Memories

33. ಏನೆಂದು ಕೊಂಡಾಡಿ ಪೊಗಳಲೋ ದೇವ … ನಿನ್ನ ಗುಣಗಳ ಮಹಿಮೆಯನೆಂತು ಬಣ್ಣಿಪೆನು?

(ನಿರೂಪಣೆ : ಅನಾಮಧೇಯ ಶ್ರೀಧರಭಕ್ತ)

ನಿತ್ಯಾನುಸಂಧಾನ :
ಪಾರಮಾರ್ಥಿಕ ಪ್ರಗತಿಗಾಗಿ, ಭಕ್ತರಿಗೆ ಅತ್ಯಾವಶ್ಯಕ ಆದರೆ ಆಚರಿಸಲು ಅತಿಶಯ ಕಠಿಣ ವಿಷಯವೆಂದರೆ, ಸತತ ಅಖಂಡ ಅನುಸಂಧಾನ. ಸ್ವಾಮಿಗಳ ಸಾನಿಧ್ಯದಲ್ಲಿ ನಿಷ್ಪ್ರಯೋಜಕ, ವ್ಯಾವಹಾರಿಕ, ಲೌಕಿಕ ಹರಟೆಗಳನ್ನು ಹೇಳುವ ಕೇಳುವ ಪ್ರಸಂಗವೇ ಇಲ್ಲವಾಗಿತ್ತು. ಯಾವುದೇ ಸೇವಾಕಾರ್ಯದಲ್ಲಿರಲಿ ಅಥವಾ ವಿರಾಮ ಸಮಯದಲ್ಲಿರಲಿ, ನಾಮಸ್ಮರಣೆ ಅಥವಾ ಆತ್ಮಸ್ವರೂಪದ ಚಿಂತನೆ ಅಖಂಡ ನಡೆದಿರುತ್ತಿತ್ತು. ನಾವು ಮತ್ತು ಇತರ ಸಾಧಕರಾರಾದರೂ, ಮಾತುಕತೆಯ ಭರದಲ್ಲಿ ಏನಾದರೂ ಲೌಕಿಕ ವಿಷಯದ ಬಗ್ಗೆ ಮಾತನಾಡಹತ್ತಿದರೆ, ಸ್ವಾಮಿಗಳು ಅತಿ ಸೌಮ್ಯವಾಗಿ ಹೇಳುತ್ತಿದ್ದರು, ‘ಯಾತಕ್ಕೆ ಸುಮ್ಮನೇ ಸಂಸ್ಕಾರ(ಕರ್ಮಬಂಧನ)ವನ್ನು ಹೆಚ್ಚಿಸಿಕೊಳ್ಳುತ್ತಿದ್ದೀರಿ? ಮೊದಲಿನ ಸಂಸ್ಕಾರವೇ ಇನ್ನೂ ಮುಗಿಯುತ್ತಿಲ್ಲ. ಅದರಲ್ಲಿ ಮತ್ತೆ ಈ ಹೊಸ ಸಂಕಲನ ತರುವದಾದರೂ ಏಕೆ?’

