Letters

Letters 24 – Guidance to Spiritual Seekers

೨೪. ಗುರೂಪದೇಶವಾದ ಮೇಲೆ ಅಖಂಡ ಬ್ರಹ್ಮಾತ್ಮೈಕ ದೃಷ್ಟಿ ಇಡಬೇಕು. ‘ಅಹಮಾತ್ಮಾ’ ಎಂಬುದನ್ನು ಎಂದೂ ಮರೆಯಬಾರದು.
(ಇಸವಿ ಸನ ೧೯೫೦ರಲ್ಲಿ ಶ್ರೀ ನೀಲಕಂಠ ರಾಮದಾಸಿಯವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||

6/೫/೧೯೫೦
ಚಿ.ನೀಲಕಂಠನಿಗೆ ಆಶೀರ್ವಾದ,
‘ಅಜೀರ್ಣಂ ಭೇಷಜಂ ವಾರಿ ಜಿಣೇಂ ವಾರಿ ಬಲಪ್ರದಮ್’. ನಿನ್ನ ಪ್ರಕೃತಿ ತಿಳಿದು ಬಂತು. ಉಷಃಪಾನ ಮಾಡುತ್ತಿರು. ಅನ್ನಕ್ಕಿಂತ ನೀರಿನಿಂದ ಹೊಟ್ಟೆ ತುಂಬಿಬಿಟ್ಟರೆ ಅಪಚನವಾಗುವದಿಲ್ಲ. ಊಟ ಮಾಡಿದ ಮೇಲೂ ಚುರುಕು, ಉತ್ಸಾಹಿ ಮತ್ತು ಆನಂದವಾಗಿರುವಂತಿದ್ದರೆ ಸೇವಿಸಿದ ಆಹಾರ ಆರೋಗ್ಯಕರವಾಗಿರುವದು. ಕೆಲವು ನಿಯಮಬದ್ಧ ಉಪಾಸನೆ ಇಟ್ಟುಕೊಳ್ಳಬೇಕು. ಆದರೆ ಅದನ್ನು ಯಾವಾಗಲೂ ನಡೆಸಬೇಕು; ಒಂದೆರಡು ಗಂಟೆಗಳಿಗಿಂತ ಕಡಿಮೆ ಇರಬಾರದು. ದಿನವೂ ಸೂರ್ಯನಮಸ್ಕಾರವನ್ನಂತೂ ಮಾಡಲೇ ಬೇಕು. ೧೦೮ರ ಸಂಖ್ಯೆ ಅವಶ್ಯ ಇಡಬೇಕು. ವ್ಯಾಯಾಮ ಇಲ್ಲದಿದ್ದರೆ ಶರೀರ ಬೇಗನೆ ಅಸ್ಥಿರವಾಗುತ್ತದೆ. ಸತುವಿರುವದಿಲ್ಲ.

ಗುರೂಪದೇಶವಾದ ಮೇಲೆ ಅಖಂಡ ಬ್ರಹ್ಮಾತ್ಮೈಕ ದೃಷ್ಟಿ ಇಡಬೇಕು. ‘ಅಹಮಾತ್ಮಾ’ ಎಂಬುದನ್ನು ಎಂದೂ ಮರೆಯಬಾರದು.
ಸೋಹಂ ಸ್ವಾನಂದಘನ ಆತ್ಮವು| ಜನ್ಮರಹಿತವು ಅದು ನೀನರಿತುಕೋ|
ಇದೇ ಸಾಧುವಚನವವು| ಇದ ಗಟ್ಟಿ ಹಿಡಿದಿರು ಸಾಧಕಾ|
ನಾನೆಂಬ ದೇಹಭಾವವ ತ್ಯಜಿಸಿ| ಅರಿತು ಬ್ರಹ್ಮಭಾವದಿ ನೋಡು ನೀನು|
ಹೊಂದು ಸಮಾಧಾನವನು| ನಿಸ್ಸಂಗದಲಿ ಜಗದಿ|
ಗುರುಭಜನೆಯಾ ಹೊರತು ಇನ್ನು| ಬೇರಿಲ್ಲ ಮೋಕ್ಷಕಾರಣ ಸಾಧಕಾ|
ಅದರಭ್ಯಾಸವಿರಹಿತವಾಗೆ| ಅವಗೆ ಗತಿಯಿಲ್ಲವಿದು ಖಂಡಿತಾ|
ವ್ಯಾಪವೆಷ್ಟಿದ್ದರೂ ನೀ ಏಕಾಂತದಲ್ಲೇ ಇರು| ವಿವಿಧ ಬಗೆಗಳಲಿ ಕಾಣು ಏಕತ್ವ|
ಕಾಣುವಾ ಭಿನ್ನತೆಯಲೈಕ್ಯತೆಯ ಮರೆಯದಿರು ನೀನು ಎಂದೂ|
ಈ ಜಗತ್ತಿನ ಲೌಕಿಕವಿರಲಿ, ಪಾರಮಾರ್ಥಿಕವಿರಲಿ ಅಥವಾ ಉಪಾಸನೆ ಸಂಬಂಧದ್ದಿರಲಿ ಎಲ್ಲವೂ ಅದೇ; ಅಂದರೆ ‘ಅರೇ! ಯಾವುದು ಆಗೇ ಇಲ್ಲವೋ!’

