Literature

ಪುಣ್ಯದ ಫಲ-ಸುಖ ಬೇಕು; ಆದರೆ ಪುಣ್ಯಕಾರ್ಯ ಬೇಡ! ಪಾಪದ ಫಲ-ದುಃಖ ಬೇಡ; ಆದರೆ ಅಂತಹ ಕಾರ್ಯಗಳನ್ನು ಹುಮ್ಮಸದಿಂದ ಮಾಡುತ್ತಾರೆ. ಹಾಗಿದ್ದಾಗ ಅದರ ಫಲ ಉಣ್ಣಲೇಬೇಕಲ್ಲವೇ?

‘ಇಹ ಚೇದ ವೇದೀದಥ ಸತ್ಯಮಸ್ತಿ ನಚೇದಿಹಾವೇದೀನ್ಮಹತಿ ವಿನಷ್ಟಿಃ’
ಇದು ಕಠೋಪನಿಷತ್ತಿನ ವಾಕ್ಯ.
‘ಈ ಜನ್ಮದಲ್ಲೇ ಅರಿತುಕೊಂಡರೆ ಸತ್ಯವನ್ನು ಹೊಂದಿ ಸುಖರೂಪನಾಗುವನು. ಅರಿತುಕೊಳ್ಳದಿದ್ದರೆ ಮಾತ್ರ ಮಹತ್ತರವಾದ ಕೇಡಿಗೆ ಗುರಿಯಾಗುತ್ತಾನೆ.’

ಗೀತೆಯಲ್ಲಿಯೂ ಪರಮಾತ್ಮನು ಹೇಳಿದ್ದಾನೆ.

ಮಾಮುಪೇತ್ಯಂ ಪುನರ್ಜನ್ಮ ದುಃಖಾಲಯ ಮಶಾಶ್ವತಂ|
ನಾಪ್ನುವಂತಿ ಮಹಾತ್ಮಾನಃ ಸಂಸಿದ್ಧಂ ಪರಮಾ ಗತಾಃ||

‘ಜನ್ಮವೆಂಬುದು ದುಃಖದ ತವರು; ಅಶಾಶ್ವತ; ಸಾಧನೆಗಳನ್ನು ಮಾಡಿ ಪೂರ್ಣ ಸಿದ್ಧಿಯನ್ನು ಹೊಂದಿದ ಮಹಾತ್ಮರು ನನ್ನನ್ನು ಪಡೆಯುತ್ತಾರೆ. ಆ ಬಳಿಕ ಇಂಥ ಜನ್ಮವನ್ನು ಪಡೆಯುವದಿಲ್ಲ.’
ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಡೆದರೆ ಪರಮಾತ್ಮನೆನ್ನುತ್ತಾನೆ.
‘ನಮಾಂ ದುಷ್ಕ್ರತಿನೋ ಮೂಢಾಃ ಪ್ರಪದ್ಯಂತೇ ನರಾಧಮಾಃ’

ದೊರೆತ ಈ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳದೆ ಅದನ್ನು ವಿಷಯ ಸಂಗ್ರಹಕ್ಕಾಗಿಯೇ ಬಳಸುವವರು ಪಾಪಿಗಳೇ ಸರಿ. ಅವರು ಮೂಢರು ಮತ್ತು ಮನುಷ್ಯರಲ್ಲಿ ಅಧಮರು!

ವಿಷಯವು ಜನ್ಮಜನ್ಮಗಳಲ್ಲಿಯೂ ಕೊಲ್ಲುವದು. ಮತ್ತೆ ಮತ್ತೆ ಜನ್ಮಕೊಟ್ಟು ಕೊಲ್ಲುವದು. ಇಂಥ ವಿಷಯದಲ್ಲೇ ಮನಸ್ಸು ತೊಡಗಿಸುವದು ಮತ್ತು ಜೀವನಪೂರ್ತಿ ಹೆಣಗಾಡುವದು ಅದೆಂತ ಮನುಷ್ಯ ಜೀವನ?

ಭೋಜನಾಂತೇ ಸ್ಮಶಾನಾಂತೇ ಮೈಥುನಾಂತೇ ಚ ಯಾ ಮತಿಃ|
ಸಾ ಸರ್ವದಾ ಯದಿ ಭವೇತ್ ಕೋ ನ ಮುಚ್ಯೇತ ಬಂಧನಾತ್||

ವಿಷಯವು ಭೋಗಾಂತ್ಯದಲ್ಲಿ ದುಃಖವನ್ನು ಕೊಟ್ಟೇ ಮುಗಿಸುವದೆಂದ ಮೇಲೆ ನಿಜಸುಖಕ್ಕಾಗಿ ಅದನ್ನು ಮೊದಲೇ ಪರಿತ್ಯಜಿಸುವದು ಉತ್ತಮ!
ಹೀಗಿದ್ದರೂ, ವಿಷಯದ ಕೆಸರಿನಲ್ಲಿ ಹೊರಳುತ್ತ ಹಲವರು ಜೀವನವಿಡೀ ಸಾಗುತ್ತಿರುವದನ್ನು ನಾವು ಕಾಣುತ್ತಿರುತ್ತೇವೆ.
ಇದಕ್ಕೆ ಕಾರಣವಿಷ್ಟೇ. ಸುಖ ನಿರೀಕ್ಷೆಯಲ್ಲಿ ಅವರು ತೋರುವ ಅವಸರ, ಲಾಲಸೆ! ವಿವೇಕ, ಸಹನೆ, ಸಂಯಮಗಳ ಅಭಾವ!

ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನೇಚ್ಛಂತಿ ಮಾನವಾಃ|
ನ ಪಾಪ ಫಲಮಿಚ್ಛಂತಿ ಪಾಪಂ ಕುರ್ವಂತಿ ಯತ್ನತಃ||
ಪುಣ್ಯದ ಫಲ-ಸುಖ ಬೇಕು; ಆದರೆ ಪುಣ್ಯಕಾರ್ಯ ಬೇಡ! ಪಾಪದ ಫಲ-ದುಃಖ ಬೇಡ; ಆದರೆ ಅಂತಹ ಕಾರ್ಯಗಳನ್ನು ಹುಮ್ಮಸದಿಂದ ಮಾಡುತ್ತಾರೆ. ಹಾಗಿದ್ದಾಗ ಅದರ ಫಲ ಉಣ್ಣಲೇಬೇಕಲ್ಲವೇ?

home-last-sec-img