Memories

48. ಸ್ವಾಮಿಗಳು ಮತ್ತು ಶ್ರೀಮತ್ ಗುಳವಣಿ ಮಹಾರಾಜರ ದಿವ್ಯ ಸಂಗಮ – ಭಾಗ ೪, ನಡುಗುವ ಚಳಿಯಲ್ಲಿ ಬಟ್ಟ ಬಯಲಿನಲ್ಲಿ ಬರಿಹೊಟ್ಟೆಯಲ್ಲಿ ೧೧ ತಾಸು ….

(ನಿರೂಪಣೆ : ಶ್ರೀಧರ ವರಶಿಷ್ಯ ಪೃಥ್ವೀರಾಜ ಭಾಲೇರಾವ ‘ಪರಮಾರ್ಥ’, ಡಿಸೆಂಬರ ಇಸವಿ ಸನ ೧೯೮೦ ರಿಂದ ಸಂಕಲಿತ)

ಡಿಸೆಂಬರ, ೧೯೬೬ … ಸ್ವಾಮಿಗಳು ಶ್ರೀ ದತ್ತಜಯಂತಿ ಉತ್ಸವವನ್ನು ನೆರವೇರಿಸಿ, ಹೋಶಂಗಾಬಾದಿನಿಂದ ಹೊರಟರು. ಸಜ್ಜನಗಡಕ್ಕೆ ಹೋಗುವಾಗ, ಮಾರ್ಗಮಧ್ಯ ಪುಣೆಯಲ್ಲಿ ಒಂದು ತಾಸು ನಿಲ್ಲುವದೆಂದು ನಿಶ್ಚಯಿಸಲಾಯಿತು. ಪುಣೆ-ಸಾತಾರಾ ಮಾರ್ಗಕ್ಕೆ ತಾಗಿ, ಗುಲಟೇಕಡಿ ಮತ್ತು ಜಕಾತನಾಕೆಯ ಮಧ್ಯೆ ಬಯಲಿನಲ್ಲಿ (ಎಲ್ಲಿ ಈಗ ನಿರಂಜನಮಾಧವ ಗೃಹರಚನಾ ಸಂಸ್ಥೆಯಿದೆಯೋ) ನಿಲ್ಲುವರಿದ್ದರು. ನಾವೆಲ್ಲರೂ ಸಂಜೆ ಆರು ಗಂಟೆಗೆ ಅಲ್ಲಿ ಕೂಡಿದೆವು. ಸಾವಿರಾರು ಭಕ್ತಜನರು ದಾರಿಕಾಯುತ್ತ ಕುಳಿತಿದ್ದರು. ಶ್ರೀ ಗುಳವಣಿ ಮಹಾರಾಜರಂತೂ ಬಂದೇ ಇದ್ದರು. ತಾವು ಲೋಣಾವಳದಲ್ಲಿ, ‘ಸ್ವಾಮಿದರ್ಶನದ ಒಂದೇ ಒಂದು ಸಂಧಿಯನ್ನೂ ತಪ್ಪಿಸಿಕೊಳ್ಳುವದಿಲ್ಲ’, ಎಂದಾಡಿದ ನಿಶ್ಚಯಮಾತನ್ನು ಸಾರ್ಥಕಮಾಡಿ ತೋರಿಸುತ್ತಿದ್ದರು. ‘ಹೇಳಿದಂತೆ ನಡೆ’, ಎಂಬ ನುಡಿಗನುಸಾರವಾಗಿಯೇ ಶ್ರೇಷ್ಠ ಜನರ ಚರಿತ್ರೆ ಸಹಜವಾಗಿಯೇ ನಡೆಯುತ್ತಿರುತ್ತದೆ. ಇರಲಿ.
ಘೋರ ಚಳಿಗಾಲ …. ಅಸಂಖ್ಯ ಅಬಾಲವೃದ್ಧ ಸ್ತ್ರೀಪುರುಷರೆಲ್ಲರೂ, ಅಲ್ಲಿ ಆ ಬಟ್ಟ ಬಯಲಿನಲ್ಲಿ ತೀಕ್ಷ್ಣ ಚಳಿಯ ಆ ರಾತ್ರಿಯಲ್ಲಿ ನಡುಗುತ್ತಾ, ಸ್ವಾಮಿ ಆಗಮನದ ದಾರಿ ಕಾಯುತ್ತಾ ಕುಳಿತಿದ್ದರು. ಎಂಟು ಗಂಟೆಯಾಯಿತು. ಆದರೂ ಸ್ವಾಮಿಗಳ ಆಗಮನದ ಯಾವುದೇ ಚಿಹ್ನೆ ಕಾಣದಿರಲು, ನಾನು ಗುಳವಣಿ ಮಹಾರಾಜರಿಗೆ ನಮೃತೆಯಿಂದ, ‘ಪಾದಪೂಜೆ ಮತ್ತು ದರ್ಶನಾಂಕಾಕ್ಷೀ ಭಕ್ತಜನರು, ಮಾರ್ಗಮಧ್ಯದಲ್ಲಿ ಅಲ್ಲಲ್ಲಿ ಸ್ವಾಮಿಗಳನ್ನು ತಡೆದು, ಅವರೊಂದಿಗೆ ಇರಲು ಆಗ್ರಹ ಮಾಡುತ್ತಾರೆ, ಎನ್ನುವದಂತೂ ನನ್ನ ಪ್ರತಿಸಲದ ಅನುಭವವಾಗಿದೆ. ಅಂದರೆ ಅವರು ಇಲ್ಲಿಗೆ ಬರಲು ಮಧ್ಯರಾತ್ರಿಯಾಗಲೂ ಶಕ್ಯವಿದೆ. ಆದುದರಿಂದ ನನ್ನ ವಿನಂತಿಯೇನೆಂದರೆ, ತಾವು ಆಶ್ರಮಕ್ಕೆ ಈಗ ಹೋಗಿ, ಸಾಯಂಸಂಧ್ಯೆ ಮತ್ತು ಅಲ್ಪೋಪಹಾರ ಮುಗಿಸಿ, ನಂತರ ಮತ್ತೆ ತಿರುಗಿ ಇಲ್ಲಿ ಬರಬಹುದು!’ ಎಂದು ಹೇಳಿದೆನು. ನನ್ನ ಈ ಸೂಚನೆಗೆ, ಮಹಾರಾಜರು ಯಾವ ಸುನಿಶ್ಚಿತ ಉತ್ತರ ಕೊಟ್ಟರೋ, ಅದು ಎಲ್ಲ ಸಾಧಕರಿಗೆ ತಮ್ಮ ಹೃತ್ಪಟಲದಲ್ಲಿ ಕೊರೆದು ಇಟ್ಟುಕೊಳ್ಳುವಂತಿದೆ. ಗುಳವಣಿ ಮಹಾರಾಜರು, ‘ಸ್ವಾಮಿಗಳ ಬರುವ ಸಮಯ ಅನಿಶ್ಚಿತವಿದೆ, ಎಂದು ನೀವೇ ಹೇಳುತ್ತಿದ್ದೀರಿ. ಅದರರ್ಥ, ಅವರು ಯಾವುದೇ ಕ್ಷಣಕ್ಕೂ ಬರುವ ಶಕ್ಯತೆ ಇಲ್ಲವೆಂದು ಹೇಳಲಿಕ್ಕೆ ಬರುವದಿಲ್ಲ. ನಾನು ಸಾಯಂ ಉಪಾಸನೆಗೆ ಆಶ್ರಮಕ್ಕೆ ಹೋದೆನೆಂದೇ ತಿಳಿದುಕೊಳ್ಳಿ. ಆಗ, ‘ಅದೇ ವೇಳೆಗೆ ಒಂದಾನುವೇಳೆ ಸ್ವಾಮಿಗಳು ಇಲ್ಲಿಗೆ ಬಂದು ಹೋದರೇನಾಗುವದು?’ ಎಂಬ ವಿಚಾರವೇ ನನ್ನ ಮನಸ್ಸಿನಲ್ಲಿ ತುಂಬಿಕೊಂಡು ಇರುತ್ತದೆ. ಅದಕ್ಕಿಂತ ನಾನು ಹೀಗೆ ಇಲ್ಲಿಯೇ ಕುಳಿತಿರುತ್ತೇನೆ’ ಎಂದು ಉತ್ತರಿಸಿ, ಮುಂದುವರಿಸಿದರು, ‘ಇಂದು ಸ್ವಾಮಿದರ್ಶನ ಆಗುತ್ತದೆ, ಎಂಬ ಕಲ್ಪನೆಯಿಂದಲೇ ನನ್ನ ಹೊಟ್ಟೆ ಮೊದಲಿಂದಲೇ ತುಂಬಿ ತೃಪ್ತವಾಗಿದೆ. ಇನ್ನು ಉಳಿಯಿತು ನನ್ನ ಸಂಧ್ಯಾವೃತದ್ದು. ನಾನು ನಿಮಗೆ ಒಂದು ಮಹತ್ವದ ವಿಷಯ ಹೇಳಲಿಚ್ಛಿಸುತ್ತೇನೆ. ನನ್ನ ತುಂಬಾ ಸಣ್ಣ ವಯಸ್ಸಿನಿಂದಲೂ, ಮುಂಜಿಯಾದ ಮೇಲಿಂದಲೇ ಎನ್ನಿ, ಇಲ್ಲಿಯವರೆಗೂ, ಒಮ್ಮೆಯೂ ಪ್ರಾತಃಸಂಧ್ಯೆ ಅಥವಾ ಸಾಯಂಸಂಧ್ಯೆ ತಪ್ಪಿಸಿಲ್ಲ. ಇಷ್ಟು ಕಟ್ಟುನಿಟ್ಟಾಗಿ ಈ ನಿಯಮವನ್ನು ಪಾಲಿಸಿದ್ದೇನೆ. ಆದ್ದರಿಂದ, ಇಂದಿನ ಸಂಧ್ಯೆ ತಪ್ಪಿಹೋಗುವದೆಂದು ವಸ್ತುತಃ ಇದರ ಬಗ್ಗೆ ನನ್ನ ಮನಸ್ಸಿಗೆ ಅತ್ಯಂತ ಕಿರಿಕಿಕಿರಿಯಾಗಬೇಕಿತ್ತು. ಆದರೆ, ವಸ್ತುಸ್ಥಿತಿ ಮಾತ್ರ ಹೇಗಿದೆಯೆಂದರೆ, ನನ್ನ ಮನಸ್ಸು ತುಂಬಾ ಶಾಂತವಾಗಿದೆ. ಯಾವುದೇ ಪ್ರಕಾರದ ಕಿರಿಕಿರಿ ಅಥವಾ ಅಸ್ವಸ್ಥತೆ ಮನಸ್ಸಿನಲ್ಲಿ ಇಲ್ಲವೇ ಇಲ್ಲ. ಮತ್ತೂ ವಿಶೇಷವೇನೆಂದರೆ, ‘ಸ್ವಾಮಿದರ್ಶನವೋ ಸಂಧ್ಯಾವೃತವೋ’, ಎಂಬ ತುಲನಾತ್ಮಕ ತರಂಗವೂ ಕೂಡ ಮನಸ್ಸಿನಲ್ಲಿ ತಪ್ಪಿಯೂ ಕೂಡ ಏಳುತ್ತಿಲ್ಲ. ಇಷ್ಟು ಸ್ವಾಮಿದರ್ಶನದ ತೋಲ ಒಜ್ಜೆಯಾಗಿದೆ! ನನ್ನ ಸಂಧ್ಯೋಪಾಸನೆಯ ನಿಯಮಕ್ಕೆ ಇಂದು ಮೊದಲ ಬಾರಿ ಅಪವಾದವಾಗುವದಿದೆ. ಆದರೆ, ಅದು ಹಾಗಾಗುತ್ತಿದೆಯೆಂದು, ಅದರ ಬಗ್ಗೆ ಬೇಸರವೆನಿಸದೆ, ಅದಕ್ಕೆ ವಿರುದ್ಧವಾಗಿ, ಅದೇ ನನಗೆ ಭೂಷಣಾಸ್ಪದವೆನಿಸುತ್ತಿದೆ. ಅದರ ಕಾರಣವೇನೆಂದರೆ, ಸಾಕ್ಷಾತ್ ಸದ್ಗುರುಸ್ವರೂಪರಾಗಿರುವ ಸ್ವಾಮಿ ಮಹಾರಾಜ, ಯಾರ ಪಾವನ ದರ್ಶನವು, ಒಂದಾನುವೇಳೆ ಸಂಧ್ಯೋಪಾಸನೆಯನ್ನು ತಪ್ಪಿಸಿಯೇ ಆಗಬೇಕೆಂದಿದ್ದರೆ, ನಾನು ಸಂಧ್ಯಾವೃತವನ್ನು ಬೇಕಾದರೂ ಕೂಡ ಮುರಿಯುತ್ತೇನೆಯೇ ಹೊರತು, ಎಷ್ಟೇ ಬೆಲೆ ತೆತ್ತ ಬೇಕಾದರೂ ಈ ದರ್ಶನದ ಅವಕಾಶ ನಾನು ಬಿಡುವದಿಲ್ಲ! ಅದಲ್ಲದೇ, ‘ಗುರುಚರಣದ ಧ್ಯಾನ| ಅದೇ ನನ್ನ ಸಂಧ್ಯಾ ಸ್ನಾನ|’, ಈ ಉಕ್ತ್ಯಾನುಸಾರ ಇಲ್ಲಿ ಕುಳಿತಿದ್ದಾಗಲೇ ನನ್ನ ಮಾನಸಸಂಧ್ಯೆ ನಡೆಯುತ್ತಲೇ ಇದೆ!’ ಶ್ರೀ ಗುಳವಣಿ ಮಹಾರಾಜರ ಸಾಯಂಸಂಧ್ಯೋಪಾಸನೆ ಆ ದಿವಸ ತಪ್ಪಿತು. ಆದಾಗ್ಯೂ, ಅವರ ಮನಸ್ಸಿಗೆ ಅದರ ಬಗ್ಗೆ ಕಿರಿಕಿರಿಯೆನಿಸಲಿಲ್ಲ. ಅದಕ್ಕೆ ವಿರುದ್ಧವಾಗಿ ಸ್ವಾಮಿದರ್ಶನವಾಗುವದೆಂದು ಮನದಲ್ಲಿ ಉತ್ಸುಕತಾಯುಕ್ತ ಆನಂದವೇ ದಟ್ಟವಾಗಿ ಹಬ್ಬಿಕೊಂಡಿತ್ತು. ಗುಳವಣಿ ಮಹಾರಾಜರ ಚರಿತ್ರೆ ಬಲ್ಲ ಭಕ್ತರಿಗೆ ಈ ಘಟನೆ ತುಂಬಾ ಅರ್ಥಪೂರ್ಣವಾಗಿದೆ. ಇದಕ್ಕೆ ಪೂರಕವಾಗಿ ಗುಳವಣಿ ಮಹಾರಾಜರ ಜೀವನದ ಒಂದು ವಿಶೇಷ ಪ್ರಸಂಗವನ್ನಿಲ್ಲಿ ನಮೂದಿಸುತ್ತಿದ್ದೇನೆ. ಗುಳವಣಿ ಮಹಾರಾಜರ ದೀಕ್ಷಾಗುರು ಶ್ರೀ ಲೋಕನಾಥತೀರ್ಥ ಸ್ವಾಮಿಗಳು ಒಮ್ಮೆ ಕಾಶಿಯಲ್ಲಿ ಅಸ್ವಸ್ಥರಾಗಿದ್ದರು. ಆ ಸಮಯದಲ್ಲಿ ಶ್ರೀ ಗುಳವಣಿ ಮಹಾರಾಜ ಅವರ ಹತ್ತಿರ ಕುಳಿತು ಸುಶ್ರೂಷೆ ಮಾಡುತ್ತಿದ್ದರು. ಯಾವ ಕ್ಷಣದಲ್ಲಿ ಏನಾಗಬಹುದೋ ಎಂಬುದನ್ನು ಹೇಳಲಿಕ್ಕೆ ಬರುವದಿಲ್, ಎಂದು ವೈದ್ಯರು ಹೇಳಿದ್ದರು. ಆದಾಗ್ಯೂ, ಸಾಯಂಸಂಧ್ಯೆಯ ವೇಳೆ ಕಳೆಹತ್ತಿದೆ, ಎಂದು ಅರಿತಕೂಡಲೇ, ಮಹಾರಾಜರು ಒಳಗಿನ ಮಂಟಪ ಕೋಣೆಗೆ ಹೋದರು ಮತ್ತು ಸ್ವಲ್ಪದರಲ್ಲೇ ಸಂಧ್ಯೋಪಾಸನೆ ಮುಗಿಸಿ, ಮತ್ತೆ ಪುನಃ ತಮ್ಮ ಗುರುಗಳ ಹಾಸಿಗೆಯ ಹತ್ತಿರ ಬಂದು ಕುಳಿತರು. ಈ ಪ್ರಸಂಗದ ಪಾರ್ಶ್ವಭೂಮಿಯ ಮೇಲಿಂದ, ಗುಳವಣಿ ಮಹಾರಾಜರು, ಶ್ರೀ ಶ್ರೀಧರ ಸ್ವಾಮಿಗಳ ದಾರಿಕಾಯುತ್ತ, ತಮ್ಮ ನಿತ್ಯನೇಮವನ್ನು ಮುರಿದರು, ಎಂಬುದು