ಸದ್ಯದ ಕಾಲದಲ್ಲಿ ನಮ್ಮ ದೇಶವನ್ನು ಪರಕೀಯ ಸಂಸ್ಕ್ರತಿಯು ಭರದಿಂದ ವ್ಯಾಪಿಸಹತ್ತಿರುವದು. ರಾಜಕೀಯ ಆಳಿಕೆಯೂ, ಶಿಕ್ಷಣ ಪ್ರಣಾಲಿಯೂ ಆ ಬಗೆಯನ್ನೇ ಎಲ್ಲ ರೀತಿಯಿಂದ ಪ್ರೋತ್ಸಾಹಿಸುತ್ತಿರುವದು ವಿಷಾದದ ಸಂಗತಿಯು.
ನಿರ್ಮಲ ವಿಶ್ವಬಾಂಧವ್ಯ, ಶಾಂತಿಯನ್ನು ನಿರ್ಮಿಸುವ ಸನಾತನ ಧರ್ಮದ ಕಡೆಗೆ ಚಿಕಿತ್ಸಕ ದೃಷ್ಟಿಯನ್ನು ಹರಿಸಿದ ಸುಶಿಕ್ಷಿತರು ತೀರಾ ಕಡಿಮೆ. ಧರ್ಮದ ಬಗ್ಗೆ ಆಳವಾದ, ನಿಷ್ಪಕ್ಷಪಾತ ಅಭ್ಯಾಸ ಮಾಡದೇ, ತತ್ಕಾಲಿಕ ತಮಗೆ ತೋರಿದ ವಾಗ್ಜಾಲದ ದಾಳಿಮಾಡುವವರೇ ಹೆಚ್ಚಾಗಿದ್ದಾರೆ.
ಇಂಥ ಸಂದರ್ಭದಲ್ಲಿ ಸನಾತನ ಧರ್ಮಕ್ಕೆ ಉಳಿಗಾಲವಿಲ್ಲವೋ ಎಂಬ ಶಂಕೆ ಸಹ ಬರುವದು ಸಹಜ. ಆದರೂ ಎದೆಗುಂದಬೇಕಾಗಿಲ್ಲ. ಸನಾತನ ಧರ್ಮವು ತನ್ನದೇ ಬಲದಿಂದ ಬಾಳಿಯೇ ಬಾಳುವದು. ಸನಾತನ ಧರ್ಮ ಸಂಪೂರ್ಣ ಪ್ರಕಾಶಮಾನವಾಗಿಯೇ ಆಗುವದು!
ವಿಶ್ವದ ಅಸಂಖ್ಯ ಕೋಲಾಹಲ, ಕೊನೆಗೊಮ್ಮೆ, ಎಲ್ಲಾ ಕಡೆಯಲ್ಲೂ- ಜಗತ್ತಿನ ಯಾವುದೇ ಜನಾಂಗವಿರಲಿ- ಈ ಪುರಾತನ ಸನಾತನ ಧರ್ಮಕ್ಕೇ ಶರಣು ಹೋಗಲು ಹಚ್ಚಿಯೇ ತೀರುವದು.
ವ್ಯವಹಾರದ ಬರೀ ಆಡಂಬರಕ್ಕೆ ಬೇಸತ್ತ ಎಷ್ಟೋ ಪಾಶ್ಚಾತ್ಯರು ಸನಾತನಧರ್ಮದ ಅಂತಸ್ಸಾರಕ್ಕೆ ಮೆಚ್ಚಿ ಈಗಾಗಲೇ ಮನವಾರೆ ಹೊಗಳಿದ್ದೂ ಉಂಟು. ಸನ್ಯಾಸೀಜೀವನ ನಡೆಸುತ್ತಿರುವ ಪಾಶ್ಚಾತ್ಯರನ್ನೂ ನಾನು ನೋಡಿದ್ದೇನೆ. ಮುಂದಿನ ಜನ್ಮದಲ್ಲಾದರೂ ಭಾರತದಲ್ಲೇ ಹುಟ್ಟಬೇಕೆಂದು ಅಪೇಕ್ಷೆಪಡುವವರೂ ಹಲವರಿದ್ದಾರೆ. ನಮ್ಮಲ್ಲಿಯೂ ಪಾಶ್ಚಾತ್ಯ ಶಿಕ್ಷಣ ಶಿಕ್ಷಿತ ಹಲವರು ಅನನ್ಯಭಾವದಿಂದ ಸನಾತನ ಧರ್ಮಕ್ಕೆ ಶರಣಾದದ್ದುಂಟು.
ಸನಾತನ ಧರ್ಮದ ತಿರುಳು ದೈದೀಪ್ಯಮಾನ ರತ್ನ! ಈಗ ಧೂಳುಮುಸಕಿ, ಇದನ್ನು ಕೆಲವರೇ ಗುರುತಿಸತಕ್ಕವರಾಗಿದ್ದಾರೆ. ಇದು ಸಾಲದು. ಸರ್ವರೂ ಈ ಪುರಾತನ ಧರ್ಮದ ಕೊಡುಗೆಗೆ ಪಾತ್ರರಾಗಬೇಕು!
ಸನಾತನ ಧರ್ಮ ಎಲ್ಲಾ ಶಾಸ್ತ್ರಗಳ ಅತ್ಯುತ್ತಮ ಸಾರಗಳನ್ನು ಮನುಷ್ಯಕುಲಕ್ಕೆ ಹಿತವಾಗುವಂತೆ, ಹಗುರಾಗಿ ಜೀರ್ಣಿಸಿಕೊಳ್ಳಲು ಆಗುವಂತೆ ತನ್ನಲ್ಲಿ ಸಂಗ್ರಹಿಸಿಕೊಂಡಿದೆ. ಇಹ-ಪರಗಳೆರಡನ್ನೂ ಗಮನಿಸಿ, ಕೊನೆಗೆ ಅನಂತ ಸುಖದ ಗುರಿಮುಟ್ಟಿಸುವ ಸರ್ವಪ್ರಥಮ ಧರ್ಮ ಸನಾತನ ಧರ್ಮ! ಐತಿಹಾಸಿಕವಾಗಿಯೂ ಉಳಿದ ಎಲ್ಲ ಧರ್ಮಗಳೂ ಇದರ ಕುಡಿಗಳೇ! ಅಥವಾ ಅನುಕರಣಗಳೇ!
ನೀವೆಲ್ಲ ವರ್ಣಾಶ್ರಮಧರ್ಮದಂತೆ ನಡೆಯಿರಿ. ಅವಶ್ಯವಾದಷ್ಟೇ ವ್ಯವಹಾರವನ್ನು, ಬದುಕಿನ ಸಾಧನವೆಂದು ಇಟ್ಟುಕೊಂಡು, ಪರಮಾರ್ಥಕ್ಕಾಗಿ ದುಡಿಯಿರಿ. ಅದೇ ಮಾನವ ಜೀವನದ ಗುರಿ!
ಎಲ್ಲರೂ ಪರಮಾತ್ಮನಸುಖದ ಕಡೆಗೆ, ಮೋಕ್ಷದೆಡೆಗೆ ಸಾಗಿರಿ! ಅಖಂಡ ಸುಖಭಾಗಿಗಳಾಗುವಂತಾಗಲಿ!