(ನಿರೂಪಣೆ : ಶ್ರೀಧರ ಭಕ್ತ ಜಗನ್ನಾಥ ಶಿವರಾಮ ಕುಲಕರ್ಣಿ)
ಶ್ರೀ ಶ್ರೀಧರ ಸ್ವಾಮಿಗಳ ನಾಮಸ್ಮರಣವೇ ಒಂದು ಪರಮ ದೈವೀಕಾರ್ಯ. ಅದೆಷ್ಟು ಪೂರ್ವಜನ್ಮಗಳ ಪುಣ್ಯ ಸಂಚಯದಿಂದ ಶ್ರೀಧರ ಸ್ವಾಮಿಗಳ ದರ್ಶನಲಾಭ ನಮಗೆ ಘಟಿಸಲು ಶಕ್ಯವಾಯಿತೋ ಏನೋ! ಒಮ್ಮೆ ಭಗವಾನ ಶ್ರೀ ಶ್ರೀಧರ ಸ್ವಾಮಿಗಳು ಸಜ್ಜನಗಡಕ್ಕೆ ಬಂದಿರುವಾಗ ಶ್ರೀ ಭಗವಂತರಾವ ನೆರ್ಲೀಕರರಿಂದಾಗಿ ಪರಮಾನಂದವಾಡಿಗೆ ಬಂದಿದ್ದರು. ಆಗ ನಮಗೆ ಅವರ ದರ್ಶನ ಲಾಭವಾಯಿತು. ಸ್ವಾಮಿಗಳ ಚರಣಗಳಲ್ಲಿ ಶಿರಸ್ಸನ್ನು ಇಟ್ಟಾಗ, ಮನಸ್ಸು ಅದೆಷ್ಟು ಆನಂದಮಯವಾಯಿತೆಂದರೆ, ಅಲ್ಲೇ ಆ ಪಾದದಲ್ಲಿ ಹಾಗೆಯೇ ಚಿರಕಾಲ ಒಂದಾಗಿರಬೇಕೆಂದು ಅನಿಸಿತು. ತದನಂತರ, ಸ್ವಾಮಿಗಳು ‘ಏಳು’ ಎಂದು ಹೇಳಿ, ‘ನಿನ್ನ ಮೇಲೆ ನನ್ನ ಸಂಪೂರ್ಣ ಕೃಪೆ ಇದೆ. ಏನೂ ಚಿಂತೆ ಮಾಡಬೇಡ’ ಎಂದು ಹೇಳಿ, ಶ್ರೀಫಲ ಮತ್ತು ಮಂತ್ರಾಕ್ಷತೆಗಳನ್ನು ಪ್ರಸಾದವಾಗಿ ಕೊಟ್ಟರು.
