Memories

50. ಸ್ವಾಮಿಗಳ ಮಾಹೂರ ಯಾತ್ರೆ

(ನಿರೂಪಣೆ : ಅನಾಮಧೇಯ ಶ್ರೀಧರಭಕ್ತ)

ಸದ್ಗುರು ಭಗವಾನ ಶ್ರೀಧರ ಸ್ವಾಮಿಗಳು, ಶಕೆ ೧೮೮೧, ವಿಕಾರಿ ನಾಮ ಸಂವತ್ಸರದ ಮಾರ್ಗಶೀರ್ಷ ತಿಂಗಳಿನಲ್ಲಿ ಸಮರ್ಥ ಸೇವಾಮಂಡಳದ ಗಾಡಿಯಿಂದ ಸಜ್ಜನಗಡದಿಂದ ಭಾಗ್ಯನಗರಿಗೆ ಪ್ರಯಾಣ ಮಾಡಿದರು. ಅಲ್ಲಿ ಶ್ರೀದತ್ತ ಜನ್ಮೋತ್ಸವದ ಕಾರ್ಯಕ್ರಮ ಸಂಪನ್ನವಾದ ನಂತರ ಸ್ವಾಮಿಗಳ ವಾಸ್ತವ್ಯ ಮಾರವಾಡಿ ಧರ್ಮಶಾಲೆ ತುಳಸೀಭುವನದಲ್ಲಿತ್ತು. ಸುಮಾರು ಒಂದು ತಿಂಗಳ ನಂತರ ಸ್ವಾಮಿಗಳು ಶ್ರೀರೇಣುಕಾಮಾತೆಯ ದರ್ಶನಕ್ಕೆ ಮಾಹುರಗಡಕ್ಕೆ ಹೋಗಲು ನಿಶ್ಚಯಿಸಿದರು. ಸ್ವಾಮಿಗಳೊಂದಿಗೆ ಗಾಡಿಯಲ್ಲಿ ಗುರುಭಕ್ತ ಬಾಳಕೃಷ್ಣಬುವಾ ಅಷ್ಟೇಕರ, ಗೋಕರ್ಣದ ವೇದ ಶಾಸ್ತ್ರಸಂಪನ್ನ ದತ್ತಭಟ್ಟರು, ಶ್ರೀಮತಿ ಗಂಗಕ್ಕಾ, ಕು. ಲೀಲಾ(ಬಾಳೂತಾಯಿ) ಪೂಜಾರಿ ಮತ್ತು ಶ್ರೀ ಭವಾನರಾವ ನೇರ್ಲೀಕರರೂ ಇದ್ದರು ಮತ್ತು ಉಳಿದವರೆಲ್ಲಾ ಬಸ್ಸಿನಿಂದ ಹೊರಟರು.

ಈ ಪ್ರವಾಸ ಮಧ್ಯ ದಾರಿಯಲ್ಲಿ ಒಬ್ಬ ಬ್ರಾಹ್ಮಣ ಹೆಂಗಸು ಭಿಕ್ಕೆ ಬೇಡಲು ಗಾಡಿಯ ಹತ್ತಿರ ಬಂದಳು. ಅವಳ ಹಣೆಯಲ್ಲಿ ಕುಂಕುಮವಿರಲಿಲ್ಲ, ಕೈಯಲ್ಲಿ ಬಳೆಗಳಿರಲಿಲ್ಲ ಮತ್ತು ಕುತ್ತಿಗೆಯಲ್ಲಿ ಮಂಗಳಸೂತ್ರವಿರಲಿಲ್ಲ. ಅವಳು,’ನನ್ನ ಗಂಡನು ಅಸ್ವಸ್ಥನಾಗಿದ್ದು, ಅವನ ಉಪಚಾರಾರ್ಥ ನನಗೆ ಸಹಾಯ ಮಾಡಿರಿ’, ಎಂದು ಹೇಳಲು, ‘ನೀನು