Memories

32. ನನಗೆ ಗುರುಮಾಯಿ ಹೇಗೆ ಸಿಕ್ಕರು? (ನಾಲ್ಕನೆಯ ಭಾಗ)

(ನಿರೂಪಣೆ : ಶ್ರೀಧರಭಕ್ತೆ ಶ್ರೀಮತಿ ಮನೋರಮಾಬಾಯಿ ಗಾಡಗೀಳ, ಜಬಲಪುರ)

ಈಗಿತ್ತಲಾಗಿ, ನನ್ನ ಯಜಮಾನರ ದೃಷ್ಟಿ ದುರ್ಬಲವಾಗಹತ್ತಿತ್ತು. ದತ್ತಜಯಂತಿ ಹತ್ತಿರ ಬರುತ್ತಿತ್ತು. ಆದರೆ ಗುರುಚರಿತ್ರೆ ಪಾರಾಯಣ ಓದಲು ಅವರಿಂದ ಶಕ್ಯವಾಗುವಂತಿರಲಿಲ್ಲ. ನನ್ನ ಬಂಧುವು ಪ್ರತಿವರ್ಷ ಶ್ರೀದತ್ತ ಶ್ರೀಧರ ಜಯಂತಿಗೆ ಶ್ರೀಗುರುಚರಿತ್ರ ಪಾರಾಯಣ ಮಾಡುತ್ತಿದ್ದನು ಮತ್ತು ಆತನು ನಮಗೆ ಬರಲು ಬಹಳ ದಿನಗಳಿಂದ ಕರೆಯುತ್ತಿದ್ದನು. ಹೀಗಾಗಿ, ಶಕೆ ೧೮೮೦ರ ಮಧ್ಯೆ, ನಾವು ದತ್ತೋತ್ಸವಕ್ಕೆ ನನ್ನ ಬಂಧುವಿನ ಹತ್ತಿರ ಎರಡು ಮೂರು ತಿಂಗಳು ವಾಸ್ತವ್ಯ ಮಾಡುವ ವಿಚಾರದಿಂದ ಝಾಂಸಿಗೆ ಬಂದೆವು.

ಆಗ, ಕಾಶಿಯಿಂದ ನಮಗೆ, ಪತ್ರದ ಮೂಲಕ, ಶ್ರೀ ಶ್ರೀಧರ ಸ್ವಾಮಿಗಳು, ಶ್ರೀರಾಮದಾಸ ಸ್ವಾಮಿಗಳ ಪಾದುಕೆ ತೆಗೆದುಕೊಂಡು ಗ್ವಾಲ್ಹೇರಲ್ಲಿ ಬಂದಿದ್ದಾರೆಂದು ತಿಳಿಯಿತು. ಸ್ವಾಮಿದರ್ಶನದ ಇಚ್ಛೆ ತೀವ್ರವಾಯಿತು ಮತ್ತು ಅನುಗ್ರಹವನ್ನೂ ಪಡೆಯುವದಿತ್ತು. ಆದ್ದರಿಂದ, ಸ್ವಾಮಿಗಳನ್ನು ಝಾಂಸಿಗೆ ಬರಲು ಪ್ರಾರ್ಥನೆ ಮಾಡಲು ನಾನು ಮತ್ತು ನನ್ನ ಬಂಧು, ಇಬ್ಬರೂ ಗ್ವಾಲ್ಹೇರಕ್ಕೆ ಹೋದೆವು. ನನ್ನ ಯಜಮಾನರಂತೆ ಆತನದೂ, ‘ಯಾವ ಮಹಾತ್ಮರು ನನ್ನ ಮನೆಗೆ ಬರುತ್ತಾರೋ ಅವರನ್ನೇ ಗುರುವೆಂದು ಸ್ವೀಕರಿಸುತ್ತೇನೆ’, ಎಂಬ ವಿಚಾರವಿತ್ತು. ನಾನು ಅವನಿಗೆ, ‘ನಾವು ಸ್ವಾಮಿಗಳಿಗೆ ಪ್ರಾರ್ಥಿಸಿಕೊಂಡರೆ ಅವರು ಝಾಂಸಿಗೆ ಅವಶ್ಯ ಬರುತ್ತಾರೆ’, ಎಂದು ಹೇಳಿದ್ದೆ ಮತ್ತು ಅದರಂತೆಯೇ ಆಯಿತು. ನಾವು