ಸ್ವಾಮಿಗಳನ್ನು ಮತ್ತೆ ಮತ್ತೆ ದರ್ಶನ ಮಾಡಬೇಕೆಂದು ಅನಿಸಿ, ತಿರು ತಿರುಗಿ ಅವರ ಸನ್ನಿಧಿಗೆ ಹೋಗುತ್ತಿದ್ದೆ. ಆಗ ಸ್ವಾಮಿಗಳು ಹೇಳುತ್ತಿದ್ದರು, ‘ಅರೇ! ಎಷ್ಟು ಸಲ ದರ್ಶನ ತೆಗೆದುಕೊಳ್ಳುವೆ? ನನ್ನ ಫೋಟೋದ ದರ್ಶನ ಮಾಡು; ಅದರಲ್ಲಿ ನಾನಿದ್ದೇನೆ ಮತ್ತು ಬಿಡದೇ ದತ್ತಪ್ರಭುಗಳ ಸ್ಮರಣೆ ಮಾಡುತ್ತಾ ಇರು’
ಸ್ವಾಮಿಗಳ ಜನ್ಮವೂ ದತ್ತಜಯಂತಿಯ ದಿನವೇ. ಸ್ವಾಮಿಗಳ ಪ್ರವಚನಗಳ ಮುಖ್ಯ ಭಾಗ ಶ್ರೀ ಸಮರ್ಥ ರಾಮದಾಸ ಸ್ವಾಮಿ ಮತ್ತು ಶ್ರೀ ದತ್ತಾತ್ರೇಯರ ಮೇಲೆಯೇ ಇರುತ್ತಿತ್ತು. ಸ್ವಾಮಿಗಳ ಪ್ರವಚನ ಮಾಡಹತ್ತಿದರೆಂದರೆ, ಅದನ್ನು ಕೇಳುತ್ತ ಹಾಗೆಯೇ ಕುಳಿತಿರಬೇಕೆಂದು ಅನಿಸುತ್ತಿತ್ತು. ಆ ಪ್ರವಚನಗಳನ್ನು ಕೇಳುತ್ತ ಕುಳಿತಿರುವಾಗ ಅದೇನೋ ಬೇರೆಯದೇ ಆನಂದ ಸಿಗುತ್ತಿತ್ತು. ಆ ಆನಂದದಲ್ಲೇ ಯಾವಾಗಲೂ ಮುಳುಗಿರಬೇಕೆಂದು ಅನಿಸುತ್ತಿತ್ತು. ಪರಮಾನಂದ ವಾಡಿಯಲ್ಲಿ ಆ ವೇಳೆ ಸ್ವಾಮಿಗಳು ಬಹಳಷ್ಟು ಜನರಿಗೆ ಮಾರ್ಗದರ್ಶನ ಮಾಡಿದರು. ‘ಯಾವಾಗಲೂ ಭಗವಂತನ ನಾಮಸ್ಮರಣೆ ಮಾಡುತ್ತಿರಬೇಕು. ದೇವರಲ್ಲಿ ವಿಶ್ವಾಸ ಇಡಬೇಕು. ಪ್ರಪಂಚದಲ್ಲಿನ ವಿಘ್ನಗಳು ಭಕ್ತನ ಭಕ್ತಿಯ ಸತ್ವಪರೀಕ್ಷೆಯೇ ಆಗಿರುತ್ತದೆ. ಏನೇ ಪರಿಸ್ಥಿತಿ ಬಂದರೂ ಭಗವಂತನ ಆರಾಧನೆಯನ್ನು ಬಿಡಬಾರದು. ಏಕಾಗ್ರ ಚಿತ್ತದಿಂದ ಕುಳಿತುಕೊಳ್ಳಬೇಕು ಮತ್ತು ದತ್ತನ ನಾಮಸ್ಮರಣೆ ಮಾಡಬೇಕು’ ಈ ರೀತಿ ಸ್ವಾಮಿಗಳು ಬಹಳಿಷ್ಟು ಉಪದೇಶ ಮಾಡಿದರು.
