Literature

ಜೀವನಕ್ಕೆ ಮಹದುದ್ದೇಶವಿದೆ

‘ಬರೇ ಬದುಕುವದಷ್ಟೇ ಜೀವನವೇ ಅಥವಾ ಇನ್ನೂ ಹೆಚ್ಚಿನ ಯಾವುದೋ ಉದ್ದೇಶ ಇದರಲ್ಲಿ ಇದೆಯೇ?’ ಇದೊಂದು ವಿಮರ್ಶಿಸಬೇಕಾದ ವಿಷಯವೇ!

ಇನ್ನು ಧಾರ್ಮಿಕರೂ, ಅವತಾರಪುರುಷರೂ ಸಹ ತಮ್ಮ ಸುತ್ತಮುತ್ತಲಿನ ಜನಜೀವನಕ್ಕೆ ಗಮನಕೊಟ್ಟು, ಅದರ ಸಲುವಾಗಿ ತಮ್ಮ ಸಂಕಲ್ಪದಂತೆ ದುಡಿದದ್ದು ನೋಡಿದರೆ, ಜೀವನಕ್ಕೆ ನಿಜವಾಗಿಯೂ ಒಂದು ‘ಭವ್ಯಸ್ವರೂಪ’ ಇದೆ ಎಂದು ಸಿದ್ಧವಾಗುತ್ತದೆ!

ಬದುಕುವದಕ್ಕಾಗಿಯೇ ಸರ್ವಜೀವಿಗಳೂ ಸರ್ವಶಕ್ತಿಯಿಂದ ಪ್ರಯತ್ನಿಸುತ್ತಿವೆಯೆಂಬುದು ನಮಗೆಲ್ಲ ಕಂಡುಬರುವ ವಿಷಯ. ಆದರೆ ಒಬ್ಬ ಮನುಷ್ಯನಿಗೆ ‘ನಿನಗೆ ಚೆನ್ನಾಗಿ, ಪರಿಪುಷ್ಟನಾಗಿ ಬದುಕುವದಕ್ಕೆ ಮಾತ್ರವೇ ಉತ್ತಮವಾದ, ರಾಜೋಚಿತವಾದ ಅನುಕೂಲತೆಯನ್ನು ಮಾಡಿಕೊಡಲಾಗುವದು. ಆದರೆ ನೀನು ಬೇರೆ ಏನನ್ನೂ ಬಯಸದೆ, ಮತ್ತಾವ ಜಟುವಟಿಕೆಗಳಿಗೂ ಕೈಹಾಕದೆ ಇದ್ದಲ್ಲಿಯೇ ಇರಬೇಕು’ ಎಂದು ಹೇಳಿದರೆ ಆತನು ಒಪ್ಪುತ್ತಾನೆಯೇ? ನೀವಾದರೂ ಇದಕ್ಕೆ ಒಪ್ಪಿಕೊಳ್ಳುತ್ತೀರಾ? ಬೇಡ, ಒಂದು ಪಶು-ಪಕ್ಷಿ, ಕ್ರಿಮಿ-ಕೀಟವಾದರೂ ಅವುಗಳಿಗೆ ಶಕ್ಯತೆಯಿದ್ದಲ್ಲಿ ಈ ಮಾತನ್ನು ಒಪ್ಪುವ ಸಂಭವವುಂಟೇ? ಸರ್ವಥಾ ಇಲ್ಲ!

ಹಾಗೆ ಒಪ್ಪುವದೆಂದರೆ ಅನುಭವಕ್ಕೆ ಸಮ್ಮತವಲ್ಲದ, ಆತ್ಮವಂಚನೆಯ ಮಾತು. ತರ್ಕವಿರುದ್ಧ ಮಾತು. ಮೂಕಪ್ರಾಣಿಯನ್ನೇ ಆಗಲೀ, ಮನುಷ್ಯನನ್ನೇ ಆಗಲೀ ಅವರ ಪ್ರಕೃತಿಗೆ ಅನುಗುಣವಾದ ಯಾವ ಆಶೆಯೂ ಸಫಲವಾಗದಂತ ಪರಿಸ್ಥಿತಿಯಲ್ಲಿ ನಿರ್ಭಂಧಿಸಿ ಇಟ್ಟರೆ ಅಥವಾ ಅಂಥ ಪರಿಸ್ಥಿತಿ ಅವರಿಗೆ ತಾನಾಗಿ ಬಂದರೆ ಆಗ ಜೀವನದ ಬಗ್ಗೆ ತಿರಸ್ಕಾರವುಂಟಾಗುವದು. ಜೀವನವು ತಾನಾಗಿ ಕುಂದಿಹೋಗಬಹುದು. ಬದುಕುವ ಶಕ್ತಿಯೂ ಕುಂಠಿತವಾಗಿ ಹೋಗಬಹುದು. ಮರಣವೂ ಬೇಗ ಬರಬಹುದು.

ಹಾಗಾಗಿ, ಜೀವನಕ್ಕೆ ಬರಿಯ ಜೀವಿಸಿರುವುದೇ ಉದ್ದೇಶವಲ್ಲ. ಜೀವನಕ್ಕೆ ಬೇರೊಂದು ಮಹದುದ್ದೇಶವಿದೆ!

home-last-sec-img