ಮಧುರವಾಣಿ, ಶಾಂತಮೂರ್ತಿ :
ಸ್ವಾಮಿಗಳ ಎರಡನೆಯ ಪ್ರಮುಖ ವೈಶಿಷ್ಟ್ಯವೆಂದರೆ ಅವರ ಸೌಮ್ಯ, ಮೃದು ಪದಗಳ ಸವಿ ಮಾತು. ಯಾರಾದರೂ ಏನಾದರು ಹೇಳಿದರೂ ಅಥವಾ ಅವಮಾನಕಾರಕ ಪ್ರಸಂಗವನ್ನು ಒಂದು ವೇಳೆ ಎಳೆದು ತಂದರೂ, ಸ್ವಾಮಿಗಳ ಮಾತು ಅತ್ಯಂತ ಮೃದು ಮತ್ತು ಪ್ರೇಮಪೂರಿತ ಇರುತ್ತಿತ್ತು. ಆ ವಾಣಿಯಲ್ಲಿನ ಮಾಧುರ್ಯವೆಂದರೆ, ಆ ಚಿನ್ಮಯ ಮೂರ್ತಿಯ ಸ್ಥಳದಲ್ಲಿ ಪ್ರೇಮ ಮತ್ತು ಶಾಂತತೆಯ ಹೊಚ್ಚ ಹೊಸ ವಿನ್ಯಾಸವೇ ಕಾಣಿಸುತ್ತಿತ್ತು. ಸ್ವಾಮಿಗಳ ಅಧಿಕಾರದ ಕಲ್ಪನೆಯಿಲ್ಲದೇ ಪ್ರಸಂಗವಶಾತ್ ಯಾರಾದರೂ ದುರುತ್ತರ ಕೊಟ್ಟರೂ ಅಥವಾ ಹಗುರಾಗಿ ಮಾತನಾಡಿದರೂ, ಆ ಶಾಂತಬ್ರಹ್ಮರ ಶಾಂತಿ ನಿತ್ಯ, ಅಚಲವಾಗಿಯೇ ಇರುತ್ತಿತ್ತು. ಸಿಟ್ಟು – ಸಂತಾಪ ಅಂದರೆ ಏನು ಎಂಬುದೇ ಗೊತ್ತಿಲ್ಲದ ಶಾಂತಮೂರ್ತಿಯದು.

ಅಪರಿಗ್ರಹ :
ಪರಮಾರ್ಥದ ಅತ್ಯಾವಶ್ಯಕ ಗುಣವಾದ ಅಪರಿಗ್ರಹವು ಸ್ವಾಮಿಗಳ ಸ್ಥಾನದಲ್ಲಿ ಅತ್ಯಂತ ತೀವ್ರವಾಗಿತ್ತು. ಸಂಸಾರದಲ್ಲಿನ – ಲೌಕಿಕದಲ್ಲಿನ ಸರ್ವಸ್ವ ಆಶೆ, ಸುಖೇಚ್ಛೆ ಭಸ್ಮಮಾಡಿ ಹಾಕುವ ಪ್ರಖರ ವೈರಾಗ್ಯವಿದ್ದ ಹೊರತು ಈ ರೀತಿಯ ತ್ಯಾಗಿ ಮತ್ತು ಅಪರಿಗ್ರಹಿ ಆಗುವದು ಶಕ್ಯವಿಲ್ಲ! ಅಪರಿಗ್ರಹ ಅಂದರೆ ಶೇಖರಿಸದಿರುವದು – ದೇಹಪ್ರಾರಬ್ಧದಿಂದ ದೂರವಿದ್ದು, ಆ ಕ್ಷಣದಲ್ಲಿ ಏನು ಸಿಗುತ್ತದೆಯೋ ಅದರಲ್ಲಿ ಸಂತೋಷಪಟ್ಟು, ಭವಿಷ್ಯದ ಚಿಂತೆ ಮಾಡದೇ, ಯಾವುದೇ ವಸ್ತು ಮುಂದೆ ಉಪಯೋಗಕ್ಕೆ ಬರಬಹುದು, ಎಂಬ ವಿಚಾರವನ್ನೂ ಮಾಡದೇ, ತಮ್ಮ ತಾತ್ಕಾಲಿಕ ಆವಶ್ಯಕತೆಗಷ್ಟೇ ತೆಗೆದುಕೊಂಡು, ಉಳಿದದ್ದನ್ನೆಲ್ಲಾ ಬೇರೆಯವರಿಗೆ ಕೊಟ್ಟುಬಿಡುವದು – ಈ ಎಲ್ಲ ವಿಷಯಗಳು ಸ್ವಾಮಿಗಳ ವ್ಯವಹಾರದಲ್ಲಿ ಪ್ರತಿನಿತ್ಯದ್ದಾಗಿತ್ತು. ಅದಲ್ಲದೇ, ತಮ್ಮ ಹತ್ತಿರವಿದ್ದ ವಸ್ತು ಯಾರಾದರೂ ಕೇಳಿದರೆ, ತತ್ಕಾಲ ಅದನ್ನು ಕೇಳಿದವನಿಗೆ ಕೊಟ್ಟು ಬಿಡುತ್ತಿದ್ದರು. ದೀನ ದಲಿತರು ಕಣ್ಣಿಗೆ ಬಿದ್ದರೆ, ಸ್ವತಃ ತನ್ನ ಹತ್ತಿರವಿದ್ದ ಎಲ್ಲವನ್ನೂ ತತ್ಕ್ಷಣ ಅವರಿಗೆ ಕೊಟ್ಟುಬಿಟ್ಟು, ತಾವು ನಿರಾಳವಾಗಿರುತ್ತಿದ್ದರು. ಈ ರೀತಿಯ ಅನೇಕ ಪ್ರಸಂಗ ನೋಡಿದ ಮೇಲೆ ಸಂತ ತುಕಾರಾಮರ ಜೀವನದ – ತನ್ನ ಹೆಂಡತಿಯು ಒಣಗಿಸಲು ಇಟ್ಟ ಒಂದೇ ಒಂದು ಸೀರೆಯನ್ನೂ ಹಿಂದೆ ಮುಂದಿನ ಯೋಚನೆಯಿಲ್ಲದೇ, ಯಾಚಕನಿಗೆ ಕೊಟ್ಟುಬಿಟ್ಟ – ಘಟನೆ, ಕಪೋಲಕಲ್ಪಿತವಾಗಿರದೇ ಸಂತಚರಿತ್ರೆಯಲ್ಲಿನ ಸತ್ಯಘಟನೆಯೇ ಎನ್ನಬೇಕು. ಸ್ವಾಮಿಗಳ ಸಹವಾಸದಲ್ಲಿ ಇಂತಹ – ಕೈಯಲ್ಲಿದ್ದದ್ದನ್ನೆಲ್ಲಾ ದಾನ ಮಾಡುವ ಪ್ರಸಂಗ – ಅನೇಕ ಸಲ ನೋಡಲು ಸಿಗುತ್ತಿತ್ತು. ಇಷ್ಟೇ ಅಲ್ಲ, ಶ್ರೀಸಮರ್ಥರ ಪಾದುಕೆಯ ಮೇಲೆ ಯಾತ್ರಿಕರು ಇಟ್ಟ ಹಣವನ್ನು ಕೂಡ, ಕಡು ಬಡವರಿಗೆ ತತ್ಕಾಲ ಹಂಚಿ ಬಿಡುತ್ತಿದ್ದರು.

