Memories

28. ಸಾಧಕರ ಕೈ ಹಿಡಿದು ನಡೆಸುತಿಹರು …

(ನಿರೂಪಣೆ : ಶ್ರೀಧರಭಕ್ತ ಶ್ರೀ ಮಾರುತಿ ಭೋಸಲೆ, ರಾಮದಾಸಿ)

೧. ಯುವ ಸಾಧಕರಿಗೆ ಮಾರ್ಗದರ್ಶನ
ಶ್ರೀ ಸಮರ್ಥ ರಾಮದಾಸ ಸ್ವಾಮಿ ಮಹಾರಾಜರವರಿಂದ ಪ್ರಾಪ್ತವಾದ ಜ್ಞಾನಸಂಪತ್ತನ್ನು ಶ್ರೀ ಶ್ರೀಧರ ಸ್ವಾಮಿ ಮಹಾರಾಜರು ತಮ್ಮ ಜೀವನದಲ್ಲಿ ಅನೇಕ ಸಾಧಕರಿಗೆ, ಭಕ್ತರಿಗೆ ಬೋಧರೂಪದಿಂದ ಕೊಡುತ್ತಿದ್ದರು. ಮಹಾರಾಜರ ಸಾನಿಧ್ಯದಲ್ಲಿ ಹೊಸದಾಗಿ ಬಂದ ಸಾಧಕನಿಗೆ, ಮಹಾರಾಜರು, ‘ಮಗಾ! ನಿನ್ನ ಜೀವನದ ಬಗ್ಗೆ ನೀನು ವಿಚಾರ ಮಾಡಿದ್ದೀಯೇನು? ನಿನಗೆ ಯಾವ ಮಾರ್ಗದ ಅವಲಂಬನೆ ಮಾಡಬೇಕೆಂದಿದೆ? ನಿನ್ನ ಜೀವನದ ಜೀವನದೋಣಿ ಭವಸಾಗರದ ಯಾವ ದಂಡೆಯ ಮೇಲೆ ಸ್ಥಿರವಾಗಿಡಬೇಕೆಂದು ಅನಿಸುತ್ತದೆ? ಪ್ರವೃತ್ತಿಯ ಸಂಗ ಹಿಡಿಯುವದಾದರೆ, ಜೀವನವಿಡೀ ಭೌತಿಕ ಸುಖದ ಉಪಭೋಗ ತೆಗೆದುಕೊಂಡು, ಭೌತಿಕ ಸಂಪತ್ತಿನ ಆಶೆಯಿಂದ ಎಂಭತ್ನಾಲ್ಕು ಸಾವಿರ ಪುನರ್ಜನ್ಮಗಳ ಸರಪಳಿಯಲ್ಲಿ ತಿರುಗಬೇಕಾಗುವದು. ನೋಡು! ವಿಚಾರ ಮಾಡು! ಜೀವನದಲ್ಲಿ ನಿವೃತ್ತಿ ಮಾರ್ಗ ಹಿಡಿಯಬೇಕೆಂದು ಅನಿಸುತ್ತಿದ್ದರೆ, ವಿವೇಕ ಮತ್ತು ವೈರಾಗ್ಯದಿಂದ ಬೇಗನೆ ಸರ್ವಸಂಗ ಪರಿತ್ಯಾಗ ಮಾಡುವದಕ್ಕೆ ಸಿದ್ಧನಿರಬೇಕು ಅಂದರೆ ಪರಮಾತ್ಮ ಭಕ್ತನ ಸಂರಕ್ಷಣೆಗೆ ಯಾವಾಗಲೂ ನಿಂತೇ ಇದ್ದಾನೆ’, ಎಂದು ಸ್ವತಃ ವಿಚಾರಿಸುತ್ತಿದ್ದರು. ಸ್ವಾಮಿಗಳ ಹತ್ತಿರ ಅನೇಕ ಸಾಧಕರು, ಭಕ್ತರು ಜ್ಞಾನಪ್ರಾಪ್ತಿಯ ಉತ್ಸುಕತೆಯಿಂದ ಬರುತ್ತಿದ್ದರು. ಅವರವರ ಅಧಿಕಾರಕ್ಕನುರೂಪವಾಗಿ, ಅವರಿಗೆ ಜ್ಞಾನೋಪದೇಶವೂ ಸಿಗುತ್ತಿತ್ತು. ಶ್ರೀಗುರು ಪರಂಪರೆಯಿಂದ ಪ್ರಾಪ್ತವಾದ ಶ್ರೀಸಮರ್ಥ ಕೃಪೆಯೇ ಅನೇಕ ಸದ್ಭಕ್ತರಿಗೆ ಸಿಕ್ಕಿದೆ. ಶ್ರೀ ಸ್ವಾಮಿಮಹಾರಾಜರಿಂದ ಸಿಕ್ಕ ಶ್ರೀರಾಮಕೃಪೆ, ಅನೇಕ ಸದ್ಭಕ್ತರಿಗೆ ಹೃದಯದಲ್ಲಿ ಪ್ರಕಾಶಿತವಾದದ್ದೂ ಕಂಡುಬರುತ್ತದೆ.