ಶತಪಟ್ಟು ಅರ್ಥಗರ್ಭಿತವಾಗಿದೆ, ಎಂದು ಅನಿಸುವದಿಲ್ಲವೇ? ಮಹಾರಾಜರ ಆ ವರ್ತನೆಯು ಮಹಾನವೆಂದಷ್ಟೇ ಅಲ್ಲ ಅದರಲ್ಲಿ ಸರ್ವ ಶಾಸ್ತ್ರಗಳ ಸಾರವೇ ಒಳಗೊಂಡಿದೆ, ಎಂದು ಬೇರೆ ಹೇಳಬೇಕಾಗಿಲ್ಲ. ರಾತ್ರಿಯಾಗಹತ್ತಿತು … ಚಳಿಗಾಲದ ಮಧ್ಯಕಾಲ … ಬಟ್ಟ ಬಯಲು … ಸಣ್ಣ ಗಾಳಿ … ತೀಕ್ಷ್ಣ ಮೈಕೊರೆಯುವ ಚಳಿ… ಸ್ವಾಮಿಗಳ ಬರವು ನೋಡುತ್ತ ಭಕ್ತಜನ ಕುಳಿತಿದ್ದರು. ಎಷ್ಟೋ ಜನ ದಾರಿ ಕಾಯ್ದು ಬೇಸರ ಬಂದು ಹೊರಟು ಹೋದರು. ಕೆಲ ಜನ ತಮ್ಮ ತಮ್ಮ ಮನೆಗೆ ತೆರಳಿ, ಊಟ – ತಿಂಡಿ ಮುಗಿಸಿ ಮತ್ತೆ ತಿರುಗಿ ಬಂದರು. ಆದರೆ, ಗುಳವಣಿ ಮಹಾರಾಜರು ಮಾತ್ರ ಅಲ್ಲಿಂದ ಅಲುಗಾಡಲಿಲ್ಲ! ರಾತ್ರಿ ಹನ್ನೊಂದು ಗಂಟೆ ….

ಅಂತೂ ಶ್ರೀ ಶ್ರೀಧರ ಸ್ವಾಮಿಗಳ ಸವಾರಿ ಬಂದು ತಲುಪಿತು. ಗಾಡಿಯಿಂದ ಇಳಿಯುತ್ತಿದ್ದಂತೆಯೇ ಸ್ವಾಮಿಗಳು, ಮುಂದೆಯೇ ಗುಳವಣಿ ಮಹಾರಾಜರು ಚಳಿಯಲ್ಲಿ ನಡುಗುತ್ತ ಕುಳಿತಿರುವದನ್ನು ನೋಡಿದರೋ ಇಲ್ಲವೋ, ಓಡುತ್ತ ಅವರ ಬಳಿಗೆ ಬಂದರು ಮತ್ತು ಮೊಟ್ಟ ಮೊದಲು ತಮ್ಮ ಮೈಮೇಲಿದ್ದ ಶಾಲನ್ನು ಗುಳವಣಿ ಮಹಾರಾಜರ ಮೈಮೇಲೆ ಸರಿಯಾಗಿ ಹೊದೆಸಿ, ನಂತರ ಆಲಂಗಿಸಿಕೊಂಡಾದ ಮೇಲೆ, ಸ್ವಾಮಿಗಳು, ‘ಈಗ ಬೆಚ್ಚಗಾಯಿತಲ್ಲಾ?’ ಎಂದು ಕೇಳಿದರು. ಅದಕ್ಕೆ ಗುಳವಣಿ ಮಹಾರಾಜರು,’ತಮ್ಮ ದುರ್ಲಭ ಮತ್ತು ಪಾವನ ಆಲಿಂಗನದಿಂದಲೇ ಮೈ ಮನಸ್ಸು ಬೆಚ್ಚಗಾಯಿತು ಮತ್ತು ತಮ್ಮ ದರ್ಶನದಿಂದ ನಾನು ಧನ್ಯನಾದೆ. ಇಷ್ಟು ಹೊತ್ತು ಪ್ರತೀಕ್ಷೆ ಮಾಡಿದ್ದು ಸಾರ್ಥಕವಾಯಿತು’, ಎಂದು ಹೇಳಿದರು. ನಂತರ ಸ್ವಾಮಿಗಳು ನಮ್ಮ ಕಡೆ ತಿರುಗಿ, ‘ಚಳಿ ಎಷ್ಟು ತೀಕ್ಷ್ಣವಾಗಿದೆ. ಮಹಾರಾಜರಿದು ಅತಿ ವೃದ್ಧಾವಸ್ಥೆ ಮತ್ತು ನೀವೆಲ್ಲಾ ನೋಡುತ್ತಾ ಸುಮ್ಮನೇ ಏಕೆ ಕುಳಿತಿದ್ದೀರಿ?’ ಎಂದು ಹೇಳಿ, ತಾವೇ ಸುತ್ತಮುತ್ತಲು ಇದ್ದ ಚೂರು-ಪಾರುಗಳನ್ನು ಹೆಕ್ಕಿ, ಒಟ್ಟುಮಾಡಹತ್ತಿದರು. ಆ ದೃಶ್ಯವನ್ನು ನೋಡಿದ ನಾವು ಕೂಡ ಲಗುಬಗೆಯಿಂದ ಮುಂದೆ ಬಂದೆವು ಮತ್ತು ಸ್ವಾಮಿಗಳಿಗೆ ಸಹಾಯ ಮಾಡಹತ್ತಿದೆವು. ನಂತರ ಸ್ವಾಮಿಗಳು ಸ್ವತಃ ಅಗ್ಗಿಷ್ಟಿಕೆ ತಯಾರು ಮಾಡಿದರು ಮತ್ತು ನಾವು ಬೆಂಕಿ ಹಚ್ಚಿ, ಕೈಕಾಸಲು ಅನುಮಾಡಿದೆವು. (ಸನ್ಯಾಸಿಗಳು ಅಗ್ನಿ ಪ್ರಜ್ವಲನ ಮಾಡುವದಿಲ್ಲ). ಅದಲ್ಲದೇ ಮತ್ತೊಂದು ಕಂಬಳಿ, ತರಿಸಿ, ಸ್ವಾಮಿಗಳು ಸ್ವಹಸ್ತದಿಂದ ಗುಳವಣಿ ಮಹಾರಾಜರ ಮೈಮೇಲೆ ಹೊದೆಸಿ, ಅತಿ ಪ್ರೇಮದ ದೃಷ್ಟಿ ಹರಿಸಿದರು. ಅದರ ನಂತರ, ತಣ್ಣೀರು ಸ್ನಾನಕ್ಕೆಂದು ಆ ಚಳಿಯ ಮಧ್ಯರಾತ್ರಿ, ಸ್ವಾಮಿಗಳು ಕೆರೆಯ ಕಡೆಗೆ ನಡೆದರು. ಮುಂದೆ ಆ ಸ್ಥಳದಲ್ಲಿ ರಾತ್ರಿಯಿಡೀ ಅನೇಕ ವಿಧದ ಮತ್ತು ಮಹತ್ವಪೂರ್ಣ ಕಾರ್ಯಕ್ರಮಗಳು ಸಂಪನ್ನವಾದವು. ಆದುದರಿಂದ ಸ್ವಾಮಿಗಳು ಬೆಳಿಗ್ಗೆ ಐದು ಗಂಟೆಗೆ, ಸಜ್ಜನಗಡಕ್ಕೆ ಹೋಗಲು ಅಲ್ಲಿಂದ ಹೊರಟರು. ಅಲ್ಲಿಯವರೆಗೆ, ಅಂದರೆ ಸುಮಾರು ಹನ್ನೊಂದು ತಾಸು, ವಯೋವೃದ್ಧ ಗುಳವಣಿ ಮಹಾರಾಜರು, ಆ ಅಲ್ಲಿಯ ತೀಕ್ಷ್ಣ ಚಳಿಯಲ್ಲಿ ಸ್ವಾಮಿದರ್ಶನ ಮತ್ತು ಸ್ವಾಮಿಸಾನಿಧ್ಯಕ್ಕಾಗಿ ಅತ್ಯಂತ ಸಹಿಷ್ಣುತಯಿಂದ ಮತ್ತು ಶಾಂತ ಭಾವದಿಂದ ಕುಳಿತಿದ್ದರು, ಎಂಬುದು ಸ್ವಾಮಿಭಕ್ತರು ಹೇಳಿ ಕೇಳಿ ಅರಿತುಕೊಳ್ಳಬೇಕಾದ ಒಂದು ಮಹತ್ವದ ವಿಷಯವೇ ಅಲ್ಲವೇ!

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಚೈತ್ರ ೧೯೦೩, (ಇಸವಿ ಸನ ೧೯೮೧), ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img