Literature

ಶ್ರೀರಾಮನು ಪಿತೃವಾಕ್ಯಪರಿಪಾಲಕ, ಮಾತೃಭಕ್ತ

ಆದರ್ಶ ಪುರುಷರು ಆಯಾ ಪ್ರಸಂಗಗಳಲ್ಲಿ ತಾನಾಗಿ ಆಡಿದ ನುಡಿ, ನಡೆದ ನಡೆ ಇತರರಿಗೆ ತಾರಕ ನೌಕೆಯಂತೆ ಪರಿಣಮಿಸುವದು.
ಶ್ರೀರಾಮನು ಮಾತೆ ಕೈಕೇಯಿಗೆ ಆಡಿದ ನುಡಿ

‘ತಂದೆಯಾದ ದಶರಥ ಮಹಾರಾಜನಿಗೆ ಸಂತೋಷವನ್ನುಂಟುಮಾಡದೆ – ಪಿತ್ರಾಜ್ಞೆಯನ್ನು ಪರಿಪಾಲಿಸದೆ – ಒಂದು ಮುಹೂರ್ತವೂ ಸಹ ಜೀವಿಸಿರಲು ನಾನು ಇಚ್ಛಿಸುವದಿಲ್ಲ.’

ಯತೋ ಮೂಲಂ ನರಃ ಪಶ್ಯೇತ್ ಪ್ರಾದುರ್ಭಾವಮಿಹಾತ್ಮನಃ|
ಕಥಂ ತಸ್ಮಿನ್ ನವರ್ತೇತ ಪ್ರತ್ಯಕ್ಷೇ ಸತಿ ದೈವತೇ||
ಯಾವಾತನಿಂದ ತನ್ನ ದೇಹದ ಉತ್ಪತ್ತಿಯಾಗಿರುವದೋ ಆತನೇ ಪ್ರತ್ಯಕ್ಷ ದೈವತವಾಗಿರಲು ಆತನ ವಶದಲ್ಲಿ ಯಾವಾತನು ತಾನೇ ಇರನು?

ತದ್ಬ್ರೂಹಿ ವಚನಂ ದೇವಿ ರಾಜ್ಞೋ ಯದಭಿಕಾಂಕ್ಷಿತಮ್|
ಕರಿಷ್ಯೇ ಪ್ರತಿಜ್ಞಾನೇ ಚ ರಾಮೋ ದ್ವಿರ್ನಾಭಿಭಾಷತೇ||
ಮಹಾರಾಜನ ಇಚ್ಛೆಯೇನೆಂಬುದನ್ನು ತಿಳಿಸು. ಅದನ್ನು ತಿಳಿದಮೇಲೆ ಮಾಡುವನೋ, ಇಲ್ಲವೋ ಎಂಬ ಸಂದೇಹ ಬೇಡ. ಪಿತೃವಿನ ಇಚ್ಛೆಯಂತೆ ಮಾಡುತ್ತೇನೆ. ಇದು ನನ್ನ ಪ್ರತಿಜ್ಞೆ. ರಾಮನಲ್ಲಿ ಆಡಿದ ಮಾತಿಗೆ ಎರಡಿಲ್ಲ.

ತದಪ್ರಿಯಮಮಿತ್ರಘ್ನೋ ವಚನಂ ಮರಣೋಪಮಮ್|
ಶ್ರುತ್ವಾ ನ ವಿವ್ಯಥೇ ರಾಮಃ ಕೈಕೇಯೀಂ ಚೇದಮಬ್ರವೀತ್||
ಬೇರೆಯವರಿಗೆ ಮೃತ್ಯುವಿನಂತೆ ಅಪ್ರಿಯವಾದ ಕೈಕೇಯಿಯ ಮಾತನ್ನು ಕೇಳಿ ಶ್ರೀರಾಮನ ಮುಖಕಾಂತಿಯು ಕುಗ್ಗಲಿಲ್ಲ. ಯಾವ ವ್ಯಥೆಯೂ ತೋರಿಬರಲಿಲ್ಲ. ರಾಜ್ಯಾಭಿಷಿಕ್ತನಾಗಲು ಬಂದ ಉತ್ಸಾಹ ಮತ್ತು ಆನಂದದ ಮುಖವು ಈಗಲೂ ಕಳೆಗುಂದದೇ ಇತ್ತು. ಆತ್ಮಸ್ಥಿತಿಯ ಮೇರೆ ಮೀರಿದ ಆನಂದದಲ್ಲಿ ಮೈ ಮರೆತಿರುವಾಗ ಬಾಹ್ಯಪ್ರಪಂಚದ ಸುಖ-ದುಃಖಗಳಿಂದ ಆತ್ಮನಿಷ್ಟರ ಮನಸ್ಸು ಚಲಿಸದು.

home-last-sec-img