‘ನಿರ್ಗುಣ ಬ್ರಹ್ಮನ ಹೊರತು ಮಿಕ್ಕೆಲ್ಲ ಭ್ರಮರೂಪ’ ಈ ಅರಿವು ಸಡಿಲಾಗಬಾರದು.
‘ಯಾ ವದಾಯುಸ್ತ್ವತ್ವ ಸೇವ್ಯೋ ವೇದಾಂತೋ ಗುರುರೀಶ್ವರಃ’
ಎಲ್ಲವನ್ನೂ ‘ಸಂಗತ್ಯಕ್ತ್ವಾತ್ಮ ಶುದ್ಧಯೇ’ ಆಗಬೇಕು.
‘ನೈವ ಕಿಂಚಿತ್ಕರೋಮೀತಿ ಯುಕ್ತೋ ಮನ್ಯೇತ ತತ್ವವಿತ್| ನಾಹಂಕಾರಾತ್ಪರೋ ರಿಪುಃ|’ ಇದನ್ನು ಗುರುತಿಸಿ ನಡೆಯಬೇಕು.
ಇನ್ನು ದಿನನಿತ್ಯದ ಕೆಲಸ – ಕಾರ್ಯಗಳಲ್ಲಿ ಎಲ್ಲರೂ ಕೆಲಸ ಹಂಚಿಕೊಂಡು ಮಾಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಅದಕ್ಕೇ ಅನ್ನುತ್ತಾರೆ ….
‘ಹತ್ತು ಜನರ ದೊಣ್ಣೆ ಒಬ್ಬನಿಗೆ ಹೊರೆ’

ಏಕರಸವಾಗಿ ನಡೆದುಕೊಳ್ಳುವದು ಎಂದರೆ ಏಕಾತ್ಮ ತತ್ವದ ಅಭ್ಯಾಸವೇ ಆಗಿದೆ.

ನನ್ನಿಂದ ನಿಮ್ಮ ಮತ್ತು ನಿಮ್ಮಿಂದ ನನ್ನ ಎಲ್ಲ ಇಹ-ಪರ ಕರ್ತವ್ಯಗಳು ಸಾರ್ವತ್ರಿಕವಾಗಿ ಸಂಪೂರ್ಣ ಸಫಲವಾಗಲಿ. ಎಲ್ಲರೂ ಸುಖರೂಪವಾಗಿರಿ.
ಸಂಗಡ ಇಲ್ಲಿ ಸ್ಫುರಿಸಿದ ಅಷ್ಟಕ ಪದ್ಯಗಳನ್ನು ಕಳಿಸಿದ್ದೇನೆ. ಇಲ್ಲಿಯ ಗಾಯಕರ ಆಗ್ರಹವೇ ಈ ಅಷ್ಟಕಗಳಿಗೆ ಕಾರಣ.

ಶ್ರೀಧರ

home-last-sec-img