Memories

1. ‘ನೀವು ಪರಮಾರ್ಥದ ಮೇಲೆ ಲಕ್ಷವಿಡಿ; ನಿಮ್ಮ ಸಂಸಾರದ ಭಾರ ನನಗೆ ಬಿಡಿ’

(ನಿರೂಪಣೆ : ಶ್ರೀಧರ ಭಕ್ತ ಸಂ.ವಿ.ಕುಲಕರ್ಣಿ)

ಸ್ವಾಮಿ ಶ್ರೀಧರ ಬನ್ನಿ| ವರದ ಹಸ್ತದಿ ನನ್ನನೆತ್ತಿ ಪಿಡಿದು|
ಕರುಣೆಯಿಂದಲಿ ನೋಡಿ| ಎನ್ನ ಕಾಪಾಡಿ|

ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳು ವರದಪುರದಲ್ಲಿ ತಮ್ಮ ದೀರ್ಘ ಏಕಾಂತ ಮೌನ ತಪಸ್ಸನ್ನು ಸಂಪನ್ನಗೊಳಿಸಿ, ನೆರೆದ ಭಕ್ತ ಜನರಿಗೆ ದರ್ಶನ ನೀಡಹತ್ತಿದ್ದರು. ನಾನೂ ಸ್ವಾಮಿಗಳ ದರ್ಶನಕ್ಕೆಂದು ಅದಾಗಲೇ ವರದಹಳ್ಳಿ ತಲುಪಿ ಸ್ವಾಮಿಗಳ ದರ್ಶನದ ದಾರಿ ಕಾಯುತ್ತಿದ್ದೆ. ಆ ಸ್ವಾಮಿ ದರ್ಶನದ, ಪರಮ ಪ್ರೀತಿಯ ಆ ಸಹವಾಸ ಯೋಗದ ಆ ಏಳೆಂಟು ದಿನಗಳ ಕಾಲ ನನ್ನ ಜೀವನದ ಒಂದು ಅತಿ ಶುಭ ಗಳಿಗೆಯಾಯಿತು. ನನ್ನ ಮನಸ್ಸಿನಲ್ಲಿದ್ದ ಹಲವಾರು ಶಂಕೆ – ಕುಶಂಕೆಗಳ ಸಮಾಧಾನಕ್ಕೂ ಆಗ ಕಾಲ ಕೂಡಿ ಬಂತು. ನನ್ನ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಸ್ವಾಮಿಗಳ ಮಾತುಗಳಿಂದ ಯೋಗ್ಯ ಉತ್ತರ ಸಿಗಲು ನನ್ನ ಮನ ನಿರಾಳವಾಯಿತು. ನಾನೀಗ ಸ್ವಲ್ಪದರಲ್ಲಿ ನಿಮ್ಮೊಡನೆ ಸ್ವಾಮಿಗಳ ಆ ಸಮಾಧಾನದ ಮಾತುಗಳನ್ನು ನನಗರ್ಥವಾದಂತೆ ಹಂಚಿಕೊಳ್ಳುತ್ತಿದ್ದೇನೆ.

೧. ಸಂತರನ್ನೆಂತು ಗುರುತಿಸುವದು?
ದೇವರಿಚ್ಛೆಯ ಬದುಕು ಸಾಧನ| ‘ಎನ್ನತನ’ವೆಲ್ಲ ದೇವ ಸಮರ್ಪಣ|
ಭಕ್ತಿಯಿಂ ಅನನ್ಯಭಾವದಿ ಶರಣ| ಅನುಪಮ ಪ್ರೇಮವಿದೆ ದೇವಚರಣ|
ಅವನೆ ಸಂತನು ಮತ್ತೆ ಬೇರಿಲ್ಲಾ||

ಯಾರು ಎಲ್ಲೆಲ್ಲೂ ಪರಮಾತ್ಮರೂಪವನ್ನೇ ಕಾಣುತ್ತಾನೋ ಆತನೇ ಸಂತ! ಹೆಸರಿಗೆ ‘ಸಂತ’ ಎಂಬ ಪದವಿ ಹಚ್ಚಿಕೊಳ್ಳುವದು ಸುಲಭವಾದರೂ, ‘ಸಂತ’ನಂತೆ ಕೃತಿ ಮಾಡುವದು ಸುಲಭವಲ್ಲ.

‘ತಟ್ಟು ನಿಷ್ಟುರ ಆಡಬೇಡಿ; ಪರರ ಹತ್ತಿರ ಕೇಳಬೇಡಿ’ ಎಂದು ಲೋಕಕ್ಕೆ ಬ್ರಹ್ಮಜ್ಞಾನದ ಉಪದೇಶ! ಆದರೆ ತಾನು ಮಾತ್ರ ಎಲ್ಲವನ್ನೂ ಬಯಸಿದರೆ ಆತನೆಂತು ಸಂತ?

