Memories

29. ನನಗೆ ಗುರುಮಾಯಿ ಹೇಗೆ ಸಿಕ್ಕರು? (ಮೊದಲನೆಯ ಭಾಗ)

(ನಿರೂಪಣೆ : ಶ್ರೀಧರಭಕ್ತೆ ಶ್ರೀಮತಿ ಮನೋರಮಾಬಾಯಿ ಗಾಡಗೀಳ, ಜಬಲಪುರ)

ಶ್ರೀಗುರುಮಾಯಿಯ ವಾಸ್ತವ್ಯ ಶಕೆ ೧೮೭೯ರ ಚಾತುರ್ಮಾಸದಲ್ಲಿ, ಶ್ರೀಕ್ಷೇತ್ರ ಕಾಶಿಯಲ್ಲಿನ ಗಂಗಾಮಹಲಿನಲ್ಲಿ ಇರುವಾಗ, ನಾವು ಗಂಗಾಮಹಲಿಗೆ ತಾಗಿಕೊಂಡಿರುವ ಭೋಸಲೆ ಮಂದಿರದಲ್ಲಿ ಉಳಿದುಕೊಂಡಿದ್ದೆವು. ನನ್ನ ಪತಿ ಆ ಮಂದಿರದ ವ್ಯವಸ್ಥಾಪಕರಾಗಿದ್ದರು.

