Literature

‘ನಾನು’ ಎಂಬ ಅರಿವು

ದೇಹದಲ್ಲಿರುವ ‘ನಾನು’ ಎಂಬ ಅರಿವು ದೇಹ, ಪ್ರಾಣ, ಮನ, ಬುದ್ಧಿಗಳಿಗೆ ಸಂಬಂಧಿಸಿಲ್ಲ. ಈ ಶುದ್ಧ ‘ನಾನು’ ಕೇವಲ ಸತ್, ಚಿತ್, ಆನಂದ ರೂಪದಲ್ಲಿದೆ.

ಅವಿದ್ಯೆಯಿಂದಾದ ವಿಷಯವಾಸನೆಯೇ ಪ್ರಾಣ, ಮನ ಇತ್ಯಾದಿಗಳಿಂದೊಡಗೂಡಿದ ದೇಹಕ್ಕೆ ಕಾರಣ. ‘ವಿಷಯದಿಂದ ಸುಖಾನುಭವ’ ಎಂಬ ಭ್ರಮೆ ಇರುವವರೆಗೆ ಒಂದು ದೇಹವು ಬಿದ್ದರೂ, ಆ ವಾಸನೆ ಬೇರೆ ದೇಹವನ್ನು ಧರಿಸುವದು. ಆದಾಗ್ಯೂ, ಎಷ್ಟೇ ಜನ್ಮಗಳಾಗಲೀ ‘ನಾನು’ ಎಂಬ ಅರಿವು, ಆ ಸಚ್ಚಿದಾನಂದ ರೂಪ ತಾನೇ ತಾನಾಗಿ ಇದ್ದೇ ಇರುವದು. ಯಾವಾಗ, ಈ ಸಚ್ಚಿದಾನಂದ ರೂಪವೇ ‘ತಾನು’ ಎಂಬ ಜ್ಞಾನ ಆಗುತ್ತದೆಯೋ ತತ್ ಕ್ಷಣ ಈ ಜನ್ಮ-ಮರಣ ಸುಳಿ ತಪ್ಪಿ ಪರಮಾತ್ಮ ಸಾಯುಜ್ಯ ಮುಕ್ತಿಯಾಗುವದೆಂದು ಶ್ರುತಿ ಹೇಳುತ್ತದೆ. ಅವಿದ್ಯೆ ತನ್ನ ಪ್ರಾಪಂಚಿಕ ವಾಸನೆಯ ಸಮೇತ ನಷ್ಟವಾದಾಗ ಇದು ಸಹಜವಾಗಿ ಆಗುತ್ತದೆ.

ಶ್ರುತಿ-ಶಾಸ್ತ್ರಗಳ ಮಾತು ಹಿತವಾದುದು. ಅದರಲ್ಲಿ ಹೇಳಿರುವ ಗ್ರಾಹ್ಯಾಗ್ರಾಹ್ಯದ, ತ್ಯಾಗಾತ್ಯಾಗದ ವಿಚಾರವನ್ನು ಅನುಸರಿಸಬೇಕು. ಶ್ರುತಿ-ಸ್ಮೃತಿಗಳಿಂದ ವಿಧಿಸಿದ ಧರ್ಮವನ್ನನುಸರಿಸಿದಾಗ ಈ ಲೋಕದಲ್ಲೂ ಚೆನ್ನಾಗಿ ಬಾಳಿ-ಬದುಕಿ, ದೇಹಾಂತ್ಯದಲ್ಲಿ ಪರಮಾತ್ಮನ ಅನಂತ ಆನಂದಸ್ವರೂಪದಲ್ಲಿ ಏಕನಾಗಿ ಮೋಕ್ಷಪಡೆಯುವನು.

ಋತಂ ತಪಃ ಸತ್ಯಂ ತಪಃ ಶ್ರುತಂ ತಪಃ ಶಾಂತಂ ತಪೋದಮಸ್ತಪಃ ಶಮಸ್ತಪೋ ದಾನಂ ತಪೋ ಯಜ್ಞಂ ತಪೋ ಭೂರ್ಭುವಸ್ಸುವರ್ಬ್ರಹ್ಮೈ ತದುಪಾಸ್ಯೈ ತತ್ತಪಃ ||

