ಜಾಬಾಲಿಗಳೇ, ನಿಮ್ಮೆಲ್ಲಾ ವಾದಗಳಿಗೆ ಉತ್ತರ ಕೊಡುವ ಈ ಪ್ರಯತ್ನ ಎಲ್ಲವನ್ನೂ ತಿಳಿದ ನಿಮಗಾಗಿ ಅಲ್ಲ. ಹೇಗಾದರೂ ಮಾಡಿ ನನ್ನನ್ನು ಅಯೋಧ್ಯೆಯ ಸಿಂಹಾಸನದ ಮೇಲೆ ಕುಳ್ಳಿರಿಸಿ ಆನಂದದಿಂದ ನಾನು ಧರ್ಮಾನ್ವಿತ ನಡೆಸುವ ರಾಜ್ಯಭಾರವನ್ನು ಕಂಡು ಸುಖಿಸಬೇಕೆಂಬ ನಿಮ್ಮ ಸದುದ್ದೇಶವಿದ್ದರೂ, ಈ ನೀವು ಹೂಡಿದ ನಾಸ್ತಿಕವಾದವು ಮುಂದಿನ ಜನರಿಗೆ ಯಾವ ವಿಧದಿಂದಲೂ ಅನುಕರಣೀಯವಾಗಬಾರದೆಂಬ ಉದ್ದೇಶದಿಂದಲೇ ಇದನ್ನು ಖಂಡಿಸುವ ಈ ಉಪಕ್ರಮಕ್ಕೆ ತೊಡಗಿದ್ದೇನೆ.
ಜೀವನದಲ್ಲಿ ಕರ್ಮವನ್ನು ಮಾಡಿದಾಗ ಅದರ ಫಲ ಪ್ರಾಪ್ತಿ ಸ್ವಯಂ ವೇದ್ಯ. ಅಂದರೆ ಈ ಸೃಷ್ಟಿಯಲ್ಲಿ ಕರ್ಮಕ್ಕೂ ಕರ್ಮಫಲಕ್ಕೂ ಕಾರ್ಯ-ಕಾರಣ ಸಂಬಂಧ ಅಟಲ, ಅನಿವಾರ್ಯ ಎಂಬುದನ್ನು ಒಪ್ಪಬೇಕಾಗುತ್ತದೆ. ಹಾಗಿದ್ದಾಗ ಈ ಪ್ರಪಂಚದಲ್ಲಿ, ಈ ನಿಯಮಕ್ಕೆ ಸರ್ವರೂ, ಸರ್ವಕಾಲಕ್ಕೂ ಬದ್ಧರು ಮತ್ತು ಯಾರೂ ಇದನ್ನು ಮೀರಿ ಇರಲು ಶಕ್ಯವಿಲ್ಲ ಎಂಬುದು ಸ್ವತಃಸಿದ್ಧವಲ್ಲವೇ?
ಆದರೆ, ಜನ್ಮದಾರಭ್ಯ ಇದ್ದ ವೈಗುಣ್ಯಕ್ಕೂ, ವೈಶಿಷ್ಟ್ಯಕ್ಕೂ, ಜೀವನದಲ್ಲಿ ತೋರಿಬರುವ ಅಕಾರಣ ವೈರಕ್ಕೂ, ಪ್ರೇಮಕ್ಕೂ ಅಪ್ರಯತ್ನವಾಗಿ ಬರುವ ಸುಖ-ದುಃಖಗಳಿಗೂ, ಹಾನಿ-ಲಾಭಗಳಿಗೂ ಯಾವುದು ಕಾರಣ? ಅಷ್ಟೇಕೆ, ಹುಟ್ಟಿನಿಂದಲೇ ದೊರೆತ ದೇಶ-ಕಾಲ-ಪರಿಸ್ಥಿತಿಗಳಿಗೆ ಆ ಜೀವಿಯ, ಈಗಿನ ಜನ್ಮದ ಕರ್ಮವು ಕಾರಣವಾಗದಿರುವದರಿಂದ ಇದಕ್ಕೆ ಹಿಂದಿನ ಜನ್ಮದ ಕರ್ಮವೇ ಕಾರಣವೆಂದು ನಿಶ್ಚಯಿಸಬೇಕಾಗುತ್ತದೆ. ಹೀಗಾಗಿ ಜಗತ್ತಿನಲ್ಲಿ ತೋರಿಬರುವ ವಿವಿಧತೆಗೆ ಮತ್ತು ವೈಚಿತ್ರಕ್ಕೆ ಅದರದರ ಹಿಂದಿನ ಕರ್ಮವೇ ಕಾರಣವೆಂದು ಹೇಳಬೇಕಾಗುತ್ತದೆ. ಕರ್ಮವು ತನ್ನ ಫಲವನ್ನು ಕೊಟ್ಟೇ ಕೊಡುವುದೆಂದಾದಲ್ಲಿ, ಈ ಜನ್ಮದಲ್ಲಿ ಮಾಡಿದ, ಆದರೆ ಅನುಭವಿಸಿ ತೀರಿಹೋಗದ ಕರ್ಮವನ್ನುಣ್ಣಲು ಮುಂದಿನ ಜನ್ಮವು ಅಪರಿಹಾರ್ಯವಲ್ಲವೇ?ಆಗ ಈ ಜನ್ಮದ ಕರ್ಮವು ಮುಂದಿನ ಜನ್ಮಕ್ಕೆ ಕಾರಣವಾಗುತ್ತದೆ ಎಂದು ಹೇಳಬೇಕಾಗುತ್ತದೆ.