ಗ್ವಾಲ್ಹೇರಿಗೆ ಹೋಗಿ ಸ್ವಾಮಿಗಳ ದರ್ಶನ ಮಾಡಿದೆವು ಮತ್ತು ಝಾಂಸಿಗೆ ಬರುವ ಬಗ್ಗೆ ಅವರ ಹತ್ತಿರ ಪ್ರಾರ್ಥನೆ ಮಾಡಿಕೊಂಡೆವು. ಅವರು ನಮ್ಮ ಪ್ರಾರ್ಥನೆಗೆ ಒಪ್ಪಿಕೊಂಡರು. ಇದರಿಂದ ಅಲ್ಲಿಯ ಸ್ವಾಮಿಗಳ ಎಲ್ಲ ಶಿಷ್ಯಜನರು ಸಿಟ್ಟುಗೊಂಡು, ಸ್ವಾಮಿಗಳ ಹತ್ತಿರ, ‘ಮೊದಲೇ ಸಮಯವಿಲ್ಲ, ಮತ್ತೆ ತಾವು ಮಾತ್ರ ಎಲ್ಲರಿಗೂ ಒಪ್ಪಿಕೊಳ್ಳುತ್ತಿದ್ದೀರಿ, ಹೀಗಾದರೆ ಹೇಗೆ?’ ಎಂದು ಹೇಳಿದರು. ಅದಕ್ಕೆ ಸ್ವಾಮಿಗಳು, ‘ಈ ಇಬ್ಬರೂ ಅಣ್ಣ ತಂಗಿಯರು, ಭಾವಪೂರ್ಣರಾಗಿ ವಿವಶರಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ; ಹಾಗಾಗಿ ನಮಗೆ ಹೋಗಲೇಬೇಕಾಗುತ್ತದೆ’, ಎಂದು ಹೇಳಿ, ಸಮಾಧಾನ ಮಾಡಿದರು. ನಮಗೆ ಒಪ್ಪಿಗೆ ಸೂಚಿಸಿ, ನಮ್ಮ ಸಂಗಡ ಶ್ರೀ ಕರಮರಕರ, ಶ್ರೀ ಗೋಡಸೆ ಹಾಗೂ ಶ್ರೀ ಅಗಾಶೆಯವರನ್ನು ಕರೆದುಕೊಂಡು ಹೋಗಲು ಹೇಳಿದರು. ಮತ್ತು, ‘ನಾವು ನಾಳೆ ಬರುತ್ತೇವೆ. ಸಮರ್ಥ ಪಾದುಕೆಯ ಮೆರವಣಿಗೆ ಮಾಡಿ, ಅದನ್ನು ಮುಂದಿಟ್ಟುಕೊಂಡು ಹೋಗಿ’, ಎಂದೂ ತಮ್ಮ ಶಿಷ್ಯರಿಗೆ ಹೇಳಿದರು.

ಸ್ವಾಮಿಗಳು ಹೇಳಿದಂತೆ ನಾವು ಆ ಮೂವರು ಶಿಷ್ಯರನ್ನು ಕರೆದುಕೊಂಡು ಮುಂದೆ ಬಂದೆವು. ನನ್ನ ಬಂಧು ಚಿ. ವಸಂತರಾವ (ದತ್ತಾತ್ರೇಯ ದಿನಕರ ದೇವ)ರಿಗೂ ಸಂತರನ್ನು ಮನೆಗೆ ಕರೆಸುವ ಪ್ರಸಂಗ ಇನ್ನೂವರೆಗೆ ಬಂದೇ ಇಲ್ಲಾಗಿತ್ತು. ಸಣ್ಣವನಿರುವಾಗಲೇ ತಂದೆ ತಾಯಿಗಳನ್ನು ಕಳೆದುಕೊಂಡಿದ್ದರಿಂದ ಅವರಿಗೆ ಅಂತಹ ಪ್ರಸಂಗವೇ ಕೂಡಿ ಬಂದಿರಲಿಲ್ಲ. ಅವನಿಗೂ ಸಂತಸಮಾಗಮ ಕೂಡಿಬಂದು, ಸಂತಸೇವೆಯ ಯೋಗ ಘಟಿಸುವ ಬಗ್ಗೆ ತುಂಬಾ ಆನಂದವಾಗಿತ್ತು. ಇರಲಿ.

