೩೬. ಉಳಿದವರಿಗೆ ಪ್ರತಿಕೂಲವಾಗದ ಹಾಗೆ ನಮ್ಮ ಆಚಾರ, ಸಾಮಾನ್ಯ ಮನುಷ್ಯ ಧರ್ಮ ಮತ್ತು ವಿಶ್ವಾಸಾರ್ಹ್ಯ ಆಚರಣೆ ಇರುವವರಿಗೇ ಮನುಷ್ಯ ಎಂದು ಹೇಳುತ್ತಾರೆ.
(ಇಸವಿ ಸನ ೧೯೬೭ರಲ್ಲಿ ಶ್ರೀ ಅನಂತ ಬ್ರಹ್ಮಚಾರಿ ವರದಪುರದವರಿಗೆ ಬರೆದ ಪತ್ರ)
ಶ್ರೀ ಗುರವೇ ನಮಃ
ವರದಪುರ
೧೬-೭-೧೯೬೭
ಚಿ.ಅನಂತನಿಗೆ ಅನೇಕ ಶುಭಾಶೀರ್ವಾದಗಳು,
ನಿನ್ನ ೧೩-೭- ೬೭ರ ಪತ್ರ ಸಿಕ್ಕಿತು. ವಿಷಯ ತಿಳಿಯಿತು. ನೀನಾಗಲೀ, ರಾಮಭಟ್ಟನಾಗಲೀ, ರಾನಪ್ಪನಾಗಲೀ, ಗೌಡನಾಗಲೀ ಇವರೆಲ್ಲ ನನ್ನ ಭಕ್ತರೇ ಇದ್ದೀರಿ. ಗುರುಭಕ್ತರ ಜೀವನಕ್ರಮ ಎಲ್ಲ ದೃಷ್ಟಿಯಿಂದ ನಿರ್ದುಷ್ಟವೇ ಇರುತ್ತದೆ. ಹಾಗಲ್ಲದಿದ್ದರೆ ವಿಷಾದಕರ ಎಂದೇ ಹೇಳಬೇಕಾಗುತ್ತದೆ. ನ್ಯಾಯ, ನೀತಿ, ಆಚಾರ-ವಿಚಾರ ಸ್ವಪರ ಹಿತಕರ ಇರುತ್ತದೆ ಇದು ಎಲ್ಲರಿಗೂ ಗೊತ್ತು.
‘ಆತ್ಮನಃ ಪ್ರತಿಕೂಲಾನಿ ನ ಪರೇಶಾಂಸಮಾಚರೇತ್|’
ಪ್ರತಿಕೂಲ ಆಚರಣೆ ಹೇಗೆ ನಮಗೋ, ಅದೇ ರೀತಿ ಇತರರಿಗೂ ಅಹಿತಕಾರಕ ಮತ್ತು ದುಃಖದಾಯಕವಿರುತ್ತದೆ. ಉಳಿದವರಿಗೆ ಪ್ರತಿಕೂಲವಾಗದ ಹಾಗೆ ನಮ್ಮ ಆಚಾರ, ಸಾಮಾನ್ಯ ಮನುಷ್ಯ ಧರ್ಮ ಮತ್ತು ವಿಶ್ವಾಸಾರ್ಹ್ಯ ಆಚರಣೆ ಇರುವವರಿಗೇ ಮನುಷ್ಯ ಎಂದು ಹೇಳುತ್ತಾರೆ.
ಆದಾಗ್ಯೂ, ಕೆಲ ಮನುಷ್ಯರೆಂದುಕೊಳ್ಳುವರು ಮಾಡಿದ ಅಂತಹ ಕಾರ್ಯ ಸಹನ ಮಾಡುವದು ಮತ್ತು ಮುಂದೆ ಭವಿಷ್ಯದಲ್ಲಿ ಆಗಬಹುದಾದ ಕಾರ್ಯದ ಬಗ್ಗೆ ವಿಚಾರ ಮಾಡಿ ಆ ಬಗ್ಗೆ ಜಾಗರೂಕವಾಗಿರುವದು ಯೋಗ್ಯವೇ.
ಜನರು ನಮ್ಮೊಡನೆ ಯಾವ ರೀತಿ ವ್ಯವಹಾರ ಮಾಡಬೇಕೆಂದು ನಮ್ಮ ಇಚ್ಛೆ ಇರುತ್ತದೆಯೋ ಅದೇ ರೀತಿ ನಾವೂ ನ್ಯಾಯ-ನೀತಿಯಿಂದ ಬೇರೆಯವರೊಡನೆ ವ್ಯವಹಾರ ಇಟ್ಟುಕೊಳ್ಳಬೇಕು. ಈ ರೀತಿ ವ್ಯವಹಾರ ಇಟ್ಟುಕೊಳ್ಳುವವನೇ ನಿಜವಾದ ಮನುಷ್ಯ. ಆಗಿಹೋದ ವಿಷಯಕ್ಕೆ ಉಪಾಯವಿಲ್ಲ. ಇನ್ನು ಮುಂದೆಯಾದರೂ ನಿಮಗೆಲ್ಲರಿಗೂ ನ್ಯಾಯ, ನೀತಿ, ಸೌಜನ್ಯ, ಪರೋಪಕಾರ, ಸಹೃದಯತೆ, ಸತ್ಯ ಆಚಾರ-ವಿಚಾರ, ಉನ್ನತ ಪಾರಮಾರ್ಥಿಕ ದೃಷ್ಟಿ ಮತ್ತು ಸರ್ವಾತ್ಮಭಾವ ಮೊದಲಾದ ಸದ್ಗುಣಗಳು, ದೇವರು ಮತ್ತು ಗುರುಭಕ್ತರ ವಿಷಯದಲ್ಲಿ ಭಕ್ತ್ಯಾದರ ಉತ್ಪನ್ನವಾಗುವಂತೆ ನಿಮ್ಮೆಲ್ಲರಿಗೆ ಹಾರ್ದಿಕ ಆಶೀರ್ವಾದ ಮಾಡುತ್ತಿದ್ದೇನೆ.
||ಸರ್ವೇ ಜನಾಃ ಸುಖಿನೋ ಭವಂತು||
||ಇತಿ ಶಮ್||
ಶ್ರೀಧರ
ಹೆಚ್ಚಿನ ಸೇರ್ಪಡೆ: ನಾನು ಸ್ವತಃ ಪತ್ರ ಬರೆಯುವದನ್ನು ಬಿಟ್ಟು ಎಷ್ಟೋ ದಿನಗಳಾದವು. ಹಾಗಾಗಿ ವಿಷಯ ಹೇಳಿ ಬರೆಸಿಕೊಂಡಿದ್ದೇನೆ. ನಿಮ್ಮೆಲ್ಲರ ಮೇಲೆ ಇದರ ಅನುಕೂಲ ಪರಿಣಾಮ ಆಗಿ, ನನ್ನ ಶ್ರಮ ಸಾರ್ಥಕವಾಗಬೇಕು. ನೀವೆಲ್ಲರೂ ಪರಸ್ಪರಲ್ಲಿ ಆದರಭಾವವಿಟ್ಟು, ಪರಸ್ಪರ ಸಹಾಯಕರಾಗಿ, ನ್ಯಾಯ – ನೀತಿ ಬಿಡದೇ ಆನಂದದಿಂದ ಜೀವನ ನಡೆಸಬೇಕು.