Literature

ಹಿಂದು ಸಂಸ್ಕೃತಿ, ಹಿಂದು ದೇಶ

ಕೇವಲ ತನ್ನ ಸತ್ವ ಬಲದಿಂದಲೇ ಹಿಂದು ಸಂಸ್ಕೃತಿ ಇಂದಿಗೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದೆ. ಈ ಸಂಸ್ಕೃತಿಯ ಒಂದೊಂದು ಸಿದ್ಧಾಂತವನ್ನೂ ಎತ್ತಿ ಹಿಡಿದು ಇದೇ ಒಂದು ಮುಖ್ಯವೆಂದು ಹಲವರು ತಮ್ಮ ತಮ್ಮ ಸಂಪ್ರದಾಯವನ್ನು ಬೇರೆ ಬೇರೆ ಮಾಡುತ್ತ ಬಹುವಾದ ಮತ ಪಂಗಡಗಳ ಕವಲು ಬಿಟ್ಟಿತು. ಈ ಎಲ್ಲ ಶಾಖೋಪಶಾಖೆಗಳಿಂದ ನಮ್ಮ ಒಂದೇ ಒಂದು ಹಿಂದೂ ಸಂಸ್ಕೃತಿಯ ವಿಶಾಲವೃಕ್ಷವು ಬೆಳೆದು ಹರಡಿಕೊಂಡಿದೆ ಎಂಬುದು ಯಥಾರ್ಥ ತಿಳುವಳಿಕೆ. ಈ ಸಂಸ್ಕೃತಿಯು ತನ್ನ ಒಂದು ವಿಭೂತಿಮತ್ವದಿಂದಲೂ, ಮಾಹಾತ್ಮ್ಯದಿಂದಲೂ ಈಗಲೂ ಭದ್ರವಾಗಿದೆ.

ಬ್ರಹಸ್ಪತಿ ಆಗಮದಲ್ಲಿ ಈ ಸಂಸ್ಕೃತಿಯ ಸ್ಥಾನದ ಸೀಮೆಯನ್ನು ನಿಶ್ಚಿತಮಾಡಿ ಹೇಳಿರುವರು.
ಹಿಮಾಲಯಂ ಸಮಾರಭ್ಯ ಯಾವದಿಂದು ಸರೋವರಂ|
ತಂ ದೇವ ನಿರ್ಮಿತಂ ದೇಶಂ ಹಿಂದುಸ್ಥಾನಂ ಪ್ರಚಕ್ಷತೇ||

ಹಿಮಾಲಯದಿಂದ ಇಂದು ಸರೋವರದವರೆಗಿನ ದಿವ್ಯದೇಶಕ್ಕೆ ಹಿಂದುಸ್ಥಾನವೆನ್ನುವರೆಂದು ಈ ಶ್ಲೋಕದ ಅರ್ಥವಾಗುವದು. ‘ಹಿಮಾಲಯಂ’ ಈ ಶಬ್ದದ ಪ್ರಥಮಾಕ್ಷರಕ್ಕೆ ಸೀಮಾಂತ್ಯವನ್ನು ಸೂಚಿಸುವ ‘ಇಂದುಸರೋವರಂ’ ಈ ಶಬ್ದದ ‘ಇಂದು’ ಎಂಬೀ ಎರಡಕ್ಷರಗಳನ್ನು ಸೇರಿಸಿದರೆ ‘ಹಿಂದು’ ಶಬ್ದವಾಗುವದು. ಹಿಮಾಲಯ ಮತ್ತು ಇಂದು ಸರೋವರ(ಕನ್ಯಾಕುಮಾರಿ) ತೀರದಿಂದಾದ ಈ ‘ಹಿಂದು’ ಶಬ್ದ ನೋಡಿದರೆ ಪರಧರ್ಮೀಯರಾಗಲೀ, ಪರದೇಶೀಯರಾಗಲೀ ಕೊಟ್ಟ ವ್ಯಂಗ ಹೆಸರಲ್ಲವೆಂತಲೂ, ಇದು ಪುರಾತನಕಾಲದಿಂದಲೇ ಇತ್ತೆಂತಲೂ ಸ್ಪಷ್ಟವಾಗುವದು.

‘ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಈ ಮಂತ್ರದಲ್ಲಿದ್ದ ಸಪ್ತಮಹಾನದಿಗಳ ತೀರದಲ್ಲೇ ಆರ್ಯರು ಇದ್ದರು ಎಂದು ಗ್ರಹಿಸಬಹುದು. ‘ಸಿಂಧು’ , ಸ್ಯಂದತೇ- ಹರಿಯುವದೆಂಬ ಅರ್ಥದಿಂದ, ‘ನದಿ’ ಈ ಅರ್ಥವಾಗುವದು. ಈ ಸಪ್ತಮಹಾನದಿಗಳಲ್ಲಿಯೇ ಭಾರತವರ್ಷ, ‘ಸಪ್ತಸಿಂಧು’ ಒಳಪಡುವದು. ಕಾಲಾಂತರದಲ್ಲಿ ‘ಸಪ್ತ’ ಲುಬ್ಧವಾಗಿ, ‘ಸಿಂಧು’ ಶಬ್ದವೇ ‘ಹಿಂದು’ ಆಗಿ ಉಳಿಯಿತು.

ಇದು ಕರ್ಮ ಭೂಮಿ. ಅದರಿಂದಲೇ ಇದರ ಶ್ರೇಷ್ಟತ್ವ. ಮಿಕ್ಕವು ಭೋಗ ಭೂಮಿ. ಪುಣ್ಯಪಾವನ ಭೂಮಿಯಾಗಿರುವ ಭಾರತವರ್ಷವೆಂಬ, ಹಿಂದುಸ್ಥಾನದಲ್ಲಿ ಜನ್ಮತಾಳಿದ ಪುಣ್ಯವಂತರು ಪರಮಭಾಗ್ಯಶಾಲಿಗಳು.

home-last-sec-img