Literature

ಶ್ರುತ್ಯಾನುಸಾರ ಸೃಷ್ಟಿಯುತ್ಪತ್ತಿಕ್ರಮ

ಯಜುರ್ವೇದದಲ್ಲಿ ಈ ಸೃಷ್ಟಿಯ ಉತ್ಪತ್ತಿಯ ಬಗ್ಗೆ ಉಪಮಾಲಂಕೃತವಾದ ಈ ಮಾತುಗಳಿವೆ.
‘ಕೋ ಅದ್ಧಾವೇದ ಕ ಇಹ ಪ್ರವೋಚತ್| ಕುತ ಅಜಾತಾ ಕುತ ಇಯಂ ವಿಸೃಷ್ಟಿಃ| ಅರ್ವಾಕ ದೇವಾ ಅಸ್ಯ ವಿಸರ್ಜನಾಯ|… ಮನೀಷೀಣೋ ಮನಸಾ ವಿಬ್ರವೀಮವಃ| ಬ್ರಹ್ಮಾಧ್ಯ ತಿಷ್ಟದ್ಭುವನಾನಿ ದಾರಯನ್| …’

ಸಾರಾಂಶ: ಯಾವ ವನದಲ್ಲಿ ಹುಟ್ಟಿದ ಮರಗಳಿಂದ ದ್ಯಾವಾಪೃಥ್ವಿಗಳು ನಿರ್ಮಿಸಲ್ಪಟ್ಟವೋ ಆ ವನವೇ ಬ್ರಹ್ಮ! ಅದು ಸರ್ವಶಕ್ತವಾದದ್ದು. ಜಗತ್ತಿನ ಉತ್ಪತ್ತಿಗೆ ಬೇಕಾದ ಎಲ್ಲ ಸಾಮಗ್ರಿಗಳನ್ನೂ ಆ ಬ್ರಹ್ಮವಸ್ತುವು ಧರಿಸಿದೆ. ಅಲ್ಲದೆ ಅದು ಸಮಸ್ತ ಭೂತಗಳನ್ನೂ ಧರಿಸಿದೆ. ಈ ವಿಷಯಗಳನ್ನು ಆಚಾರ್ಯನಾದ ನಾನು ಪರಿಶೀಲಿಸಿ ಅರಿತುಕೊಂಡು ನಿಮಗೆ ಉಪದೇಶಿಸುತ್ತಿದ್ದೇನೆ.
ಜಗದಾದಿ ಸ್ಥಿತಿ ಮತ್ತು ಜಗತ್ತಿನ ಚಲನೆಯ ಕಾರ್ಯ-ಕಾರಣವನ್ನು ಈ ಕೆಳಗಿನ ಶ್ರುತಿ ಹೇಳುತ್ತಿದೆ.

ತಮ ಆಸೀತ್ತಮಸಾ ಗೂಳ್ಹಮಗ್ರೆಽಪ್ರಕೇತಂ ಸಲಿಲಂ ಸರ್ವಮಾ ಇದಮ್|
ತುಚ್ಛೇನಾಭ್ವವಿಹಿತಂ ಯದಾಸೀತ್ ತಪಸಸ್ತನ್ಮಹಿನಾಜಾಯತೈಕಮ್||

ಈ ಅಜ್ಞಾನರೂಪವಾಗಿರುವ ಅಥವಾ ಆವರಣರೂಪವಾಗಿರುವ ತಮಸ್ಸು ಈ ಜಗತ್ತಿನ ಅವಿರ್ಭಾವದ ಮೊದಲು ಇತ್ತು. ಈ ಜಗತ್ತೂ ಅದರಲ್ಲೇ ಅಡಗಿತ್ತು. ಈ ಆವರಣವೇ ಅನಿರ್ವಚನೀಯ ಮಾಯೆ ಅಥವಾ ಪ್ರಕೃತಿ! ಇದು ಸೂರ್ಯನಿಂದಾದ ಮೋಡವು ಸೂರ್ಯನನ್ನು ಅಡ್ಡಗಟ್ಟಿದಂತೆ! ಜಗತ್ತನ್ನು ಸೃಜಿಸುವ-ತಾನು-ಬಹುವಾಗಬೇಕೆಂಬ ಸಂಕಲ್ಪದಿಂದ ತಾನೇ ‘ಒಂದೇ’ ತನ್ನ ಅನಂತ ಮಹಿಮೆಯಿಂದ ಜಗತ್ತಿನ ರೂಪವನ್ನು ಧರಿಸಿತು. ಜೀವ ಮತ್ತು ಜಗತ್ತಿನೊಡನೆ ಪರಮಾತ್ಮನಿಗೆ ಇರುವ ಸಂಬಂಧ ಇಲ್ಲಿಂದಲೇ ಪ್ರಾರಂಭವಾಯಿತು.

ಆದರೆ ಸೂರ್ಯನ ಪ್ರಕಾಶದಿಂದ ಮೃಗಜಲ-ಬಂಗಾರದಿಂದ ಆಭರಣ-ನೂಲಿನಿಂದ ಬಟ್ಟೆ-ಹಗ್ಗದಲ್ಲಿ ಸರ್ಪ ಕಾಣುವಂತೆ ಪರಮಾತ್ಮನ ಅಜ್ಞಾನದಿಂದ-ಇಲ್ಲದ ಕಲ್ಪನೆಯಿಂದ-ಕಾಣುವ ಜಗತ್ತು ಹೇಗಾಯಿತು ಎಂಬುದನ್ನು ಹೇಳಲು ಯಾರಿಗೂ ಸಾಧ್ಯವಿಲ್ಲ. ಹಗ್ಗದಲ್ಲಿ ಸರ್ಪವು ಕಂಡುಬರುವುದಕ್ಕೆ ಅದರಲ್ಲಿ ಕಂಡುಬರುವ ಸರ್ಪದ ಸಾದೃಶ್ಯವೇ ಕಾರಣವಾಗುವ ಶಕ್ತಿಯೆಂದು ಕಲ್ಪಿಸುವಂತೆ ಆ ಸಚ್ಚಿದಾನಂದರೂಪವಾದ ಪರಮಾತ್ಮನಲ್ಲಿ ಜಗತ್ತು ಕಂಡುಬರುವದಕ್ಕೆ ಆತನ ‘ಇರುವಿಕೆ'(ಸತ್) ‘ಭಾಸಿಸುವಿಕೆ'(ಚಿತ್) ಮತ್ತು ‘ಪ್ರಿಯವಾಗುವಿಕೆ'(ಆನಂದ)ಯ ‘ಅಸ್ತಿಭಾತಿಪ್ರಿಯ’ರೂಪದ ಸಾದೃಶ್ಯವೇ ಕಾರಣ ವಾಗುವ ಶಕ್ತಿ ಎಂದು ಕಲ್ಪಿಸಬಹುದು.

home-last-sec-img