Memories

46. ಸ್ವಾಮಿಗಳು ಮತ್ತು ಶ್ರೀಮತ್ ಗುಳವಣಿ ಮಹಾರಾಜರ ದಿವ್ಯಸಂಗಮ – ಭಾಗ ೨, ಎರಡೂ ವಿಭೂತಿಗಳ ಏಕರೂಪ

(ನಿರೂಪಣೆ : ಶ್ರೀಧರ ವರಶಿಷ್ಯ ಪೃಥ್ವೀರಾಜ ಭಾಲೇರಾವ ‘ಪರಮಾರ್ಥ’, ಡಿಸೆಂಬರ ಇಸವಿ ಸನ ೧೯೮೦ ರಿಂದ ಸಂಕಲಿತ)

ಸ್ವಾಮಿಗಳಿಂದ ಬೀಳ್ಕೊಂಡ ಗುಳವಣಿ ಮಹಾರಾಜರೊಂದಿಗೆ ನಾನೂ ಹೊರಗೆ ಬಂದೆ. ಅವರಿಗೆ ‘ಈಗ ಯಾವ ತಿಂಡಿ ತಿನ್ನುತ್ತೀರಿ?’, ಎಂದು ಮುಂತಾಗಿ ನಾನು ಕೇಳಿದೆ. ಆಗ ಅವರು, ತಡೆತಡೆದು ಮಾತನಾಡುತ್ತ, ‘ಈಗ ನನಗೆ ಏನೇನೂ ಬೇಡ. ನನ್ನ ಹೊಟ್ಟೆ ಎಂದೂ ತುಂಬದಿದ್ದಷ್ಟು ಇಂದು ತುಂಬಿದೆ. ಅದಲ್ಲದೇ, ಸ್ವಾಮಿಗಳು ಕೊಟ್ಟ ಹಣ್ಣು ಹಂಪಲ ಯಥೇಚ್ಛ ಇದೆ. ಈಗ ಏನೂ ಬೇಡ. ಸ್ವಲ್ಪ ಈ ಕಡೆ ಬನ್ನಿ. ನನಗೆ ನಿಮ್ಮೊಂದಿಗೆ ಏನೋ ಮಾತನಾಡುವದಿದೆ’, ಎಂದು ಸಣ್ಣ ಧ್ವನಿಯಲ್ಲಿ ಹೇಳಿ, ಅಂಗಳದಿಂದ ನನ್ನ ಕೈಹಿಡಿದು ಕರೆದುಕೊಂಡು ಹೊರಟರು. ಅಲ್ಲಿ ಇಲ್ಲಿ ಎಲ್ಲೆಲ್ಲಿಯೂ ಮಹಾರಾಜರ ಮತ್ತು ಸ್ವಾಮಿಗಳ ಭಕ್ತಸಮೂಹ ತುಂಬಿಕೊಂಡಿತ್ತು. ಅವರ ಡಾಕ್ಟರೂ ಆದ ಅವರ ಶಿಷ್ಯ, ಮಹಾರಾಜರ ಹಿಂದೆಯೇ ಬರಹತ್ತಲು, ಮಹಾರಾಜರು ಅವರಿಗೆ ಕೈಯಿಂದ ಸಂಜ್ಞೆ ಮಾಡಿ ಬರುವದು ಬೇಡವೆಂದು ಹೇಳಿದರು. ನಂತರ ನಾವಿಬ್ಬರೇ ತೋಟದ ತುದಿಯ ಒಂದು ಮರದ ಕೆಳಗೆ ಬಂದೆವು. ಹತ್ತಿರ ಯಾರೂ ಇಲ್ಲ, ಎಂದು ಖಾತ್ರಿಯಾದ ಮೇಲೆ ಮಹಾರಾಜರು ಅಲ್ಲಿ ನಿಂತುಕೊಂಡರು. ಕೆಲ ಕ್ಷಣ ಕಣ್ಣು ಮುಚ್ಚಿ ಸ್ತಬ್ಧರಾಗಿದ್ದ ಮಹಾರಾಜರು, ಕಣ್ಣು ತೆರೆದಾಗ, ಅವರ ಕಣ್ಣುಗಳಿಂದ, ಪ್ರೇಮಾಶ್ರುಗಳ, ಆನಂದಾಶ್ರುಗಳ ಧಾರೆ ಸುರಿಯುತ್ತಿದ್ದುದನ್ನು ನಾನು ನೋಡಿದೆ ಮತ್ತು ನನ್ನ ಕಣ್ಣುಗಳೂ ಒದ್ದೆಯಾದವು. ನಂತರ ಅವರು ನನ್ನನ್ನು ಗಟ್ಟಿಯಾಗಿ ಅಪ್ಪಿಕೊಂಡರು. ಆ ಅಪ್ಪುಗೆಯಿಂದ ನನ್ನನ್ನು ಬಿಡಿಸಿಕೊಂಡು ನಾನು ಅವರಿಗೆ ನಮಸ್ಕರಿಸಿದೆ. ಮಹಾರಾಜರು ನನ್ನನ್ನೆಬ್ಬಿಸಿದರು. ಅವರ ಆ ಪ್ರಶಾಂತ ಭಾವ, ಪ್ರಸನ್ನ ಮುಖಚೆಹರೆಯನ್ನು ನೋಡಿ ನಾನು, ‘ತಮಗೆ ಆನಂದವಾಯಿತಲ್ಲಾ?’, ಎಂದು ಕೇಳಿದೆ. ಆಗ ಅವರು, ‘ನನಗೆ ಇಂದು ಎಷ್ಟು ಆನಂದವಾಯಿತು, ಎಂದು ಹೇಳಲು, ಶಬ್ದಗಳೇ ಇಲ್ಲ’ ಎಂದು ಹೇಳುತ್ತ ಮತ್ತೆ ಭಾವಪರವಶರಾದರು. ನಾನು, ‘ತಮಗೆ ಪುಣೆಯಿಂದ ಹೊರಬೀಳಬಾರದೆಂದು, ಡಾಕ್ಟರರ ಕಟ್ಟಪ್ಪಣೆಯಿತ್ತು. ಹೀಗಿರುವಾಗ, ನೀವು ಇಲ್ಲಿಗೆ ಬರುವದು ಹೇಗೆ ಶಕ್ಯವಾಯಿತು?’ ಎಂದು ಪ್ರಶ್ನೆ ಮಾಡಿದೆ. ಆಗ ಮಹಾರಾಜರು, ‘ಅದನ್ನೇ ಹೇಳಲು ನಿಮ್ಮನ್ನು ಇಲ್ಲಿ ಒಂದು ಬದಿಗೆ ಕರೆದುಕೊಂಡು ಬಂದೆ. ಏಕೆಂದರೆ, ಆ ವಿಷಯ ಎಲ್ಲರ ಮುಂದೆ ಹೇಳುವಂತೆ ಇಲ್ಲ’ ಎಂದು ಹೇಳಿದರು. ನಂತರ ದೀರ್ಘ ಶ್ವಾಸ ತೆಗೆದುಕೊಂಡು ತಮ್ಮ ಭಾವಪರವಶತೆಯನ್ನು ನಿಯಂತ್ರಿಸುತ್ತ, ನಿಂತು ನಿಂತು ಶಬ್ದಗಳು ಅವರ ಸದ್ಗದಿತ ಕಂಠದಿಂದ ಹೊರಬರುತ್ತಿರಲು, ಹೇಳಹತ್ತಿದರು…. “ನೀವು ನನಗೆ ನಿಮಂತ್ರಣ ಕೊಟ್ಟಾಗ ನಾನು ಹೀಗೆ ವಿಚಾರ ಮಾಡಿದೆ, ‘ಪೂಜ್ಯ ಟೇಂಬೇ ಮಹಾರಾಜರಂತಹ ತ್ರೈಲೋಕ ವಿಖ್ಯಾತ ಮತ್ತು ಸರ್ವ ಸಮರ್ಥ ಸದ್ಗುರು ನನ್ನ ಬೆನ್ನ ಹಿಂದೆ ಇರುವಾಗ ಇತರ ಸನ್ಯಾಸಿಗಳ ದರ್ಶನಕ್ಕೆ ಹೋಗುವದಕ್ಕೆ ನನಗೆ ಕಾರಣವಾದರೂ ಏನಿದೆ?’ ಮತ್ತು ಆ ವಿಚಾರಗಳಿಂದ ನಾನು ನಿಮಂತ್ರಣವನ್ನು ಉಪೇಕ್ಷೆಮಾಡಿ ಸುಮ್ಮನುಳಿದೆ. ಆದರೆ, ಇಂದು ಉಷಃಕಾಲದಲ್ಲಿ ಮಹದಾಶ್ಚರ್ಯ ಘಟಿಸಿತು. ಕಳೆದ ೩೫ ವರ್ಷಗಳಲ್ಲಿ ಎಂದೂ ಬರದ ಟೇಂಬೇ ಸ್ವಾಮಿಗಳು ಅಕಸ್ಮಾತ್ ಇಂದು ಮುಚ್ಚ ಮುಂಜಾನೆ ನನ್ನ ಸ್ವಪ್ನದಲ್ಲಿ ಬಂದರು ಮತ್ತು ಸ್ಪಷ್ಟ ದರ್ಶನ ಕೊಟ್ಟರು. ಆ ಸ್ವಪ್ನದಲ್ಲಿ ಅವರು ದೇಹಧಾರಿಗಳಾಗಿ ಪ್ರತ್ಯಕ್ಷ ಇದ್ದಂತೆ ಅಂತಃಸಂವೇದನೆಯಿತ್ತು. ಅವರನ್ನು ಕಂಡೊಡನೆಯೇ ನಾನು ಲಗುಬಗೆಯಿಂದ ಮುಂದೆ ಹೋಗಲು, ಅವರು ಒಂದು ಖುರ್ಚಿಯ ಮೇಲೆ ಕುಳಿತಿರುವಂತೆ ಕಂಡಿತು. ಸ್ವಪ್ನದಲ್ಲಿ ನಮ್ಮ ಮಹಾರಾಜರು ಖುರ್ಚಿಯ ಮೇಲೆ ಅದೆಂತು ಕುಳಿತಿದ್ದರು, ಎಂಬುದನ್ನು ವಿಚಾರ ಮಾಡಿ ಆಶ್ಚರ್ಯವೆನಿಸಿತು. ಏಕೆಂದರೆ, ಅವರು ಯಾವಾಗಲೂ ದರ್ಭಾಸನ, ವ್ಯಾಘ್ರಾಸನ ಇತ್ಯಾದಿಗಳ ಮೇಲೇ ಕುಳಿತುಕೊಳ್ಳುತ್ತಿದ್ದರು. ಖುರ್ಚಿ ಅವರಿಗೆ ವರ್ಜ್ಯವಾಗಿತ್ತು. ನಾನು ಅವರ ಬಳಿಗೆ ಭಾವಪರವಶನಾಗಿ ಹೋಗಹತ್ತಲು, ಅವರ ಸುತ್ತಮುತ್ತ ಕನ್ನಡ ಮಾತನಾಡುವ ಅಸಂಖ್ಯ ಶಿಷ್ಯವರ್ಗ ಕಂಡರು. ಈ ವಿಷಯದ್ದೂ ನನಗೆ ಅಚ್ಚರಿಯಾಯಿತು. ಏಕೆಂದರೆ, ಅವರ ಸುತ್ತಮುತ್ತ ಮಹಾರಾಷ್ಟ್ರೀಯ ಮತ್ತು ಗುಜರಾಥೀ ಶಿಷ್ಯವರ್ಗಗಳೇ ಇರುತ್ತಿದ್ದವು. ಟೇಂಬೇ ಮಹಾರಾಜರು ನನ್ನನ್ನು ಮೃದುವಾಗಿ, ಮೇಲಿಂದಲೇ ಹಿಡಿದು, ಗಾಢ ಆಲಿಂಗನ ಮಾಡಿದರು. ನಂತರ ಸ್ವಲ್ಪ ಸಮಯ ಅತಿಶಯ ಆನಂದದಿಂದ ನತಮಸ್ತಕನಾಗಿ ನಾನು ಅವರ ಕಾಲಬುಡದಲ್ಲಿ ಕುಳಿತೆ. ಬಲು ವರ್ಷಗಳು ದಾರಿಕಾದ ಮೇಲೆ ಈ ಸದ್ಗುರು ದರ್ಶನದ ವಿಶಿಷ್ಟ ಯೋಗ ಲಭಿಸಿತು. ನಂತರ, ಟೇಂಬೇ ಮಹಾರಾಜರು, ‘ಒಳ್ಳೇದು! ಇನ್ನು ಬಾ, ಆಯಿತಾ’, ಎಂದು ಅವರು, ಯಾವಾಗ ಬೀಳ್ಕೊಟ್ಟರೋ, ಆಗ ನಾನು ಏಳುತ್ತಿರಲು, ಅತ್ಯಂತ ಪ್ರೇಮಪೂರ್ವಕ ದೃಷ್ಟಿಯಿಂದ ನೋಡುತ್ತ ನನ್ನನ್ನು ಅಪ್ಪಿಕೊಂಡು, ಕಿವಿಯಲ್ಲಿ ಏನೋ ಪಿಸುಮಾತು ಹೇಳಿದರು. ಅಷ್ಟರಲ್ಲಿ ನನಗೆ ಎಚ್ಚರವಾಯಿತು. ಇದು ಸ್ವಪ್ನವೋ ಅಥವಾ ಜಾಗೃತಾವಸ್ಥೆಯದೋ ಎಂದು ಒಂದು ಕ್ಷಣ ನನಗೆ ತಿಳಿಯಲೇ ಇಲ್ಲ. ಇಷ್ಟು ಈ ದೃಷ್ಟಾಂತದ ಪ್ರಭಾವ ನನ್ನ ಮನಸ್ಸಿನಲ್ಲಿ ಆಳದವರೆಗೆ ಇಳಿದಿತ್ತು. ಪೂರ್ಣ ಎಚ್ಚರವಾದ ಮೇಲೆ ನೋಡಿದರೆ, ಆಗ ಬೆಳಿಗ್ಗೆ ೪.೩೦ ಗಂಟೆಯಾಗಿತ್ತು. ನಂತರ ಎದ್ದು ಒಂದು ಕ್ಷಣ ಧ್ಯಾನ ಮಾಡಿದೆ ಮತ್ತು ಸ್ವಪ್ನ ದೃಷ್ಟಾಂತದ ವಿಚಾರ ಮಾಡಹತ್ತಿದೆ. ಆಗ, ಮನಸ್ಸಿನಲ್ಲಿ ಕಲ್ಪನೆ ಅಥವಾ ಭಾವಿಸಿಯೂ ಇರದೇ, ನೀವು ಮತ್ತು ನೀವು ಆಮಂತ್ರಣ ಕೊಟ್ಟಿದ್ದು ಮನಸ್ಸಿನಲ್ಲಿ ಬಂತು. ಇದು ಮನಸ್ಸಿನಲ್ಲಿ ಬಂದ ಕೂಡಲೇ, ಹೇಗೆ ಸಿಕ್ಕು ಸಿಕ್ಕಾದ ಗಂಟು ಬಿಡಿಸಿಕೊಳ್ಳುವದೋ, ಅದೇ ರೀತಿ ಸ್ವಪ್ನದಲ್ಲಿಯ ಸೂಚನೆ ಒಮ್ಮೆಲೇ ತಿಳಿದುಬಂತು. ನೀವು ಆಮಂತ್ರಣ ಕೊಡುವದು ಮತ್ತು ಸದ್ಗುರುವಿನ ಸುತ್ತಮುತ್ತ ಕನ್ನಡಿಗ ಭಕ್ತಜನರಿರುವದು, ಅಂದರೆ, ‘ಶ್ರೀ ಶ್ರೀಧರಸ್ವಾಮಿಗಳ ದರ್ಶನಕ್ಕೆ ಹೋಗು’, ಎಂದು ಟೇಂಬೇ ಸ್ವಾಮಿಗಳ ಸಂಕೇತವಾಗಿ ಕಾಣುತ್ತಿದೆ, ಎಂದು