Memories

41. ತಾಯಿಗೆ ಜೀವದಾನ

(ನಿರೂಪಣೆ : ಶ್ರೀಧರಭಕ್ತೆ ಸೌ. ನಿರ್ಮಲಾ ಕುಲಕರ್ಣಿ)

ಶಕೆ ೧೮೮೮ರ ಮಾರ್ಗಶೀರ್ಷ ವದ್ಯ ಪಕ್ಷದ (ಇಸವಿ ಸನ ೧೯೬೭ರ ಮೊದಲನೆಯ ವಾರ) ಗುರುಮಾತೆಯು ಸಜ್ಜನಗಡದಲ್ಲಿ ಇದ್ದಾಗ ನಾನು, ‘ನನ್ನ ಮಗನ, ಅಣ್ಣನ ಮಗನ ಮತ್ತು ತಮ್ಮನ ಉಪನಯನ ತಮ್ಮ ಸಾನಿಧ್ಯದಲ್ಲಿ ಮಾಡಬೇಕೆಂದು ಎಲ್ಲರ ಇಚ್ಛೆ ಇದೆ. ನಿಮ್ಮ ಒಪ್ಪಿಗೆ ಬೇಕು’, ಎಂದು ಗುರುಮಾಯಿಗೆ ವಿನಂತಿ ಮಾಡಿದಾಗ, ‘ಆ ಸಮಯದಲ್ಲಿ ನಾನು ಏಕಾಂತದಲ್ಲಿದ್ದರೂ, ನೀವು ಮಾಘ ವದ್ಯ ಎರಡನೇ ತಿಥಿಯನ್ನು ನಿಶ್ಚಯಿಸಿರಿ ಮತ್ತು ಕರ್ನಾಟಕದಲ್ಲಿ ನಿಮ್ಮ ಶಾಖೆಯ ವೈದಿಕರಿಲ್ಲದಿರುವದರಿಂದ, ನೀವೇ ನಾಶಿಕದಿಂದ ವೈದಿಕರನ್ನು ಕರೆದುಕೊಂಡು ಬನ್ನಿ’, ಎಂದು ಉತ್ತರ ಸಿಕ್ಕಿತು. ಪೌಷ ತಿಂಗಳು ಕಳೆಯಿತು. ಆದರೆ, ಏಕೋ ಏನೋ ಈ ವಿಷಯದಲ್ಲಿ ನಮ್ಮೆಲ್ಲರ ಅಭಿಪ್ರಾಯ ಏಕಮುಖವಾಗಲಿಲ್ಲ. ಕೆಲವೊಂದು ತೊಂದರೆಗಳೂ ಉಂಟಾಯಿತು. ಒಂದು ದಿನ, ಸ್ವಪ್ನದಲ್ಲಿ ಬಂದು ಸ್ವಾಮಿಗಳು, ‘ಏನು ತಂಗಾ! ನಿನ್ನ ತಂದೆಯವರು ಏನು ಹೇಳುತ್ತಾರೆ? ನಿನಗೆ ಕೊಟ್ಟ ದಿನ ತಪ್ಪಿಸಿಕೊಳ್ಳಬೇಡ. ಯಾಕೆಂದರೆ, ಮುಂದೆ ನನ್ನ ಮಾರ್ಗದರ್ಶನ ನಿಮಗೆ ಸಿಗುವದು ಕಠಿಣವಾಗಬಹುದು’, ಎಂದು ಹೇಳಿದರು. ನಾನು ಈ ಸ್ವಪ್ನವನ್ನು ಹೇಳಿದೆ ಮತ್ತು ಮಾಘ ಹುಣ್ಣಿವೆಯ ಮೊದಲು ನಾವೆಲ್ಲರೂ ವರದಪುರಕ್ಕೆ ಹೊರಟೆವು. ದಾರಿಯ ಮೇಲೆ, ಮಿರಾ ಸ್ಟೇಷನ್ನಿನಲ್ಲಿ ನನ್ನ ತಾಯಿಗೆ, ತುಂಬಾ ಚಳಿ ನಡುಕವಾಗಿ, ಜ್ವರ ೧೦೫ ಡಿಗ್ರಿಯವರೆಗೆ ಏರಿತು. ವರದಪುರ ಮುಟ್ಟುವವರೆಗೂ ಹಾಗೆಯೇ ಜ್ವರವಿತ್ತು ಮತ್ತು ನನ್ನ ತಾಯಿ ಜ್ವರದಿಂದ ತಳಮಳಿಸುತ್ತಿದ್ದರು. ಆಶ್ರಮದ ಜನರು ನಮ್ಮ ದಾರಿ ಕಾಯುತ್ತಿದ್ದರು. ಗುರುಮಾತೆಯು ಉಪನಯನಕ್ಕೆ ಬೇಕಾಗುವ ಎಲ್ಲ ಸಾಮಾನುಗಳ ಯಾದಿ ಆಶ್ರಮದ ವ್ಯವಸ್ಥಾಪಕರಿಗೆ ಕೊಟ್ಟಿದ್ದಾರೆಂದು ತಿಳಿದುಬಂತು. ಮಹಾರಾಷ್ಟ್ರದ ಪದ್ಧತಿಯಲ್ಲಿ ಬೇಕಾದ ಒಂದು ಹೊಚ್ಚ ಹೊಸ ಬೆತ್ತದ ತಟ್ಟೆಯನ್ನೂ (ಗೆರಸಿ, ಧಾನ್ಯವನ್ನು ಸ್ವಚ್ಛ ಮಾಡುವ ‘ಸುಪೆ’) ತಂದಿಟ್ಟಿದ್ದರು.

ಮಾಘ ವದ್ಯ ಪ್ರತಿಪದೆಯ ರಾತ್ರಿಯವರೆಗೂ ನನ್ನ ತಾಯಿಯ ಜ್ವರವು ಸ್ವಲ್ಪವೂ ಇಳಿಮುಖ ಕಾಣದೇ ಇರುವದರಿಂದ ನನ್ನ ತಂದೆಯು, ಗುರುಮಾತೆಯು ವಾಸವಾಗಿದ್ದ ಶ್ರೀಧರ ತೀರ್ಥ ಕುಟಿಯ ಹತ್ತಿರ ಹೋದರು ಮತ್ತು ಅಲ್ಲಿಯ ಗುರುಸೇವಕ ಶಿಷ್ಯರ ಹತ್ತಿರ ಹೋಗಿ, ತಮ್ಮ ಪತ್ನಿಯ ಜ್ವರದ ವಿಷಯ ಹೇಳಿದರು. ಅದೇ ವೇಳೆ ಗುರುಮಾತೆಯು ನನ್ನ ತಂದೆಯವರ ಮುಂದೆ ಬಂದರು. ಆಗ ನನ್ನ ತಂದೆಯವರು, ‘ಪತ್ನಿಯ ಜ್ವರ ಏನೂ ಕಡಿಮೆಯಾಗಿಲ್ಲ; ಮಗನ ಮುಂಜಿಯನ್ನು ಸೊಂಟಕ್ಕೆ ಅಡಿಕೆ ಸಿಕ್ಕಿಸಿಕೊಂಡು ಮಾಡಲೇ?’, ಎಂದು ಆರ್ತರಾಗಿ ನನ್ನ ತಂದೆಯು ಕೇಳಲು, ಸ್ವಾಮಿಗಳಿಂದ, ‘ ಪತ್ನಿಯ ಜ್ವರ ಪೂರ್ಣ ಕಡಿಮೆಯಾಗಿ, ಅವಳೇ ಮಗನ ಮುಂಜಿಯನ್ನು ಮಾಡುವಳು’, ಎಂಬ ಆಶ್ವಾಸನೆ ಸಿಕ್ಕಿತು. ಹಾಗೆಯೇ, ಉಪನಯನದ ವಟುಗಳ ತಲೆಯ ಮೇಲೆ ಹಾಕಲು ಅಕ್ಷತೆಯನ್ನೂ ಕೊಟ್ಟರು. ಅವರು ತಂದೆಯವರ ಅಂಗವಸ್ತ್ರದ ಸೆರಗಿಗೆ, ಅಕ್ಷತೆಯನ್ನು ಹಾಕುತ್ತಿರುವಾಗ, ಹಿಡಿದ ಕೈಜಾರಲು, ಅಂಗವಸ್ತ್ರದಲ್ಲಿದ್ದ ಎಲ್ಲ ಅಕ್ಷತೆಯೂ ನೆಲದ ಮೇಲೆ ಬೀಳಲು, ಮತ್ತೆ ಮಂತ್ರಾಕ್ಷತೆ ಕೊಟ್ಟರು ಮತ್ತು ‘ನಾಳೆ ಸಂಜೆ ಎಲ್ಲ ಮುಂಜಿ ಮಕ್ಕಳನ್ನು ಭಿಕ್ಷಾವಳಿಗೆ ಕರೆದುಕೊಂಡು ಬಾ’, ಎಂದು ಸ್ವಾಮಿಗಳು ಹೇಳಿದರು. ಹಾಗೆಯೇ, ಗುರುಭಕ್ತೆ ಗಂಗಕ್ಕಾ ತಡಗುಣಿಯವರಿಂದ ಕುಂಕುಮ ತೆಗೆದುಕೊಂಡು ತಾಯಿಯ ಹಣೆಯ ಬೆತ್ತಲೆಯಿಂದ ಪ್ರಾರಂಭಿಸಿ, ಕಾಲಿನ ಬೆರಳುಗಳವರೆಗೂ ಹಚ್ಚಲಿಕ್ಕೆ ಹೇಳಿದರು. ಅದರಂತೆ ಕುಂಕುಮ ಹಚ್ಚಿ, ಆ ಕುಂಕುಮದ ಪೊಟ್ಟಣವನ್ನು ತಾಯಿಯ ತಲೆದಿಂಬ ಕೆಳಗೆ ಇಟ್ಟರು.

ಮರುದಿನ, ಮಾಘ ವದ್ಯ ೨ ….
ಮುಚ್ಚ ಮುಂಜಾನೆ ಸುಮಾರು ನಾಲ್ಕು ಗಂಟೆಯ ಸಮಯ,’ ನೋಡೋಣ, ಆತನು ಹೇಗೆ ಮುಂಜಿ ನೆರವೇರಿಸುತ್ತಾನೆ?’, ಎಂದು ದೊಡ್ಡ ಧ್ವನಿಯ ಮಾತು ನನಗೆ ಕೇಳಿಸಿತು ಮತ್ತು ಅದಕ್ಕೆ ನಾನು, ‘ನನ್ನ ಗುರು ಸರ್ವಶಕ್ತಿವಂತರಾಗಿದ್ದಾರೆ. ಆತನು ಯಾರ ತಂತ್ರವನ್ನೂ ನಡೆಸಲು ಬಿಡುವದಿಲ್ಲ’, ಎಂದು ಹೇಳಿದೆ. ಆಗಲೇ ನನ್ನ ತಾಯಿಯ ಜ್ವರ ಸಂಪೂರ್ಣ ಇಳಿದಿತ್ತು. ನಂತರ ಅವಳು ಸ್ನಾನ ಮಾಡಿ ದೇವಪ್ರತಿಷ್ಠೆ ಸ್ಥಾಪಿಸಿದಳು ಮತ್ತು ಮುಂಜಿಯಲ್ಲೂ ಸಂಪೂರ್ಣ ಭಾಗವಹಿಸಿದಳು. ಅವಳ ಮುಖದ ಮೇಲೆ, ಅನಾರೋಗ್ಯದ ಚಿಹ್ನೆಯೂ ಕಾಣಿಸುತ್ತಿರಲಿಲ್ಲ. ಸಂಜೆಮುಂದೆ, ಮುಂಜೀಮಕ್ಕಳನ್ನು ಸ್ವಾಮಿಗಳ ಕುಟಿಗೆ ಕರೆದುಕೊಂಡು ಹೋದರು. ಪ್ರತಿಯೊಬ್ಬರಿಗೂ ಭಿಕ್ಷಾವಳಿ ಹಾಕಿ, ಸ್ವಾಮಿಗಳು ಅತ್ಯಂತ ಸುಲಭ ರೀತಿಯಲ್ಲಿ, ಗಾಯತ್ರಿ ಮಂತ್ರದ ಅರ್ಥ ಹೇಳಿ, ಮಂತ್ರದ ಮಹತ್ವ ತಿಳಿಸಿಕೊಟ್ಟರು ಮತ್ತು ಮರುದಿನ ಬೆಳಿಗ್ಗೆ ಹತ್ತು ಗಂಟೆಗೆ ನನ್ನ ತಾಯಿಯನ್ನು ಕರೆದುಕೊಂಡು ಬರಲು ಹೇಳಿದರು. ಆ ಸಮಯದಲ್ಲಿ ಶ್ರೀಧರಾಶ್ರಮದ ಎಲ್ಲ ಕಾರ್ಯಕ್ರಮಗಳೂ ದುರ್ಗಾಂಬಾ ಮಂದಿರದ ಹತ್ತಿರದ ಚಂದ್ರಶಾಲೆಯಲ್ಲಿ ಆಗುತ್ತಿತ್ತು. ಅಲ್ಲಿಂದ ತೀರ್ಥಕುಟಿ, ಸುಮಾರು ಮುಕ್ಕಾಲು ಮೈಲು ಇದ್ದು, ವರದಗಿರಿಯ ಸುಮಾರು ಅರ್ಧದಷ್ಟು ಹತ್ತಬೇಕಾಗುತ್ತಿತ್ತು. ಮೂರು – ನಾಲ್ಕು ದಿನಗಳ ಜ್ವರದಿಂದ, ನನ್ನ ತಾಯಿಗೆ ಅಶಕ್ತತೆಯಾಗಿದ್ದದರಿಂದ ಅವಳು, ಆ ಏರು ಹತ್ತಿ ಹೋಗುತ್ತಾಳೋ ಇಲ್ಲವೋ ಎಂಬ ಅನುಮಾನವೆನಿಸಿತ್ತು. ಆದರೆ, ಗುರುಮಾಯಿಯ ಅಪ್ಪಣೆಯೇ ಇದ್ದುದರಿಂದ, ನಾನು, ನನ್ನ ತಾಯಿ ಮತ್ತು ತಂದೆ ಮೂವರೂ ಹೊರಟೆವು. ಆಗ ತೀರ್ಥಕುಟಿಯ ಕಡೆಗೆ ಹೋಗುವ ರಸ್ತೆ ದುರ್ಗಾಂಬಾಮಂದಿರದಿಂದ ಪರಮಾನಂದ ಕುಟಿ, ವೇದಪಾಠಶಾಲೆ ಈ ಮಾರ್ಗದಿಂದ ತೀರ್ಥಕುಟಿಗೆ ಬರುತ್ತಿತ್ತು. ಮಾರ್ಗದಲ್ಲಿ ಎರಡು ನೇರ ಏರಿದ್ದಿತ್ತು. (ಇಂದು ಪರಮಾನಂದ ಕುಟಿ, ವೇದಪಾಠಶಾಲೆ ಮತ್ತು ತೀರ್ಥಕುಟಿ, ಈ ಮೂರೂ ಮೂಲ ಕಟ್ಟಡಗಳಿಲ್ಲ) ಆದರೆ, ನನ್ನ ತಾಯಿ ಆ ಏರು ದಾರಿಯನ್ನು ಸಹಜವಾಗಿ ಏರಿದರು. ಗುರುಮಾತೆಯು ನಮ್ಮ ದಾರಿ ನೋಡುತ್ತಲೇ ಇದ್ದರು. ನನಗೆ ಮತ್ತು ನನ್ನ ತಂದೆಯವರಿಗೆ ಸ್ವಾಮಿಗಳು ಮತ್ತು ನನ್ನ ತಾಯಿಯ ನಡುವೆ ನಡೆಯುವ ಸಂಭಾಷಣೆ ಕೇಳಬರದಷ್ಟು ದೂರ ಹೋಗಲಿಕ್ಕೆ ಹೇಳಿದರು. ಅವರ ಸಂಭಾಷಣೆ ಸುಮಾರು ಒಂದು ತಾಸೇ ಆಗಿರಬೇಕು ‘ನೀನು ನಿನ್ನ ಸಂಗಡ ಬಹಳಿಷ್ಟು ನೆಂಟರನ್ನು ಕರೆದುಕೊಂಡು ಬಂದಿದ್ದೀಯೆ. ನಿಮಗೆ ಯಾರೊಂದಿಗಾದರೂ ಜಗಳ ಮೊದಲಾದವು ಇವೆಯೇ? ನಿಮ್ಮ ಕಾರ್ಯ ಸುಸೂತ್ರವಾಗಿ ಆಗಬಾರದೆಂದು ನಿನ್ನ ಮೇಲೆ ದುಷ್ಟಶಕ್ತಿಯನ್ನು ಬಿಟ್ಟಿದ್ದರು’, ಎಂದು ನನ್ನ ತಾಯಿಗೆ ಹೇಳಿದರೆಂದು ನಂತರ ತಿಳಿಯಿತು. ಹಾಗೆಯೇ, ನನ್ನ ತಾಯಿಗೆ ಕೆಲ ವೇಳೆ, ‘ಕುಳಿತೇಳು’(ಉಠಾಬಸ್ಸ) ಮಾಡಲು ಹೇಳಿದರು. ಮರುದಿನ ನನ್ನ ತಂದೆ-ತಾಯಿ, ತಂಗಿ ಮೊದಲಾದವರೆಲ್ಲರೂ ಮನೆಗೆ ತಿರುಗಿ ಹೊರಟರು ಮತ್ತು ನಾವು ದಾಸನವಮಿವರೆಗೆ ಆಶ್ರಮದಲ್ಲಿ ಉಳಿದುಕೊಂಡೆವು. ನನ್ನ ತಾಯಿಗೆ ಮನೆಗೆ ಹಿಂತಿರುಗುತ್ತಿರುವಾಗ, ಪುಣೆವರೆಗೆ ತಲುಪಿದ ಮೇಲೆ ಮತ್ತೆ ಜ್ವರ ಬಂತು ಮತ್ತು ಅದು ಒಂದು ಒಂದೂವರೆ ತಿಂಗಳು ಹಾಗೆಯೇ ನಡೆದಿತ್ತು.

