Memories

38. ಸ್ವಾಮಿಗಳ ಉಜ್ವಲ ರಾಷ್ಟ್ರಪ್ರೇಮ (ಭಾಗ ೧)

(ನಿರೂಪಣೆ : ಅನಾಮಧೇಯ ಶ್ರೀಧರಭಕ್ತೆ)

ಶಕೆ ೧೮೮೨ರಮಧ್ಯೆ ಸ್ವಾಮಿಗಳ ಏಕಾಂತ ಸಜ್ಜನಗಡದಲ್ಲಿ ಪ್ರಾರಂಭವಾಗಿತ್ತು. ಆದರೆ, ಒಂದು ವರ್ಷವಾದ ಮೇಲೆ, ಸ್ವಾಮಿಗಳ ದೇಹ ಪ್ರಕೃತಿ ಕೆಡಲು, ವೈದ್ಯಕೀಯ ಉಪಚಾರಕ್ಕೆಂದು ಸ್ವಾಮಿಗಳನ್ನು ಪುಣೆಗೆ ಕರೆತಂದರು. ತದನಂತರ, ಸ್ವಾಮಿಗಳ ದೇಹಸ್ಥಿತಿ ಹತೋಟಿಗೆ ಬರಲು, ಮುಂದಿನ ಉಪಚಾರಕ್ಕೆಂದು, ಕರ್ನಾಟಕದ ಭಕ್ತರು ಬೆಂಗಳೂರು ಮತ್ತು ನಂತರ ಚಾತುರ್ಮಾಸಕ್ಕೆಂದು, ಏಕಾಂತಯುಕ್ತ ಮಂಗಳೂರಿನಲ್ಲಿ ಸ್ವಾಮಿಗಳ ವಾಸ್ತವ್ಯದ ವ್ಯವಸ್ಥೆ ಮಾಡಿದರು.

ಆಗ ನನ್ನ ಯಜಮಾನರು ಪ್ರಾದೇಶಿಕ ಸೇನಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ದೀಪಾವಳಿಯ ರಜೆಗೆಂದು ಮನೆಗೆ ಬಂದಿದ್ದರು. ಅವರಿಗೆ ಹಟಾತ್ತಾಗಿ, ಚೀನೀಗಡಿಯಲ್ಲಿನ ಯುದ್ಧಪ್ರದೇಶಕ್ಕೆ ಹೋಗಲು, ಆಜ್ಞಾಪತ್ರ ಬಂತು. ಚೀನದೊಂದಿಗಿನ ಯುದ್ಧಕ್ಕೆ ಹೋಗುವ ಆಜ್ಞಾಪತ್ರ ಸಿಕ್ಕಿದ ಕೂಡಲೇ, ನಾನು, ನನ್ನ ಪತಿ ಮತ್ತು ಮಗ ಮೂವರೂ, ಮೊದಲು ಸಜ್ಜನಗಡಕ್ಕೆ ಹೋಗಿ ಶ್ರೀಸಮರ್ಥರ ದರ್ಶನ ತೆಗೆದುಕೊಂಡು ನಂತರ ಗುರುಮಾಯಿಯ ಆಶೀರ್ವಾದ ಪಡೆಯುವ ಉದ್ದೇಶದಿಂದ ಮಂಗಳೂರಿಗೆ ಹೋದರು. ಮಂಗಳೂರಿನಲ್ಲಿ ಗುರುಮಾಯಿಯ ವಾಸ್ತವ್ಯ ಗುರುಭಕ್ತ ಶ್ರೀಧರ ಶೆಣೈಯವರ ಬಂಗಲೆಯಲ್ಲಿದ್ದು, ಅಲ್ಲಿ ಯಾರಿಗೂ ಸಹಜವಾಗಿ ಪ್ರವೇಶವಿರಲಿಲ್ಲ. ನಾವಲ್ಲಿ ಹೋದಾಗ, ಶ್ರೀ ಶೆಣೈ ಏನೋ ಕೆಲಸದ ಮೇಲೆ ಬಂದರದ ಕಡೆ ಹೋಗಿದ್ದರಿಂದ, ನಮಗೆ ಆ ಬಂಗಲೆಯ ಆವಾರದೊಳಗೆ ಹೋಗಲಿಕ್ಕಾಯಿತು. ಆಗಲೇ ಒಬ್ಬ ಕನ್ನಡ ಸೇವಕ ಶಿಷ್ಯ ಓಡೋಡಿ ಬಂದು, ‘ದರ್ಶನವಿಲ್ಲ’, ಎಂದು ಕೂಗಿ ಹೇಳಿದನು. ಅಷ್ಟರಲ್ಲಿ, ನಮಗೆ ಸ್ವಾಮಿಗಳ ಸಂಗಡ ಇದ್ದ ಮರಾಠಿ ಸೇವಕ ಶಿಷ್ಯ ಗು.ಬಂ. ಹರಿಭಾವು ಕಾಣಿಸಿದರು ಮತ್ತು ಅವರಿಗೆ, ‘ನಮಗೆ ಚೀನೀ ಯುದ್ಧದ ಮಂಚೂಣಿಗೆ ಹೋಗುವದಿದೆ. ಸ್ವಾಮಿಗಳ ಆಶೀರ್ವಾದ ತೆಗೆದುಕೊಳ್ಳಲು ಬಂದಿದ್ದೇವೆ. ನೀವು ಇದಿಷ್ಟು, ಸ್ವಾಮಿಗಳಿಗೆ ತಿಳಿಸಿ. ಮೌನವಿದ್ದಲ್ಲಿ, ಕನಿಷ್ಟ ದರ್ಶನಭಾಗ್ಯವಾದರೂ ಸಿಗಲಿ!’, ಎಂದು ವಿನಂತಿ ಮಾಡಿದೆವು. ಅಷ್ಟರಲ್ಲೇ ಸ್ವಾಮಿಗಳು, ಸ್ನಾನಕ್ಕೆ ಹೋಗುತ್ತಿದ್ದುದು ನಮಗೆ ದೂರದಿಂದಲೇ ಕಾಣಿಸಿತು. ನಮಗೆ ದರ್ಶನವಂತೂ ಆಗೇ ಹೋಯಿತು ಮತ್ತು ಈಗ ಆಶೀರ್ವಾದ ತೆಗೆದುಕೊಳ್ಳುವದು ಬಾಕಿ ಇತ್ತು. ಹರಿಭಾವು ನಮ್ಮ ಆಶಯವನ್ನು ಗುರುಮಾಯಿಗೆ ಹೇಳಿದರು ಮತ್ತು ಗುರುಮಾಯಿಯ ಸೂಚನೆಯಂತೆ, ಅವರು, ನನ್ನ ಪತಿಗೆ ಸ್ನಾನ ಮಾಡಿ ಮಡಿಯಲ್ಲಿ, ಸ್ವಾಮಿಗಳು ಯಾವ ಕೋಣೆಯಲ್ಲಿ ಇದ್ದರೋ, ಆ ಕೋಣೆಯ ಬಾಗಿಲಿನ ಹತ್ತಿರ ನಿಂತುಕೊಳ್ಳಲು ಹೇಳಿದರು. ಅದರಂತೆ, ನನ್ನ ಪತಿ ಬಾಗಿಲ ಹತ್ತಿರ ಹೋಗಿ, ದೊಡ್ಡ ಧ್ವನಿಯಲ್ಲಿ, ‘ಜಯ ಜಯ ರಘುವೀರ ಸಮರ್ಥ’ ಎಂದು ಹೇಳಿ, ಸಾಷ್ಟಾಂಗ ನಮಸ್ಕಾರ ಮಾಡಿದರು. ಆ ಜಯಘೋಷ ಕೇಳುತ್ತಲೇ ಗುರುಮಾಯಿಯು ಬಾಗಿಲ ತೆರೆದು ಹೊರಬಂದು ಮತ್ತು ನನ್ನ ಪತಿದೇವರನ್ನು ಮೇಲೆತ್ತಿ, ಗಟ್ಟಿಯಾಗಿ ಆಲಿಂಗನ ಮಾಡಿದರು. ಆ ವಾತ್ಸಲ್ಯವಂತೂ ಅವರ್ಣನೀಯವೇ! ನೋಡುತ್ತಿದ್ದ ನಮ್ಮದಷ್ಟೇ ಅಲ್ಲ, ನನ್ನ ಯಜಮಾನರ ಕಣ್ಣುಗಳಿಂದ ಆನಂದಾಶ್ರು ಧಾರಾಕಾರವಾಗಿ ಹರಿಯುತ್ತಿತ್ತು. ಸ್ವಾಮಿಗಳ ಮೌನವೃತವಿದ್ದುದರಿಂದ, ಚಿಹ್ನೆಗಳಿಂದಲೇ, ‘ಮಾತೃಭೂಮಿಯ ರಕ್ಷಣೆಗೆ ನೀನು ಹೋಗುತ್ತಿರುವೆ; ನಿನಗೆ ನನ್ನ ಪೂರ್ಣ ಆಶೀರ್ವಾದಗಳಿವೆ. ಸದ್ಯದಲ್ಲೇ ಆ ಚೀನೀ ಸೇನೆ ಹಿಂದಿರುಗುತ್ತದೆ ಮತ್ತು ಮಾತೃಭೂಮಿಯ ಮೇಲಿನ ಸಂಕಟ ನಿವಾರಣೆಯಾಗುತ್ತದೆ’, ಹೀಗೆಂದು ಹೇಳಿ, ನಮ್ಮ ಯಜಮಾನರಿಗೆ ಜೋರಾಗಿ ಬೆನ್ನು ತಟ್ಟಿದರು. ನಮ್ಮ ಪ್ರಯತ್ನ ಸಾರ್ಥಕವಾಯಿತು. ನಂತರ ನಾವು ತ್ರಿವೇಂದ್ರಮ್ಮಿಗೆ ಬಂದೆವು. ಅದೇ ದಿನ ಎಲ್ಲ ಸೈನಿಕರೂ, ಆಸಾಮ ಗಡಿಪ್ರದೇಶಕ್ಕೆ ಹೊರಟರು ಮತ್ತು ಎಲ್ಲರ ಕುಟುಂಬದ ಸದಸ್ಯರನ್ನು ಅವರವರ ಮನೆಗೆ ಕಳುಹಿಸಿದರು. ಸ್ವಾಮಿಗಳ ರಾಷ್ಟ್ರಪ್ರೇಮವದೆಷ್ಟು ಉಜ್ವಲವಾಗಿತ್ತೆಂದು, ಇದರಿಂದ ನನಗೆ ಅರಿವಾಯಿತು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಮಾಘ, ೧೯೦೧, ಸನ ೧೯೭೯ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img