೨. ಗೋರಖನಾಥರ ಗುಹೆಯಲ್ಲಿ ಯೋಗ ಕ್ರಿಯೆಗಳ ಪ್ರತ್ಯಕ್ಷ ಪಾಠ :
ದಿನಾಂಕ ೧೨, ಜೂನ ೧೯೬೫ಕ್ಕೆ ನಾವು ಮುಂಬಾಯಿಯಿಂದ ದಿಲ್ಲಿ ಮಾರ್ಗವಾಗಿ ಹರಿದ್ವಾರ ಮುಟ್ಟಿದೆವು. ಎಲ್ಲರ ವಾಸ್ತವ್ಯವೂ ಮದ್ರಾಸಿ ಧರ್ಮಶಾಲೆಯಲ್ಲಿತ್ತು. ಪ್ರವಾಸದಲ್ಲಿ ಶ್ರೀ ಸ್ವಾಮಿಯವರಿಂದ ಪರಮಾರ್ಥಮಾರ್ಗದಲ್ಲಿ ನಡೆಯುತ್ತಿರುವ ಸಾಧಕರಿಗೆ ಅಮೂಲ್ಯವಾದ ಆಧ್ಯಾತ್ಮದ ಮಾರ್ಗದರ್ಶನ ಸಿಗುತ್ತಿತ್ತು. ದಿನಾಂಕ ೭, ಜೂನಿಗೆ ಸ್ವಾಮಿಗಳ ಸಂಗಡ ನಾವು ಹತ್ತು ಜನ (ನಿಸ್ಪೃಹ ಸಾಧಕರು) ಹರಿದ್ವಾರ ಕ್ಷೇತ್ರ ನೋಡಲಿಕ್ಕೆ ಹೊರ ಹೊರಟೆವು. ಮೊದಲು ಭೀಮಕುಂಡ ನೋಡಿದೆವು. ಅಲ್ಲಿ ನಡೆದ ಘಟನೆಗಳ ಇತಿಹಾಸವನ್ನು ಅಲ್ಲಿಯ ಪೂಜಾರಿಯು ಹೇಳಿದನು. ನಂತರ ಬೆಳಿಗ್ಗೆ ೧೦ ಗಂಟೆಗೆ ಗೋರಖನಾಥ ಗುಹೆಯೆಡೆಗೆ ತಿರುಗಿದೆವು. ಗುಹೆಯನ್ನು ಪ್ರವೇಶ ಮಾಡಿದ ಕ್ಷಣದಿಂದಲೇ ಮನಸ್ಸು ಅಂತರ್ಮುಖವಾಗಹತ್ತಿತು. ಶ್ರೀ ಸ್ವಾಮಿಗಳು ಗುಹೆಯ ಒಳಗಡೆ ಹೋಗಿ ನಮ್ಮೆಲ್ಲರಿಗೂ, ‘ನೋಡಿ! ನಾನು ಇಂದು ಗೋರಖನಾಥರ ಆಜ್ಞೆಯಮೇಲಿಂದ ನಿಮಗೆ ಯೋಗಮಾರ್ಗದ ಪ್ರಕ್ರಿಯೆ – ಮೂಲಬಂಧ, ಉಡ್ಯಾನಬಂಧ ಮತ್ತು ಜಲಂಧರಬಂಧ ಮೊದಲಾದವುಗಳನ್ನು – ಹೇಳುವನಿದ್ದೇನೆ. ನೀವೆಲ್ಲರೂ ಗುಹೆಯೊಳಗೆ ಆಸನಸ್ಥರಾಗಿ ಕುಳಿತುಕೊಳ್ಳಿರಿ’ ಎಂದು ಹೇಳಿ, ಶ್ರೀ ಸ್ವಾಮಿಗಳು ಸ್ವತಃ ಆಸನದಲ್ಲಿ ಕುಳಿತು, ಯೋಗಮಾರ್ಗದ ಪ್ರಕ್ರಿಯೆ ತೋರಿಸಹತ್ತಿದರು. ಪ್ರಕ್ರಿಯೆಗಳ ಮಾಹಿತಿ ಹೇಳಿ, ಮಾಡಿ ತೋರಿಸಾದ ಮೇಲೆ, ಆ ಪ್ರಕ್ರಿಯೆ ನಮ್ಮಿಂದ ಮಾಡಿಸಿ ಕೊಳ್ಳುತ್ತಿದ್ದರು. ತಪ್ಪಾಗಿ ಮಾಡಿದರೆ, ಅದೇ ಆಸನ ಮತ್ತೆ ಮಾಡಲು ಸೂಚಿಸುತ್ತಿದ್ದರು.