ಶ್ರೀಗುರುದೇವರು ಮರುದಿನ ಅಂದರೆ ದಿನಾಂಕ ೩೧ ಮಾರ್ಚ ೧೯೫೯ರಂದು, ತಮ್ಮೆಲ್ಲ ಶಿಷ್ಯರೊಂದಿಗೆ ಶ್ರೀಸಮರ್ಥಾದುಕೆಯೊಂದಿಗೆ ಝಾಂಸಿಗೆ ಉಳಿದುಕೊಳ್ಳಲು ಬಂದರು ಮತ್ತು ಅವರಿಗೆ ಉಳಿದುಕೊಳ್ಳಲಿಕ್ಕೆ ಶ್ರೀ ಗಣೇಶ ಮಂದಿರದಲ್ಲಿ – ಯಾವ ಗಣೇಶ ಮಂದಿರದಲ್ಲಿ ಝಾಂಸಿ ರಾಣಿಯ ವಿವಾಹ ಸಮಾರಂಭ ನಡೆದಿತ್ತೋ ಅದರಲ್ಲಿ – ವ್ಯವಸ್ಥೆ ಮಾಡಲಾಗಿತ್ತು. ಅದೇ ಮಂದಿರದಲ್ಲಿ ಆದಿನ ಸಾಯಂಕಾಲ ಸ್ವಾಮಿಗಳ ಪ್ರವಚನವಾಯಿತು. ಮರುದಿನ ದಿನಾಂಕ ೧.೪.೧೯೫೯ರಂದು ಸಮರ್ಥ ಪಾದುಕೆಯ ಸಾರ್ವಜನಿಕ ಪೂಜೆಯಾಯಿತು ಮತ್ತು ೧೧ ಗಂಟೆಗೆ ಸಮರ್ಥಪಾದುಕೆಯೊಂದಿಗೆ, ಶ್ರೀ ಸ್ವಾಮಿಗಳು ನನ್ನ ಬಂಧುವಿನ ಮನೆಗೆ ಭಿಕ್ಷೆಗೆ ಬಂದರು. ಅಲ್ಲಿ ಶ್ರೀ ಸ್ವಾಮಿಗಳ ಮಾಧ್ಯಾಹ್ನಸ್ನಾನ, ಆಹ್ನಿಕಗಳಾದವು. ಬಂಧುವು ಶ್ರೀಸಮರ್ಥಪಾದುಕೆಯ ಪೂಜೆಯನ್ನು ಸಪತ್ನೀಕಾಗಿ ಮಾಡಿದನು ಮತ್ತು ತದನಂತರ ಸ್ವಾಮಿಗಳಿಗೆ ಕರಭಿಕ್ಷೆ ಇತ್ತನು. ಅದೇ ದಿನ ನನ್ನ ಪತಿರಾಜನಿಗೆ ಸ್ವಾಮಿಗಳ ಅನುಗ್ರಹ ಸಿಕ್ಕಿತು. ನನ್ನ ಬಂಧುವು ಸ್ವಾಮಿಗಳ ಪಾದಪೂಜೆ ಮಾಡಿದನು. ಅನೇಕ ಭಾವುಕ ಜನರು ದರ್ಶನ ಮತ್ತು ತಮ್ಮ ಇಚ್ಛೆ ಪೂರೈಸಿಕೊಳ್ಳಲು ಬರುತ್ತಿದ್ದರು. ಬಹಳ ಜನದಟ್ಟಣೆಯಾಗಿತ್ತು ಮತ್ತು ಗುರುದೇವರು, ಮಂದಹಾಸ ಮುಖದಿಂದ ಎಲ್ಲರ ಸಮಾಧಾನ ಮಾಡುತ್ತಿದ್ದರು. ಜನದಟ್ಟಣೆ ಕಡಿಮೆಯಾಗುತ್ತಿರಲಿಲ್ಲ ಮತ್ತು ಸ್ವಾಮಿಗಳ ಹೊರಡುವ ವೇಳೆ ಹತ್ತಿರ ಬರುತ್ತಿತ್ತು. ಸ್ವಾಮಿಗಳಿಗೆ ಸಂಜೆಯ ನಾಲ್ಕು ಗಂಟೆಯ ಗಾಡಿಗೆ ಹೋಗುವದಿತ್ತು. ಮನೆಯಲ್ಲಿ ಎಲ್ಲ ಕಾರ್ಯಕ್ರಮ ನಡೆಯುತ್ತಿರುವಾಗ, ಗಡಬಿಡಿಯಲ್ಲಿ ನನ್ನ ಬಂಧುವಿಗೆ ಅನುಗ್ರಹ ತೆಗೆದುಕೊಳ್ಳುವದನ್ನೇ ನಾವು ಮರೆತೇ ಬಿಟ್ಟಿದ್ದೆವು. ಆದರೆ ಗುರುದೇವರು ನನಗೆ ಮಾತ್ರ, ‘ಮಗಾ! ಪತಿ-ಪತ್ನಿಗಳಿಗೆ ಒಂದೇ ಸಮಯದಲ್ಲಿ ಅನುಗ್ರಹವಿರುತ್ತದೆ’ ಎಂದು ಹೇಳಿದರು.

ಆ ಸಮಯದ ಒಂದೆರಡು ಚಮತ್ಕಾರಗಳನ್ನು ಹೇಳಿ, ನಾನು ನನ್ನ ಈ ಶ್ರೀಗುರುಸ್ಮೃತಿಗಾಥೆಯನ್ನು ಮುಗಿಸುವವನಿದ್ದೇನೆ.
೧. ನನ್ನ ಬಂಧು, ಯಾವ ಯಾವಾಗ ಪ್ರತಿ ತಿಂಗಳ ಸಾಮಾನು ತರುತ್ತಾರೋ, ಆ ಆ ವೇಳೆ ಹಿಂದಿನ ತಿಂಗಳ ಬಿಲ ಪೂರ್ಣ ಚುಕ್ತಾ ಮಾಡಿದ ಮೇಲೆಯೇ ಮುಂದಿನ ಸಾಮಾನು ಸಿಗುತ್ತಿತ್ತು. ಈ ವೇಳೆ ವೇತನ ಸಿಗುವ ಸಮಯವಲ್ಲವಾದ್ದರಿಂದ, ‘ಸಾಮಾನು ಹೇಗೆ ತರುವದು? ಹಿಂದಿನ ಹಣ ಕೊಡದೇ ಸಾಮಾನು ಹೇಗೆ ಸಿಗುತ್ತದೆ?’ ಎಂಬ ಪ್ರಶ್ನೆ ಆತನ ಮುಂದಿತ್ತು. ಆದರೆ, ‘ಅಂಗಡಿಗೆ ಹೋಗಿ ನೋಡಾದರೂ ನೋಡೋಣ’, ಎಂದು ನನಗೆ ಹೇಳಬೇಕಾಯಿತು. ನಾನು ಮತ್ತು ಅತ್ತಿಗೆ ಅಂಗಡಿಗೆ ಹೋದಾಗ, ಆ ದುಕಾನದಾರನು ಹೋದಕೂಡಲೇ ನಮಗೆ, ‘ಬನ್ನಿ, ಬನ್ನಿ! ಅಕ್ಕಾವರೇ! ಯಾವ ಯಾವ ಸಾಮಾನು ಕೊಡಲಿ?’ ಎಂದು ಕೇಳಿದನು. ಆಗ ನನ್ನ ಅತ್ತಿಗೆ, ‘ ಶೇಠಜೀ! ಇನ್ನೂ ವೇತನವಾಗಿಲ್ಲ. ಆದರೆ ಸಾಮಾನಂತೂ ಬೇಕಾಗಿದೆ’ ಎಂದು ಹೇಳಲು, ಆ ದುಕಾನದಾರನು, ‘ನೀವೇಕೆ ಚಿಂತೆ ಮಾಡುತ್ತೀರಿ? ಅಂಗಡಿ ನಿಮ್ಮದೇ ಎಂದು ತಿಳಿಯಿರಿ. ಏನು ಬೇಕೋ ಹೇಳುತ್ತಾ ಹೋಗಿರಿ’ ಎಂದನು. ನಂತರ ಇನ್ನೇನು? ಬೇಕಾದ ಎಲ್ಲ ಸಾಮಾನೂ ತೆಗೆದುಕೊಂಡು ಬಂದೆವು.

