Literature

ಪರಮಾತ್ಮನಿಗೆ ಶರಣು ಹೋಗುವವನೇ ನಿಜವಾದ ಬುದ್ಧಿವಂತ! ದೃಷ್ಟಿವಂತ!

ವಿಷಯವಾಸನಾಮಗ್ನನಿಗೆ ಪರಮಾತ್ಮನ ಭಾವನೆಯಾದರೂ ಸಾಧ್ಯವೇ?
ಈ ಪ್ರಶ್ನೆ ಬರುವದು ಸಹಜ. ಅದು ನಿಜ ಕೂಡ. ಆ ಭಾವನೆ ಬರುವದೂ ಕಠಿಣ. ಅಂತವರ ಅಂತಃಕರಣವು ಪರವಶವಾಗಿರುತ್ತದೆ.
ಶ್ರುತಿಯು ಅಂತವರಿಗೆ ಅನನ್ಯ ಪ್ರಾರ್ಥನೆ ಮಾಡಲು ನಿರ್ದೇಶ ಮಾಡುತ್ತದೆ.
ವೇದದಲ್ಲಿ ಇಂಥ ಪಾರ್ಥನೆಗಳು ಹಲವು ಉಂಟು.

‘ಭದ್ರಂ ನೋ ಅಪಿವಾತಯ ಮನಃ’ ಮಾಂಗಲ್ಯದ ಕಡೆಗೆ ನನ್ನ ಮನಸ್ಸನ್ನು ಹರಿಸು.
‘ತನ್ಮೇ ಮನಃ ಶಿವ ಸಂಕಲ್ಪಮಸ್ತು’ ನನ್ನ ಈ ಮನಸ್ಸು ಮಾಂಗಲ್ಯವನ್ನು ಸಂಕಲ್ಪಿಸುವಂತಾಗಲಿ.
‘ತಂ ಹ ದೇವಮಾತ್ಮ ಬುದ್ಧಿಪ್ರಕಾಶಂ ಮುಮುಕ್ಷುರ್ವೈ ಶರಣಮಹಂ ಪ್ರಪದ್ಯೇ’ ದೇಹ ತಾನೆಂಬ ಬುದ್ಧಿಯನ್ನು ಬಿಡಿಸಿ ಆತ್ಮಬುದ್ಧಿಯನ್ನು

ಪ್ರಕಾಶಗೊಳಿಸುವ ದೇವನಿಗೆ ಮುಮುಕ್ಷುವಾದ ನಾನು ಮೊರೆಹೋಗುವೆನು.
ಅರ್ಜುನನೂ ‘ಶಿಷ್ಯಸ್ತೇಹಂ ಶಾಧಿ ಮಾಂ ತ್ವಾಂ ಪ್ರಪನ್ನಂ’ ಎಂದು ಪ್ರಾರ್ಥಿಸಿದ್ದು ಗೀತಾಭಕ್ತರೆಲ್ಲರಿಗೂ ಗೊತ್ತು.
ಹೀಗೆ ಪರಮಾತ್ಮನನ್ನು ಮನಃಪೂರ್ವಕ ಪ್ರಾರ್ಥಿಸುವದೆಂದರೆ ನಮ್ಮ ಅಂತರ್ಗತ ಪರಮಾತ್ಮನ ಅನುಗ್ರಹವನ್ನೇ ತೋಡಿಕೊಂಡಂತಾಗುವದು. ನಮಗೆ ಯಾವುದು ಅಸಾಧ್ಯವೋ ಅದಕ್ಕಾಗಿ ಸಮರ್ಥರ ಸಹಾಯ ಪಡೆಯುವದು ನ್ಯಾಯವೇ ಸರಿ. ಭಗವಂತನೋ ಸರ್ವಸಮರ್ಥನು. ಆತನ ನಿಯಮದಿಂದಲೇ ಸಮಗ್ರ ವಿಶ್ವವು ವ್ಯವಸ್ಥಿತವಾಗಿ ಸಾಗಿರುವದು.

‘ಭೂತಸ್ಯ ಜಾತಃ ಪತಿರೇಕ ಆಸೀತ್’ ಎಲ್ಲಾ ಜೀವಿಗಳ-ದೇವತೆಗಳ- ಒಡೆಯನೂ ಆತನೇ ಸರಿ. ಆತನಿಗೆ ಆತನ ಅಂಶರೂಪವಾಗಿರುವ ಈ ಜಗತ್ತು ಎಲ್ಲ ಬಗೆಯಿಂದಲೂ ಅರ್ಪಿತವಾಗಿದೆ. ಈ ಕ್ಷಣಭಂಗುರ ಜಗತ್ತಿನಲ್ಲಿ ಅವಿನಾಶಿಯಾದ ಆ ಪರಮಾತ್ಮನಿಗೆ ಶರಣುಹೋಗುವವನೇ ಬುದ್ಧಿವಂತನು. ಅವನೇ ನಿಜವಾದ ದೃಷ್ಟಿಯುಳ್ಳವನು!

home-last-sec-img