೆಳಿಗ್ಗೆ ಶ್ರೀ ಅಷ್ಟೇಕರರನ್ನು ಸಿಕ್ಕೆ ಮತ್ತು ಅವರಿಗೂ, ಸ್ವಾಮಿಗಳಿಂದ ಉಪದೇಶ ಸಿಗುವ ಬಗ್ಗೆ ವಿನಂತಿ ಮಾಡಿಕೊಂಡೆ. ಆ ದಿನ ಬುಧವಾರವಾಗಿತ್ತು. ಸ್ವಾಮಿಗಳು, ಅದಕ್ಕುತ್ತರವಾಗಿ, ಸ್ವಲ್ಪ ವಿಚಾರ ಮಾಡಿ, ‘ನಾನು ನಿನಗೆ ನಾಳೆ ಉಪದೇಶ ಕೊಡುತ್ತೇನೆ’ ಎಂದು ಹೇಳಿದರು.

ಗುರುವಾರ ಬೆಳಗಾಯಿತು. ಕರ್ನಾಟಕದ ಒಬ್ಬ ದಂಪತಿಗಳು ಸ್ವಾಮಿಗಳ ಪಾದಪೂಜೆ ಮಾಡಲು ಪ್ರಾರಂಭಿಸಿದರು. ನಾನು ಮಾತ್ರ ತುಂಬಾ ಆತುರದಲ್ಲದ್ದೆ. ಕೆಲ ಸಮಯದ ನಂತರ ನನ್ನ ಆ ಆತುರತೆಯಲ್ಲಿ ನಾನು ಸ್ವಾಮಿಗಳಿಗೆ, ‘ತಾವು ನನಗೆ ಉಪದೇಶ ಕೊಡುತ್ತೀರಲ್ಲ?’ ಎಂದು ಪ್ರಶ್ನೆ ಮಾಡಿಯೇ ಬಿಟ್ಟೆ. ಸ್ವಾಮಿಗಳು ನನಗೆಂದರು, ‘ಈ ಪಾದಪೂಜೆ ಆಯಿತು ಎಂದಾದ ಕೂಡಲೇ ಕೊಡುತ್ತೇನೆ’
ಬೆಳಿಗ್ಗೆ ಹತ್ತು ಗಂಟೆಯಾಗಿತ್ತು. ಸ್ವಾಮಿಗಳು ಶ್ರೀಧರಕುಟಿಯ ಮಾಳಿಗೆಯ ಮೇಲೆ ಕರೆದುಕೊಂಡುಹೋದರು ಮತ್ತು ಅನುಗ್ರಹೀತನನ್ನಾಗಿ ಮಾಡಿದರು. ನಾನು ಧನ್ಯನಾದೆ! ಈಗ ನನ್ನ ಹೊಣೆ ನನ್ನ ಮೇಲೆ ಉಳಿದಿಲ್ಲ. ಸ್ವಾಮಿಗಳು ಕೃಪೆಮಾಡಿ ನನಗೆ ಎಲ್ಲದರಿಂದಲೂ ಮುಕ್ತಮಾಡಿದರು. ನನ್ನ ಮನಸ್ಸಿನ ಭಾರ ಇಳಿಯಿತು; ನಾನು ಸಣ್ಣ ಬಾಲಕನಂತೆ ಆದೆ. ನಾನು ಸುಖಿಯಾದೆ.

ಅದೇ ರಾತ್ರಿ ನನಗೆ ಸ್ವಪ್ನ ಬಿತ್ತು. ಸ್ವಾಮಿಗಳು ನನ್ನ ಮುಂದೆ ಬಂದು, ಗಡಿಬಿಡಿಯಿಂದ ಹೇಳಿದರೇನೆಂದರೆ, ‘ಈಗ ಭಿಕ್ಷೆ ರತ್ನಾಗಿರಿಯಲ್ಲೂ ಅಲ್ಲ; ಮೈಸೂರಿನಲ್ಲೂ ಅಲ್ಲ. ಈಗ ಭಿಕ್ಷೆ ಔದುಂಬರದಲ್ಲೇ’

ಮರುದಿನ ಶುಕ್ರವಾರವೇ ನಾನು ಔದುಂಬರಕ್ಕೆ ತಿರುಗಿ ಬಂದೆ. ಅದೇ ರಾತ್ರಿ ಸ್ವಾಮಿಗಳು ಮಹಾಬಳೇಶ್ವರ, ಔದುಂಬರಕ್ಕೆ ಬಂದು, ಕೂಡಲೇ ತಿರುಗಿ ಹೋದರು. ಎರಡನೆಯ ರಾತ್ರಿ ಗೋಡಸೇ ಬುವಾ ಬಂದರು ಮತ್ತು ಮಾವಿನ ಹಣ್ಣಿನ ಸೀಕರಣಿ ಕುಡಿದು, ಶ್ರೀ ದತ್ತಾಬುವಾರನ್ನು ಹುಡುಕುತ್ತ ಹಿಂದಿರುಗಿದರು. ಮರುದಿನ ಬೆಳಿಗ್ಗೇನೇ, ಶ್ರೀಮತಿ ಗಂಗಕ್ಕಾ ಬಂದು ಭಿಕ್ಷೆ ತೆಗೆದುಕೊಂಡು ಹೋದರು. ಆ ನನ್ನ ಸ್ವಪ್ನ – ಯಾವುದರಲ್ಲಿ ಸ್ವಾಮಿಗಳು ನನ್ನ ‘ತಾವು ಯಾವಾಗ ಔದುಂಬರಕ್ಕೆ ಬರುತ್ತೀರಿ?’ ಎಂಬ ಪ್ರಶ್ನೆಗೆ, ಬಂದು ಉತ್ತರ ಕೊಟ್ಟರೋ – ಮತ್ತು ಅದರಂತೆಯೇ, ತಮ್ಮ ಶಿಷ್ಯರನ್ನು ನನ್ನ ಹತ್ತಿರ ಕಳುಹಿಸಿ, ಆ ಸ್ವಪ್ನವನ್ನು ಸಾಕಾರ ಮಾಡಿದ ಸ್ವಾಮಿಗಳ ಕೃಪೆ, ಇವನ್ನು ನೋಡಿ, ನನಗಾದ ಆನಂದ ಎಲ್ಲೆ ಮೀರಿ ನನ್ನ ಸಂಪೂರ್ಣ ದೇಹ ಮನವನ್ನು ಆವರಿಸಿತು. ನಂತರವೂ ಸ್ವಾಮಿಗಳ ಬೇರೆ ಬೇರೆ ಶಿಷ್ಯರು, ಔದುಂಬರಕ್ಕೆ ಬಂದು, ಭಿಕ್ಷೆ ಸ್ವೀಕರಿಸಿ ಹೋದರು. ಶ್ರೀ ಶ್ರೀಧರ ದತ್ತರಿಗೆ ನನ್ನ ಶತ ಶತ ನಮಸ್ಕಾರ

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಭಾದ್ರಪದ ೧೯೦೧, ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img