೨. ಅದರಂತೆ, ಸಾಮೂಹಿಕ ಪಾದಪೂಜೆಯ ವರ್ಗಣಿ ಕೂಡಿಸಲು, ಶ್ರೀ ಅಣ್ಣಾ ದಾತಾರರನ್ನು ಕಳುಹಿಸಿದ್ದೆವು. ಆದರೆ ಅದೇ ಆಗ, ಢೋಲೇಬುವಾನ ಕೀರ್ತನೆ, ಚೌಡ ಮಹಾರಾಜರ ಕೀರ್ತನೆ ಮತ್ತು ಶ್ರೀಸಮರ್ಥಪಾದುಕಾ ಪೂಜೆ ಆಗಿದ್ದರಿಂದ ಮತ್ತು ಹಾಗೆಯೇ ತಿಂಗಳ ಕೊನೆಯಾಗಿದ್ದರಿಂದ ಇನ್ನೂ ವೇತನವೂ ಕೈಗೆ ಸಿಗದಿರುವದರಿಂದ, ಅವರು ಬರಿಗೈಯಲ್ಲೇ ಬಂದರು. ಈಗೇನು ಮಾಡುವದು? ನಾನು ಮೇಲಿಂದ ಎಲ್ಲರಿಗೂ ಧೈರ್ಯ ತುಂಬುತ್ತಿದ್ದರೂ, ಮನಸ್ಸಿನಲ್ಲಿ ಗುರುದೇವನಿಗೆ, ‘ನೀವೇ ದಾರಿ ತೋರಿಸಬೇಕು’ ಎಂದು ಬೇಡಿಕೊಳ್ಳುತ್ತಿದ್ದೆ ಮತ್ತು ಚಮತ್ಕಾರವೆಂದರೆ ಪ್ರತಿಯೊಬ್ಬರೂ ಸಮಯಕ್ಕೆ ಸರಿಯಾಗ ವರ್ಗಣಿ ತಂದು ಕೊಟ್ಟರು.

೩. ಸ್ವಾಮಿಗಳ ಭಿಕ್ಷೆಯ ದಿನ ….