ಆಗ, ರಾತ್ರಿಯ ಹನ್ನೊಂದೂವರೆಯ ಸುಮಾರಿಗೆ ಗಂಗಾಮಹಲಿನ ಕಟ್ಟಡದ ಗೋಪುರದ ತಾರಸಿಯಲ್ಲಿ ಬಹಳಿಷ್ಟು ಜನ ಕುಳಿತಿದ್ದು, ಅವರಿಗೆ ತಮ್ಮ ಮಧುರ ಮಂಜುಳ ಸ್ವರದಿಂದ ಯಾರೋ ಉಪದೇಶ ಮಾಡುತ್ತಿದ್ದುದು ನನಗೆ ಕೇಳಿಸಿತು. ‘ಯಾರು ಮಾತನಾಡುತ್ತಿದ್ದಾರೆ?’, ಎಂದು ತವಕದಿಂದ ಕಿಡಕಿ ತೆರೆದು ನೋಡಿದಾಗ, ಅಲ್ಲಿ ಒಂದು ಕಡೆ, ವ್ಯಾಘ್ರಾಂಬರದ ಮೇಲೆ ಒಬ್ಬ ಸ್ವಾಮಿಗಳು ಕುಳಿತಿದ್ದು, ಮೂರು-ನಾಲ್ಕು ಸ್ತ್ರೀ ಮತ್ತು ಹತ್ತು ಹದಿನೈದು ಪುರುಷರು ಅವರ ಮುಂದೆ ಕುಳಿತಿದ್ದರು. ‘ಇವರು ಇಷ್ಟು ರಾತ್ರಿ ಏನು ಮಾತನಾಡುತ್ತಿದ್ದಾರೆ?’ ಎಂಬ ಕುತೂಹಲವುಂಟಾಗಿ, ನಾನು ಅಲ್ಲೇ ಕೇಳುತ್ತ ಕುಳಿತೆ ಮತ್ತು ಸಂಪೂರ್ಣ ಸಂಭಾಷಣೆ ಕೇಳಿದ ಮೇಲೆ, ಅದರ ಸವಿ ನನ್ನನ್ನು ಆವರಿಸಲು, ನಾನು ದಿನವೂ ರಾತ್ರಿ ೧೧ ಗಂಟೆಗೆ ನಿಯಮಿತವಾಗಿ ಅಲ್ಲಿ ಕುಳಿತು ಕೇಳಹತ್ತಿದೆನು. ಸಮಾರು ೧೦ – ೧೫ ದಿನಗಳೇ ಕಳೆದಿರಬೇಕು. ಒಂದು ರಾತ್ರಿ, ಮಧ್ಯದಲ್ಲಿ ಎಚ್ಚರವಾದಾಗ ನನ್ನ ಪತಿಗೆ ನಾನು ಹಾಸಿಗೆಯ ಮೇಲಿರದೇ, ಕಿಡಕಿಯ ಹತ್ತಿರ ಕುಳಿತಿರುವದನ್ನು ನೋಡಿದರು. ಆಗ ಅವರೂ, ನನಗೆ ತಿಳಿಯದಂತೆ, ತಾವೂ ನನ್ನ ಹಿಂದೆ ನಿಂತು, ಆ ಸಂಭಾಷಣೆಯನ್ನು ಕೇಳಹತ್ತಿದರು. ಸಂಭಾಷಣೆಯ ಆ ಕಾರ್ಯಕ್ರಮ ಹೆಚ್ಚು ಕಡಿಮೆ ಎರಡು ತಾಸು ನಡೆದಿತ್ತು ಮತ್ತು ಎಲ್ಲರೂ ಸ್ವಾಮಿಗಳ ಮುಖದಿಂದ ಸೃವಿಸುತ್ತಿರುವ ಅಮೃತವನ್ನು ಮನಸೋಕ್ತ ಕುಡಿಯುತ್ತಿದ್ದರು. ನನ್ನ ಪತಿಯೂ ನನಗೆ ಅರಿವಾಗದಂತೆ, ದಿನವೂ ಕೇಳಲಿಕ್ಕೆ ಬಂದಿರುತ್ತಿದ್ದರು. ಒಮ್ಮೆ ನನಗೆ ಮಧ್ಯದಲ್ಲಿ ಏಳಬೇಕಾದ ಪ್ರಸಂಗ ಬಂತು ಮತ್ತು ಏಳುತ್ತಲೇ, ನನ್ನ ಹಿಂದೆ ಯಾರೋ ಇದ್ದಾರೆ, ಎಂದೆನಿಸಲು, ಹೆದರಿಕೆಯಿಂದ ಕೂಗಿದೆ. ಆಗ ಗಂಗಾಮಹಲಿನ ಗೋಪುರದ ತಾರಸಿಯಲ್ಲಿ ಕುಳಿತ ಒಬ್ಬನು ಮೇಲೆ ನಮ್ಮೆಡೆ ನೋಡಿದನು. ಸ್ವಾಮಿಗಳು, ‘ಯಾರವರು?’ ಎಂದು ಕೇಳಲು, ಅವನು, ‘ವ್ಯವಸ್ಥಾಪಕರ ಹೆಂಡತಿ’, ಎಂದು ಹೇಳಿದನು. ನಾನಾದರೋ, ಹೆದರಿಕೆಯಿಂದಲೇ ಹಿಂತಿರುಗಿ ನೋಡಿದಾಗ, ಅಲ್ಲಿ ‘ಇವರೇ’ ನಿಂತಿರುವದನ್ನು ನೋಡಿ, ನಗು ಬಂತು. ನಾನು ನನ್ನ ಪತಿಯನ್ನುದ್ದೇಶಿಸಿ, ‘ಸುಮ್ಮನೇ ಇದ್ದು ಮಾತನಾಡದೇ ಕೇಳಿ; ಅಲ್ಲದಿದ್ದರೆ ಈ ಜನರು ಇಲ್ಲಿ ಕುಳಿತು ಸತ್ಸಂಗ ಮಾಡುವ ತಮ್ಮ ದಿನಚರಿ ನಿಲ್ಲಿಸಿಬಿಡುತ್ತಾರೆ’, ಎಂದು ಹೇಳಿದೆನು.