ಸ್ವಾಮಿಗಳ ಸಜ್ಜನಗಡದ ವಾಸ್ತವ್ಯವಿದ್ದಾಗ, ಖಂಡಾಳೆ ಕೆರೆಯಲ್ಲಿ ಸ್ನಾನ ಮಾಡಿ, ಸೋಮಾಳೆ ಕೆರೆಯ ಮೇಲೆ, ಅವರ ಆಹ್ನಿಕ ತುಂಬಾ ಸಮಯ ನಡೆಯುತ್ತಿತ್ತು ಮತ್ತು ಆವಾಗ, ವೃತ್ತಿ ತದಾಕಾರವಾಗಿ, ಅವರು ಧ್ಯಾನಸ್ಥರೂ ಆಗುತ್ತಿದ್ದರು. ನಂತರ, ಶ್ರೀರಾಮ – ಶ್ರೀಮಾರುತಿಯವರ ದರ್ಶನ ತೆಗೆದುಕೊಂಡು, ಸ್ತೋತ್ರ ಪಠಣೆ ಪ್ರಾರಂಭವಾಗುತ್ತಿತ್ತು ಮತ್ತು ಶ್ರೀಸಮರ್ಥ ಸಮಾಧಿಮಂದಿರದಲ್ಲಿ ಒಂದು ತಾಸುಕಾಲ ಪ್ರದಕ್ಷಿಣೆ ಹಾಕುತ್ತಿದ್ದರು. ಹೀಗೆಯೇ, ಒಮ್ಮೆ ಚಳಿಗಾಲದ ದಿನದಲ್ಲಿ ಪ್ರದಕ್ಷಿಣೆಯನ್ನು ಮಾಡುತ್ತಿದ್ದಾಗ, ಒಬ್ಬ ವೃದ್ಧ ಗೃಹಸ್ಥನು ಚಳಿಯಿಂದ ನಡುಗುತ್ತ ಪ್ರದಕ್ಷಿಣೆಯ ಮಾರ್ಗದಲ್ಲಿ ಕುಳಿತಿದ್ದದ್ದನ್ನು ನೋಡಿದರು. ಆತನ ಆ ಸ್ಥಿತಿಯನ್ನು ನೋಡಿ, ಸ್ವಾಮಿಗಳು ತಮ್ಮ ಮೈಮೇಲಿನ ಅಂಗವಸ್ತ್ರವನ್ನು ಆತನ ಮೈಮೇಲೆ ಹಾಕಿದರು ಮತ್ತು ತಾವು ನಂತರ ಎಷ್ಟೋ ಕಾಲ ಕೇವಲ ಲಂಗೋಟಿಯ ಮೇಲೆಯೇ ಪ್ರದಕ್ಷಿಣೆ ಹಾಕುತ್ತಿದ್ದು, ನಂತರ ಒಣಗಿಸಲಿಕ್ಕೆ ಹಾಕಿದ ತಮ್ಮ ಅಂಗವಸ್ತ್ರವನ್ನು ಎರಡು ಭಾಗಮಾಡಿ, ಅದರ ಒಂದು ಭಾಗವನ್ನು ತಮ್ಮ ಕುತ್ತಿಗೆಯ ಸುತ್ತ ಸುತ್ತಿಕೊಂಡರು. ಅದನ್ನು ನೋಡಿ, ನಾನು ಸಹಜವಾಗಿ ಸ್ವಾಮಿಗಳ ಹತ್ತಿರ, ‘ನಿಮ್ಮ ಹತ್ತಿರ ವಸ್ತ್ರ ಇಲ್ಲದೇ ಇರುವಾಗ, ನೀವು ಆ ಗ್ರಹಸ್ಥನಿಗೆ ವಸ್ತ್ರವನ್ನೇಕೆ ಕೊಟ್ಟರಿ?’ ಎಂದು ಕೇಳಿದೆನು. ಅದಕ್ಕುತ್ತರವಾಗಿ ಸ್ವಾಮಿಗಳು, ‘ನನ್ನ ಹತ್ತಿರ ವಸ್ತ್ರ ಇರುವವರೆಗೆ ನಾನು ಅದನ್ನು ಕೊಡುತ್ತೇನೆ. ನನ್ನ ಹತ್ತಿರವೇ ಇಲ್ಲದಿದ್ದರೆ, ನಾನೆಂತು ಕೊಡಬಲ್ಲೆ?’ ಎಂದು ಹೇಳಿದರು. ಸ್ವಾಮಿಗಳ ಈ ಉತ್ತರ ಕೇಳಿ, ನನ್ನ ಮನಸ್ಸಿನಲ್ಲಿ ಜಗಮಗಿಸುವ ಬೆಳಕು ಬಿತ್ತು, ‘ನಾವು ಶ್ರೀತುಕಾರಾಮ ಮಹಾರಾಜ, ಶ್ರೀಸಮರ್ಥ ಮೊದಲಾದ ಸಂತರ ವಿಷಯ ಓದಿ ಸಮಾಧಾನ ಪಡುತ್ತೇವೆ, ಇಲ್ಲಿ ಅವರು ಹೇಳಿರುವ ಆಚರಣೆ ಪ್ರತ್ಯಕ್ಷ ಕೃತಿಯಲ್ಲಿ ಕಂಡುಬಂತು ಮತ್ತು ನಾನು ಸ್ವಾಮಿಗಳ ಚರಣಗಳಿಗೆ ನತಮಸ್ತಕನಾದೆನು. ‘ಆತ್ಮವತ್ ಪರಾವೇ ತೇ| ಮಾನೀತ ಜಾವೇ|’ … ತನ್ನಂತೆ ಪರರ ಬಗೆದರೆ ಬಿನ್ನಾಣವಕ್ಕು ಈ ಸಮರ್ಥೋಕ್ತಿ ಸ್ವಾಮಿಗಳ ಆಚರಣದಲ್ಲಿ ಹೆಜ್ಜೆಹೆಜ್ಜೆಗೂ ಕಂಡು ಬರುತ್ತಿತ್ತು ಮತ್ತು, ‘ದೀನ ದೇಖೋನಿ ಕಳವಳಾ| ಆಲಾ ಪಾಹಿಜೇ|’ … ದೀನರನು ನೋಡಿ ಕಳವಳವು ಹೊಮ್ಮಬೇಕು ಇದರ ಪ್ರತ್ಯಕ್ಷಪ್ರಮಾಣ ಸ್ವಾಮಿಗಳ ದಿನನಿತ್ಯದ ನಡತೆಯಲ್ಲಿ ಕಣ್ಮುಂದೆ ಕಾಣಸಿಗುತ್ತದೆ. ಸೇವಾಭಾವ : |ಗುರುಚ್ಯಾಗುರುಚ್ಯಾಘರೀ ಝಾಡಿತೋ ಸಾರವಿತೋ| ಮಲಾ ತೋ ಗಮೇ ಭೂತಲೀಚಾ, ರವಿತೋ| … ‘ಗುರುಗೃಹದಲವ ಕಸಗುಡಿಸಿ ಸಾರಿಸುವ| ನನ್ನೆಣಿಕೆ ಅವನೆ ದಾರಿ ತೋರುವ ರವಿಯು ಭೂತಲದಲಿ| …’, ಇದು ಸ್ವಾಮಿಗಳ ಅತ್ಯಂತ ಪ್ರೀತಿಯ ಕಾವ್ಯ ಪಂಕ್ತಿಯಾಗಿತ್ತು ಮತ್ತು ಅವರ ಸ್ವಂತದ ಆಚರಣೆಯೂ ಅದರಂತೆಯೇ ಇತ್ತು. ಸಾಧಕಾವಸ್ಥೆಯಲ್ಲಿ ಸಜ್ಜನಗಡದ ಮೇಲೆ ಇದ್ದಾಗ, ಯಾವುದೇ ಕೆಲಸ ಮಾಡುವದರಲ್ಲಿ – ಅದು ಮೇಲ್ಮಟ್ಟದ್ದಿರಲಿ ಅಥವಾ ಕೆಳಸ್ಥರದ್ದಿರಲಿ – ಸ್ವಾಮಿಗಳಿಗೆ ಕಿಂಚಿತ್ತೂ ಕೀಳರಿಮೆಯಾಗುತ್ತಿರಲಿಲ್ಲ. ‘ದೇಹದ ಕಸಬರಿಗೆಯಾಗಬೇಕು’, ಎಂಬ ಹೇಳಿಕೆಯಂತೆ, ದೇಹದ ಬಗ್ಗೆ ಸಂಪೂರ್ಣ ಅನಾಸಕ್ತಿಯಿಟ್ಟು, ಶ್ರೀಸಮರ್ಥರ ಮಂದಿರದಲ್ಲಿ, ಮಠದಲ್ಲಿ ಎಲ್ಲ ಪ್ರಕಾರದ ಸೇವೆ ಮಾಡಿದರು. ನೀರು ತುಂಬುವದು, ಬೀಸುವದು – ರುಬ್ಬುವದು, ಊಟದೆಲೆ ಎತ್ತುವದು, ನೆಲ ಸಾರಿಸುವದು, ಪ್ರಸಂಗ ಬಿದ್ದಾಗ ದೀನ – ವೃದ್ಧರ ಹೊರೆ ಹೊತ್ತು ತರುವದು, ಈ ರೀತಿ ಸೇವೆಯ ಇನ್ನು ಯಾವುದೇ ಪ್ರಕಾರ ಉಳಿದಿರಲಿಲ್ಲ. ಗುರುಗೃಹದಲ್ಲಿ ಶಿಷ್ಯನು ಸೇವೆಯನ್ನು ಅದೆಂತು ಮಾಡಬೇಕೆಂಬುದರ ಆದರ್ಶದ ವಸ್ತುನಿಷ್ಠ ಪಾಠವನ್ನು ಸ್ವತಃ ಆಚರಣೆಗೆ ತಂದು, ಉಳಿದವರಿಗೆ ಮಾಡಿ ತೋರಿಸಿದರು.
ಶ್ರೀಸಮರ್ಥರ ಮೇಲೆ ತೀವ್ರ ನಿಷ್ಠೆ ಮತ್ತು ಭಕ್ತಿ-ಪ್ರೇಮ : ಸ್ವಾಮಿಗಳ ಅಂತರ್ಗತ ಸಾಧನೆಯ ವರ್ಣನೆಯನ್ನು ಒಂದೇ ಒಂದು ಶಬ್ದದಲ್ಲಿ ಮಾಡುವದಾದರೆ, ‘ಶ್ರೀಸಮರ್ಥರ ಮೇಲೆ ನಿಸ್ಸೀಮ ನಿಷ್ಠೆ’, ಎಂದು ಹೇಳಬಹುದು. ಶ್ರೀಸಮರ್ಥರನ್ನು ಗುರುವೆಂದು ನಂಬಿ, ಅವರು ಶ್ರೀಸಮರ್ಥರ ಮೇಲೆ ಅಟಲ, ಏಕೈಕ ನಿಷ್ಠೆಯಿಟ್ಟು ಸಗುಣ ಭಕ್ತಿಯ ಅತ್ಯಂತ ಪರಿಸೀಮೆಯನ್ನು ಮೀರಿ ಮೆರೆದರು. ಸ್ವಾಮಿಗಳ ದೃಷ್ಟಿಯಲ್ಲಿ ಸಜ್ಜನಗಡದಲ್ಲಿ ಶ್ರೀಸಮರ್ಥರ ಜೀವಂತ ವಾಸ್ತವ್ಯವಿತ್ತು. ಅದರ ಬಗ್ಗೆ ಮುಂದಿನ ಒಂದು ಉದಾಹರಣೆಯೇ ಸಾಕು!

