Memories

30. ನನಗೆ ಗುರುಮಾಯಿ ಹೇಗೆ ಸಿಕ್ಕರು? (ಎರಡನೆಯ ಭಾಗ)

(ನಿರೂಪಣೆ : ಶ್ರೀಧರಭಕ್ತೆ ಶ್ರೀಮತಿ ಮನೋರಮಾಬಾಯಿ ಗಾಡಗೀಳ, ಜಬಲಪುರ)

ಕಾಶಿಯಲ್ಲಿ ಸ್ವಾಮಿಗಳ ದರ್ಶನ ಪ್ರತಿದಿನವೂ ರಾತ್ರಿ ದೂರದಿಂದ ಆಗುತ್ತಿದ್ದರೂ, ಆ ಸದ್ಭಾಗ್ಯ ಪ್ರತ್ಯಕ್ಷ ಲಭಿಸಲೆಂದು ನಾವು ಪ್ರಯತ್ನಶೀಲರಾಗಿದ್ದು, ೩-೪ ತಿಂಗಳು ಹೆಚ್ಚಾಗಿ ಕಣ್ಣು ಮುಚ್ಚಾಲೆ ಆಟವೇ ಆಗಿಹೋಯಿತು. ಸ್ವಾಮಿಗಳು ಮುಚ್ಚಮುಂಜಾನೆ ಮೂರು ಗಂಟೆಗೆ ಮಣಿಕರ್ಣಿಕಾ ಸ್ನಾನ ಘಟ್ಟಕ್ಕೆ ಹೋಗುತ್ತಿದ್ದರು ಮತ್ತು ನಮ್ಮ ಕಟ್ಟಡದ ಗೋಪುರದ ತಾರಸಿಯಿಂದ ಮಣಿಕರ್ಣಿಕಾ ಘಟ್ಟದಲ್ಲಿ ಕುಳಿತವರು ಕಾಣುತ್ತಿದ್ದರು. ಆದರೆ, ನಾವು ಅಲ್ಲಿ ಹೋಗಿ ಮುಟ್ಟುವವರೆಗೆ ಸ್ವಾಮಿಗಳು ಅಲ್ಲಿಂದ ಮುಂದೆ ಹೋಗಿಬಿಡುತ್ತಿದ್ದರು. ನಾವು ಅವರ ಹಿಂದೇನೇ ಹೋಗುತ್ತಿರುವಾಗ, ಅವರು ವಿಶ್ವೇಶ್ವರ ಮಂದಿರದೊಳಗೆ ಹೊಕ್ಕುತ್ತಿದ್ದಂತೆ ಕಾಣುತ್ತಿತ್ತು. ಆದರೆ, ನಾವು ಮಂದಿರ ಒಳ ಹೊಕ್ಕಾಗ, ಅವರು ಅಲ್ಲಿ ಇರುತ್ತಿರಲಿಲ್ಲ. ಅದರಂತೆಯೇ, ನಾವು ಸಾಕ್ಷೀ ವಿನಾಯಕ, ಆತ್ಮವಿಶ್ವೇಶ್ವರರ ಮಂದಿರಗಳಲ್ಲೂ ಹೋಗುತ್ತಿದ್ದೆವು. ಆದರೆ ಸ್ವಾಮಿಗಳ ಚರಣಕಮಲ ಪ್ರಾಪ್ತವಾಗಲಿಲ್ಲ. ಸ್ವಾಮಿಗಳ ಸಂಗಡ ಒಮ್ಮೆ ಹರಿಹರಭಯ್ಯಾ ಆದರೆ, ಇನ್ನೊಮ್ಮೆ ಸೌ. ಮಾತಾಜಿ (ಸೌ. ಸಾವಿತ್ರಿ ಅಕ್ಕಾ) ಹೀಗೆ ಯಾರಾದರೂ ಇರುತ್ತಿದ್ದರು. ಇದೇ ರೀತಿ ಪ್ರತಿದಿನ ನಡೆಯುತ್ತಿತ್ತು. ಸುಮಾರು ಮೂರು ತಿಂಗಳ ಮೇಲೆ ನಮ್ಮ ಭಾಗ್ಯದ ದಿನ ಉದಯಿಸಿತು. ಶ್ರೀವಿಶ್ವೇಶ್ವರನ ದರ್ಶನ ಶ್ರೀ ಗುರುದೇವರು ತೆಗೆದುಕೊಳ್ಳುತ್ತಿದ್ದಾಗ, ‘ಇವರು’ ತಕ್ಷಣ ಒಳಸೇರಿದರು ಮತ್ತು ದೇವದರ್ಶನಕ್ಕೆ ಹೋಗದೇ, ಮೊದಲು ಶ್ರೀಗುರುದೇವರ ಚರಣಕಮಲದಲ್ಲಿ ಮಸ್ತಕವನ್ನಿಟ್ಟರು. ಆಗ ಶ್ರೀಗುರುದೇವರು ನನ್ನ ಯಜಮಾನರ ಕಡೆ ಆಶ್ಚರ್ಯದಿಂದ ನೋಡಿದರು. ಮಂದಿರದೊಳಗೆ ಹೋದ ಮೇಲೆ, ಗುರುದೇವರು, ಮಾತಾಜಿಯವರಿಗೆ ‘ಈ ಇಬ್ಬರೂ ಯಾರು? ಕಳೆದ ಎರಡು ಮೂರು ತಿಂಗಳಿಂದ ನನ್ನ ಬೆನ್ನ ಹಿಂದೆ ಬಿದ್ದಿದ್ದರು ಮತ್ತು ಇಂದು ವಿಜಯ ಪ್ರಾಪ್ತಿ ಮಾಡಿಕೊಂಡರು!’ ಎಂದು ಕೇಳದರು. ಅದಕ್ಕೆ ಮಾತಾಜಿಯವರು, ನಮ್ಮ ಮಾಹಿತಿ ಹೇಳಿದರು.