ನಂತರ ಒಂದು ದಿನ ಶ್ರೀ ಇನಾಮದಾರರ ಮನೆಯಲ್ಲಿ ಸ್ವಾಮಿಗಳ ಪಾದಪೂಜೆಯ ಕಾರ್ಯಕ್ರಮವಾಯಿತು. ಅಲ್ಲೂ ಸಹ ಸ್ವಾಮಿಗಳು ಅನೇಕ ಭಕ್ತರ ಭಕ್ತಿಮಾರ್ಗದಲ್ಲಿನ ಎಡರು ತೊಡರುಗಳನ್ನು, ಅವರ ವಿವಿಧ ಪ್ರಕಾರದ ಶಂಕೆ – ಅನುಮಾನಗಳನ್ನು ಬಗೆಹರಿಸಿದರು. ‘ಪಾಪಾಚರಣೆ ಮಾಡಬಾರದು; ಧರ್ಮಕ್ಕೆ ಅನುಸಾರವಾಗಿ ನಮ್ಮ ಆಚರಣೆ ಮಾಡುತ್ತಿರಬೇಕು; ಭಗವಂತನು ಸರ್ವವ್ಯಾಪಿಯಾಗಿದ್ದು, ಆತನೇ ಎಲ್ಲರ ಹಿತಕರ್ತನಾಗಿದ್ದಾನೆ. ಅವನನ್ನೇ ಅನನ್ಯ ಭಾವದಿಂದ ಶರಣು ಹೋಗುವದರಿಂದ ಮಾನವ ಜನ್ಮದ ಕಲ್ಯಾಣವಾಗುತ್ತದೆ; ಸಾರ್ಥಕವಾಗುತ್ತದೆ’ ಎಂದು ಹೇಳಿ, ಸ್ವಾಮಿಗಳು ತಮ್ಮ ಆಶೀರ್ವಾದ ನಮ್ಮೆಲ್ಲರ ಮೇಲೆ ಯಾವಾಗಲೂ ಇದೆ ಎಂದು ಭರವಸೆ ನೀಡಿದರು.
ಸ್ವಾಮಿಗಳು ನಂತರ ಸಜ್ಜನಗಡಕ್ಕೆ ತಿರುಗಿ ಹೋಗುವವರಿದ್ದರು. ನಾನು ಮತ್ತೆ ಸ್ವಾಮಿಗಳ ದರ್ಶನಕ್ಕೆ ಹೋದೆ. ಆಗ, ‘ನಿಮ್ಮ ದರ್ಶನ ಇನ್ನಾವಾಗ ದೊರೆಯುವದು?’ ಎಂದು ಭಾವಪೂರ್ಣನಾಗಿ ನಾನು ಕೇಳಲು, ಸ್ವಾಮಿಗಳು, ‘ಭಕ್ತಿಯಿಂದ ಸ್ಮರಣೆ ಮಾಡಿ. ನಾನಾಗ ಅಲ್ಲಿ ಇದ್ದೇ ಇದ್ದೇನೆ’ ಎಂದು ಹೇಳಿದರು. ನಂತರ ಎಲ್ಲರೂ ಅಲ್ಲಿಯ ದೇವಿ ಲಕ್ಷಿಯ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದೆವು. ಸ್ವಾಮಿಗಳು ಸಜ್ಜನಗಡಕ್ಕೆ ಹೊರಟರು. ಬೀಳ್ಕೊಡುತ್ತಿರುವಾಗ ಸ್ವಾಮಿಗಳು ಮತ್ತೆ ಎಲ್ಲರಿಗೂ ಭಗವಂತನ ನಾಮಸ್ಮರಣೆ ಮಾಡಲು ಹೇಳಿದರು. ಆಗ ಎಲ್ಲರೂ ‘ನೀವೇ ನಮ್ಮ ಭಗವಂತ; ನೀವೇ ಸಾಕ್ಷಾತ್ ದತ್ತಗುರುವಾಗಿದ್ದೀರಿ; ನಾವು