Literature

ನಮ್ಮ ಮನಸ್ಸು ಯಾವ ವಿಷಯದ ಚಿಂತನದಲ್ಲಿ ಮಗ್ನವಾಗಿರುವದೋ ಆ ವಿಷಯದ ಪ್ರಾಪ್ತಿ ನಮಗಾಗುವದು.

ಸಾಮಾನ್ಯ ಮಾನವ ಜೀವನದಲ್ಲಿ ಕಾರ್ಯಸಾಫಲ್ಯಕ್ಕೆ ಮನಸ್ಸೇ ಕಾರಣ. ಲೋಕವ್ಯವಹಾರದಲ್ಲಿ ಅದು ಪ್ರಧಾನವಾದ ಉಪಕರಣ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯವೇ. ಮನುಷ್ಯಶಕ್ತಿ ಉಗಮಿಸುವದು ಮನಸ್ಸಿನಿಂದಲೇ. ಕ್ರಿಯಾಸಿದ್ಧಿ ಮನಸ್ಸಿನ ದಾರ್ಡ್ಯವನ್ನವಲಂಬಿಸಿದೆ.
ಇಂತಹ ನಮ್ಮ ಮನಸ್ಸು ಯಾವ ವಿಷಯದ ಚಿಂತನದಲ್ಲಿ ಮಗ್ನವಾಗಿರುವದೋ ಆ ವಿಷಯದ ಪ್ರಾಪ್ತಿ ನಮಗಾಗುವದು. ಈ ಮನಸ್ಸು ಯಾವುದನ್ನು ಧ್ಯಾನಿಸುವದೋ ಅದರಂತೆ ನಾವು ಆಗುವೆವು ಮತ್ತು ನಮ್ಮ ಜೀವನವು ರೂಪಗೊಳ್ಳುವದು.

‘ಯಚ್ಚಿತ್ತಃ ತನ್ಮಯೋ ಭವತಿ’

ವಿಷಯಗಳಲ್ಲಿ ಆಸಕ್ತಿಯಿಟ್ಟು ಅವುಗಳ ಚಿಂತನದಲ್ಲೇ ಮನಸ್ಸನ್ನು ಮುಳುಗಿಸಿದವನು ವಿಷಯಗಳಂತೆ ಜಡ-ಮೂಢನಾಗುವನು. ಅವುಗಳಲ್ಲಿರುವ ಕ್ಷಣಭಂಗುರತೆ, ದುಃಖಮಯತೆ ತನ್ನಲ್ಲಿಯೇ ಇರುವಂತೆ ಕಾಣುವದು. ಮತ್ತು ವಿಷಯಗಳಿಗೆ ಆಧೀನನಾಗಿ ತನ್ನ ಅಧಿಕಾರವನ್ನು ಕಳೆದುಕೊಳ್ಳುವನು.
ಇನ್ನು ವಿಷಯಗಳಾದರೋ, ಅತಿ ಕ್ಷುದ್ರವಾದಂತವು. ಒಮ್ಮೆ ತೋರಿ, ಒಮ್ಮೆ ಅಡಗಿ, ಒಮ್ಮೆ ಬಳಿಸಾರಿ, ಒಮ್ಮೆ ದೂರಸರಿದು ಮುಗ್ಧ ಜೀವಿಯೊಡನೆ ಚಕ್ಕಂದವಾಡುವಂಥದು! ವಿವೇಕವನ್ನು ಕಳೆದುಕೊಂಡ ಮನುಷ್ಯ ಈ ವಿಷಯಗಳಲ್ಲಿ ಮನಸೋತು ಅಧೀನನಾಗಬಹುದು.

ಆದರೆ ವಿಷಯಗಳು ಮಾತ್ರ ಯಾರ ಅಧೀನವೂ ಆಗುವದಿಲ್ಲ. ಏಕೆಂದರೆ ಅವುಗಳಿಗೆ ಯಾವ ಪರಿವೆಯೂ ಇಲ್ಲ. ಯಾವ ಕಲ್ಪನೆಯೂ ಇರುವದಿಲ್ಲ. ನಿಸರ್ಗದ ಸೆಳವಿನಲ್ಲಿ ಸಿಕ್ಕಿ ಎತ್ತೆತ್ತಲೋ ಸಾಗುತ್ತಿರುವವು. ಅವುಗಳಲ್ಲಿ ಮಗ್ನಮನಸ್ಕ ಮಾನವನೇ ಅವುಗಳ ಹಿಂದೆ ಓಡಬೇಕು. ಹೆಜ್ಜೆ-ಹೆಜ್ಜೆಗೆ ದುಃಖಿತನಾಗಬೇಕು. ಆಶಾಭಂಗವಾಗಿ ಅಳಬೇಕು. ಇಂಥ ವಿಷಯಗಳ ಬೆನ್ನು ಹತ್ತುವದರಲ್ಲಿ ಅರ್ಥವೇನು?

ಈಗ ನಮಗೆ ಸಿಕ್ಕಿರುವ ಇಹಲೋಕದ ಬಾಳುವೆಯು ಸುಖಕ್ಕಾಗಿ ಬಂದಿದೆಯೆಂದು ಸರ್ವಥಾ ಎಣಿಸಬೇಡಿರಿ. ಈ ಜೀವನಕಾಲ ತುಂಬಾ ಸಂಕಟಕಾಲ. ಇದರಲ್ಲಿ ಸುಖವಿಲ್ಲ. ನಾವು ಹಿತವೆಂದು ನಂಬಿದವುಗಳೆಲ್ಲ ನಮ್ಮ ಮೂರ್ಖತನಕ್ಕೆ ನಗುವ ಶತ್ರುಗಳಾಗಿವೆ.

ವಿಷಯದ ಕೊಳಚೆಯಲ್ಲಿ ಸಿಕ್ಕುಬಿದ್ದ ಮನಸ್ಸನ್ನು ಮೆಲ್ಲನೆ ಕಿತ್ತು ವಿವೇಕದ ದಿಶೆಯಲ್ಲಿ ಹೊರಳಿಸಬೇಕು. ಮನಸ್ಸನ್ನು ವಿವೇಕಾಧೀನ ಮಾಡಬೇಕು. ಆಗ ವಿವೇಕವು ಯಾವುದನ್ನು ಸುಖವೆಂದು ಒಪ್ಪುವದೋ, ನಿರ್ಣಯಿಸುವದೋ ಮನಸ್ಸು ಕೂಡ ಆ ಕಡೆ ತಿರುಗುವದು.

ಇಷ್ಟು ಕಾಲ ವಿಷಯಗಳ ಕಡೆಗೆ ಧಾವಿಸಿ ಶ್ರಮಪಟ್ಟಿದ್ದಾಯಿತು; ಜನ್ಮಾಂತರಗಳಲ್ಲಿ ಅಲೆದಿದ್ದಾಯಿತು. ಪ್ರತಿಯೊಂದು ಜನ್ಮದುದ್ದಕ್ಕೂ ಮೂಗಿಗೆ ತುಪ್ಪ ಬಳಿಸಿಕೊಂಡ ಗುಂಗೀ ಹುಳದಂತೆ ಸುಖವನ್ನು ಅರಸುತ್ತ, ಧಾವಿಸುತ್ತ ಗೊತ್ತು ಗುರಿಯಿಲ್ಲದ ಯಾತ್ರೆ ಮಾಡಿದ್ದಾಯಿತು.

‘ಆಯಿತು; ಆಗಲಿ; ಆಗಿಹೋದ ಅನರ್ಥಗಳ ಲೆಕ್ಕ ಬೇಡ! ಆದರೆ ಈಗ ಜಾಗೃತನಾಗಿದ್ದೇನೆ. ವಿವೇಕಿಯಾಗಿದ್ದೇನೆ!’ ಇದು ಪಂಜರವನ್ನು ಭೇದಿಸಿದ ಸಿಂಹದೋಪಾದಿ ಎಚ್ಚತ್ತ ಮನಸ್ಸಿನ ನಿರ್ಧಾರ! ವಿಷಯಗಳನ್ನು ಅಲ್ಲಗಳೆದು ಮುನ್ನುಗ್ಗುವದೇ ಜೀವನದ ಗುರಿ!

home-last-sec-img