Literature

ಭಕ್ತಿ ಅಂದರೇನು?

ಭಕ್ತಿಯ ಲಕ್ಷಣವೇ ‘ಪ್ರೇಮ’! ‘ಪ್ರೀತಿ’ ಮಾಡುವದೇ ಭಕ್ತಿ!

ಇಂತಿರುವಾಗ ಇದನ್ನು ಒಂದಿಲ್ಲೊಂದು ರೂಪದಲ್ಲಿ ಅರಿಯದವರು ಯಾರಾದರೂ ಇದ್ದಾರೆಯೇ? ಇದನ್ನು ಮೆಚ್ಚದವರೂ ಇದ್ದಾರೆಯೇ?

ಅಂದಮೇಲೆ ಭಕ್ತಿಯನ್ನು ಗುರುತಿಸುವದು ತುಂಬಾ ಸುಲಭವಲ್ಲವೇ? ಅಂತೆಯೇ ಭಕ್ತಿಯನ್ನು ಸಾಧಿಸುವದೂ ಕಠಿಣವಲ್ಲ!
ಜೀವನದ ನಿಜಗುರಿಗೆ ಸುಖವಾಗಿ ತಪ್ಪದೇ ಸಾಗಲು ಶ್ರುತಿಮಾತೆ ಮೂರು ಮಾರ್ಗಗಳನ್ನು ದರ್ಶಿಸಿದ್ದಾಳೆ. ಅವುಗಳಲ್ಲಿ ಒಂದು ಭಕ್ತಿ!
ಭಕ್ತಿ-ಪ್ರೀತಿಗಳು ತಾತ್ವಿಕವಾಗಿ ಒಂದೇ ಆದರೂ ಮಾನವರ ಕಲ್ಯಾಣವಾಗಲೆಂದು ಋಷಿಗಳು ಇದಕ್ಕೆ ಪಾರ್ಶ್ವಗಳನ್ನು ಕಲ್ಪಿಸಿರುವರು ಅಥವಾ ವ್ಯವಸ್ಥೆಯನ್ನು ಹೇಳಿರುವರು.

೧. ತನ್ನ ಸರಿಕರಲ್ಲಿ ಅಥವಾ ಸಣ್ಣವರಲ್ಲಿ ಇರುವ ಪ್ರೀತಿಗೆ ಭಕ್ತಿ ಎನ್ನುವದಿಲ್ಲ. ಗೆಳೆಯನ ಪ್ರೀತಿಗೆ ‘ಸ್ನೇಹ’, ಮಗನ ಮೇಲಿನ ಪ್ರೀತಿಗೆ ‘ವಾತ್ಸಲ್ಯ’ ಎಂದೆನ್ನುತ್ತಾರೆ. ‘ಮಿತ್ರಭಕ್ತಿ, ಪುತ್ರಭಕ್ತಿ’ ಎಂದೆನ್ನುವದಿಲ್ಲ.

೨.ತನಗಿಂತ ಶ್ರೇಷ್ಟರಲ್ಲಿ ಇಡುವ ‘ಪ್ರೀತಿ’ಯೇ ‘ಭಕ್ತಿ’ಯೆನಿಸುವದು.
ತಂದೆ-ತಾಯಿ ಮಗನಿಗೆ ಸಹಜವಾಗಿಯೇ ಶ್ರೇಷ್ಟರು. ಅವರ ಹೃದಯದ ಅಕ್ಕರೆಯಿಂದ, ಅವರ ತ್ಯಾಗದಿಂದ, ಅವರು ಸಾಕಿ-ಸಲಹುವದರಿಂದ ಪರಾಧೀನವಾಗಿರುವ ಶಿಶು ಬಲಿತು ದೊಡ್ಡದಾಗುತ್ತದೆ.
ಮಗುವಿಗೆ ಶ್ರೇಷ್ಟತೆಯ ಪರಿಚಯವಾಗುವದು ಮೊಟ್ಟ ಮೊದಲು ತಂದೆ-ತಾಯಿಯಲ್ಲಿ. ಅಂಥ ತಂದೆ-ತಾಯಿಯ ಮೇಲಿನ ಸಹಜ ಪ್ರೀತಿಗೆ ‘ಪಿತೃಭಕ್ತಿ, ಮಾತೃಭಕ್ತಿ’ ಎನ್ನುವರು.

ಇದರಂತೆ ಜೀವನ ವಿದ್ಯೆ ಕಲಿಸಿದ ಆಚಾರ್ಯರೂ ತನಗಿಂತ ಶ್ರೇಷ್ಟರು. ಅಂತೆಯೇ ಆಚಾರ್ಯರಲ್ಲಿಯ ಪ್ರೀತಿಯೂ ಭಕ್ತಿಯೇ. ಜೀವಿತಕ್ಕೆ ಬೇಕಾದ ಪರಿಸ್ಥಿತಿ, ಸಹಕಾರ, ಸೊಗಸು ಒದಗಿಸುವ ದೇಶವೂ ಶ್ರೇಷ್ಟ. ದೇಶದ ಮೇಲಿನ ಪ್ರೀತಿ ದೇಶಭಕ್ತಿ.
ಆದ್ದರಿಂದಲೇ ಉಪನಿಷತ್ತಿನ ಘೋಷಣೆ ಇದೆ.

‘ಮಾತೃದೇವೋ ಭವ; ಪಿತೃದೇವೋ ಭವ; ಆಚಾರ್ಯದೇವೋ ಭವ; ಅತಿಥಿದೇವೋ ಭವ!’
ಅದರಂತೆ ಈ ಸುಭಾಷಿತವೂ ರೂಢಿಯಲ್ಲಿದೆಯಲ್ಲವೇ?
‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’

ಇನ್ನು ‘ಗುರು’ವಾದರೋ ಶಿಷ್ಯನಿಗೆ ವ್ಯಾವಹಾರಿಕ ಜೀವನಕ್ಕಿಂತ ಹೆಚ್ಚಿನ ದಿವ್ಯಜೀವನ್ನು ದೊರಕಿಸಿ ಕೊಡುವನು. ಅಜ್ಞಾನವನ್ನು ಅಳಿಸಿ ಪವಿತ್ರ ಜ್ಞಾನವನ್ನು ನೀಡುವನು. ಆ ಅನಂತ ಉಪಕಾರದ ಕೃತಜ್ಞತೆಯಿಂದ ಕೂಡಿ ಬೆಳೆದ ‘ಪ್ರೀತಿ’ಗೆ ‘ಗುರು ಭಕ್ತಿ’ಯೆಂದು ಹೆಸರು.

ಎಲ್ಲಕ್ಕಿಂತಲೂ ಹೆಚ್ಚಿನ ಶ್ರೇಷ್ಟನು ಪರಮಾತ್ಮನೇ ಸರಿ. ಆತನಲ್ಲಿ ಭಕ್ತಿಯಿರಬೇಕಾದದ್ದು ಅತಿ ಮುಖ್ಯ. ‘ಭಗವಂತ ಸರ್ವಶಕ್ತ, ಆತನೇ ಎಲ್ಲ ಸುಖಕ್ಕೂ ಕಾರಣ, ಆತನೊಬ್ಬನೇ ಸುಖ-ಶಾಂತಿ ದಾತ’ ಎಂದರಿತು ಆತನಲ್ಲಿಡುವ ‘ಪ್ರೀತಿ’ಯೇ ಭಗವದ್ಭಕ್ತಿ.

home-last-sec-img