ಎಲ್ಲಿಯವಳು? ಬ್ರಾಹ್ಮಣನಾಗಿದ್ದೀಯಲ್ಲ! ಯಜಮಾನರಿಗೆ ಅನಾರೋಗ್ಯ ಎಂದು ಹೇಳುತ್ತಿದ್ದೀಯೆ, ಆದರೆ ನಿನ್ನ ಹಣೆಯ ಮೇಲೆ ಕುಂಕುಮವಿಲ್ಲ, ಕುತ್ತಿಗೆಯಲ್ಲಿ ಮಂಗಲಸೂತ್ರವಿಲ್ಲ ಮತ್ತು ಕೈಯಲ್ಲಿ ಬಳೆಗಳೂ ಇಲ್ಲ’, ಎಂದು ನಾವು ಕೇಳಲು, ಅವಳು ತನ್ನ ಕರ್ಮಕಥೆಯನ್ನು ಹೇಳಿದಳು. ದಟ್ಟ ದಾರಿದ್ರ್ಯದಿಂದ ಅವಳಿಗೆ ಈ ಸ್ಥಿತಿ ಬಂದಿರುವದು, ಸ್ವಾಮಿಗಳ ಲಕ್ಷಕ್ಕೆ ಬಂದು, ಅವರ ಮಾತೃ ಹೃದಯ ಕಳವಳಿಸಿತು ಮತ್ತು ಅವಳಿಗೆ, ಮಂಗಳಸೂತ್ರ, ಎರಡು ಸೀರೆ, ರವಕೆ ವಸ್ತ್ರ ಮತ್ತು ಇತರ ಪ್ರಾಪಂಚಿಕ ಖರ್ಚಿಗಾಗಿ ಎರಡು ನೂರು ರೂಪಾಯಿ ಕೊಡಿಸಿದರು. ಸ್ವಾಮಿಗಳು ಸ್ವತಃ ಹಣವನ್ನು ಮುಟ್ಟುತ್ತಿರಲಿಲ್ಲ. ಅವರ ಸಂಗಡ ಇರುವ ಜವಾಬ್ದಾರ ವ್ಯಕ್ತಿಯೊಬ್ಬರು ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಸ್ವಾಮಿಗಳ ಸೂಚನಾನುಸಾರ ಆ ವ್ಯಕ್ತಿಯು ಹಣವನ್ನು ಕೊಡುತ್ತಿದ್ದರು. ಆರ್ಥಿಕ ಸಹಾಯ ಸಿಕ್ಕಿ, ಆ ಹೆಂಗಸಿಗೆ ಆನಂದವಾಯಿತೇನೋ ನಿಜ; ಅದರೊಂದಿಗೆ, ಒಬ್ಬ ಮಹಾತ್ಮರ ಅನಾಯಾಸ ದರ್ಶನದಿಂದ ಆನಂದವು ದ್ವಿಗುಣಿತವಾಯಿತು. ಯಾವ ಜನ್ಮದ ಪುಣ್ಯಫಲವೋ ಯಾರಿಗೆ ಗೊತ್ತು?

ಆ ದಿನ ಸಾಯಂಕಾಲ ೫ – ೬ಗಂಟೆ ಸುಮಾರಿಗೆ ಮಾಹುರಗಡದ ಬುಡಕ್ಕೆ ಎಲ್ಲರೂ ತಲುಪಿದರು ಮತ್ತು ಅಲ್ಲಿ ಒಬ್ಬ ಇನಾಮದಾರರ ಮನೆಯಲ್ಲಿ ಎಲ್ಲರೂ ಉಳಿದುಕೊಂಡರು. ಆ ರಾತ್ರಿ ಸ್ವಾಮಿಗಳ ಫಲಾಹಾರ ಅಲ್ಲೇ ಆಯಿತು.

