Memories

5. ದು:ಖೀ ಸಂಸಾರಿಗೆ ಪೀಡಾ ಪರಿಹಾರಾರ್ಥ ಅನುಷ್ಠಾನ ಮತ್ತು ತರುಣ ಪಾರಮಾರ್ಥಿಕ ಸಾಧಕನಿಗೆ ಫಲಶ್ರುತಿಯ ಶಂಕಾ ಸಮಾಧಾನ

(ನಿರೂಪಣೆ : ಅನಾಮಿಕ ಶ್ರೀಧರಭಕ್ತ)

ಶ್ರೀಸ್ವಾಮಿ ಮಹಾರಾಜರ ಸತ್ಸಂಗ ಮತ್ತು ಸಹವಾಸ ಕೇವಲ ನೈಮಿತ್ತಿಕ ಮತ್ತು ಸಂದರ್ಭಾನುಸಾರ ಮಾತ್ರ ಲಭಿಸಿದ್ದರಿಂದ ನನ್ನ ನೆನಪುಗಳ ಸಂಗ್ರಹ ಸೀಮಿತವಾಗಿದೆ. ಆದಾಗ್ಯೂ, ಈ ಕೆಳಗಿನ ಎರಡು ಪ್ರಸಂಗಗಳು ನನ್ನ ಸಮಕ್ಷಮ ಘಟಿಸಲು, ಅವು ನನ್ನ ಚಿತ್ತದಲ್ಲಿ ಅಚ್ಚಾಗಿ ಕುಳಿತಿವೆ.

೧. ನಸರಾಪುರದ ಹತ್ತಿರದ ಬನೇಶ್ವರ ಕ್ಷೇತ್ರದಲ್ಲಿ ಮೌನವೃತದಲ್ಲಿದ್ದಾಗಿನ ಪ್ರಸಂಗ :

ಆಗ ಶ್ರೀಸ್ವಾಮಿಗಳ ಮೌನವೃತವಿತ್ತು. ಆದಾಗ್ಯೂ, ಕಾಮನಾಪೂರ್ತಿಗಾಗಿ ಸಾಂಸಾರಿಕ ಭಕ್ತರು ಸ್ವಾಮಿಗಳನ್ನು ಸುತ್ತುವರಿದು, ತಮ್ಮ ಪ್ರಶ್ನೆ – ಪ್ರಾರ್ಥನೆ ಮಾಡುತ್ತಿದ್ದರು. ಸ್ವಾಮಿಗಳು ಕೈಸನ್ನೆಯಿಂದಲೇ ಅವರೆಲ್ಲರ ಸಮಾಧಾನ ಮಾಡುತ್ತಿದ್ದರು. ಒಬ್ಬ ದುಃಖೀ ಜೀವಿಗೆ ಯಾವುದೋ ಅನುಷ್ಠಾನ ಹೇಳಬೇಕೆಂದು, ಸ್ವಾಮಿಗಳು ಎಡಗೈ ಮೇಲೆ ಬಲಗೈಯಿಂದ ಬರೆದು ತೋರಿಸಲು ಪ್ರಾರಂಭಿಸಿದರು. ಗು…ರು… ಚ… ಈ ರೀತಿ ಅಕ್ಷರಗಳನ್ನು ಸ್ವಾಮಿಗಳ ಬರೆಯುತ್ತ ಹೋದಂತೆ ಆ ವ್ಯಕ್ತಿ ಬರೆದದ್ದು ಅರ್ಥವಾಯಿತೆಂದು ತಿಳಿಸಲು ದೊಡ್ಡದಾಗಿ ಉಚ್ಚರಿಸುತ್ತಾ ಇದ್ದನು. ಆದರೆ ಆ ವ್ಯಕ್ತಿ ‘ಚ’ ಅಕ್ಷರದ ಉಚ್ಛಾರವನ್ನು ತಪ್ಪಾಗಿ ಮಾಡಲು, ಸ್ವಾಮಿಗಳು ಕ್ಷಣಕಾಲ ಸುಮ್ಮನೆ ಇದ್ದರು. ಅಷ್ಟರಲ್ಲಿ ಆ ಭಕ್ತ ಸಮೂಹದಲ್ಲಿದ್ದ ಒಬ್ಬ ಚುರುಕು ತರುಣನು, ಇದರ ಉಚ್ಛಾರವನ್ನು ಸಂಸ್ಕೃತದಲ್ಲಿನ ‘ಚ’ ದಂತೆ ಮಾಡಬೇಕೆಂಬುದನ್ನು ಗುರುತಿಸಿ ಮತ್ತು ಸ್ವಾಮಿಗಳು ಯಾವುದೋ ಅನುಷ್ಠಾನವನ್ನು ಸೂಚಿಸುತ್ತಿದ್ದಾರೆಂಬುದನ್ನು ಅರಿತು, ತಕ್ಷಣ ‘ಗುರುಚರಿತ್ರೆ’ ಎಂಬ ಶಬ್ದ ಉಚ್ಚರಿಸಿದನು! ಸ್ವಾಮಿಗಳು ಪ್ರಸನ್ನ ಮುದ್ರೆಯಿಂದ ಆ ತರುಣನ ಕಡೆ ನೋಡುತ್ತಾ ಏಳು ಬೆರಳುಗಳನ್ನು ತೋರಿಸಿ, ನಂತರ ಆ ಮೂಲ ಪ್ರಶ್ನಕರ್ತನಿಗೆ ಬೆರಳಿನಿಂದ ನಿರ್ದೇಶನ ಮಾಡಿ, ನಸುನಗುತ್ತ ‘ಇವನಿಗೆ ತಿಳಿಸಿ ಹೇಳು’ ಎಂದು ಹೇಳಿದರು.

೨. ಸಜ್ಜನಗಡದಲ್ಲಿ ಪಾರಮಾರ್ಥಿಕ ಸಾಧಕನಿಗೆ ಬೋಧನ :

ಶ್ರೀ ಕ್ಷೇತ್ರ ಸಜ್ಜನಗಡದ ಶ್ರೀಧರ ಕುಟಿಯಲ್ಲಿ ಶ್ರೀಮತ್ ಶ್ರೀಧರ ಸ್ವಾಮಿಗಳ ವಾಸ್ತವ್ಯವಿತ್ತು ಮತ್ತು ಅವರ ಮೌನವೃತವಿಲ್ಲದ ಸಮಯವಾಗಿತ್ತು. ಇದು ಒಂದು ರೀತಿಯ ಆನಂದ ಪರ್ವದಲ್ಲಿ ಲಭಿಸಿದ ದಿವ್ಯ ನೆನಪೆನ್ನಬಹುದು.
ಬ್ರಹ್ಮಚರ್ಯಾಶ್ರಮದ ನಂತರ ಒಮ್ಮೆಲೇ ಸನ್ಯಾಸ ದೀಕ್ಷೆ ಸ್ವೀಕರಿಸಬೇಕೆಂಬ ಒಬ್ಬ ಉತ್ಸಾಹೀ ತರುಣ ಸಾಧಕ, ಸ್ವಾಮಿಗಳಿಗೆ, ‘ಮಹಾರಾಜ! ನಾನು ರಾಮರಕ್ಷಾವನ್ನಲ್ಲದೇ ಅನೇಕ ಸಂಸ್ಕೃತ, ಪ್ರಾಕೃತ ಸ್ತೋತ್ರಗಳನ್ನು ಪ್ರತಿನಿತ್ಯ ಹೇಳುತ್ತೇನೆ. ಆ ಪ್ರತಿಯೊಂದು ಸ್ತೋತ್ರಗಳ ಕೊನೆಯಲ್ಲಿ ಫಲಶ್ರುತಿ ಇರುತ್ತದೆ. ಈ ಫಲಶ್ರುತಿಯ ಭಾವಾರ್ಥ ಬಹುಷಃ ಐಹಿಕ ಉತ್ಕರ್ಷ ಮೊದಲಾದ ಬಗ್ಗೆ ಇರುತ್ತದೆ. ಆ ಭಾಗ ಹೇಳ ಬೇಕಾದರೆ ನನ್ನ ಮನೋವೃತ್ತಿ ಅಸ್ವಸ್ಥವಾಗುತ್ತದೆ …’

ಸ್ವಾಮಿ ಮಹಾರಾಜರು ಆ ಮಾತುಗಳನ್ನು ತುಂಬಾ ಲಕ್ಷಪೂರ್ವಕ ಕೇಳುತ್ತಿದ್ದರು. ಸಾಧು ಸಂತರು ಸಕಲ ಪ್ರಾಣಿಮಾತ್ರರನ್ನು ಪ್ರೇಮದಿಂದ ನೋಡುತ್ತಾರೆ ಎಂಬುದು ಶತಪ್ರತಿಶತ ನಿಜವಾದರೂ, ಅವರು ‘ವಿಗತವಿಷಯವತ್ಸಲ’ನೆಂಬ ಸದ್ಗುರುರೂಪದಲ್ಲೇ ಹೆಚ್ಚಿನದಾಗಿ ಇರುತ್ತಾರೆ. ಆ ತರುಣ ಸಾಧಕನ ಅತ್ಯಂತ ಸೂಕ್ಷ್ಮ ಮತ್ತು ತೀವ್ರ ತಳಮಳ ಅವರ ಲಕ್ಷಕ್ಕೆ ಬಂತು ಮತ್ತು ತಕ್ಷಣ ಸಮಾಧಾನ ಮಾಡುವ ಸ್ಪಷ್ಟೀಕರಣ ಅವರ ಶ್ರೀಮುಖದಿಂದ ಪ್ರಕಟವಾಯಿತು.

‘ಮಗಾ! ನೀನು ಹೇಳುವ ವಿಚಾರವೇನೋ ಸರಿ ಇದೆ. ಯಾವ ಸಾಧಕನಿಗೆ ಐಹಿಕ ಸುಖ ಮತ್ತು ಆ ಸುಖದ ಸಾಧನಗಳನ್ನು ಪಡೆಯಬೇಕೆಂಬ ವಾಸನೆಯೇ ಇಲ್ಲದಿರುವಾಗ, ಅವನಿಗೆ ‘ಪುತ್ರ ಲಾಭವಾಗುತ್ತದೆ’, ‘ದೀರ್ಘಾಯುಷ್ಯ ಸಿಗುತ್ತದೆ’ ಎಂಬ ಫಲಶ್ರುತಿಯಿಂದೇನು ಪ್ರಯೋಜನ?’
‘ಆದರೆ ನೀನು ಇನ್ನು ಮುಂದೆ ಇದರಿಂದಾಗಿ ಅಸ್ವಸ್ಥನಾಗಬೇಕಾಗುವ ಕಾರಣವಿಲ್ಲ. ಸಮಗ್ರದರ್ಶಿ ಋಷಿ ಮುನಿಗಳ ಕಣ್ಣ್ಮುಂದೆ ನಿವೃತ್ತಿಮಾರ್ಗದ ಅಧಿಕಾರಿ ಜೀವಿಗಳೂ ಇರುತ್ತಾರೆ. ನಿರಿಚ್ಛ ಸಾಧಕನಿಗೆ ಆ ಋಷಿಗಳ ಸ್ತೋತ್ರ, ಫಲಶ್ರುತಿ ಮೊದಲಾದ ವಾಂಗ್ಮಯಗಳಲ್ಲಿ ಪಾರಮಾರ್ಥಿಕ ದೃಷ್ಟಿಯ ಅಭಿಪ್ರಾಯವನ್ನೇ ನೋಡಲು ಬರುತ್ತದೆ.