ಆತ್ಮಜ್ಞಾನ ಸಂಪಾದನೆಗಾಗಿ, ಮೊದಲು ಯೋಗಮಾರ್ಗ ಸಾಧಿಸಬೇಕಾಗುತ್ತದೆ. ಯೋಗಮಾರ್ಗದ ಅಭ್ಯಾಸದಿಂದ ದೇಹಬಲ, ಮನೋಬಲ, ಆತ್ಮವಿಶ್ವಾಸ ಹೆಚ್ಚುತ್ತದೆ. ಸದ್ಗುರುವಿನ ಸಾನಿಧ್ಯದಲ್ಲಿ ಸಾಧನಾಭ್ಯಾಸ ವ್ಯವಸ್ಥಿತವಾಗಿ ನಡೆದರೆ, ಅವರ ಕೃಪೆಯಿಂದ ಕುಂಡಲಿನೀ ಶಕ್ತಿ ಜಾಗೃತವಾಗಿ ಆತ್ಮಜ್ಞಾನಪ್ರಾಪ್ತಿಯಾಗುತ್ತದೆ. ಸ್ವಾಮಿಗಳು, ಹಿಮಾಲಯದಲ್ಲಿ ಪ್ರವಾಸ ಮಾಡುತ್ತಿರುವಾಗ, ಪ್ರಸಂಗಾನುಸಾರವಾಗಿ, ಯೋಗಮಾರ್ಗದ ಮಾರ್ಗದರ್ಶನ ಮಾಡಿದ್ದೊಂದು ಅಮೂಲ್ಯ ಮಾರ್ಗದರ್ಶನ ಮತ್ತು ಸ್ವಾಮಿಗಳ ಆ ಸಹವಾಸ ಅನೇಕ ಸಾಧಕರಿಗೆ ಸಂಸ್ಮರಣೀಯವಾಯಿತು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಅಶ್ವಿನ ೧೯೦೧, ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img