ಒಮ್ಮೆ, ಚಳಿಗಾಲದ ಸಮಯದಲ್ಲಿ ರಾತ್ರಿ ಅತಿಶಯ ಚಳಿ ಬಿದ್ದಿತ್ತು. ಆಗ ಶ್ರೀ ಸಮರ್ಥರಿಗೆ ಚಳಿಯಾಗಬಹುದೆಂದು, ತನಗೆ ಯಾರೋ ಕೊಟ್ಟ ಶಾಲನ್ನು ಸ್ವಾಮಿಗಳು ಶ್ರೀಸಮರ್ಥ ಸಮಾಧಿಯ ಹಿಂದಿನ ಬದಿಗಿದ್ದ ಕಿಟಕಿಗೆ ಕಟ್ಟಿ, ಅದನ್ನು ಮುಚ್ಚಿದರು. ಈ ಸಾಮಾನ್ಯವೆಂದು ಕಾಣುವ ಆದರೆ, ಮಹತ್ವದ ಘಟನೆಯ ಹಿಂದಿರುವ ಭಾವನೆ, ಸಗುಣಭಕ್ತಿಯ ಪ್ರೇಮ ಯಾರಿಗೆ ಸಿಕ್ಕಿರುತ್ತದೆಯೋ ಅಂತಹ ಭಕ್ತರಿಗೆ ಮಾತ್ರ ಅರಿವಾಗಬಹುದು. ಶ್ರೀಸ್ವಾಮಿಗಳ ಶ್ರೀಸಮರ್ಥರ ಮೇಲಿನ ಭಕ್ತಿ ಪ್ರೇಮದ ಭಾವಪೂರ್ಣ ದರ್ಶನ, ಶ್ರೀಸ್ವಾಮಿಗಳು ಶ್ರೀಸಮರ್ಥ ಸಮಾಧಿ ಪೂಜೆ ಮಾಡುತ್ತಿರುವಾಗ ಆಗುತ್ತಿತ್ತು. ಆಗಿನ ಸ್ವಾಮಿಗಳ ಮೃದು ನಡೆ ಮತ್ತು ಮುಖದ ಮೇಲಿನ ಭಾವ ನೋಡಿದಾಗ ದರ್ಶಕನ ಅಂತಃಕರಣವೂ ಸದ್ಗದಿತವಾಗುತ್ತಿತ್ತು.

ಪ್ರೇಮಭಾವದಿ ಹರಿವ ಬೋಧನೆ : ಪರಮಾರ್ಥಮಾರ್ಗದಲ್ಲಿನ ಯಾವುದೇ ವಿಷಯ ಜಿಜ್ಞಾಸುವಿಗೆ ಸಹಜ, ಸುಲಭ ಭಾಷೆಯಲ್ಲಿ ತಿಳಿಸಿಕೊಡುವ ಸ್ವಾಮಿಗಳ ಪ್ರಬೋಧನ ಶಕ್ತಿ ಅಲೌಕಿಕವಾಗಿತ್ತು. ಆದರೆ ಆ ಮಾತುಗಳಲ್ಲಿ, ‘ನಾನು ಜ್ಞಾತನು’, ಎಂಬ ಭಾವ ಮಾತ್ರ ಎಂದೂ ಇರುತ್ತಿರಲಿಲ್ಲ. ಅದರ ಬದಲು ಅಲ್ಲಿ, ಆ ಶಬ್ದಗಳು ತಾಯಿಯ ಪ್ರೇಮಪೂರಿತ ಅಂತಃಕರಣದ ಆರ್ದ್ರತೆಯಿಂದ ಒದ್ದೆಯಾಗಿರುತ್ತಿದ್ದವು. ಸ್ವಾಮಿಗಳ ಮುಖದಿಂದ ಧಾರ್ಮಿಕ ವಿಷಯ ಅಥವಾ ಶಾಸ್ತ್ರವಚನಗಳು ಹತ್ತಿರ ಕುಳಿತು ಕೇಳುವದೊಂದು ಅವಿಸ್ಮರಣೀಯ ಅನುಭವವೇ. ಯಾವನಾದರೂ ಶ್ರೋತ್ರ ಅವನ ಅಲ್ಪಮತಿಯ ಕಾರಣ ಸ್ವಾಮಿಗಳ ಮಾತಿಗೆ ಏನಾದರೂ ಶಂಕೆ ಸಂದೇಹ ಎತ್ತಿಹತ್ತಿದರೆ, ಸ್ವಾಮಿಗಳು, ಮೊದಲು ಶಕ್ಯವಾದಷ್ಟು