ನನ್ನ ಮನಸ್ಸಿಗೆ ನಿಶ್ಚಯವಾಯಿತು. ಆದಾಗ್ಯೂ, ಟೇಂಬೇಸ್ವಾಮಿ ಮತ್ತು ಶ್ರೀಧರ ಸ್ವಾಮಿ ಏಕರೂಪವೇ ಆಗಿದ್ದಾರೆ, ಎಂದು ಆಗೂ ನನಗೆ ಅನಿಸಲಿಲ್ಲ. ಅವರು ಒಂದು ವಿಭೂತಿಪುರುಷರಾಗಿದ್ದರಿಂದ ಅವರ ದರ್ಶನಕ್ಕೆ ಹೋಗು, ಎಂದು ಸದ್ಗುರುವಿನ ಆದೇಶವೆಂದಷ್ಟೇ ‘ಅರಿವಾಗಿತ್ತು.’ ನಂತರ ಕೂಡಲೇ ಹತ್ತಿರವಿದ್ದ ನನ್ನ ಜನರಿಗೆ ನಾನು, ‘ಸ್ನಾನ ಸಂಧ್ಯಾವಂದನೆ ಬೇಗನೆ ಮಾಡಿ. ನಾವು ಲೋಣಾವಳಕ್ಕೆ ಹೋಗಿ ಬರೋಣ’, ಎಂದು ಹೇಳಿದೆನು. ಆಗ ಅವರು ಅದಕ್ಕೆ ತಮ್ಮ ಒಮ್ಮೆಲೇ ಒಪ್ಪದೇ, ಡಾಕ್ಟರರಿಗೆ ತಕ್ಷಣ ಕರೆಯ ಕಳುಹಿಸಿದರು. ಸ್ವಲ್ಪ ಕಾಲದಲ್ಲಿಯೇ ಡಾಕ್ಟರ ಜನ ಬಂದರು. ಅವರೂ ಪ್ರವಾಸ ಬೇಡವೆಂದರು. ಆದರೆ, ನನ್ನ ನಿಶ್ಚಯ ಅಟಲವಾಗಿರುವದನ್ನು ನೋಡಿ, ಅವರು ಅಚ್ಚರಿಗೊಂಡು, ‘ಹಾಗಿದ್ದಲ್ಲಿ, ನಾವೂ ನಿಮ್ಮ ಸಂಗಡ ಬರುತ್ತೇವೆ’, ಎಂದು ಹೇಳಿದರು. ನಂತರ, ಆಹ್ನಿಕಾದಿಗಳನ್ನು ಬೇಗನೆ ಮುಗಿಸಿ, ನಾವು ಹೊರಟು ನೇರವಾಗಿ ಇಲ್ಲಿಗೆ ಬಂದೆವು. ಇನ್ನು ಇದರ ನಂತರ ಈಗ ಏನು ಹೇಳುವವನಿದ್ದೇನೋ ಅದು ತುಂಬಾ ಮಹತ್ವದ್ದಾಗಿದೆ. ಸ್ವಾಮಿಗಳು ವ್ಯಾಘ್ರಾಜಿನ ಖುರ್ಚಿಯ ಮೇಲೆ ಇಟ್ಟು ಅದರ ಮೇಲೆ ಕುಳಿತಿದ್ದದ್ದು ಪ್ರತ್ಯಕ್ಷ ಕಂಡಿತು; ಸುತ್ತಮುತ್ತ ಕನ್ನಡ ಜನರನ್ನೂ ನೋಡಿದೆ. ಸ್ವಾಮಿಗಳು ನನ್ನನ್ನು ಆಲಿಂಗಿಸಿ, ಅದೆಷ್ಟು ವಾತ್ಸಲ್ಯದೃಷ್ಟಿಯಿಂದ ನೋಡಿದರೋ, ಹಾಗೆಯೇ ನಿಖರವಾಗಿ ಅದೇ ರೀತಿ, ಸದ್ಗುರುವು ಸ್ವಪ್ನದಲ್ಲಿ ಮಾಡಿದ್ದರು ಮತ್ತು ಇದೆಲ್ಲಕ್ಕೆ ಕಳಸಪ್ರಾಯವಾದ ವಿಷಯವೇನೆಂದರೆ, ಟೇಂಬೇ ಸ್ವಾಮಿಗಳು ಸ್ವಪ್ನದಲ್ಲಿಯಾವ ವಾಕ್ಯವನ್ನು ನನ್ನ ಕಿವಿಯಲ್ಲಿ ಉಸಿರಿದ್ದರೋ, ಈಗ ಅದೇ ವಾಕ್ಯವನ್ನು ಪ್ರತ್ಯಕ್ಷವಾಗಿ ಸ್ವಾಮಿಗಳು ನನ್ನ ಕಿವಿಯಲ್ಲಿ ಹೇಳಿದರು ಮತ್ತು ಬೀಳ್ಕೊಡುವಾಗ, ‘ಈಗಾದರೂ ಸಂಜ್ಞೆ ಮನಗಾಣಿತಲ್ಲಾ?’ ಎಂದು ಹೇಳಿ ನಗುನಗುತ್ತ ಬಹಳ ಅರ್ಥಪೂರ್ಣ ನೇತ್ರ ಕಟಾಕ್ಷ ನನ್ನ ಕಡೆ ಬೀರಿದರು ಮತ್ತು ನಾನು ಅದರಲ್ಲಿ ಮುಳುಗಿಹೋದೆ. ಆಗ ನನಗೆ ಸಂಪೂರ್ಣವಾಗಿ ಅರ್ಥವಾಯಿತು, ಏನೆಂದರೆ, ಟೇಂಬೇ ಸ್ವಾಮಿಗಳು ಶ್ರೀಧರ ಸ್ವಾಮಿಗಳ ದರ್ಶನದ ಕೇವಲ ಆದೇಶವನ್ನಷ್ಟೇ ಅಲ್ಲ, ಅವರಿಬ್ಬರೂ ಸಂಪೂರ್ಣವಾಗಿ ಏಕರೂಪವಾಗಿರುವದನ್ನು ನಿಶ್ಚಿತವಾಗಿ ಸ್ಪಷ್ಟಪಡಿಸಿದರು ಮತ್ತು ಅದರಿಂದಾಗಿ ಟೇಂಬೇ ಸ್ವಾಮಿಗಳೇ ಶ್ರೀಧರ ಸ್ವಾಮಿಗಳ ರೂಪದಲ್ಲಿ ಇಂದು ತಿರುಗುತ್ತಾ ಇದ್ದಾರೆ, ಎಂದೇ ನನ್ನ ದೃಢ ಭಾವನೆ ಆಗಿದೆ. ಇನ್ನು ಮುಂದೆ ಯಾವಯಾವಾಗ ಸ್ವಾಮಿಮಹಾರಾಜ ಪುಣೆಯ ಸುತ್ತಮುತ್ತ ಬರುತ್ತಾರೋ, ಆವಾಗೆಲ್ಲ ನನಗೆ ಮದಲೇ ಸೂಚನೆ ಅವಶ್ಯ ಮಾಡುತ್ತಿರಿ. ಅವರ ದರ್ಶನದ ಒಂದೇ ಒಂದು ಸಂಧಿಯನ್ನು, ಒಂದೇ ಒಂದು ಸುಯೋಗವನ್ನು ನಾನು ಎಂದೂ ತಪ್ಪಿಸಿಕೊಳ್ಳುವದಿಲ್ಲ’ , ಎಂದು ಹೇಳಿ ಗುಳವಣಿ ಮಹಾರಾಜರು ನಂತರ ಪುಣೆಗೆ ತಿರುಗಿ ಹೋದರು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಚೈತ್ರ ೧೯೦೩, (ಇಸವಿ ಸನ ೧೯೮೧), ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img