Letters

Letters 21 – Consolatory & Advisory to Lady Devotees

೨೧. ಈ ದೇಹದ ಅಭಿಮಾನ, ಆನಂದಘನ ಸ್ವರೂಪವನ್ನೇ ಮರೆಯಲಿಕ್ಕೆ ಕಾರಣವಾಗಿ, ಅಪರಿಮಿತ ದುಃಖಕ್ಕೆ ಕಾರಣೀಭೂತವಾಗುತ್ತಿದ್ದರೆ ಇದರ ಅಭಿಮಾನ ಬಿಡಲಿಕ್ಕೆ ಅದಾವ ಮುಹೂರ್ತದ ದಾರಿ ಕಾಯಬೇಕು? ಮಗಳೇ ಭ್ರಮೆಯಲ್ಲಿರಬೇಡ.
(ಮಾತೋಶ್ರೀ ಕರ್ಕಿ ಗಂಗಕ್ಕನಿಗೆ ಅವಳ ಇಳಿವಯಸ್ಸಿನಲ್ಲಿ ದೈಹಿಕ ಕಷ್ಟ ಅತಿಯಾದಾಗ ಸ್ವಾಮಿಗಳು ಬರೆದ ಪತ್ರ)

||ಶ್ರೀರಾಮ ಸಮರ್ಥ||

ಚಿ.ಗಂಗೆಗೆ ಆಶೀರ್ವಾದ,
ಮಗಾ! ನಿನಗೆ ದಮ್ಮಿನ ತೊಂದರೆ ಹೆಚ್ಚಾಗಿದೆ ಎಂದು ಚಿ. ಬಾಳಿಯ ಪತ್ರದ ಮೇಲಿಂದ ತಿಳಿದು ಬಂತು. ಶ್ರೀ ಸದ್ಗುರುವಿನ ಹೊರತು ಕೊನೆಗೆ ಮತ್ತಾರಿದ್ದಾರೆ? ಆದುದರಿಂದ ನೀನು ‘ನಮಃ ಶಾಂತಾಯ ….’ ಈ ಮಂತ್ರದ ೧೦೮ ಸಲ ಜಪ ಮಾಡಿ ಅದರ ತೀರ್ಥವನ್ನು ತೆಗೆದುಕೊಳ್ಳುತ್ತಿರು. ‘ಡಾಕ್ಟರನು ಆಶೆ ಬಿಟ್ಟ ಮೇಲೂ ಶ್ರೀ ಸದ್ಗುರುವಿನ ಆಧಾರ ಇದ್ದೇ ಇದೆ’ ಎಂದು ನಂಬಿಕೆಯಿಂದಿರು. ನೀನು ಬೇಕಾದಷ್ಟು ಶ್ರವಣ ಮಾಡಿ ತಿಳಿದುಕೊಂಡಿದ್ದೀಯೆ. ಇನ್ನು ಸಂಪೂರ್ಣ ಆತ್ಮನಿಷ್ಠೆಯಿಂದ, ದೇಹದ ಆಸಕ್ತಿ ಬಿಟ್ಟು, ನೀನು ಮುಕ್ತಳೇ ಆಗಬೇಕೆಂದು, ನಿನಗೆ ಎರಡು ವರ್ಷದ ಆಯುಷ್ಯ ಹೆಚ್ಚಿಸಿದ್ದೇನೆ. ಯಾವುದೇ ವ್ಯಾಪ್ತಿಯನ್ನು ಹಚ್ಚಿಕೊಳ್ಳದೇ ಯಾವಾಗಲೂ ಆತ್ಮಾನುಸಂಧಾನದಲ್ಲೇ ಇರು! ಆನಂದದ ಪ್ರಾಪ್ತಿಯಾಗಬೇಕೆಂಬ ಉದ್ದೇಶದಿಂದಲೇ ನೀನು ಕರ್ಕಿ ಊರನ್ನೇ ಬಿಟ್ಟಿದ್ದಿಯಲ್ಲಾ!! ಮತ್ತಾವುದರಲ್ಲೂ ಅರ್ಥವಿಲ್ಲವೆಂದರಿತೇ ನೀನು ನಿನ್ನ ಹತ್ತಿರವಿದ್ದ ಎರಡು ಸಾವಿರ ರೂಪಾಯಿ ಗುರುಸೇವೆಯಲ್ಲೇ ಖರ್ಚು ಮಾಡಿದ್ದೆಯಲ್ಲಾ?

ಸೂರ್ಯಪ್ರಕಾಶದಲ್ಲಿ ಕಾಣುವ ಮೃಗಜಲದಂತೆ ಭಾಸವಾಗುವ ಜಗತ್ತು, ಸ್ವರೂಪದ ಆನಂದಘನ ಪ್ರಕಾಶದಲ್ಲಿ ಕೇವಲ ಮಿಥ್ಯೆಯೆಂದು ನಿಶ್ಚಯವಾಗುತ್ತದೆ. ಸೂರ್ಯನು ಹಬ್ಬಿಸಿದ ಕಿರಣಗಳನ್ನು ತೆಗೆದು ಬಿಟ್ಟರೆ ಮೃಗಜಲವೆಲ್ಲಿದೆ? ಬಹಿರ್ಮುಖಿಯಾಗಿ ಹಬ್ಬಿದ ನಮ್ಮ ಅಸ್ತಿತ್ವ ಮತ್ತು ನಮ್ಮ ಅರಿವನ್ನು ಪ್ರತ್ಯೇಕಿಸಿದರೆ ನಮ್ಮ ಆತ್ಮಸ್ವರೂಪದ ಹೊರತು ಮತ್ತೇನು ಇರಲಿಕ್ಕೆ ಶಕ್ಯ?

ಈ ಕೊಳಕು, ನಾರುವ, ನಾಶವಂತ ದೇಹದ ಅಭಿಮಾನ ಎಷ್ಟು ದಿನ ಹಿಡಿಯುವದು? ಇದರಲ್ಲಿ ಏನಿದೆ? ಇದರ ಅಭಿಮಾನ, ಆನಂದಘನ ಸ್ವರೂಪವನ್ನೇ ಮರೆಯಲಿಕ್ಕೆ ಕಾರಣವಾಗಿ, ಅಪರಿಮಿತ ದುಃಖಕ್ಕೆ ಕಾರಣೀಭೂತವಾಗುತ್ತಿದ್ದರೆ ಇದರ ಅಭಿಮಾನ ಬಿಡಲಿಕ್ಕೆ ಅದಾವ ಮುಹೂರ್ತದ ದಾರಿ ಕಾಯಬೇಕು? ಮಗಳೇ ಭ್ರಮೆಯಲ್ಲಿರಬೇಡ.

ನಮ್ಮ ಆತ್ಮರೂಪದ ಶೋಧ ಮಾಡಿ ಆನಂದಘನವೇ ಆಗಿರು; ನಿಜವಾಗಿಯೂ ಮತ್ತೆ ಏನೂ ಇಲ್ಲ. ಜನ್ಮ-ಮರಣದ ಊಹಾಪೋಹಕ್ಕೆ ಇದೇ ಕೊನೆಯ ಭಾಷ್ಯವಾಗಿದೆ!

ನಿನ್ನ ಆನಂದಘನ ಗುರುರೂಪ
ಶ್ರೀಧರ

home-last-sec-img