Literature

ಆಸ್ತಿಕ್ಯಕ್ಕೆ ಶ್ರುತ್ಯಾಧಾರ

ಶ್ರುತಿಯು, ‘ಮಾತೃದೇವೋ ಭವ’, ‘ಪಿತೃದೇವೋ ಭವ’, ‘ಆಚಾರ್ಯದೇವೋ ಭವ’, ‘ಸತ್ಯಂ ವದ’, ಧರ್ಮಂ ಚರ’ ಮತ್ತು ‘ದೇವ ಪಿತೃ ಕಾರ್ಯಾಭ್ಯಾಂ ನ ಪ್ರಮದಿತವ್ಯಂ’ ಎಂದಿತ್ಯಾದಿ ವಿಧಿಸಿರುವದು.

ಇನ್ನು, ‘ಅವಿಧಿಕೃನ್ನರಕ ಮಶ್ನುತೆ’. ಅವಿಧಿ ವರ್ತನೆಯಿಂದ ನರಕಪ್ರಾಯವಾದ ನಿಷಿದ್ಧ ಭೋಗಗಳಲ್ಲಿಯೇ ಹೆಚ್ಚೆಚ್ಚು ಆಸಕ್ತಿಯುಂಟಾಗುವದು. ನಿಷಿದ್ಧಕರ್ಮ, ವಿಷಯೋಪಭೋಗದ ದಾಹ, ಹುಲ್ಲಿನ ರಾಶಿಗೆ ಕೊಟ್ಟ ಬೆಂಕಿಯಂತೆ ಧಗಧಗಿಸಿ ಯಾವಾಗಲೂ ಸುಡುವದು. ಕಡಿವಾಣವಿಲ್ಲದ ಕುದುರೆಗಳು ಮನಬಂದಂತೆ ರಥವನ್ನು ಸೆಳೆದೊಯ್ಯುವಾಗ ಆಗುವ ಚಿಂತಾಜನಕ ಸ್ಥಿತಿಯೇ ಇಂದ್ರಿಯಗಳ ಹಿಡಿತ ತಪ್ಪಿದಾಗ ತೋರಿಬರುವದು. ನಿರಂತರ ಭಯ ಮನಸ್ಸನ್ನು ಆವರಿಸುವದು. ಮನಸ್ಸಿನ ಶಾಂತಿಯು ಸಂಪೂರ್ಣ ನಷ್ಟವಾಗುವದು. ಆರೋಗ್ಯ ಕೆಡುವದು. ಆದರೂ ವಿಷಯ ವಾಸನೆಯು ಮತ್ತಷ್ಟು ಹೆಚ್ಚುವದು. ಮಾಡಿದ ಪಾಪಕೃತ್ಯಗಳೆಲ್ಲಾ ಉಮಿಯ ಬೆಂಕಿಯಂತೆ ಒಳಗಿಂದೊಳಗೆ ಸುಡುವದು. ಬಾಳು ತೇಜೋಹೀನವಾಗುವದು. ನಿರಾಶೆ ಮತ್ತು ದುಃಖ ಆವರಿಸುವದು. ಪರಮಾರ್ಥ ಸಾಧನೆಯ ದಿಕ್ಕು ಕಾಣಿಸದು. ತೊಳಲಿ, ಬಳಲಿ ಬಹುವಿಧವಾಗಿ ಇಲ್ಲೇ ನರಕಯಾತನೆಯನ್ನು ಅನುಭವಿಸಿ, ಕೊನೆಯಲ್ಲಿ ಮಹಾನರಕವಾಸಕ್ಕೂ ಗುರಿಯಾಗುವನು.
ಕಠೋಪನಿಷತ್ತಿನಲ್ಲಿ ನಚಿಕೇತನ ಪ್ರಶ್ನೆಗೆ ಮೃತ್ಯುದೇವತೆ ಯಮನ ಈ ವಾಕ್ಯಗಳಿವೆ.

