Literature

ದೇವರ ಇರುವಿಕೆಗೆ ಶ್ರುತಿ-ಸ್ಮ್ರತಿ ಆಧಾರ

ಪರಮಾತ್ಮ ಶಕ್ತಿಯ ಪ್ರಭಾವವು ಅಕಲ್ಪಿತವಾಗಿದೆ. ನಮ್ಮ ಬುದ್ಧಿಯ ತರ್ಕಕ್ಕೆ ಅದು ನಿಲುಕಲಾರದು. ಯಾವ ಸ್ಥಳವು ಮಾನವನ ಮನಸ್ಸಿಗೂ ಅಗೋಚರವಾಗಿರುವದೋ ಅಲ್ಲಿ ಪರಮಾತ್ಮನಿದ್ದಾನೆ. ಪರಮಾತ್ಮನ ಶಕ್ತಿಯ ಆಳವನ್ನು ಕಲ್ಪಿಸುವದೂ ಕೂಡ ಮಾನವ ಬುದ್ಧಿಗೆ ಅಸಾಧ್ಯ; ನಮ್ಮ ಬುದ್ಧಿಶಕ್ತಿಯ ಆಕಲನಕ್ಕೆ ಸಿಗದಿದ್ದದ್ದೆಲ್ಲಾ ಇಲ್ಲವೆನ್ನುವದು ಸರಿಯಲ್ಲ.

ನಮ್ಮದು ವೈದಿಕ ಧರ್ಮ. ನಮಗೆ ಶ್ರುತಿ-ಸ್ಮ್ರತಿಗಳು ಆಧಾರ. ಈ ಕೆಳಗಿನ ಶ್ರುತಿವಾಕ್ಯಗಳನ್ನು ನೋಡೋಣ.
‘ಏಷ ಹಿ ದೇವಃ ಪ್ರದಿಶೋ ಅನು ಸರಾಃ ಪೂರೋಹಿ ಜಾತಃ ಸ ಉ ಗರ್ಭೇ ಅಂತಃ ಸ ವಿಜಾಯಮಾನಃ ಸ ಜನಿಷ್ಯಮಾಣಃ …’ ಮತ್ತು ‘ಸ ದೇವ ಸೌಮ್ಯ ಇದಮಗ್ರ ಅಸೀದೇಕಮೇವಾದ್ವಿತೀಯಂ’

ಸೃಷ್ಟಿಯ ಪೂರ್ವದಲ್ಲಿ ಮೂರು ಕಾಲಗಳೂ, ದಶದಿಕ್ಕುಗಳೂ, ಪಂಚಭೂತಗಳೂ ಇವಾವುದೂ ಇಲ್ಲದೆ ಒಂದೇ ಒಂದಾದ ಸದ್ರೂಪ ಪರಮಾತ್ಮನೊಬ್ಬನೇ ಪ್ರಕಾಶಮಾನನಾಗಿದ್ದನು. ಅವನಿಂದಲೇ ಈ ಸೃಷ್ಟಿಯು ಸೃಷ್ಟಿಸಲ್ಪಟ್ಟಿತು. ಎಲ್ಲಾ ದಿಕ್ಕುಗಳೂ ಅವನೇ. ಮೊದಲು ಹುಟ್ಟಿದವನು ಅವನೇ! ಈಗ ಗರ್ಭದಲ್ಲಿರುವವನೂ ಮುಂದೆ ಹುಟ್ಟತಕ್ಕವನೂ ಅವನೇ! ನಾನಾವಿಧ ಪ್ರಪಂಚರೂಪದಿಂದ ಗೋಚರಿಸುವನೂ ಅವನೇ.

‘ಆತ್ಮೈವೇದಮಗ್ರ ಆಸೀತ್| ಪುರುಷವಿಧಃ …’
ಈ ಸೃಷ್ಟಿಯ ಪೂರ್ವದಲ್ಲಿ ಪರಮಾತ್ಮನೊಬ್ಬನೇ ಇದ್ದನು. ಅವನು ಸುತ್ತಲೂ ನೋಡಿ ಎಲ್ಲಾ ಕಡೆಯಲ್ಲೂ ಸದ್ರೂಪದಿಂದ ತಾನೇ ಇದ್ದುದರಿಂದ, ತನಗಿಂತ ಬೇರೆಯಾದುದು ಯಾವದನ್ನೂ ಕಾಣದುದರಿಂದ, ‘ಸೋಹಂ’ ಎರಡನೆಯದೆಂಬುದೆಲ್ಲಾ ‘ನಾನೇ’, ‘ನನಗಿಂತ ಬೇರೆ ಯಾವುದೂ ಇಲ್ಲ’ ಎಂದು ಹೇಳಿದನು. ಆಗಲೇ ನಿರಾಕಾರನಾದ ಪರಮಾತ್ಮನಲ್ಲಿ ‘ಅಹಂ’, ‘ನಾನು’ ಎನ್ನುವ ಪದ ಹುಟ್ಟಿತು.

ಪರಮಾತ್ಮನು ತನ್ನ ಸಂಕಲ್ಪ ಶಕ್ತಿಯಿಂದಲೇ ‘ಸ ಇಮಾನ್ ಲೋಕಾನ್ ಲೋಕಪಾಲಾನ್ ಸೃಜೇಯಮ್’ ಈ ಎಲ್ಲ ಲೋಕಗಳನ್ನು, ಲೋಕಪಾಲಕರನ್ನು ಸೃಷ್ಟಿಸಿ, ತಾನೇ ಈ ಜಗದ್ರೂಪವಾಗಿ ಪರಿಣಮಿಸಿದನು. ಆದಾಗ್ಯೂ, ‘ತಾನು’ ‘ತಾನಾಗಿಯೇ’ ಉಳಿದನು. ಇದೇ ಅವನ ಅದ್ಭುತ ಶಕ್ತಿ!

home-last-sec-img