ಭಿಕ್ಷೆ ತುಂಬಾ ಸಂತೋಷದಿಂದ ಸಂಪನ್ನವಾಯಿತು. ಆ ದಿನ ಅವರ ದರ್ಶನಕ್ಕೆ ಬಂದ ಪ್ರತಿಯೊಬ್ಬರಿಗೂ, ಸ್ವಾಮಿಗಳು ಮಹಾಪ್ರಸಾದ(ಭೋಜನ ಪ್ರಸಾದ) ತೆಗೆದುಕೊಂಡು ಹೋಗಲು ಹೇಳುತ್ತಿದ್ದರು ಮತ್ತು ಅದರಂತೆ, ಬಂದ ಅಸಂಖ್ಯ ಜನರು ಊಟಮಾಡಿ ಹೋದರು. ಆದರೆ, ಆಶ್ಚರ್ಯವೆಂದರೆ, ಕೇವಲ ೫೦ ಜನರಿಗಾಗಿ ಮಾಡಿದ ಅಡುಗೆಯಲ್ಲಿ, ಬಂದೆಲ್ಲ ಜನರೂ ಪ್ರಸಾದ ಭೋಜನ ಮಾಡಿದರು. ಸ್ವಾಮಿಗಳು ಇನ್ನೂ ಒಂದು ನಾಲ್ಕು ದಿನ ಝಾಂಸಿಯಲ್ಲಿ ಉಳಿಯಬೇಕೆಂದು ಒತ್ತಾಯ ಮಾಡಿದೆವು. ಆದರೆ ಸ್ವಾಮಿಯವರಿಗೆ ರತ್ಲಾಂಗೆ ಹೋಗುವದಿತ್ತು. ಸ್ವಾಮಿಗಳನ್ನು ಬೀಳ್ಕೊಡಲು ಬಹಳ ಜನರು ರೇಲ ನಿಲ್ದಾಣಕ್ಕೆ ಹೋಗಿದ್ದರು. ಅವರಲ್ಲಿ ನನ್ನ ಬಂಧುವೂ ಇದ್ದನು. ಗಾಡಿಯಲ್ಲಿ ಶ್ರೀ ಸ್ವಾಮಿಗಳು ಹತ್ತಿದ ಮೇಲೆ, ನನ್ನ ಬಂಧುವು ಸ್ವಾಮಿಗಳ ಚರಣಗಳಲ್ಲಿ ಮಸ್ತಕವಿಟ್ಟಾಗ, ಸ್ವಾಮಿಗಳು, ‘ನಿನ್ನದೇನು ಇಚ್ಛೆ ಇದೆ?’ ಎಂದು ಕೇಳಿದರು. ಆದರೆ ಭಕ್ತಿ-ಪ್ರೇಮ ಭಾವನೆಗಳಿಂದ ಗದ್ಗದಿತನಾದ ಬಂಧುವಿನ ಮುಖದಿಂದ ಶಬ್ದವೇ ಹೊರಡಲಿಲ್ಲ. ಅಂತೂ ಇಂತೂ, ತನಗಿದ್ದ ಅನುಗ್ರಹದ ಇಚ್ಛೆ ಹೇಳಿ, ಕಣ್ಣಿನ ಅಶ್ರುವಿನಿಂದಲೇ ಶ್ರೀಚರಣಗಳ ಮೇಲೆ ಅಭಿಷೇಕ ಮಾಡಿದನು. ಸ್ವಾಮಿಗಳು ಅವನ ಬೆನ್ನಿನ ಮೇಲೆ ಕೈಯಾಡಿಸಿ, ‘ನೀನು ನನ್ನನ್ನು ಗುರುವೆಂದು ನಂಬಿರುವೆಯಲ್ಲಾ! ಹಾಗಿದ್ದರೆ ಆಯಿತು. ಮುಂದೆ ಯೋಗ ಬಂದಾಗ, ಆ ಇಚ್ಛೆಯೂ ಪೂರ್ಣವಾಗುತ್ತದೆ’ ಎಂದು ಹೇಳಿದರು. ಗುರುಮಾತೆಯ ಪ್ರೇಮಪೂರ್ವಕ ಹಸ್ತಸ್ಪರ್ಷದಲ್ಲಿ ಅದೆಷ್ಟು ಅರ್ಥ ಮತ್ತು ಪ್ರೀತಿ ತುಂಬಿ ತುಳುಕುತ್ತಿರುವದೆಂದರೆ, ಅದರ ವರ್ಣನೆ ಮಾಡುವದು ಅಶಕ್ಯವೇ! ಆದರೆ ಅದರ ನಂತರ ಶ್ರೀಗುರುಮಾಯಿಯ ಚರಣದರ್ಶನ ನಮಗೆ ಮತ್ತೆ ಆಗಲೇ ಇಲ್ಲ.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಕಾರ್ತೀಕ, ೧೯೦೧, ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img