ನಿಮ್ಮಲ್ಲೇ ಭಕ್ತಿಯಿಟ್ಟಿದ್ದೇವೆ; ನಿಮ್ಮನ್ನೇ ಪೂಜಿಸುತ್ತೇವೆ’ ಎಂದು ಹೇಳುತ್ತಿರಲು, ಸ್ವಾಮಿಗಳು ನಗುತ್ತ, ‘ಭಗವಂತನು ಸರ್ವವ್ಯಾಪಿಯಾಗಿದ್ದಾನೆ. ಆತನು ನನ್ನಲ್ಲೂ ಇದ್ದಾನೆ; ನಿಮ್ಮಲ್ಲೂ ಇದ್ದಾನೆ. ಯಾವಾಗ ನಿಮಗೆ ನನ್ನ ದರ್ಶನ ಮಾಡುವ ಇಚ್ಛೆಯಾಗುತ್ತದೆಯೋ ಆಗ ಭಕ್ತಿಭಾವದಿಂದ ನನ್ನ ಫೋಟೋದ ಪೂಜೆ ಮಾಡಿರಿ. ನಿಮಗೆ ನನ್ನ ಮೇಲೆ ಅಟಲ ಶ್ರದ್ಧೆ ಇದೆ. ನಿಮಗೆ ಒಳ್ಳೆಯದಾಗುವದು. ನಾನು ಯಾವಾಗಲೂ ನಿಮ್ಮ ಬೆಂಗಾವಲಿಗೆ ಇದ್ದೇ ಇದ್ದೇನೆ. ಏನೂ ಚಿಂತೆ ಮಾಡಬೇಡಿ’ ಎಂದು ಹೇಳಿ, ನನಗೆ ನಿತ್ಯ ಫೋಟೋ ಇಟ್ಟು ಪೂಜೆ ಮಾಡಲು ಹೇಳಿ ಕೃಪಾಶೀರ್ವಾದ ನೀಡಿದರು. ಪ್ರತ್ಯಕ್ಷ ದರ್ಶನ ಬೇಕೆನಿಸಿದಾಗೆಲ್ಲ ಸಜ್ಜನಗಡಕ್ಕೆ ಬರಲೂ ಸ್ವಾಮಿಗಳು ಅನುಮತಿ ನೀಡಿದರು. ತದನಂತರ ನಾನು ನನಗೆ ಸ್ವಾಮಿದರ್ಶನದ ತೀವ್ರ ಇಚ್ಛೆಯಾದಾಗೆಲ್ಲ ಸಜ್ಜನಗಡಕ್ಕೆ ಹೋಗಿ ಸ್ವಾಮಿಗಳ ದರ್ಶನ ಮಾಡಿಕೊಂಡು ಬರುತ್ತಿದ್ದೆ. ಇತ್ತ ನಿತ್ಯನೇಮದಂತೆ ಸ್ವಾಮಿಗಳ ಪಟದ ಪೂಜೆ – ಆರಾಧನೆ ನಡೆದೇ ಇತ್ತು. ಆಗಾಗ ಸ್ವಾಮಿಗಳು ಸ್ವಪ್ನದಲ್ಲಿ ದರ್ಶನವಿತ್ತು ಮಾರ್ಗದರ್ಶನ ಮಾಡುತ್ತಿದ್ದರು, ಇನ್ನೂ ಮಾಡುತ್ತಿದ್ದಾರೆ. ಸ್ವಾಮಿಗಳ ಮೇಲಿನ ಈ ಭಾವನೆಯಿಂದ ನನ್ನ ಸೇವಾ ಭಕ್ತಿ ಈ ರೀತಿ ಪ್ರಾರಂಭವಾಯಿತು. ಒಮ್ಮೆ ಸ್ವಾಮಿಗಳ ದರ್ಶನಕ್ಕೆಂದು ಸಜ್ಜನಗಡಕ್ಕೆ ಹೋಗಿದ್ದೆ. ಅಲ್ಲಿಗೆ ಹೋದ ಮೇಲೆ, ಸ್ವಾಮಿಗಳು ಏಕಾಂತ ಮೌನವೃತದಲ್ಲಿದ್ದು ಯಾರಿಗೂ ದರ್ಶನವಿಲ್ಲವೆಂಬ ವಿಷಯ ತಿಳಿಯಿತು. ಅಷ್ಟಗ್ರಹಯೋಗದ ಆ ಸಮಯದಲ್ಲಿ ಸ್ವಾಮಿಗಳ ಕಡುತರ ತಪಸ್ಸು ನಡೆದಿತ್ತು. ಆ ವೇಳೆ ಸ್ವಾಮಿಗಳ ದರ್ಶನಕ್ಕೆಂದು ಅಲ್ಲಿಗೆ ಅಸಂಖ್ಯ ಭಕ್ತಜನ ಬಂದು ಹೋಗುತ್ತಿದ್ದರು. ಯಾರಿಗೂ ಆಗ ಸಜ್ಜನಗಡದಲ್ಲಿ ಸ್ವಾಮಿಗಳ ದರ್ಶನವಿಲ್ಲವಾಗಿತ್ತು. ಆಗಲ್ಲಿ ಸ್ವಾಮಿಗಳ ಪಾದುಕೆಯನ್ನು ಇಟ್ಟಿದ್ದರು ಮತ್ತು ನಾನು ಆ ಪಾದುಕೆಗೆ ನನ್ನ ಶಿರಸ್ಸನ್ನು ತಾಗಿಸಿ, ಆದಷ್ಟು ಬೇಗ ಪ್ರಕಟವಾಗಲು ಪ್ರಾರ್ಥನೆ ಮಾಡಿದೆ ಮತ್ತು ಮನೆಗೆ ತಿರುಗಿ ಬಂದೆ. ಸ್ವಾಮಿಗಳು ಹೇಳಿದಂತೆ ನನ್ನ ಭಕ್ತಿಸೇವೆ ಮುಂದುವರಿದಿತ್ತು. ಮನೆಗೆ ಬಂದ ಮೇಲೆ ಸ್ವಾಮಿಗಳ ದರ್ಶನವಾಗಲೆಂದು ಸ್ವಾಮಿಗಳ ಪಟದ ಪೂಜೆ ಮತ್ತು ಗುರುಚರಿತ್ರ ಪಾರಾಯಣ ಒಟ್ಟು ಹತ್ತು ತಾಸು ಆರಾಧನೆ ಮಾಡುತ್ತಿದ್ದೆ. ಅದಾದ ಮೇಲೆ ನಾಮಸ್ಮರಣೆ ಮೊದಲಾದವುಗಳನ್ನು ಮಾಡುತ್ತಿದ್ದೆ. ಶ್ರೀಧರ ಸ್ವಾಮಿಗಳೆಂದರೆ ದತ್ತಪ್ರಭು ಮತ್ತು ದತ್ತಪ್ರಭು ಅಂದರೆ ಶ್ರೀಧರಸ್ವಾಮಿ ಎಂದು ನನಗೆ ದೃಢ ಶೃದ್ಧೆ ಇತ್ತು ಮತ್ತು ಇದೆ. ಅದರಿಂದಲೇ ದತ್ತ ಭಕ್ತಿಯೂ ನನ್ನಿಂದ ಘಟಿಸುತ್ತಿತ್ತು; ಘಟಿಸುತ್ತಿದೆ. ಹೀಗೆ ಶ್ರೀಧರ ಸ್ವಾಮಿಗಳ ಆಶೀರ್ವಾದದಿಂದ ನನಗೆ ಭಕ್ತಿಮಾರ್ಗದಲ್ಲಿ ಏಕಾಗ್ರತೆ ಬಂತು. ನರಸೋಬಾವಾಡಿಗೆ ಹೋಗಿ ಶ್ರೀಧರಸ್ವಾಮಿಯವರ ಪಾದುಕೆ ಮತ್ತು ಪಟವನ್ನು ಮುಂದಿಟ್ಟುಕೊಂಡು, ಸ್ವಾಮಿಗಳ ದರ್ಶನವಾಗಲೆಂದು ಗುರುಚರಿತ್ರದ ಸಪ್ತಾಹ, ಅನುಷ್ಠಾನ ಮೊದಲಾದವುಗಳನ್ನು ಮಾಡಿದಾಗ, ದತ್ತಪ್ರಭುಗಳು ‘ಶ್ರೀಧರ ಸ್ವಾಮಿಗಳ ದೇಹಪ್ರಕೃತಿ ಚೆನ್ನಾಗಿದ್ದು, ಸ್ವಾಮಿಗಳು ಸದ್ಯದಲ್ಲೇ ಹೊರಬರುವವರಿದ್ದಾರೆ. ನೀನೀಗ ಸಜ್ಜನಗಡಕ್ಕೆ ಹೋಗು’ ಎಂದು ಅಪ್ಪಣೆ ಮಾಡಿದರು. ಅದರ ನಂತರ ಐದಾರು ದಿವಸ ತೀವ್ರ ಉತ್ಕಂಟತೆಯಿಂದ ಮನಸ್ಸು ಸ್ವಾಮಿಗಳ ದರ್ಶನದ ತಳಮಳದಲ್ಲಿ ಕಳೆದಿರಲು, ಶ್ರೀ ಭಗವಂತರಾವ್ ನೇರ್ಲೀಕರರ ಭೇಟಿಯಾಗಿ, ಸ್ವಾಮಿಗಳು ತಪಶ್ಚೈರ್ಯ ಮುಗಿಸಿ ಹೊರಬಂದಿದ್ದಾರೆಂಬ ಸಮಾಚಾರ ತಿಳಿಯಿತು. ಆದರೆ ಸ್ವಾಮಿಗಳು ಅದಾಗಲೇ ಚಿಕ್ಕಮಗಳೂರಿಗೆ ಹೋಗಿರುವ ವಿಷಯವೂ ತಿಳಿದು ಬರಲು, ಸ್ವಾಮಿಗಳ ದರ್ಶನ ಇನ್ನೂ ಕಠಿಣವಾದಂತೆನಿಸಹತ್ತಿತು. ಸ್ವಾಮಿಗಳು ನನಗಿನ್ನೆಲ್ಲಿ ಸಿಗಬಹುದು, ಇನ್ನಾವಾಗ ಸ್ವಾಮಿಗಳ ದರ್ಶನವಾಗಬಹುದು ಎಂಬುದೊಂದೂ ಅರ್ಥವಾಗದೇ ಮನಸ್ಸು ಸಮಾಧಾನವಿಲ್ಲದೇ ಚಡಪಡಿಸುತ್ತಿತ್ತು. ನನ್ನ ತಂದೆಯವರು ಸ್ವಾಮಿಗಳಿಗೆ ಪತ್ರ ಬರೆದು, ಬೆಂಗಳೂರಿನ ವಿಳಾಸಕ್ಕೆ ಕಳುಹಿಸಿದರು. ಆದರೆ ಅದಕ್ಕೆ ಏನೂ ಉತ್ತರ ಬರಲಿಲ್ಲ. ನನ್ನ ತಂದೆಯವರು ಧ್ಯಾನದಲ್ಲಿದ್ದಾಗ ಅವರಿಗೆ ಸ್ವಾಮಿಗಳ ದರ್ಶನವಾಯಿತು. ಅದರ ನಂತರ ಶ್ರೀಧರ ಸ್ವಾಮಿಗಳ ಮೇಲಿನ ಶೃದ್ಧಾಭಕ್ತಿ ಇನ್ನೂ ಹೆಚ್ಚು ದೃಢವಾಯಿತು. ಸ್ವಾಮಿಗಳು ಧ್ಯಾನದಲ್ಲಿ ದರ್ಶನ ಕೊಟ್ಟ ಬಗ್ಗೆ ಸ್ಪಷ್ಟೀಕರಣ ಪಡೆಯಲು, ನಾನು ಔದುಂಬರದ ನಾರಾಯಣ ಆನಂದಸ್ವಾಮಿಗಳ ಬಳಿಗೆ ಹೋದೆ. ನಾನು ಔದುಂಬರ ತಲುಪಿದಾಗ ನಾರಾಯಣ ಆನಂದಸ್ವಾಮಿಗಳು ಅನುಷ್ಠಾನ ಮಾಡುತ್ತಿದ್ದರು. ಸ್ವಾಮಿಗಳ ಯಾವ ರೀತಿಯ ದರ್ಶನವಾಗಿತ್ತೋ ಅದೇ ರೀತಿಯ ಫೋಟೋ ಅವರ ಹತ್ತಿರವಿತ್ತು. ಅದು ಸ್ವಾಮಿಗಳು ನಿಂತುಕೊಂಡಿರುವ, ಕೈಯಲ್ಲಿ ಕಮಂಡಲು ಹಿಡಿದಿರುವ, ಮೈಮೇಲೆ ಪೀತಾಂಬರ ಧರಿಸಿರುವ ಮತ್ತು ಕಾಲಲ್ಲಿ ಹಾವುಗೆ ಹಾಕಿಕೊಂಡಿರುವ ತೇಜಃಪುಂಜ ಮುದ್ರೆಯ ಸ್ವಾಮಿಗಳ ಪಟವಾಗಿತ್ತು. ನನಗೆ ಆನಂದಸ್ವಾಮಿಗಳು ಹೇಳಿದರು, ‘ನಿಮಗೆ ಇದೇ ದರ್ಶನವಾಗಿದೆ. ಸದ್ಯ ಸ್ವಾಮಿಗಳು ವರದಪುರಕ್ಕೆ ತಪಶ್ಚೈರ್ಯಕ್ಕೆಂದು ಹೋಗಿದ್ದಾರೆ. ಅವರು ಈ ಕಡೆ ಬರುತ್ತಾರೋ ಇಲ್ಲವೋ ಹೇಳಲಿಕ್ಕೆ ಬರುವದಿಲ್ಲ. ಸ್ವಾಮಿಗಳು ನಿಮಗೆ ದೃಷ್ಟಾಂತದಲ್ಲಿ ಯಾವ ರೀತಿ ಹೇಳಿದ್ದಾರೋ, ಆ ರೀತಿ ಮಾಡುತ್ತಾ ಇರಿ. ಒಳ್ಳೆಯದಾಗುವದು’, ಎಂದು ಹೇಳಿ ಆಶೀರ್ವದಿಸಿ, ಭಕ್ತಿಯಿಂದಿರಲು ಹೇಳಿದರು. ಇಂದು ಸ್ವಾಮಿಗಳು ಏಕಾಂತವಾಸದಲ್ಲಿದ್ದು ಐದು ವರ್ಷಗಳೇ ಕಳೆದಿದೆ.
ಅವತಾರೀ ಪುರುಷರು ಜಗತ್ತಿನ ಕಲ್ಯಾಣಕ್ಕಾಗಿ ಮತ್ತು ಧರ್ಮದ ರಕ್ಷಣೆಗಾಗಿ ಅವತರಿಸುತ್ತಾರೆ. ತಮ್ಮ ಕಾರ್ಯ ಮುಗಿದ ಮೇಲೆ ಅಂತರ್ಧಾನ ಹೊಂದುತ್ತಾರೆ. ಅವರ ಲೀಲೆ ಅಗಮ್ಯ; ಸಾಮಾನ್ಯ ಮಾನವರ ಬುದ್ಧಿಗೆ ಗ್ರಹಿಸಲಾಗದ್ದಾಗಿದೆ.
ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ ಸೇವೆ ಇದೇ ರೀತಿ ನನ್ನಿಂದ ನಡೆಯುತ್ತಿರಲಿ, ಇದೇ ಶ್ರೀ ಚರಣಗಳಲ್ಲಿ ನನ್ನ ಪ್ರಾರ್ಥನೆ!
||ಜಯ ಜಯ ರಘುವೀರ ಸಮರ್ಥ||
(ಗತಕಾಲದ ‘ಶ್ರೀಧರ ಸಂದೇಶ’ ಸಂಚಿಕೆಗಳ ಪುಟಗಳಿಂದ)
ಕನ್ನಡಾನುವಾದ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