ಚಾತುರ್ಮಾಸ ಮುಗಿದ ಮೇಲೆ, ಎಲ್ಲ ದೇವಸ್ಥಾನಗಳ ದರ್ಶನಕ್ಕೆ ಶ್ರೀಸ್ವಾಮಿಗಳು ಹೊರಟರು. ಮೊದಲು, ಭೋಸಲೆ ಮಂದಿರದಲ್ಲಿನ ಶ್ರೀಲಕ್ಷ್ಮೀನಾರಾಯಣನ ದರ್ಶನಕ್ಕೆ ಅಲ್ಲಿಯ ಪೂಜಾರಿ ಸ್ವಾಮಿಗಳು ಕರೆದುಕೊಂಡು ಬಂದರು. ಈ ಪೂಜಾರಿಗಳು ಸ್ವಾಮಿಗಳ ಶಿಷ್ಯ ಮತ್ತು ಭಕ್ತರಿದ್ದು, ಕರ್ನಾಟಕದ ಕಡೆಯವರಾಗಿದ್ದರು.

ಆ ದಿನ ಅದೆಷ್ಟು ಭಾಗ್ಯದ್ದಾಗಿತ್ತೆಂದು ಹೇಗೆ ಹೇಳಲಿ? ಬೆಳಿಗ್ಗೆ ಆರು ಏಳರ ಸಮಯವಾಗಿರಬಹುದು. ನಾವು ಆಗ ಮಾತ್ರ ಸ್ನಾನ ಮತ್ತು ದೇವದರ್ಶನ ಮಾಡಿ, ಮನೆಗೆ ಬಂದಿದ್ದೆವು ಮತ್ತು ಚಹ ಕುಡಿಯುವ ತಯಾರಿಯಲ್ಲಿದ್ದೆವು. ಅಷ್ಟರಲ್ಲಿ ಪೂಜಾರಿಗಳು ಶ್ರೀಗುರುದೇವ ಶ್ರೀಲಕ್ಷ್ಮೀನಾರಾಯಣನ ದರ್ಶನಕ್ಕೆ ಬಂದಿದ್ದಾರೆ, ಎಂದು ಹೇಳಿದ ಕೂಡಲೇ ಮತ್ತೆಲ್ಲಿಯ ಚಹ ಮತ್ತೆ ಮತ್ತೊಂದು? ತ್ವರಿತವಾಗಿ ನಾವಿಬ್ಬರೂ ಮಂದಿರದೊಳಗೆ ಹೋಗಿ ಸ್ವಾಮಿಗಳ ಚರಣಕಮಲದ ಮೇಲೆ ಮಸ್ತಕವನ್ನಿಟ್ಟು ನಮಸ್ಕಾರ ಮಾಡಿದೆವು. ಆಗ ಸ್ವಾಮಿಗಳು, ‘ಹೃದಯದಲ್ಲಿ ಹೊತ್ತಿದ್ದ ಇಚ್ಛೆ ಪೂರ್ಣವಾಯಿತೇ?’ ಎಂದು ಕೇಳಿದರು. ಆಗ ನಾವು ‘ಹೌದು’ ಎಂದು ಉತ್ತರಿಸಿ, ಮುಂದುವರಿಸುತ್ತ, ‘ಆದರೂ, ಸ್ವಲ್ಪ ಇಚ್ಛೆ ಉಳಿದಿದೆ; ಅದನ್ನು ಗುರುದೇವರು ಪೂರ್ಣಗೊಳಿಸಬೇಕು’ ಎಂದೂ ಕೇಳಿಕೊಂಡೆವು. ನಂತರ ಪ್ರತಿದಿನವೂ, ಸ್ವಾಮಿಗಳು ದೇವಸ್ಥಾನ ನೋಡಲಿಕ್ಕೆ ಹೋಗುವಾಗ, ‘ಭೋಸಲೆ ಮಂದಿರದಲ್ಲಿನ ವ್ಯವಸ್ಥಾಪಕರನ್ನು ಕರೆಯಿರಿ’, ಎಂದು ಸಂದೇಶ ಕಳುಹಿಸುತ್ತಿದ್ದರು ಮತ್ತು ಆ ಆದೇಶ ಸಿಕ್ಕ ಕೂಡಲೇ ನಮ್ಮ ಯಜಮಾನರು ಹೋಗುತ್ತಿದ್ದರು.