ತದನಂತರ, ನಾವಿಬ್ಬರೂ ತಪ್ಪದೇ ಆ ಸತ್ಸಂಗ ಕೇಳಲು ಅಲ್ಲಿ ಕುಳಿತುಕೊಳ್ಳಹತ್ತಿದೆವು. ನಾಲ್ಕೆಂಟು ದಿನಗಳಾದ ಮೇಲೆ, ಸ್ವಾಮಿಗಳ ಮಧುರ ಮಾತುಗಳ, ಅವರ ಸೌಮ್ಯ, ಶಾಂತ ಮುಖ ಮುದ್ರೆಯ ಪ್ರಭಾವವಾಗಿ ನಮ್ಮ ಭಾಗ್ಯೋದಯದ ಕಾಲ ಬಂತು ಮತ್ತು ನನ್ನ ಪತಿರಾಜನ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮವಾಗಿ, ಹೇಗಾದರೂ ಮಾಡಿ, ಶ್ರೀ ಸ್ವಾಮಿಗಳ ಪಾದ ಹಿಡಿಯಬೇಕೆಂದು, ಅವರು ಮನಸ್ಸು ಮಾಡಿದರು. ನಾನು ಹೇಳಿದರೂ ಇಷ್ಟು ಪರಿಣಾಮ ಆಗುವದಿಲ್ಲಾಗಿತ್ತು. ನನ್ನ ಪತಿ ಎಲ್ಲೂ ದೇವದರ್ಶನ, ಕಥಾಪುರಾಣ ಶ್ರವಣ ಅಥವಾ ಸಾಧು-ಸಂತರ ದರ್ಶನಕ್ಕೆ ಹೋಗುತ್ತಿರಲಿಲ್ಲ. ನಮ್ಮ ಊರು ಇಂದೋರ. ಅಲ್ಲಿಯೂ ಸಾಧು-ಸಂತರು ಬರುತ್ತಿದ್ದರು. ಆದರೆ, ‘ನನಗೆ ಯಾರು ದರ್ಶನ ಕೊಡುತ್ತಾರೋ ಅವರದ್ದೇ ಪಾದ ನಾನು ಹಿಡಿಯುತ್ತೇನೆ’, ಇದು ನನ್ನ ಪತಿಯ ಮನಸ್ಸಿನ ಸ್ಥಿತಿಯಾಗಿತ್ತು. ಒಮ್ಮೆ ಇಂದೋರಿನಲ್ಲಿ ಇವರ ಕೈಕೆಳಗೆ ಕೆಲಸ ಮಾಡುತ್ತಿದ್ದ ಕಾರಕೂನನ ಹತ್ತಿರ ಕೇಡಗಾಂವಿನ ನಾರಾಯಣ ಮಹಾರಾಜ ಬಂದಿಳಿದಿದ್ದಾಗ, ಏನೋ ಕಾರಣದಿಂದ, ನನ್ನ ಪತಿಗೆ ಅಲ್ಲಿಗೆ ಹೋಗುವ ಪ್ರಸಂಗ ಬಂತು. ಇವರು ಅವರ ಮನೆಯ ಮಾಳಿಗೆಯ ಮೆಟ್ಟಲು ಏರುತ್ತಿದ್ದಾಗ, ಅದೇ ಮೆಟ್ಟಲುಗಳಿಂದ ನಾರಾಯಣ ಮಹಾರಾಜರು ಇಳಿಯುತ್ತಿದ್ದರು. ಹಾಗಾಗಿ, ಮೆಟ್ಟಲಿನ ಸಾಲುಗಳ ಮಧ್ಯೆ ಇಬ್ಬರ ಭೆಟ್ಟಿಯಾಯಿತು. ನಾರಾಯಣ ಮಹಾರಾಜರು, ‘ಇದು, ತೆಗೆದುಕೋ ಪ್ರಸಾದ; ನಿನಗೆ ಯಾರಿಂದ ಸಮಾಧಾನವಾಗುತ್ತದೆಯೋ ಅವರೇ ನಿನ್ನ ಗುರು’ ಎಂದು ಹೇಳಿದರು ಮತ್ತು ತ್ವರಿತ ಕೆಳಗಿಳಿದು ಹೋದರು. ಮನೆಗೆ ಬಂದಮೇಲೆ ಖಡಿಸಕ್ಕರೆಯ ಪ್ರಸಾದವನ್ನು ಕೊಟ್ಟು, ನಡೆದ ಪ್ರಸಂಗ ಹೇಳಿದರು. ಇರಲಿ!

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಕಾರ್ತೀಕ, ೧೯೦೧, ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img