Memories

6. ಬ್ರಹ್ಮನಾಳದಲ್ಲಿ ಸಮಾಧಿ ವೃಂದಾವನ ಓಲಾಡಿತು

(ನಿರೂಪಣೆ : ಶ್ರೀಧರಭಕ್ತ ಡಾ| ಗೋವಿಂದ ಜಪ್ತೀವಾಲೆ, ಡಿಗ್ರಜ)

ಶಕೆ ೧೮೮೦ ಮಾಘ ಕೃಷ್ಣ ೧೩, ಶನಿವಾರ, ಇಸವಿ ಸನ ೧೯೫೯, ಮಾರ್ಚ ೭ನೇ ದಿನಾಂಕ, ಮಹಾಶಿವರಾತ್ರಿಯ ದಿನ ಶ್ರೀಸ್ವಾಮಿಯವರ ಆಗಮನ ಕೃಷ್ಣಾ ತಟದ ಶ್ರೀಕ್ಷೇತ್ರ ಬ್ರಹ್ಮನಾಳಕ್ಕೆ ಆಯಿತು. ಇಲ್ಲಿ ಸಮರ್ಥ ಪಂಚಾಯತನದ ಶ್ರೀಸದ್ಗುರು ರಘುನಾಥ ಸ್ವಾಮಿ ಮಹಾರಾಜ ಮತ್ತು ಶ್ರೀ ಆನಂದಮೂರ್ತಿಯವರ ಸಮಾಧಿಗಳಿದ್ದು, ಅದರ ಮೇಲೆ ೨೭೫ – ೩೦೦ ವರ್ಷಗಳ ಹಿಂದೆ ಕಟ್ಟಿದ ೧೦ ಫುಟ ಎತ್ತರದ ವೃಂದಾವನ ಇಂದೂ ಸುಸ್ಥಿತಿಯಲ್ಲಿ ಇದೆ. ಈ ಪವಿತ್ರ ಕ್ಷೇತ್ರಕ್ಕೆ ಶ್ರೀಸಮರ್ಥಪಾದುಕೆ ಮತ್ತು ಶಿಷ್ಯಗಣಗಳ ಸಹಿತ ಭಗವಾನ ಶ್ರೀಧರ ಸ್ವಾಮಿ ಮಹಾರಾಜರ ಆಗಮನವಾದಂತೆಯೇ, ಆ ದಿವಸದ ಆ ಅಪೂರ್ವ ಉತ್ಸವವನ್ನು ನೋಡಿದ ಶೃದ್ಧಾಳು ಭಾವಿಕರ ಕಣ್ಣುಗಳು ಧನ್ಯವಾದವು.

ಭಗವಾನ ಸ್ವಾಮಿಗಳು ಸಮಾಧಿಯ ಕಡೆ ಬರುವ ಮೊದಲು ಕೃಷ್ಣಾ – ವೇರಳಾ ಸಂಗಮದಲ್ಲಿ ಎಲ್ಲ ಶಿಷ್ಯಗಣ ಸಹಿತ ಸ್ನಾನ ಮಾಡಿ, ಕೃಷ್ಣಾತೀರದಲ್ಲಿನ ಸಮಾಧಿಯ ಸಾನಿಧ್ಯದಲ್ಲಿ ಕಟ್ಟಿದ್ದ ನದಿಘಟ್ಟಕ್ಕೆ ಬಂದು, ಕೃಷ್ಣಾನದಿಯಲ್ಲಿ ಸ್ನಾನ ಮಾಡಿದರು. ತದನಂತರ, ಮೊದಲು ಶ್ರೀ ಆನಂದಮೂರ್ತಿಯವರ ಸಮಾಧಿಯ ಹತ್ತಿರ ನಿಂತು, ಮಾನಸಪೂಜೆ ಮಾಡಿದರು. ಆ ವೇಳೆ ಶ್ರೀ ಸ್ವಾಮಿಗಳು ಮತ್ತು ಶ್ರೀ ಆನಂದಮೂರ್ತಿ ಏಕರೂಪವಾಗಿ ಆನಂದಸಾಗರದಲ್ಲಿ ಈಜುತ್ತಿರುವಂತೆ ಭಾಸವಾಗುತ್ತಿತ್ತು. ಏಕೆಂದರೆ, ಶ್ರೀ ಆನಂದಮೂರ್ತಿಯವರ ಸಮಾಧಿಯ ವೃಂದಾವನದ ಚೌಕಟ್ಟಿನ ಮೇಲೆ ಶ್ರೀ ಸ್ವಾಮಿಗಳ ಹಸ್ತ ಅದೆಷ್ಟು ಗಟ್ಟಿಯಾಗಿ ಊರಿಕೊಂಡಿತ್ತೆಂದರೆ, ವೃಂದಾವನ ಎದ್ದು ಕುಣಿದು ಕುಪ್ಪಳಿಸುತ್ತಿರುವದೋ ಎಂದೆನಿಸುತ್ತಿತ್ತು. ಅದನ್ನು ದೂರದಿಂದ ನೋಡುತ್ತಿದ್ದ ನನ್ನಂತ ಸಾಮಾನ್ಯ ಸಾಧಕನಿಗೂ ಆನಂದದ ಉನ್ಮಾದ ಉಕ್ಕಳಿಸುತ್ತಿತ್ತು. ನಂತರ ಶ್ರೀ ಸ್ವಾಮಿಗಳು ಶ್ರೀ ಸದ್ಗುರು ರಘುನಾಥ ಸ್ವಾಮಿ ಮಹಾರಾಜರ ಸಮಾಧಿಯ ಸನ್ನಿಧಿಗೆ ಬಂದು, ಅಲ್ಲಿಯೂ ವೃಂದಾವನದ ಬದಿಗೆ ನಿಂತು ಮಾನಸಪೂಜೆ ಮಾಡಿದರು.

ಪ್ರತಿವರ್ಷ ಮಹಾಶಿವರಾತ್ರಿ ಮತ್ತು ಶ್ರೀರಾಮನವಮಿಯ ಮಂಗಳ ದಿನ ಶ್ರೀರಘುನಾಥ ಮಹಾರಾಜರ ಸಮಾಧಿಯ ವೃಂದಾವನ ಓಲಾಡುತ್ತದೆ ಎಂಬ ಪ್ರಚೀತಿ ಇದ್ದು, ಇದು ಭಾವುಕ ಮತ್ತು ಶೃದ್ಧಾವಂತ ಭಕ್ತರಿಗೆ ಇಂದಿಗೂ ಕಾಣಲಿಕ್ಕೆ ಸಿಗುತ್ತದೆ. ಇಂದಿನ ದಿನದ ಇನ್ನೂ ವಿಶೇಷವೇನೆಂದರೆ, ಶ್ರೀಸಮರ್ಥ ಪಾದುಕೆ ಮತ್ತು ಭಗವಾನ ಶ್ರೀ ಸದ್ಗುರು ಶ್ರೀಧರ ಸ್ವಾಮಿಗಳ ಆಗಮನದಿಂದ ಶ್ರೀ ರಘುನಾಥ ಸ್ವಾಮಿಗಳ ಸಮಾಧಿಯೊಂದಿಗೆ ಶ್ರೀ ಆನಂದಮೂರ್ತಿಯವರ ಸಮಾಧಿಯ ವೃಂದಾವನವೂ ಓಲಾಡುತ್ತಿರುವ ದೃಶ್ಯ ಭಕ್ತರಿಗೆ ನೋಡಲು ಸಿಕ್ಕಿತು.
ಶ್ರೀಕ್ಷೇತ್ರ ಬ್ರಹ್ಮನಾಳದಲ್ಲಿ, ಮಹಾಶಿವರಾತ್ರಿ ಮತ್ತು ರಾಮನವಮಿಯ ಉತ್ಸವದ ದಿನ ಮಧ್ಯಾಹ್ನದ ಕಾಲದಲ್ಲಿ ಸಮಾಧಿಯ ಸನ್ನಿಧಿಯಲ್ಲಿ ನಿಂತು, ಕೆಲ ಕಾರುಣ್ಯಪೂರ್ಣ ಶ್ಲೋಕಗಳನ್ನು ಭಕ್ತಿಭಾವದಿಂದ ಹೇಳುವ ಮತ್ತು ವೃಂದಾವನದ ಮೇಲೆ ಕಪ್ಪು- ಕೆಂಪು ಬಣ್ಣಗಳ ಗುಲಾಲ ಪುಡಿ, ಹೂವು ಉದುರಿಸುವ ಪೂಜಾಪದ್ಧತಿ ಇದೆ. ಅದರಂತೆ, ಇಂದೂ ಎಲ್ಲರೂ ಕೆಳಗಿನ ಶ್ಲೋಕ ಹೇಳಹತ್ತಿದರು.

ಅತಿ ಕಠಿಣ ಶಿಲೆಯಿಂದು ತೂಗಿತು ವೃಕ್ಷದಂತೆ|
ತಾಯ ಗರ್ಭದಿ ಜನಿಸಿದೀ ಶ್ರೇಷ್ಠನಾರು|
ಗುರುವಚನ ಪ್ರತಾಪದಿಂ ದಿಗಂತ ಖ್ಯಾತರು ಇವರು|
ಅನುದಿನವು ಚಿತ್ತದಲಿ ಆನಂದಮೂರ್ತಿ ಸ್ವಾಮಿಯವರು|

ಈ ಶ್ಲೋಕ ನಡೆಯುತ್ತಿದ್ದಾಗಲೇ ಶ್ರೀ ರಘುನಾಥ ಸ್ವಾಮಿಗಳ ಸಮಾಧಿಯ ವೃಂದಾವನವು ಪ್ರತಿಸಲಕ್ಕಿಂತಲೂ ಬಹಳ ಹೆಚ್ಚಾಗಿಯೇ ಓಲಾಡಹತ್ತಿತು. ಇಂದೊಂದು ಯೋಗಾಯೋಗದ ದಿನ. ಶ್ರೀ ಸದ್ಗುರು ರಘುನಾಥ ಸ್ವಾಮಿ ಮಹಾರಾಜ, ಶ್ರೀ ಆನಂದಮೂರ್ತಿ ಮಹಾರಾಜ, ಶ್ರೀ ಸಮರ್ಥ ಪಾದುಕೆ ಮತ್ತು ಭಗವಾನ ಸದ್ಗುರು ಶ್ರೀ ಶ್ರೀಧರ ಸ್ವಾಮಿ ಮಹಾರಾಜ ಈ ಎಲ್ಲರ ಅದ್ಭುತ ಸಂಗಮದಿಂದಾಗಿ ಬ್ರಹ್ಮನಾಳದಲ್ಲಿ ಏಕಾಂತದಲ್ಲಿರುವ ಎರಡು ದಿವ್ಯ ಅದೃಶ್ಯ ಸಮಾಧಿಸ್ಥ ವಿಭೂತಿಗಳಿಗೆ ಅತ್ಯಾನಂದವಾಯಿತು ಮತ್ತು ಉಪಸ್ಥಿತ ಭಕ್ತಜನರು ಆ ಭವ್ಯ ದೃಶ್ಯದ ದರ್ಶನಮಾಡಿ ಪಾವನರಾದರು.
ಈ ದಿನ ಆ ಪರಿಸರದಲ್ಲಿ ಕೂಡಿದವರೆಲ್ಲರಿಗೂ ಶ್ರೀ ಸ್ವಾಮಿಯವರನ್ನು ಮನತುಂಬುವಂತೆ ದರ್ಶನ ಮಾಡಲು ಸಾಧ್ಯವಾಯಿತು. ನಂತರ ಬ್ರಹ್ಮನಾಳ ಮಠದ ವ್ಯವಸ್ಥಾಪಕರು ಸ್ವಾಮಿಗಳ ಮುಂದಿಟ್ಟ ತುಂಬಿದ ಹರಿವಾಣದ ಬಾಳೆಹಣ್ಣು, ಹಾಲು ಮೊದಲಾದ ಅಲ್ಪೋಪಹಾರವನ್ನು ನೋಡಿದ ಸ್ವಾಮಿಗಳು, ‘ನನಗೆ ಇಷ್ಟೆಲ್ಲಾ ಏಕೆ? ನಾನು ತೃಪ್ತನಾಗಿದ್ದೇನೆ’, ಎಂದು ಹೇಳಿ ಫಲಾಹಾರಕ್ಕೆ ತಮ್ಮ ಹಸ್ತಸ್ಪರ್ಷ ಮಾಡಿ, ಅವನ್ನು ಪ್ರಸಾದವೆಂದು ಕೊಟ್ಟು, ತಮ್ಮ ನರಸೋಬಾ ವಾಡಿಯ ಮುಂದಿನ ಪ್ರಯಾಣ ಪ್ರಾರಂಭಿಸಿದರು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಸಂಚಿಕೆಗಳ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img