Literature

ಇರಿವೆಯಿಂದ ಇಂದ್ರನವರೆಗೆ ಎಲ್ಲರಿಗೂ ಬೇಕಾದದ್ದು ಆನಂದ!

ಸರ್ವರ ಅಂತಃಕರಣದಲ್ಲಿ ಯಾವಾಗಲೂ ಒಂದಲ್ಲ ಒಂದು ಅಭಿಲಾಶೆ ಚಿಮ್ಮುತ್ತಲೇ ಇರುತ್ತದೆ. ಇದನ್ನು ಸೂಕ್ಷವಾಗಿ ಪರೀಕ್ಷಿಸಿ, ಪ್ರಥಕ್ಕರಿಸಿದಾಗ ಜೀವನದ ಮಹದುದ್ದೇಶ ಯಾವುದೆಂಬುದನ್ನು ನಿರ್ಣಯಿಸಬಹುದು. ಈಗ, ಈ ಅಭಿಲಾಶೆ ಎಲ್ಲರಲ್ಲೂ ಯಾವಕಡೆ ಮುಖ್ಯವಾಗಿ ಹರಿಯುತ್ತದೆಂಬುದನ್ನು ನೋಡೋಣ.

ಪ್ರತಿಯೊಂದು ಪ್ರಾಣಿಯೂ ತನಗೆ ಜೀವನವಿದೆಯೆಂದು ಸಾಮಾನ್ಯವಾಗಿ ಅರಿತಿರುತ್ತದೆ. ಆ ಜೀವನಕ್ಕಾಗಿ ತಮ್ಮ ತಮ್ಮ ಬಗೆಯಲ್ಲಿ ಪ್ರಯತ್ನಿಸುವ ಜ್ಞಾನವೂ ಅವುಗಳಿಗುಂಟು. ಆದರೆ ಅಷ್ಟರಿಂದಲೇ ಅವುಗಳಿಗೆ ಸಮಾಧಾನವಿಲ್ಲ.

‘ಯಃಕಶ್ಚಿತ್ ಸೌಖ್ಯಹೇತೋಃ ತ್ರಿಜಗತಿ ಯತತೇ ನೈವ ದುಃಖಸ್ಯ ಹೇತೋಃ’ ‘ತನಗೆ ಅಖಂಡ ಸುಖವಿರಲಿ, ನಿರಂತರ ಆನಂದವಷ್ಟೇ ತನ್ನ ಜೀವನದಲ್ಲಿ ಬೆರೆತಿರಲಿ’ ಎಂದು ಜೀವಿಯು ಸರ್ವದಾ ಚಡಪಡಿಸುತ್ತಿರುತ್ತದೆ. ತಾನು ಬಾಳುತ್ತಿರುವ ಜೀವನದ ಬಗ್ಗೂ ಜೀವಿ, ಒಂದಾನುವೇಳೆ ಅರಿವಿಲ್ಲದೇ ಬದುಕುತ್ತಿರಬಹುದು ಆದರೆ ಸುಖದ ಸ್ಮೃತಿ, ಸುಖದ ಆಶೆ, ಸುಖದ ಸಲುವಾಗಿ ಪ್ರಯತ್ನ ಮಾತ್ರ ನಿಲ್ಲದೇ ನಡೆಯುತ್ತಿರುತ್ತದೆ. ಇರುವೆಯಿಂದ ಇಂದ್ರನವರೆಗೆ ಎಲ್ಲ ಜೀವಿಗಳಿಗೂ ಬೇಕಾದುದು ಆನಂದ! ಆ ಆನಂದವನ್ನು ಅನುಭವಿಸಲು ಏರ್ಪಟ್ಟ ಒಂದು ಚಿಕ್ಕ ಸನ್ನಿವೇಶವೇ ಈ ಜೀವನ!

‘ಆನಂದೇನ ಜಾತಾನಿ ಜೀವಂತಿ, ಆನಂದಂ ಪ್ರಯಂತ್ಯಭಿ ಸಂವಿಶಂತಿ’ ಇದು ಶ್ರುತಿ ಘೋಷಿತ ವಾಕ್ಯ.
ಹುಟ್ಟಿದ ಜೀವಿಗಳೆಲ್ಲಾ ಆನಂದಕ್ಕಾಗಿಯೇ ಬದುಕುತ್ತವೆ; ಆನಂದದತ್ತಲೇ ಸಾಗಿ ಆನಂದದಲ್ಲಿಯೇ ಸೇರಿಕೊಳ್ಳುತ್ತವೆ!
ಹೀಗಾಗಿ, ಎಲ್ಲ ಜೀವಿಗಳ ನೈಸರ್ಗಿಕ ಅಭಿಲಾಶೆ, ಅಷ್ಟೇಕೆ ಜೀವನದ ಉದ್ದೇಶವೂ ಕೂಡ ಅಖಂಡ ಆನಂದಲಾಭವೇ ಎಂದು ಸಿದ್ಧವಾಗುತ್ತದೆ!

home-last-sec-img