Literature

ಪರಮಾತ್ಮನ-ಪರಾಕಾಷ್ಟೆಯ ಸುಖ ಮನುಷ್ಯನಿಗೆ ಸಾಧ್ಯ!

ಇಂದ್ರಿಯಾಧೀನನಿಗೆ ವಿಷಯಗಳಲ್ಲಿ ಸುಖದ ಭಾಸವಾಗುವದೇನೋ ನಿಜ; ಆದರೆ ಈ ಭಾಸವಾದ ಸುಖ ವಿಷಯಗಳ ಸೊತ್ತಲ್ಲ. ಅದರಿಂದ ದೊರೆತದ್ದಲ್ಲ. ಅತ್ಯಂತ ಸುಖಮಯವಾದ ಪರಮಾತ್ಮನು ತನ್ನ ಒಂದು ಅಲ್ಪಾಂಶವಾಗಿ ಈ ಜಗತ್ತನ್ನು ಸೃಷ್ಟಿಸಿದನು. ಜಗತ್ತಿನ ತೀರ ಅತ್ಯಲ್ಪಾಂಶಗಳು ಈ ವಿಷಯಗಳು. ಇವುಗಳಲ್ಲಿ ಕಂಡ ಸುಖಾಭಾಸಗಳ ಮೂಲ ಪರಮಾತ್ಮ!

ಪರಮಾತ್ಮನು ಸುಖರೂಪನಲ್ಲವಾಗಿದ್ದರೆ ಸುಖದವಾಸನೆಯೇ ನಮ್ಮಲ್ಲಿ ಮೂಡುತ್ತಿರಲಿಲ್ಲ. ಅವನು ಸುಖರೂಪನಾದುದರಿಂದಲೇ ಅವನ ಅಲ್ಪಾಂಶವಾದ ಈ ಜಗತ್ತಿನಲ್ಲಿ ಸುಖದ ನೆರಳು ಕಾಣಿಸಿಕೊಂಡಿತು. ವಿಷಯಗಳಲ್ಲಿ ವ್ಯಕ್ತವಾದ ಪರಮಾತ್ಮನ ಅಲ್ಪ ಸುಖಾಭಾಸವೇ ಇಷ್ಟೊಂದು ಹೃದಯಂಗಮವಾದಾಗ ಪರಮಾತ್ಮನ ಸುಖಮಯತೆ ಅದೆಷ್ಟು ಪರಾಕಾಷ್ಟೆಯ ಸುಖ!

ಯಾವ ಸುಖವು ತಾಪತ್ರಯದಿಂದ ಸುಟ್ಟು ಹೋಗದೋ, ವಿಷಯವಾಸನೆಯ ಲೇಪದಿಂದ ಮಲಿನವಾಗದೋ, ನಿಸರ್ಗದ ನಿರ್ಬಂಧದಿಂದ ಸಂಕುಚಿತವಾಗದೋ ಅಂಥ ಪವಿತ್ರ-ವಿಶಾಲ ಸುಖವೇ ಪರಾಕಾಷ್ಟೆಯ ಸುಖ! ಅದೇ ಮನುಷ್ಯ ಜನ್ಮಕ್ಕೆ ಯೋಗ್ಯವಾಗಿರುವದು. ಅದೇ ಮನುಷ್ಯನ ಉಚಿತ ಧ್ಯೇಯವಾಗಿರಬೇಕು.

ನಮ್ಮ ವಿವೇಕವನ್ನು ಆ ದಿಶೆಗೆ ಹೊರಳಿಸಬೇಕು. ವಿವೇಕದ ಮೇಲಿನ ಮೋಹದ ಮುಸುಕನ್ನು ತೆಗೆಯಬೇಕು. ಪರಮಾತ್ಮನೇ ಪರಮಸುಖವೆಂದು ಗುರುತಿಸಿ ಆತನ ಪ್ರಾಪ್ತಿಗಾಗಿ ಹೆಣಗಬೇಕು. ಅವನನ್ನೇ ಬಯಸಿ, ಅವನಲ್ಲಿಯೇ ಮನಸ್ಸನ್ನು ಎರೆದು, ಆತನ ಪ್ರಾಪ್ತಿಗಾಗಿಯೇ ಅನವರತ ಪ್ರಯತ್ನಿಸಿದರೆ ಮನಸ್ಸಿನಲ್ಲಿಯ ವಿಷಯಾಶೆ ತಾನಾಗಿ ತೊಲಗಿ ಹೋಗುವದು. ಮನಸ್ಸು ಪರಿಶುದ್ಧವಾಗಿ ಪರಮಸುಖಾನುಭವಕ್ಕೆ ಪಾತ್ರವಾಗುವದು.
ವಿಷಯದಿಂದಾಚೆ ಬರುವ ಯೋಗ್ಯತೆ ಮನುಷ್ಯನಲ್ಲಿ ಇದೆ. ಕೆಲಕಾಲ ಅದು ಸುಪ್ತವಾಗಿರಬಹುದು. ಆ ಯೋಗ್ಯತೆಯನ್ನೇ ಸಾವಧಾನದಿಂದ ಜಾಗೃತಗೊಳಿಸಿಕೊಳ್ಳಬೇಕು. ಅಪವಿತ್ರ ವಾಸನೆಗಳೆಲ್ಲಾ ನಿರ್ಮೂಲವಾಗಿ ನಾಶಹೊಂದಿದ ಹೊರತು ಪರಮಾತ್ಮನ ದಿವ್ಯಪ್ರಕಾಶದ ದರ್ಶನವಾಗುವದಿಲ್ಲ.

ವಿವೇಕ-ಸಂಯಮಗಳ ಮೂಲಕ ಸಾಧನೆಮಾಡಿ ಕಾಮನೆಯ ಬೀಜವನು್ನ ಸುಟ್ಟು ಬೂದಿಮಾಡಿ ಪರಮಾತ್ಮನ ಕಡೆಗೆ ಪ್ರಗತಿಯನ್ನು ಸಾಧಿಸುವದೇ ಮನುಷ್ಯತ್ವದ ಘನತೆ! ಅದೇ ಮನುಷ್ಯ ಜೀವನದ ಹೆಗ್ಗುರಿ! ಇದು ಸಾಧ್ಯ!

home-last-sec-img