ಈ ಜಗತ್ತನ್ನು ಸೃಷ್ಟಿಸಲಿಕ್ಕೆ ಶಕ್ತಿಯು ಬೇಕಷ್ಟೇ? ಶಕ್ತಿಯಿಲ್ಲದೇ ಯಾವ ಕಾರ್ಯವೂ ಆಗದು. ಮೊದಲು ಶಕ್ತಿ; ಬಳಿಕ ಕಾರ್ಯ.
ನೀವು ಕೇಳುವದೂ ನಾನು ಹೇಳುವದೂ ಕೂಡ ಶಕ್ತಿಯ ಕಾರ್ಯವೇ. ‘ಯೋಂತಃ ಪ್ರವಿಶ್ಯ ಮಮ ವಾಚಮಿಮಾಂ ಪ್ರಸುಪ್ತಾಮ್| ಸಂಜೀವತ್ಯಖಿಲ ಶಕ್ತಿಧರಃ …’
ಎಂದರೆ ಆ ಪರಮಾತ್ಮನೇ ನನ್ನ ಅಂತರಂಗದಲ್ಲಿದ್ದು ನನ್ನ ವಾಚಾಶಕ್ತಿಯನ್ನು ಪ್ರೇರಿಸಿದಾಗ ನಾನು ಮಾತನಾಡುತ್ತೇನೆ.
ಅಂತೂ ಈ ಜಗತ್ತಿನ ಸಕಲ ವ್ಯಾಪಾರಗಳಿಗೂ ಆ ಪರಮಾತ್ಮ ಶಕ್ತಿಯೇ ಮೂಲಾಧಾರ!
ಯಾವ ಪರಮಾತ್ಮನ ಸಂಕಲ್ಪಶಕ್ತಿಯಿಂದ ಅಖಿಲ ಜಗತ್ತು ಉಂಟಾಗಿರುವದೋ ಆ ಪರಮಾತ್ಮನು ಸರ್ವಶಕ್ತ. ಈ ಜಗತ್ತು ಆತನ ಶಕ್ತಿಯ ಕಾರ್ಯ.
‘ಶಕ್ತಿಃ ಶಕ್ತಿಮತೋರಭೇದಃ’ ಶಕ್ತಿಯು ಶಕ್ತನನ್ನು ಬಿಟ್ಟಿರುವದಿಲ್ಲ. ಅವರವರಲ್ಲಿ ಭೇದವಿಲ್ಲ.
‘ಅಸದ್ವಾ ಇದಮಗ್ರ ಆಸೀತ್ ತದಾತ್ಮಾನಂ ಸ್ವಯಮಕುರುತ’ ಈಗ ನಮಗೆ ಕಾಣಿಸುವ ಎಲ್ಲಾ ಜಗತ್ತು ಮೊದಲು ಅದೃಶ್ಯರೂಪವಾಗಿತ್ತು. ಆಮೇಲೆ ಪರಮಾತ್ಮನ ಸಂಕಲ್ಪ ಶಕ್ತಿಯಿಂದ ವ್ಯಕ್ತಸ್ವರೂಪಕ್ಕೆ ಬಂದಿತು. ವ್ಯಕ್ತತೆಯೇ ಜನ್ಮ.
‘ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ ಅವ್ಯಕ್ತ ನಿಧನಾನ್ಯೇವ’
ವ್ಯಕ್ತವಾಗಿ ತೋರುವ ಕಾರ್ಯಕ್ಕೆ ಅವ್ಯಕ್ತ ಕಾರಣವೊಂದು ಇರಲೇಬೇಕು.
ಭಗವಂತನ ಸಂಕಲ್ಪದಿಂದ ಸೃಷ್ಟಿಯು ವ್ಯಕ್ತರೂಪವನ್ನು ತಾಳಿ ಕೊನೆಗೆ ಅದೇ ಪರಮಾತ್ಮನಲ್ಲಿ ಸೇರಿ ಐಕ್ಯತೆ ಹೊಂದಿ ಅದೃಶ್ಯವಾಗಿಬಿಡುವದು.