ಮರುದಿನ ಎಲ್ಲರೂ ಮಾಹುರಗಡ ಹತ್ತಿ ಹೋದರು. ಸ್ವಾಮಿಗಳ ಸಾನಿಧ್ಯದಿಂದ ಯಾರಿಗೂ ಏನೂ ತೊಂದರೆಯೆನಿಸಲಿಲ್ಲ. ಮಾಹುರಗಡದ ರೇಣುಕಾಮಾತೆ ಸ್ವಾಮಿಗಳ ಕುಲದೇವತೆಯು. ಹಾಗಾಗಿ ಅವಳ ದರ್ಶನದ ಎಳೆತ ಸ್ವಾಮಿಗಳಿಗೆ ಹೆಚ್ಚಾಗಿತ್ತು. ಸ್ವಾಮಿಗಳ ಬಾಲ್ಯದಲ್ಲಿ, ಸ್ವಾಮಿಗಳಿಗೆ ಮೈಲಿ ಆಗಿದ್ದಾಗ, ಸ್ವಾಮಿಗಳ ತಾಯಿ ಮಾಹುರಿನ ದೇವಿಗೆ ‘ನನ್ನ ಮಗನನ್ನು ರಕ್ಷಿಸಿದರೆ, ನಾನು ಅವನನ್ನು ನಿನ್ನ ಪಾದದ ಮೇಲೆ ಹಾಕುತ್ತೇನೆ’, ಎಂದು ಹೇಳಿಕೆ ಮಾಡಿಕೊಂಡಿದ್ದರು. ಅದನ್ನಿನ್ನೂ ಪೂರೈಸಿಲ್ಲವಾದ್ದರಿಂದಲೇ ಸ್ವಾಮಿಗಳು ಮಾಹೂರಿಗೆ ಬಂದರು. ಮೇಲೆ ತಲುಪಿದ ಮೇಲೆ, ಎಲ್ಲರೂ ಶ್ರೀ ದೇವಿಯ ಮಂದಿರದೊಳಗೆ ಹೋಗಿ, ಶಾಂತ ಮನಸ್ಕರಾಗಿ ದೇವಿಯ ದರ್ಶನ ಮಾಡಿ, ಎಲ್ಲರೂ ದೇವಿಯ ಜಯಕಾರ ಮಾಡಿದರು. ಸ್ವಾಮಿಗಳು ರೇಣುಕಾಮಾತೆಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಏಕಾಗ್ರತೆಯಿಂದ ರೇಣುಕಾಮಾತೆಯ ಕಡೆ ದೃಷ್ಟಿ ಇಟ್ಟಾಗ, ಆ ಭವ್ಯ ಮೂರ್ತಿಯ ಎರಡೂ ಕಣ್ಣುಗಳಿಂದ ಎರಡು ಅಶ್ರುಬಿಂದುಗಳು ಬೀಳುತ್ತಿದ್ದುದು ಎಲ್ಲರಿಗೂ ಕಾಣಿಸಿತು ಮತ್ತು ಎಲ್ಲರೂ ಆನಂದದಿಂದ ಗದ್ಗದರಾದರು. ಈ ಚಮತ್ಕಾರವನ್ನು ನೋಡಿ ಅಲ್ಲಿಯ ಪೂಜಾರಿ ಜನರೆಲ್ಲಾ ಆಶ್ಚರ್ಯಚಕಿತರಾದರು. ಶ್ರೀರೇಣುಕಾಮಾತೆಯ ಮಹಾಪೂಜೆಗಾಗಿ ಹೈದರಾಬಾದಿನಿಂದ ಸಪ್ತ ನದಿಗಳ ತೀರ್ಥ, ಶೇರುಗಟ್ಟಲೆ ಪಂಚಾಮೃತ, ಅರಿಶಿನ, ಕುಂಕುಮ, ಪೇಢೆ, ಬರ್ಫಿ, ವಿಧ ವಿಧದ ಹಣ್ಣು ಹಂಪಲಗಳು ಮೊದಲಾದ ಸಾಮಗ್ರಿಗಳನ್ನು ಹರಿವಾಣ ತುಂಬಿ ತುಂಬಿ ತಂದಿದ್ದರು. ದಾರಿಯಲ್ಲಿ, ನಿಜಾಮಬಾದಿನಲ್ಲಿ ಒಂದು ಭರ್ಜರಿ ಶಾಲನ್ನೂ ಕೊಂಡುಕೊಂಡಿದ್ದರು. ಅದನ್ನು ಪೂಜಾಕಾಲದಲ್ಲಿ ಶ್ರೀರೇಣುಕಾಮಾತೆಗೆ ಉಡಿಸಿದರು.

