ವಿಷಯದಲ್ಲಿ ಸುಖವಿಲ್ಲವೆಂದು ಶುದ್ಧ ವಿವೇಕದಿಂದ ಮೊದಲೇ ತೀರ್ಮಾನಿಸಿ, ಅದರ ಸಂಪರ್ಕವನ್ನು ತಗಲಿಸಿಕೊಳ್ಳದೇ ಪರಮಾತ್ಮನ ಸುಖ ಸ್ವರೂಪವೊಂದನ್ನೇ ಗುರಿಯಾಗಿರಿಸಿಕೊಳ್ಳುವದು ಸನ್ಯಾಸಾಶ್ರಮ.
ಕೊಳೆ ಮುಟ್ಟಿ ತೊಳೆದುಕೊಳ್ಳುವದಕ್ಕಿಂತಲೂ ಅದರ ಗೊಡವೆಗೇ ಹೋಗದಿರುವದು ಬಾಲ ಸನ್ಯಾಸ ಮಾರ್ಗ! ಬಾಲ್ಯದಿಂದಲೇ ಈ ಶ್ರೇಷ್ಟವಾದ ಗುರಿಯನ್ನು ಗುರುತಿಸಿಕೊಂಡವನೇ ಧನ್ಯ! ಪರಮಾತ್ಮಸುಖ ಸಂಪಾದನೆಗೆ ಅವ್ಯಾಹತ ಪ್ರಯತ್ನ ಮಾಡುವವನೇ ಶ್ರೇಷ್ಟ!
ಗುರಿಯು ಪರಿಶುದ್ಧವಾಗಿದ್ದರೆ, ಅದನ್ನು ಪಡೆಯಲೆತ್ನಿಸುವವನ ಪ್ರಯತ್ನಗಳೂ ಪರಿಶುದ್ಧವಾಗುತ್ತದೆ. ಯಾರ ಗುರಿ, ಪ್ರಯತ್ನ ಪರಿಶುದ್ಧವಾಗಿರುವವೋ ಆ ಮನುಷ್ಯನು ಸ್ವಯಂ ಪರಿಶುದ್ಧನಾಗುತ್ತಾನೆ.
ಯಾರು ತಾಳ್ಮೆಯುಳ್ಳವರಾಗಿ, ಜಿತೇಂದ್ರಿಯರಾಗಿ, ಪರಿಶುದ್ಧ ವಿವೇಕದಿಂದ ನಡೆಯುವರೋ ಅವರೇ ಶಾಂತರೆನಿಸಿಕೊಳ್ಳುತ್ತಾರೆ.
ಅಂಥವನೇ ತನ್ನ ಆತ್ಮೋದ್ಧಾರ ಮಾಡಿಕೊಳ್ಳಲು ತಕ್ಕವನು. ಅವನೇ ತನ್ನ ಸುತ್ತಮುತ್ತಲಿನ ಜಗವನ್ನೂ ಉದ್ಧರಿಸಬಲ್ಲನು!
ಇಹದಲ್ಲಿಯೂ ಅವನ ಘನತೆ ಅಪಾರವಾಗಿ ಬೆಳೆಯುತ್ತದೆ. ಅಂಥ ಪ್ರಭಾವೀ ಪುರುಷನ ಯೋಗ್ಯತೆಯನ್ನು ಶಾಸ್ರ್ತಗಳೂ ಬಾಯ್ತುಂಬ ಹೊಗಳುವವು.
‘ಪೃಥ್ವೀತಸ್ಯ ಪ್ರಭಾವಾತ್ ವಹತಿ ದಿನಮಿಶಂ ಯೌವನೇ ಯೋಗಿ ಶಾತಂ’
ಯೌವನದಲ್ಲಿಯೇ ಶಾಂತನಾಗಿ, ಯೋಗಿಯಾಗಿ ದಿವ್ಯಪದವನ್ನು ಸೇರಿದವನ ಮಹಿಮೆ ಅಪಾರವಾದುದು; ಅವನ ಪ್ರಭಾವದಿಂದಲೇ ಜಗತ್ತಿನ ನಿರ್ವಹಣೆಯಾಗುವದು; ಜಗತ್ತಿನ ಉದ್ಧಾರವಾಗುವದು!
ಹುಟ್ಟಿದವರು ಸಾಯುತ್ತಾರೆ; ಸತ್ತವರು ಹುಟ್ಟುತ್ತಾರೆ. ಆದರೆ ಅಂಥ ತಿರುಳಿಲ್ಲದ ಹುಟ್ಟು-ಸಾವುಗಳಿಗೆ ಏನು ಬೆಲೆ?
ಆತ್ಮಾನುಭಹೊಂದಿ ಪರಮಾತ್ಮನ ಪದವನ್ನು ಪಡೆದವರು ಮಾತ್ರವೇ ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳುವರು. ತಮ್ಮ ಕುಲ ಪಾವನ ಮಾಡುವರು. ತನ್ನ ಸುತ್ತಲಿನ ಪ್ರಪಂಚವನ್ನೂ ಉದ್ಧರಿಸವರು!
ಕುಲಂ ಪವಿತ್ರಂ ಜನನೀ ಕೃತಾರ್ಥಾ|
ವಸಂಧರಾ ಪುಣ್ಯವತೀ ಚ ಯೇನ||
ಅಪಾರಸಂವಿತ್ಸುಖಸಾಗರೇ ಸ್ಮಿನ್|
ಲೀನಂ ಪರೇ ಬ್ರಹ್ಮಣಿ ಯಸ್ಯ ಚೇತಃ||
ಯಾರ ಮನಸ್ಸು ಅಪಾರ ಜ್ಞಾನಮಯ ಸುಖಸಾಗರದಲ್ಲಿ ಮಗ್ನವಾಗಿರುವದೋ ಅವನ ಕುಲವೇ ಪವಿತ್ರ! ಅವನ ಹೆತ್ತ ತಾಯಿ ಕೃತಾರ್ಥ! ಅವನು ಚಲಿಸಿದ ಭೂಮಿ ಪುಣ್ಯಮಯ!
ಮನುಷ್ಯ ಜೀವನಕ್ಕೆ ನಿಜವಾದ ಗುರಿಯೆಂದರೆ, ನಿಜಸುಖಕ್ಕೆ ಸಾಧನವಾದ ಆಧ್ಯಾತ್ಮ ಜ್ಞಾನವೇ ಸರಿ!