ಹೀಗೆಯೇ, ಒಮ್ಮೆ ವರುಣಾ ನದಿಯಲ್ಲಿ ಹೋಗುವದಿತ್ತು. ಸ್ವಾಮಿಗಳು ಹೊರಟಾಗ ಬೆಳಿಗ್ಗೆ ಆರು ಗಂಟೆ. ಆಗ ತುಂಬಾ ಚಳಿಯ ದಿನಗಳಾಗಿತ್ತು. ನನ್ನ ಯಜಮಾನರು ಪೂಜೆಗೆ ಕುಳಿತಿದ್ದಾಗ ಮತ್ತು ನಾನು ಇನ್ನೂ ಚಹ ಸೋಸುತ್ತಿದ್ದಾಗ, ‘ಸ್ವಾಮಿಗಳು ಕರೆಯುತ್ತಿದ್ದಾರೆ’, ಎಂಬ ಸಂದೇಶ ಬಂತು. ಆ ಆದೇಶ ಬಂದಂತಯೇ, ನನ್ನ ಯಜಮಾನರು ಹಾಗೆಯೇ ಎದ್ದು, ಚಳಿ ತೀಕ್ಷ್ಣವಾಗಿದ್ದಾಗಲೂ, ಚಹವನ್ನೂ ಕುಡಿಯದೇ, ಮೈಮೇಲೊಂದು ಅಂಗವಸ್ತ್ರ ಎಳೆದುಕೊಂಡು ಹಾಗೆಯೇ ಹೊರಟರು. ದೋಣಿಯಲ್ಲಿ ಸ್ವಾಮಿಗಳ ಮುಂದೆಯೇ ಇವರು ಕುಳಿತಿದ್ದರು. ಸ್ವಾಮಿಗಳ ಲಕ್ಷ ನನ್ನ ಯಜಮಾನರ ಕಡೆ ಹರಿದಕೂಡಲೇ, ‘ಅರೇ! ಹರಿಹರಾ! ನನಗೆಷ್ಟು ಚಳಿಯೆನಿಸುತ್ತಿದೆ, ಆ ಶಾಲನ್ನಾದರೂ ಮೈಮೇಲೆ ಹಾಕು’, ಎಂದು ಹೇಳಿ, ತಮ್ಮ ಮೈಮೇಲೆ ಹಾಕಿದ್ದ ಶಾಲನ್ನು ನನ್ನ ಯಜಮಾನರ ಮೈಮೇಲೆ ಹಾಕಿದರು. ಎಲ್ಲರೂ ನೋಡುತ್ತಲೇ ಇದ್ದರು ಮತ್ತು ನನ್ನ ಯಜಮಾನರಿಗೂ ಅತಿಶಯ ಸಂಕೋಚವೆನಿಸಿತಲ್ಲದೇ, ತನ್ನ ಸಲುವಾಗಿ ಸ್ವಾಮಿಗಳು ಚಳಿಯಲ್ಲಿ ಕುಳಿತರೆಂಬುದರಿಂದ ಬೇಸರವೂ ಆಯಿತು. ನನ್ನ ಯಜಮಾನರ ಮನಸ್ಥಿತಿಯ ಅರಿವು ಸ್ವಾಮಿಗಳಿಗೆ ಸಂಪೂರ್ಣ ಅರ್ಥವಾಗಿರಲು ಮತ್ತು ತುಸು ಹಾಸ್ಯವಾಗಿ ಸ್ವಾಮಿಗಳು, ‘ಏನೂ ಸಂಕೋಚ ಮಾಡದೇ ಈ ವಸ್ತ್ರ ಹೊದೆಯಿಕೋ. ಇದು ನೋಡು, ನಾನು ಕಂಬಳಿ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದರು. ಇರಲಿ!

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಕಾರ್ತೀಕ, ೧೯೦೧, ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img