ತುಳಜಾಪುರದಂತೆ ಇಲ್ಲಿಯೂ ದೇವಿಯ ಪೂಜೆಯನ್ನು ಮಂದಿರದ ಪೂಜಾರಿಗಳೇ ಮಾಡುತ್ತಾರೆ. ಆದರೆ, ಸ್ವಾಮಿಗಳ ಅಲೌಕಿಕತ್ವದ ಪ್ರಭಾವ ಆ ಪೂಜಾರಿಗಳ ಮೇಲೆ ಆಗಿದ್ದರಿಂದ, ಸ್ವಾಮಿಗಳಿಗೆ ಮಾತೆಯ ಪೂಜೆ ಮಾಡಲು ಅವರು, ಏನೂ ಅಡಚಣಿ ಮಾಡಲಿಲ್ಲ. ಸ್ವಾಮಿಗಳು ಶಾಸ್ತ್ರೋಕ್ತವಾಗಿ ಮಹಾಪೂಜೆ ಮಾಡಿದರು. ದೇವಿಯ ಮುಂದಿನ ಮಂಟಪದಲ್ಲಿ ತಂದ ಮಿಠಾಯಿ ಮತ್ತು ಹಣ್ಣು ಹಂಪಲಗಳನ್ನು ಹರಿವಾಣಗಳಲ್ಲಿ ತುಂಬಿಟ್ಟಿದ್ದರು. ಅವುಗಳ ನೈವೇದ್ಯ ಮಾಡಲಾಯಿತು. ಮಹಾನೈವೇದ್ಯ ಮತ್ತು ಆರತಿಯ ಸಮಯದಲ್ಲಿ ಪೂಜಾರಿಗಳು ತಮ್ಮ ಹತ್ತಿರವಿದ್ದ ದಿನನಿತ್ಯ ನೈವೇದ್ಯಕ್ಕೆ ಉಪಯೋಗಿಸುವ ಹಿತ್ತಾಳೆಯ ತಟ್ಟೆ ಬಟ್ಟಲುಗಳನ್ನು ತಂದಿರುವದನ್ನು ನೋಡಿದ ಕೂಡಲೇ ಸ್ವಾಮಿಗಳು ತಮ್ಮ ಹತ್ತಿರವಿದ್ದ ಬೆಳ್ಳಿಯ ಬಟ್ಟಲು, ಎರಡು ಬೆಳ್ಳಿಯ ತಟ್ಟೆ ಮತ್ತು ತಂಬಿಗೆ ಶಿಷ್ಯರಿಂದ ಪೂಜಾರಿಗಳಿಗೆ ಕೊಡಿಸಿ, ‘ಇಂದಿನಿಂದ ಈ ಬೆಳ್ಳಿಯ ಪಾತ್ರೆಗಳಿಂದಲೇ ದೇವಿಗೆ ನೈವೇದ್ಯ ಮಾಡಿರಿ’, ಎಂದು ಹೇಳಿ, ಅದರಲ್ಲಿಯೇ ಮಹಾನೈವೇದ್ಯ ಬಡಿಸಿ ಕೊಟ್ಟರು. ಪೂಜೆಯ ಮತ್ತು ಅದರಲ್ಲಿಯೂ ಮಹಾನೈವೇದ್ಯದ ಹರಿವಾಣವನ್ನು ನೋಡಿ, ಪೂಜಾರಿಗಳಿಗೆ ಅತ್ಯಾನಂದ ಮತ್ತು ಆಶ್ಚರ್ಯವೂ ಆಯಿತು. ‘ಇಂದಿನ ಮಹಾಪೂಜೆಯಂತಹ ಪೂಜೆ ನಿಜವಾಗಿಯೂ ನಾವು ನಮ್ಮ ಆಯುಷ್ಯದಲ್ಲಿಯೇ ಮೊದಲ ಸಲ ನೋಡುತ್ತಿರುವದು ಮತ್ತು ದೇವಿಯ ವಿಭಿನ್ನ ಭಕ್ತರು ಆಗಾಗ ಮಹಾಪೂಜೆ ಮಾಡುತ್ತಾರೆ. ಅದರಲ್ಲಿ ರಾಜರು, ಮಂತ್ರಿಗಳು, ಸಂಸ್ಥಾನಿಕರು, ಜಹಾಗೀರದಾರರ, ಇನಾಮದಾರರು ಹಾಗೆಯೇ ದೊಡ್ಡ ದೊಡ್ಡ ಆಚಾರ್ಯರು, ಸನ್ಯಾಸಿಗಳೂ ಮೊದಲಾದವರೂ ಇರುತ್ತಾರೆ. ಆದರೆ, ಇಂದಿನ ಈ ಹಬ್ಬ ನಿಜವಾಗಿಯೂ ಅವರ್ಣನೀಯವಾಗಿದ್ದು, ಈ ಸ್ವಾಮಿಗಳಂತಹ ದಾತರನ್ನು ನಾವು ನಮ್ಮ ಆಯುಷ್ಯದಲ್ಲಿ ನೋಡಲಿಲ್ಲ’, ಎಂದು ಅವರು ಉದ್ಗಾರ ತೆಗೆದರು. ಆವಾಗಲೇ, ದೇವಿಯ ಎರಡೂ ಕಣ್ಣುಗಳಿಂದ ಅಶ್ರುಧಾರೆ ಹರಿಯಹತ್ತಿತು. ಈ ಚಮತ್ಕಾರವನ್ನು ನೋಡಿ ಎಲ್ಲರೂ ಉಚ್ಚಸ್ವರದಲ್ಲಿ ಜಗನ್ಮಾತೆಯ ಮತ್ತು ಸ್ವಾಮಿಗಳ ಜಯಜಯಕಾರ ಮಾಡಿದರು. ಸ್ವಾಮಿಗಳು ಎಷ್ಟೋ ಸಮಯ ಮಾತೆಯ ಕಣ್ಣೀರನ್ನು ಒರೆಸುತ್ತಲೇ ಇದ್ದರು. ನಂತರ ಬೆಳ್ಳಿಯ ಹರಿವಾಣದಲ್ಲಿ ದೇವಿಗೆ ಮಹಾನೈವೇದ್ಯ ಮಾಡಿ, ದೇವಿಯ ಮುಖದಲ್ಲಿ ವೀಳ್ಯವಿಡಲಾಯಿತು. ದೇವಿಯ ಮುಖದ ಅಧರದ್ವಯಗಳು ದೊಡ್ಡದಾಗಿ ಇರುವದರಿಂದ ಅದರಲ್ಲಿ ಐದು ನೂರಕ್ಕೂ ಹೆಚ್ಚು ವೀಳ್ಯದೆಲೆಗಳನ್ನು ಕುಟ್ಟಿ ಹಾಕಿದ್ದರು. ನಂತರ ಮಹಾ ಆರತಿಯಾಯಿತು.

ಅಲ್ಲಿಯ ವಾಸ್ತವ್ಯದ ಕಾಲದಲ್ಲಿ ಸ್ವಾಮಿಗಳು ಮಾಹುರಗಡದ ಶ್ರೀದತ್ತಸ್ಥಾನ, ಅನಸೂಯಾ ಶಿಖರ, ದೇವದೇವೇಶ್ವರ, ಕಾಳೀಸ್ಥಾನ ಮುಂತಾದ ಸ್ಥಳಗಳ ದರ್ಶನವನ್ನು ಮಾಡಿದರು.

ತಿರುಗಿ ಹೊರಡುವ ಸಮಯ ಜಗನ್ಮಾತೆಯಿಂದ ಬೀಳ್ಕೊಳ್ಳಲು, ಸ್ವಾಮಿಗಳು ಜಗನ್ಮಾತೆಯ ಹತ್ತಿರ ಕೈಜೋಡಿಸಿ ನಿಂತುಕೊಂಡಾಗ, ಮಾತೆಯ ಕಣ್ಣುಗಳಿಂದ ಮತ್ತೆ ಅಶ್ರು ಹರಿಯಹತ್ತಿತು ಮತ್ತು ಅದನ್ನು ನೋಡಿ ಸ್ವಾಮಿಗಳೂ ಅಳಹತ್ತಿದರು. ದೇವಸ್ಥಾನದಿಂದ ಸ್ವಾಮಿಗಳ ಹೆಜ್ಜೆ ಕೀಳಲಾಗುತ್ತಿರಲಿಲ್ಲ. ಬಹಳ ಕಷ್ಟಪಟ್ಟು ತಮ್ಮ ಕಣ್ಣೊರಿಸಿಕೊಂಡು ಸ್ವಾಮಿಗಳು ದೇವಸ್ಥಾನದ ಹೊರಗೆ ಬಂದರು ಮತ್ತು ಎಲ್ಲರೂ ಗಡ ಇಳಿಯಹತ್ತಿದರು. ಅರ್ಧಮಾರ್ಗ ಕ್ರಮಿಸಿದ ಮೇಲೆ ಸ್ವಾಮಿಗಳು ಸಹಜವಾಗಿ ಹಿಂದಿರುಗಿ ನೋಡಲು, ಅವರಿಗೆ ರೇಣುಕಾಮಾತೆಯ ಪ್ರಭೆ ತಮ್ಮ ಹಿಂದೆ ಬರುತ್ತಿರುವದು ಕಾಣಿಸಿತು ಮತ್ತು ರೇಣುಕಾಮಾತೆಯ ಮಾತೃಪ್ರೇಮವನ್ನು ನೋಡಿ, ಹೊಮ್ಮಿದ ತಮ್ಮ ಬಿಕ್ಕಳಿಕೆಯನ್ನು ತಡೆಯಲು ಅವರಿಗೆ ಅಶಕ್ಯವಾಯಿತು. ಸ್ವಾಮಿಗಳ ಸಂಗಡವಿದ್ದ ಜನರಿಗೆ ಈ ಪ್ರಭಾವಲಯ ಕಾಣದೇ ಹೋದರೂ, ಮಾನವರ ಹೆಜ್ಜೆಗಿಂತಲೂ ದೊಡ್ಡ ಎರಡು ಹೆಜ್ಜೆಯ ಗುರುತು ಆ ಮಣ್ಣಿನಲ್ಲಿ ಎದ್ದಿದ್ದನ್ನು ಎಲ್ಲರೂ ನೋಡಿದರು ಮತ್ತು ಅದಕ್ಕೆ ನಮಸ್ಕಾರ ಮಾಡಿದರು. ನಂತರ ಸ್ವಾಮಿಗಳು ಅತ್ಯಂತ ಭಾರವಾದ ಹೃದಯದಿಂದ ಮಾತೆಗೆ,’ಮಾತೇ! ನೀನು ನಿನ್ನ ಸ್ಥಾನದಲ್ಲಿ ಸ್ಥಿತಳಾಗಿರು! ನಿನ್ನಿಂದ ಅನೇಕ ಭಕ್ತರ ಉದ್ಧಾರವಾಗುವದಿದೆ. ಭಕ್ತಜನರು ಆ ಸಮಯಕ್ಕಾಗಿ ಅತ್ಯಂತ ಆತುರತೆಯಿಂದ ದಾರಿಕಾಯುತ್ತಿದ್ದಾರೆ. ಆದುದರಿಂದ ನೀನು ನಿನ್ನ ಸ್ಥಾನ ಬಿಟ್ಟಗಲುವದು ಸರಿಯಲ್ಲ. ಕಲಿಯುಗದಲ್ಲಿ ದೇವತೆಗಳೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲೇ ಬೇಕು. ಉಪಾಸನೆ ಮಾಡುತ್ತಾ ಇರುವದಕ್ಕಾಗಿ ದೇವತೆಗಳ ಅನುಭೂತಿ ಆವಶ್ಯಕವಾಗಿರುತ್ತದೆ’, ಎಂದು ಹೇಳಿ ಸಾಷ್ಟಾಂಗ ನಮಸ್ಕಾರ ಮಾಡಿದರು ಮತ್ತು ತಾಯಿಯ ವಿದಾಯಿ ತೆಗೆದುಕೊಂಡರು. ಯಾರು ಸ್ವಾಮಿಗಳ ಸಂಗಡ ಆವಾಗ ಅಲ್ಲಿ ಇದ್ದರೋ, ಅವರ ಭಾಗ್ಯವದನೆಂತು ವರ್ಣಿಸುವದು? ಅವರ್ಣನೀಯ ಮಹಾಪೂಜೆ ಮತ್ತು ಹಿಂದೆ, ಇಂದು, ಮುಂದೆ ಎಂದೆಂದೂ ಅಶಕ್ಯವಾದದ್ದೇ ಅಂದು ಶಕ್ಯವಾಗಿ, ‘ನ ಭೂತೋ ನ ಭವಿಷ್ಯತಿ’, ಎಂಬ ಅಘಟಿತ ಘಟನೆ ಕಣ್ಮುಂದೆ ನಡೆಯಲು, ಶ್ರೀಜಗನ್ಮಾತೆಯ ನೇತ್ರಗಳಿಂದ ಅಶ್ರುಸ್ರಾವವಾಗಿದ್ದನ್ನು ನೋಡುವ ಮಹದ್ಭಾಗ್ಯ ಅವರಿಗೆ ಲಭಿಸಿತು. ಅವರು ನಿಜವಾಗಿಯೂ ಮಹಾ ಭಾಗ್ಯವಂತರೇ!

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಪೌಷ ೧೯೦೩, (ಇಸವಿ ಸನ ೧೯೮೧), ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img