ಒಂದು ದಿನ …. ಮಧ್ಯಾಹ್ನ ನಾಲ್ಕು-ಐದು ಗಂಟೆ ಸುಮಾರಿಗೆ, ನನ್ನ ತಾಯಿಯ ಜ್ವರ ಒಮ್ಮೆಲೇ ಕೆಳಗಿಳಿಯಿತು ಮತ್ತು ಅವಳ ದೇಹ ತಣ್ಣಗಾಗಹತ್ತಿತು. ಅವಳಿಗೆ ಎಚ್ಚರತಪ್ಪಿತು. ಮೂಗಿನ ತುದಿ ತಣ್ಣಗಾಯಿತು ಮತ್ತು ಡೊಂಕಾಯಿತು. ಕಣ್ಣು ಹೆಪ್ಪುಗಟ್ಟಿದಂತಾಯಿತು. ಆಗ ವೈದ್ಯಕೀಯ ವಿದ್ಯೆ ಓದುತ್ತಿದ್ದ ನನ್ನ ತಮ್ಮ ತಾಯಿಯ ಸಂಗಡ ಇದ್ದನು. ಅವನು ಥರ್ಮಾಮೀಟರ ಹಚ್ಚಿ ದೇಹದ ಉಷ್ಣತೆ ನೋಡಲು ಪ್ರಯತ್ನಿಸಿದನು. ಆದರೆ ಥರ್ಮಾಮೀಟರ ಉಷ್ಣತೆಯನ್ನು ತೋರಿಸಲು ಅಸಮರ್ಥವಾಯಿತು. ನಾಡಿ ಮತ್ತು ಎದೆಯ ಬಡಿತವೂ ನಿಂತಿತು. ಇದನ್ನು ನೋಡಿದ ಅವನು ಗಾಭರಿಗೊಂಡು, ‘ಆಯಿ ಹೋದಳು’, ಎಂದು ಚೀರುತ್ತಾ, ಆತನು ಮೇಲಿನ ಮಾಳಿಗೆಯ ಗೆಲರಿಯಿಂದ ೮-೧೦ ಅಡಿ ಕೆಳಗೆ ಧುಮುಕಿ, ಡಾಕ್ಟರರ ಬಳಿ ಓಡುತ್ತ ಹೋದನು ಮತ್ತು ಮನೆಯ ಎಲ್ಲ ಜನರು ನನ್ನ ತಾಯಿಯ ಮಂಚದ ಸುತ್ತ ಮುತ್ತಿದರು. ನನ್ನ ವೃದ್ಧ ಅಜ್ಜನು ನನ್ನ ತಾಯಿಯ ನಾಡಿ ಹಿಡಿದು ನೋಡಿ, ‘ಅರೇ! ಇವಳು ಹೋಗೇ ಬಿಟ್ಟಳು’, ಎಂದು ದು:ಖೋದ್ಗಾರ ತೆಗೆದರು. ನಾನೂ ಓಡುತ್ತ ಆಯಿಯ ಬಳಿಗೆ ಹೋದೆ ಮತ್ತು ಅವಳ ಪರಿಸ್ಥಿತಿ ನೋಡಿ, ಅವಳ ಕಾಲ ಮೇಲೆ ತಲೆಯನ್ನಿಟ್ಟು, ‘ಗುರುಮಾಯೀ! ಇದೇನಾಯಿತು?’, ಎಂದು ಹೇಳುತ್ತ, ಸ್ವಾಮಿಗಳನ್ನು ಬೇಡಿಕೊಂಡೆ. ಅಷ್ಟರಲ್ಲಿ, ಗುರುಮಾಯಿಯು ನನ್ನ ತಾಯಿಗೆ ಕೊಟ್ಟ ಕುಂಕುಮದ ಪೊಟ್ಟಣ ಅವಳ ತಲೆದಿಂಬಿನ ಕೆಳಗೆ ಇಟ್ಟಿದ್ದು ನೆನಪಾಗಿ, ನಾನು ಆ ಕುಂಕುಮವನ್ನು ಆಯಿಯ ಹಣೆಯ ಬೆತ್ತಲೆಯಿಂದ ಕಾಲಂಗುಲದವರೆಗೂ ಹಚ್ಚಿದೆ. ಕುಂಕುಮ ಹಚ್ಚುವಾಗ ಮಾಳಿಗೆಯ ಮೆಟ್ಟಲುಗಳ ಮೇಲೆ, ಪಾವಟಿಗೆಗಳ ಶಬ್ದಗಳ ಭಾಸವಾಯಿತು. ಕೆಲವೇ ಕ್ಷಣಗಳಲ್ಲಿ ನನ್ನ ತಾಯಿಯು, ಕಣ್ಣು