ಹಂತಂ ತ ಇದಂ ಪ್ರವಕ್ಷಾಮಿ ಗುಹ್ಯಂ ಬ್ರಹ್ಮ ಸನಾತನಂ|
ಯಥಾ ಚ ಮರಣಂ ಪ್ರಾಪ್ಯ ಆತ್ಮಾ ಭವತಿ ಗೌತಮ||
ಯೋನಿ ಮನ್ಯೇ ಪ್ರವದ್ಯಂತೇ ಶರೀರತ್ವಾಯ ದೇಹಿನಃ|
ಸ್ಥಾಣುಮನ್ಯೇಽನುಸಂಯಂತಿ ಯಥಾಕರ್ಮ ಯಥಾಶ್ರುತಂ||

ಅವಿನಾಶಿ ಬ್ರಹ್ಮನೇ ತನ್ನ ಸ್ವರೂಪವೆದರಿತ ನಿಷ್ಕಾಮನಾದವನಿಗೆ ದೇಹಪಾತದ ನಂತರ ಜನ್ಮವು ಉಂಟಾಗದು. ಇದನ್ನರಿಯದವನು ಅವನು ವಿಷಯಸುಖವನ್ನು ಬಯಸಿ ಮಾಡಿದ ಆಯಾ ಕರ್ಮಕ್ಕೆ ಅನುರೂಪವಾದ ಆಯಾ ಫಲವನ್ನು ಅನುಭವಿಸಲು ಆಯಾ ಸ್ಥಾವರ-ಜಂಗಮಾತ್ಮಕ ಯೋನಿಯಲ್ಲಿ ಜನ್ಮವೆತ್ತುವನು. ಕರ್ಮದ ತಾರತಮ್ಯದ ಪ್ರಕಾರವೇ ಜನ್ಮದ ತಾರತಮ್ಯ ತೋರಿಬರುವದು.

ದೇಹ ಬಿದ್ದು ಹೋದ ಮೇಲೆ ಪಂಚಪ್ರಾಣಗಳಲ್ಲಿ ಒಂದಾದ ‘ಉದಾನ’ವೇ ಪುಣ್ಯವಂತರನ್ನು ಪುಣ್ಯಲೋಕಕ್ಕೂ, ಪಾಪಿಗಳನ್ನು ಪಾಪಲೋಕಕ್ಕೂ, ಪುಣ್ಯ-ಪಾಪಗಳು ಸಮವಾಗಿದ್ದರೆ ಅವರನ್ನು ಮನುಷ್ಯಲೋಕಕ್ಕೆ ಕೊಂಡೊಯ್ಯುವದು ಎಂದು ಪ್ರಶ್ನೋಪತ್ತಿನಲ್ಲಿ ಹೇಳಿರುವದು.

ಹೆಣ್ಣು, ಹೊನ್ನು, ಮಣ್ಣು ಮುಂತಾದವುಗಳಲ್ಲಿ ಆಸಕ್ತನಾಗಿರುವ ಬುದ್ಧಿಯವನಿಗೂ, ಕಾಮಾದಿ ವಿಕಾರಗಳಿಂದ ಬುದ್ಧಿಭ್ರಷ್ಟನಾದವನಿಗೂ, ವೈಭವದ ಲಾಲಸೆಯುಳ್ಳವನಿಗೂ ಮೋಕ್ಷಪ್ರಾಪ್ತಿಗೆ ಕಾರಣವಾದ ಶಾಸ್ತ್ರೀಯ ಹೆದ್ದಾರಿಯು ಗೋಚರಿಸದು, ವೈರಾಗ್ಯ ಉಂಟಾಗದು ಎಂದು ಕಠೋಪನಿಶತ್ತಿನಲ್ಲಿ ಹೇಳಿರುವರು. ಈ ಲೋಕಸುಖವನ್ನೇ ನಂಬಿ ಪುಣ್ಯ-ಪಾಪಗಳಿಗನುಸಾರವಾಗಿ ಬೇರೆ ಲೋಕಗಳೇ ಇಲ್ಲ ಎಂಬುದಾಗಿ ಭಾವಿಸುವನು. ಆತನು ಜನ್ಮ-ಮರಣಗಳ ಸುಳಿಯಲ್ಲಿ ಕೀಟದಂತೆ ಭ್ರಮಿಸುವನು ಎಂಬುದಾಗಿ ನಾಸ್ತಿಕರಿಗೆ ಸಿಗುವ ಫಲವನ್ನು ಶ್ರುತಿಯು ತಿಳುಹಿಸಿರುವದು!

home-last-sec-img