ಏತಾಂ ರಾಮಬಲೋಪೇತಾಂ ರಕ್ಷಾಂ ಯಃ ಸುಕೃತಿ ಪಠೇತ್|
ಸ ಚಿರಾಯುಃ ಸುಖೀ ಪುತ್ರೀ ವಿಜಯೀ ವಿನಯೀ ಭವೇತ್|

ಈ ಶ್ರೀರಾಮರಕ್ಷೆಯ ಫಲಶ್ರುತಿಯಲ್ಲಿರುವ ‘ಚಿರಾಯುಃ’ ಎಂಬ ಪದದ ಅರ್ಥವನ್ನು ‘ಎಲ್ಲಿ ಕಾಲದ ಸತ್ತೆ ನಡೆಯುವದಿಲ್ಲವೋ’ ಎಂಬ ಪರಮಾತ್ಮ ತತ್ವದ ಅರ್ಥವನ್ನು ತೆಗೆದುಕೊಳ್ಳಬೇಕು.

‘ಸುಖೀ’ ಅಂದರೆ ಸುಖರೂಪವೇ! ಆನಂದರೂಪ ಬ್ರಹ್ಮವೇ! ‘ಪುತ್ರೀ’ ಅಂದರೆ ಬುದ್ಧಿಯ ಗರ್ಭದಲ್ಲಿ ಹುಟ್ಟಿದ ‘ಆತ್ಮಬೋಧ’ವೇ ಪುತ್ರ, ಇದೊಂದು ಅಭಿಪ್ರಾಯವಾದರೆ, ಇನ್ನೊಂದು ರೀತಿ ‘ಪುತ್ರ’ ಅಂದರೆ ‘ಶಿಷ್ಯಪರಂಪರೆ’ ಎಂಬ ಒಂದು ಅರ್ಥವೂ ಆಗುತ್ತದೆ. ಹೀಗೆ ಅರ್ಥೈಸಿದಾಗ, ಇದರಲ್ಲೀಗ ವ್ಯಾವಹಾರಿಕ ಭಾಗವೆಲ್ಲಿ ಬರುತ್ತದೆ ಹೇಳು ನೋಡೋಣ!

‘ವಿಜಯೀ’ ಅಂದರೆ ವಿಷಯಗಳನ್ನು(ವಿಷಯಾಸಕ್ತಿಗಳನ್ನು) ಗೆದ್ದವನು ಮತ್ತು ‘ವಿನಯೀ’ ಪದದಲ್ಲಿನ ‘ನಮೃತೆ’ ಎಂಬ ಸರ್ವಪರಿಚಿತ ಅರ್ಥದೊಂದಿಗೆ, ‘ನಯ’ ಅಂದರೆ ‘ನೀತಿ’, ‘ಸನ್ಮಾರ್ಗ’ ಎಂಬ ಯಾವ ಅರ್ಥವಿದೆಯೋ, ಆ ಅರ್ಥದಲ್ಲಿ ‘ವಿನಯೀ’ ಪದವು, ‘ವಿಶೇಷ ನಯ’, ಅಂದರೆ, ‘ವಿಶೇಷತ್ವೇ ನೀತಿಮಾನ್’, ಹೆಚ್ಚಿನ ದಕ್ಷತೆಯಿಂದ, ತತ್ಪರತೆಯಿಂದ, ಸನ್ಮಾರ್ಗಗಾಮಿಯಾಗುತ್ತಾನೆ, ಎಂಬ ಅರ್ಥ ತೆಗೆದುಕೊಳ್ಳಬೇಕು.

ಈ ಅರ್ಥಗರ್ಭಿತ ಸ್ಪಷ್ಟೀಕರಣಗಳನ್ನು ಆ ಅಮೃತವಾಣಿಯಲ್ಲಿ ಕೇಳುತ್ತಾ, ಕೇಳುತ್ತಾ ‘ಛಿದ್ಯಂತೇ ಸರ್ವ ಸಂಶಯಾಃ’ ಎಂಬ ವಾಕ್ಯದ ಅನುಭವವನ್ನು ತೆಗೆದುಕೊಳ್ಳುತ್ತಾ, ಆ ಸಾಧಕನು, ಶ್ರೀಸ್ವಾಮಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತ, ತನ್ನ ಭಾವನೆಗಳನ್ನು ತನ್ನ ಕಣ್ಣುಗಳ ಆನಂದಾಶ್ರುವಿನ ರೂಪದಲ್ಲಿ ತೋರಿಸಿದನು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಸಂಚಿಕೆಗಳ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img