ತೆರೆದು, ಶರೀರ ಅಲುಗಾಡಿಸಿದಳು ಮತ್ತು ಕ್ಷೀಣ ಸ್ವರದಲ್ಲಿ ‘ನಮಃ ಶಾಂತಾಯ …’ ಮಂತ್ರವನ್ನು ಸಾವಕಾಶ ಉಚ್ಚರಿಸಹತ್ತಲು, ನಂತರ ಪೂರ್ಣ ಎಚ್ಚರಗೊಂಡಳು. ಎಚ್ಚರಾಗುತ್ತಲೇ, ‘ಮಗಳೇ! ಸ್ವಾಮಿಗಳು ಬಂದಿದ್ದರಲ್ಲಾ! ಅವರು ನನ್ನ ಹಣೆಯ ಮೇಲೆ ಕೈಯಿಟ್ಟರು. ಅವರು ಈಗ ಎಲ್ಲಿಗೆ ಹೋದರು?’, ಎಂದು ನನ್ನ ತಾಯಿಯು ಹೇಳಲು, ನಮಗೆ ಪಾವಟಿಗೆಯ ಸದ್ದಿನ ಭಾಸವಾದದ್ದರ ಗೂಢ ಅರ್ಥವಾಯಿತು ಮತ್ತು ಆ ಪಾವಟಿಗೆಯ ಶಬ್ದ ಸ್ವಾಮಿಗಳ ಪಾವಟಿಗೆಯದಾಗಿತ್ತೆಂಬುದು ನಿಶ್ಚಯವಾಯಿತು. ಅಲ್ಲಿ ಉಪಸ್ಥಿತರಿದ್ದವರಿಗೆಲ್ಲರಿಗೂ, ‘ನಮಃ ಶಾಂತಾಯ …’ ಈ ಗುರುಮಂತ್ರವನ್ನು, ದೊಡ್ಡ ಧ್ವನಿಯಲ್ಲಿ ಹೇಳಲು ನನ್ನ ತಾಯಿಯು ಹೇಳಿದಳು. ಸ್ವಲ್ಪ ಸಮಯದಲ್ಲಿಯೇ, ನನ್ನ ತಮ್ಮ ಡಾಕ್ಟರರನ್ನು ಕರೆದುಕೊಂಡು ಬಂದನು. ಆಗ ಪರೀಕ್ಷಿಸಿದಾಗ, ಜ್ವರ ೧೦೨ ಡಿಗ್ರಿ ಇದ್ದು, ನಾಡಿ ಮತ್ತು ಎದೆಯ ಬಡಿತವು ವ್ಯವಸ್ಥಿತವಾಗಿರುವದು ಕಂಡುಬಂತು. ಈ ಎಲ್ಲ ಘಟನೆ ನಡೆಯುತ್ತಿರುವಾಗ, ನನ್ನ ತಂದೆ ಮನೆಯಲ್ಲಿರಲಿಲ್ಲ. ಆದರೆ, ಅವರಿಗೆ ಯಾರೋ, ‘ನಿಮ್ಮ ಮಗ ಮತ್ತು ಡಾಕ್ಟರ ಗಡಿಬಿಡಿಯಿಂದ ನಿಮ್ಮ ಮನೆಯ ಕಡೆಗೆ ಹೋಗುತ್ತಿದ್ದರು’, ಎಂದು ಹೇಳಿದ ಕೂಡಲೇ ಅವರು ಮನೆಗೆ ಬಂದರು. ಆಗಿಹೋದ ಘಟನೆಗಳನ್ನು ಕೇಳಿದ ಅವರ ಕಣ್ಣು ನೀರ್ತುಂಬಿಹೋಯಿತು ಮತ್ತು ಅವರು ಗದ್ಗದರಾಗಿ, ‘ಗುರುಮಾತೆಯ ಲೀಲೆ ಅಗಾಧವಾಗಿದೆ’, ಎಂದು ಹೇಳುತ್ತ ಸ್ವಾಮಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. |
ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ಮಾಘ, ೧೯೦೧ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img