ಪಾರಮಾರ್ಥಿಕ, ವ್ಯಾವಹಾರಿಕ ಸತ್ಯವನ್ನೇ ನುಡಿಯುವದು, ಗುರುಮುಖದಿಂದ ಶ್ರವಣ ಮಾಡುವದು, ಎಂತಹ ಪ್ರಸಂಗದಲ್ಲಿಯೂ ಶಾಂತನಾಗಿರುವದು, ದೇಹೇಂದ್ರಿಯ-ಮನ ನಿಗ್ರಹಮಾಡುವದು, ಸತ್ಪಾತ್ರದಲ್ಲಿ ಯಥಾಶಕ್ತಿ ದಾನಮಾಡುವದು, ಹೋಮ-ಹವನಾದಿ ಮಾಡುವದು(ದೇವಪೂಜೆ, ಜನರಲ್ಲಿ ಐಕ್ಯಭಾವವುಂಟುಮಾಡುವದು), ಸಚ್ಚಿದಾನಂದಾತ್ಮಕ ಬ್ರಹ್ಮಸ್ವರೂಪದ ಉಪಾಸನೆ ನಡೆಸುವದು, ಇವೆಲ್ಲಾ ತಪಸ್ಸೇ ಸರಿ.

‘ಪ್ರಪಂಚಾ ಪ್ರವರ್ತಕಂ ಲಯೋನ್ಮುಖೀಕರಣಂ ಸಾಧನಮ್’ ಭ್ರಾಮಕ ಪ್ರಪಂಚದ ಕಡೆಗೆ ಪ್ರವೃತ್ತವಾಗಗೊಡದೆ ಅದನ್ನು ಕಾರಣದ ಸತತ ವಿಚಾರದಿಂದ ನಿಷ್ಪ್ರಪಂಚ ಬ್ರಹ್ಮಸ್ವರೂಪದಲ್ಲಿ, ಆ ನಿರತಿಶಯಾನಂದದಲ್ಲಿ ಲಯಿಸುತ್ತಾ ಇರುವದೇ ಮೋಕ್ಷದ ಒಂದು ಸಾಧನೆ.
ಎಲ್ಲಾ ಸಾಧನೆ-ತಪಸ್ಸುಗಳನ್ನು ಹೇಳಿ, ಕಟ್ಟಕಡೆಯಲ್ಲಿ ತ್ಯಾಗವೇ ಎಲ್ಲದರಲ್ಲಿಯೂ ಶ್ರೇಷ್ಟವಾದುದೆಂದು ಯಜುರ್ವೇದದ ಅರಣ್ಯಕದಲ್ಲಿ ನಿರ್ಧರಿಸಿ ಹೇಳಿರುವರು.

‘ನ ಕರ್ಮಣಾ ನ ಪ್ರಜಯಾ … ವಿಶಂತಿ’ ‘ಕರ್ಮದಿಂದಲೂ, ಪ್ರಜೋತ್ಪತ್ತಿಯಿಂದಲೂ, ಸಂಪತ್ತಿನಿಂದಲೂ ಮೋಕ್ಷವನ್ನು ಪಡೆಯದೇ ತ್ಯಾಗವೊಂದರಿಂದಲೇ ಮೋಕ್ಷವನ್ನು ಪಡೆದರು.’ ಎನ್ನುತ್ತದೆ ಶ್ರುತಿ!

ಆನಂದಘನ ಪರಮಾತ್ಮ ಸ್ವರೂಪವು ಸ್ವತಃ ಪೂರ್ಣವಾಗಿರುವದು. ಆ ಸ್ವತಃ ಪೂರ್ಣವಾಗಿರುವಂತಹ ಕಾರಣಕ್ಕೆ ಕಾರ್ಯದಿಂದ ಯಾವ ಪ್ರಯೋಜನವೂ ತೋರದು. ಆ ಕಾರಣರೂಪವಾದ ಆನಂದದ ಪ್ರಾಪ್ತಿಗಾಗಿ ‘ನಿಷ್ಪ್ರಯೋಜಕ ಆನಂದಸಾಧಕ ಕಾರ್ಯ’ದ ತ್ಯಾಗವೇ ನಿಜ ಆನಂದ ಪ್ರಾಪ್ತಿಯ ಮುಖ್ಯ ಸಾಧನವಾಗುವದು.

ಒಬ್ಬ ಪರಮಾತ್ಮನೇ ಎಲ್ಲರಲ್ಲಿರುವನು! ಆತನಿಂದಲೇ ಈ ಎಲ್ಲ ಆಯಿತು!

home-last-sec-img