ಸೂಕ್ಷ್ಮವಾಗಿ ನೋಡಿದಾಗ ಮನಸ್ಸಿನ ಸಂಕಲ್ಪವೇ ಎಲ್ಲಾ ಕರ್ಮಗಳ ಮೂಲ ಎಂದು ಅರಿವಾಗುತ್ತದೆ. ಅನ್ನವನ್ನು ಊಟ ಮಾಡಿದರೆ ತೃಪ್ತಿಯಾಗುವದು ಮನಸ್ಸಿಗೇ ಸರಿ. ಸ್ಥೂಲದೇಹದ ಅನುಕೂಲ-ಪ್ರತಿಕೂಲ ಭಾವನೆಯಿಂದ ಮನಸ್ಸು ಸುಖ-ದುಃಖವನ್ನು ಹೊಂದುವದು. ಈ ರೀತಿ ಇಲ್ಲಿ ಎಲ್ಲಾ ವ್ಯವಹಾರವೂ ಮನೋಮಯ!
ಬಾಹ್ಯ ಪದಾರ್ಥಗಳ ಸಂಗಡ ಇಂದ್ರಿಯಗಳ ಸಂಯೋಗವಾಗಿ ಆಗುವ ದೇಹ ಸುಖವೇ ವಾಸನೆ. ಪಂಚಭೂತಗಳ ದೇಹ ಪಂಚಭೂತಗಳಲ್ಲಿ ಕರಗಿಹೋದರೂ ವಿಷಯವಾಸನೆ ಹಾಗೇ ಉಳಿದುಕೊಳ್ಳುತ್ತದೆ ಎಂದೇ ಹೇಳಬೇಕಾಗುತ್ತದೆ. ಬರೆಯುವದು ಶೇಷವಾಗಿ ಉಳಿದರೆ ಮಲಗಿ ಎದ್ದ ಮೇಲೆ ಅದನ್ನು ಪೂರ್ತಿಮಾಡುವಂತೆ, ಈ ಶೇಷ ವಾಸನೆಯ ಪೂರ್ತಿಗಾಗಿ, ನಿದ್ದೆಯ ರೂಪವಾದ ಮರಣದ ವಿಸ್ಮೃತಿಯಲ್ಲಿ ಕೆಲಕಾಲ ಕಳೆದು, ಮುಂದಿನ ಜನ್ಮದಲ್ಲಿ ಕರ್ಮಗಳನ್ನೆಸಗುವನು. ಪಂಚಭೂತಗಳ ದೇಹ ಪಂಚಭೂತಗಳಲ್ಲಿ ಕರಗಿಹೋದರೂ ವಾಸನೆ ಮತ್ತೊದು ದೇಹವನ್ನು ಪಂಜಭೂತಗಳಿಂದಲೇ ಮಾಡಿ ಧರಿಸುವದು.
ಶಾಸ್ತ್ರಾಧಾರಿತ ‘ಕರ್ಮಾನುಸಾರ ಪುನರ್ಜನ್ಮವಿದೆ’ ಎಂಬುದರಲ್ಲಿ ವಿಶ್ವಾಸವಿಡತಕ್ಕವನೇ ಆಸ್ತಿಕ. ಪುನರ್ಜನ್ಮದಲ್ಲಿ ವಿಶ್ವಾಸವಿಡದಿದ್ದವನು ನಾಸ್ತಿಕ. ಜಾಬಾಲಿಗಳೇ, ಇದು ನಿಮ್ಮ ‘ಮೃತನಾದವನು ಇನ್ನೆಲ್ಲಿ?’ ಎಂಬ ಪ್ರಶ್ನೆಗೆ ಉತ್ತರ!
ಅನೇಕ ವಾಸನೆಗಳಿಂದ ಕರ್ಮಗಳನ್ನು ಮಾಡುತ್ತಲೇ ಜೀವಿಸುವ ಜೀವಿಗೆ ಕರ್ಮಫಲದ ವಾಸನೆಯು ತಪ್ಪುವವರೆಗೆ ಜನ್ಮವು ಹೇಗೆ ತಾನೇ ತಪ್ಪುವದು? ಈ ವಾಸನೆಯೇ ಜೀರ್ಣದೇಹವನ್ನು ಬಿಟ್ಟು ಮತ್ತೊಂದು ದೇಹವನ್ನು ಧರಿಸುವದು. ಇದು ಹೊಸ ಬಟ್ಟೆ ಧರಿಸಿದಂತೆ ಅಥವಾ ಹೊಸ ಗೊಂಬೆ ತಯಾರಿಸಿದಂತೆ ಎಂದೆನ್ನಬಹುದು!