ಸವಿಸ್ತರ ವಿಶ್ಲೇಷಣೆ ಮಾಡುತ್ತಿದ್ದರು. ಆದರೆ ಯಾವನಾದರೂ, ವಾದವನ್ನೇ ಮಂಡಿಸ ಹತ್ತಿದರೆ, ಸ್ವಲ್ಪವೂ ಸಿಟ್ಟು ಮಾಡದೇ, ಶಾಂತಭಾವದಿಂದ, ಪ್ರೇಮದಿಂದ ‘ ದಾದಾ! ವಿಶ್ವಾಸವಿಡಬೇಕು. ಮೊದಲು ನಾಮಸ್ಮರಣೆ ಮೊದಲಾದ ಸಾಧನಗಳಿಂದ ನಾವು ನಮ್ಮ ಅಂತಃಕರಣಶುದ್ಧಿ ಮಾಡಿಕೊಳ್ಳಬೇಕು, ಅಂದರೆ ಸಂತವಚನದಲ್ಲಿಯ ಮರ್ಮ ಮತ್ತು ಗೂಢಾರ್ಥ ಅರ್ಥವಾಗುತ್ತದೆ. ನಂತರ ಅದು ಸಾವಕಾಶ ಶರೀರದೊಳಗೆ ಹಚ್ಚು ಹಾಸಾಗಬೇಕು’ ಎಂದು ಹೇಳುತ್ತಿದ್ದರು. ಸ್ವಾಮಿಗಳ ಮುಖದಿಂದ ಯಾರಿದೇ ನಿಂದೆ ಅಥವಾ ದೋಷವರ್ಣನೆ ಎಂದೂ ಆಗಿಲ್ಲ. ತಮ್ಮ ಹತ್ತಿರ ಕುಳಿತ ಯಾರಾದರೂ, ಬೇರೆಯವರ ದೋಷವರ್ಣನೆ ಅಥವಾ ನಿಂದೆ ಮಾಡಹತ್ತಿದರೆ, ಸ್ವಾಮಿಗಳು, ‘ಹೀಗೆ ಮಾಡಬಾರದು. ಮೊದಲು ನಾವು ನಮ್ಮ ಉಚ್ಚ ಸ್ಥಿತಿಯಿಂದ ಕೆಳಗೆ, ಆ ಮನುಷ್ಯನಂತೆ ಆಗಿ, ಆತನ ದೋಷ ನೋಡುವದೆಂದರೆ ಕೆಸರಿನಲ್ಲಿ ಕಲ್ಲು ಹಾಕಿ, ನಮ್ಮ ಮೈಮೇಲೆ ಕೆಸರಿನ ಕಲೆ ಮಾಡಿಕೊಳ್ಳುವಂತೆ ಇರುತ್ತದೆ. ಬೇಕೆಂದೇ ಕಲೆ ಮಾಡಿಕೊಂಡು, ಅದನ್ನು ತೊಳೆಯುತ್ತಾ ಕುಳಿತುಕೊಳ್ಳುವದಕ್ಕಿಂತ ಮೊದಲೇ, ಕಲೆ ಬೀಳದಂತೆ ಎಚ್ಚರದಿಂದಿರಬೇಕು. ಬೇರೆಯವರ ದೋಷಗಳ ವಿಚಾರ ಮಾಡಿ ನಮ್ಮ ಚಿತ್ತವನ್ನು ಮಲಿನ ಮಾಡಿಕೊಳ್ಳುವದು ಮತ್ತು ನಂತರ ಚಿತ್ತಶುದ್ಧಿಯ ಬಗ್ಗೆ ಸಾಧನೆ ಮಾಡುವದು, ಇದಕ್ಕಿಂತ ಚಿತ್ತದ ಮೇಲೆ ಮಲಿನ ಸಂಸ್ಕಾರ ಆಗದೇ ಇರುವ ಬಗ್ಗೆ ಸಾಧಕನು ಜಾಗರೂಕನಾಗಿರಬೇಕು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಮಾರ್ಗಶೀರ್ಷ ೧೯೦೧ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img