೧೮. ಸಂಸಾರದ ಬಗ್ಗೆ ಹೆಚ್ಚೆಚ್ಚು ಚಿಂತೆ ಮಾಡಿದಂತೆ ಹೆಚ್ಚೆಚ್ಚು ಸಂಸಾರದಲ್ಲಿ ಪತನವೇ ಆಗುತ್ತದೆ!
(ಇಸವಿ ಸನ ೧೯೫೨-೫೩ರ ಸುಮಾರಿಗೆ ಸೌ.ರಾಧೆಗೆ ಬರೆದ ಪತ್ರ)
||ಶ್ರೀರಾಮ ಸಮರ್ಥ||
ಶಿವಮೊಗ್ಗಾ
ಚಿ.ಸೌ.ರಾಧೆಗೆ ಆಶೀರ್ವಾದ,
ಹಿಂದೇನೇ ನಿನ್ನ ಲಗ್ನದ ವೇಳೆಯ ಸುಮಾರಿಗೆ ಮ್ಹಾಳಸಾ ಮತ್ತು ಕಾಮಾಕ್ಷಿಯು ‘ನಿನಗೆ ಸಂಸಾರದಲ್ಲಿ ಆಸಕ್ತಿ ಇದೆ’ ಎಂದು ತಿಳಿಸಿದ್ದರು. ಸಂಸಾರದ ವಾಸನೆ ಇದ್ದದ್ದರಿಂದ ಲಗ್ನಕ್ಕೆ ಅಡ್ಡಬರಬಾರದೆಂದು ವಿನಂತಿಸಿಕೊಂಡಿದ್ದರು. ನೋಡು! ನಿನ್ನ ಮನಸ್ಸಿನ ಸ್ಥಿತಿ ನೋಡಿ ಸುಧಾರಿಸಿಕೊಳ್ಳಬೇಕು. ಎಷ್ಟು ವಿಷಯಾಸಕ್ತಿಯು ಹೆಚ್ಚೋ ಅಷ್ಟು ಹೆಚ್ಚು ದುಃಖವಾಗುತ್ತದೆ. ಸಂಸಾರದ ಬಗ್ಗೆ ಹೆಚ್ಚೆಚ್ಚು ಚಿಂತೆ ಮಾಡಿದಂತೆ ಹೆಚ್ಚೆಚ್ಚು ಸಂಸಾರದಲ್ಲಿ ಪತನವೇ ಆಗುತ್ತದೆ!
‘ಯಾರಿಗೆ ಏನೂ ಅಪೇಕ್ಷೆಯೇ ಇಲ್ಲವೋ ಅವರಿಗೆ ಲಕ್ಷ್ಮಿಯೇ ದಾಸಳಾಗುತ್ತಾಳೆ’ ಎಂಬ ವಚನವೂ ಇದೆ.
ಮಗಾ! ಆಧ್ಯಾತ್ಮನಿಷ್ಠೆಯ ಸುಖ ಅದೊಂದು ಬೇರೆ ರೀತಿಯದೇ ಇದೆ. ನಿನ್ನ ಗಂಡ ‘ತಂದೆ-ತಾಯಿಯವರ ಒತ್ತಾಯಕ್ಕಾಗಿ ಲಗ್ನ ಮಾಡಿಕೊಂಡರೂ, ಮುಂದೆ ಬ್ರಹ್ಮಚರ್ಯದಿಂದಲೇ ನನಗೆ ಇರಬೇಕೆಂದಿದೆ. ನನ್ನ ಮೇಲೆ ದಯಮಾಡಿ, ರಾಧಾ ನಿಮ್ಮ ಶಿಷ್ಯಳಾಗಿದ್ದರಿಂದ ವೈರಾಗ್ಯ ಮತ್ತು ಆಧ್ಯಾತ್ಮದ ಅಭ್ಯಾಸಕ್ಕನುಕೂಲವಾಗಿಯೇ ಒಂದು ಸಹಚಾರಿಣಿಯನ್ನು ಕೊಟ್ಟಂತಾಗುತ್ತದೆ … ತಾವು ಲಗ್ನಕ್ಕೆ ಅನುಮತಿ ಕೊಡಬೇಕು’ ಎಂದು ಪರಿಪರಿಯಾಗಿ ಬಿನ್ನವಿಸಿಕೊಂಡಿದ್ದನು. ಆಗಲೂ ನಾನು ಅವನಿಗೆ ‘ಸಂಸಾರಸುಖಕ್ಕಾಗಿ ಲಗ್ನ ಮಾಡಿಕೊಳ್ಳಲು ನಿಶ್ಚಯಿಸಿದ್ದರೆ ನಿನಗೆ ಸಂಸಾರಸುಖ ಅವಳಿಂದ ಸಿಗುವದಿಲ್ಲ’ ಎಂದು ಹೇಳಿ ಲಗ್ನಕ್ಕೆ ಅನುಮತಿ ಕೊಟ್ಟಿದ್ದೆನು. ಈಗಾದರೂ ಆಧ್ಯಾತ್ಮಿಕ ವಿಚಾರಗಳಿಂದ ನೀವು ಎಷ್ಟೆಷ್ಟು ನಿರ್ಮೋಹ ಮತ್ತು ನಿರ್ವಿಷಯ ಆಗುತ್ತೀರೋ ಅಷ್ಟಷ್ಟು ನಿಮಗೆ ಸುಖ ಸಿಗುತ್ತದೆ. ಮತ್ತೆಲ್ಲಾ ಕ್ಷೇಮ.
‘ಸರ್ವೇ ಜನಾಃ ಸುಖಿನೋ ಭವಂತು’
ಶ್ರೀಧರ