ಸಂತನಿಗೆ ಕಾಮಿನೀ ಕಾಂಚನದ ಆಶೆ ಇರಬಾರದು. ಧನ ಸಂಪತ್ತಿಗೆಂದು ಸಂತನಾಗಬಾರದು. Inದೇವರ ಹೆಸರಿನಲ್ಲಿ ದ್ರವ್ಯ ಸಂಪಾದನೆ ಮಾಡಿ ಮಠ ಸ್ಥಾಪಿಸುವದು, ಶೃಂಗಾರ ಮಾಡಿಕೊಳ್ಳುವದು, ಪರಿಸ್ಥಿತಿಗನುಗುಣವಾಗಿ ಚೆಂದಾಗಿ ಮಾತನಾಡುವದು, ಅನುಗ್ರಹ ಕೊಡುವದು, ಶ್ರೀಮಂತರ ಸ್ತುತಿ – ಬಡವರ ನಿರ್ಲಕ್ಷ ಮಾಡುವದು, ದ್ರವ್ಯಪೆಟ್ಟಿಗೆ ತನ್ನೊಡನಿಟ್ಟುಕೊಂಡಿರುವದು, ಇವೆಲ್ಲ ಸಂತರ ನಡೆಯಲ್ಲ. ಅದೇ ರೀತಿ ಪ್ರಚಾರ-ಪ್ರಕಟಣೆ ಮಾಡಿ ಅನುಗ್ರಹ ಕೊಡುವದನ್ನು ಮಾಡಬಾರದು. ಜಪ ಅನುಷ್ಠಾನಗಳನ್ನು ಚಮತ್ಕಾರಕ್ಕೆಂದು ತೋರಿಸಬಾರದು. ಹೀಗೆ ಮಾಡಿದಲ್ಲಿ ಪುಣ್ಯನಾಶವಾಗುತ್ತದೆ. ಕೇವಲ ಚಮತ್ಕಾರಕ್ಕಾಗಿ ಮಾಡುವದೆಂದರೆ ಭಾವುಕನ್ನು ಭಗವಂತನಿಂದ ಇನ್ನೂ ದೂರ ಒಯ್ದಂತೆಯೇ.

ಸಂತರು ಜಪ-ಅನುಷ್ಠಾನ ಮಾಡುವದಿದ್ದಲ್ಲಿ ಏಕಾಂತದಲ್ಲಿ ಲೋಕಕಲ್ಯಾಣ್ಯಕ್ಕಾಗಿ ಮಾಡಬೇಕು. ತನ್ನನ್ನಷ್ಟೇ ಉದ್ಧಾರ ಮಾಡಿಕೊಂಡರೆ ಅದರಲ್ಲೇನೂ ಅಚ್ಚರಿ ಪಡಬೇಕಾದದ್ದಿಲ್ಲ. ಆದರೆ ಯಾರು ಸಮಸ್ಥ ಮಾನವಕುಲವನ್ನು ಉದ್ಧರಿಸುತ್ತಾರೋ ಅವರೇ ನಿಜಸಂತರು. ‘ಕೊಡತಕ್ಕೊಳ್ಳುವ ಲೆಕ್ಕಾಚಾರಿ ನರಕಕ್ಕೆ ಹೋಗುತ್ತಾನೆ’, ಎಂಬ ಸಂತವಾಕ್ಯವಿದೆ. ನಿಜವಾದ ಸಂತರು ಯಾರಾದರೂ ಏನು ಕೊಟ್ಟರೂ ಎಂದೂ ತೆಗೆದುಕೊಳ್ಳುವದಿಲ್ಲ. ಆಗ್ರಹದಿಂದ ಕೊಟ್ಟರೆ, ಅದನ್ನೇ ಪ್ರಸಾದವೆಂದು ತಿರುಗಿ ಕೊಡುತ್ತಾರೆ.

ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳ ದರ್ಶನಕ್ಕೆ ಧನದ ಆವಶ್ಯಕತೆಯಿಲ್ಲ. ಅವರ ಏಕಾಂತ ಜಗದ್ಕಲ್ಯಾಣಕ್ಕೋಸ್ಕರವೇ. ಅವರ ತಳಮಳ ಕೇವಲ ಜಗದೋದ್ಧಾರಕ್ಕೇ. ಇವರೇ ನಿಜ ಸಂತರು.
೨. ನಾವು ಪಾರಮಾರ್ಥಿಕೆಯನ್ನು ಅದೆಂತು ಹೆಚ್ಚಿಸುವದು?

ನಾಲ್ಕು ಜನ ಎಲ್ಲೋ ಒಂದು ಕಡೆ ಗುಂಪುಗೂಡಿ, ಅನವಶ್ಯಕ ಹರಟೆ ಮಾತನಾಡುತ್ತ ಕಾಲಹರಣ ಮಾಡುತ್ತಿರುವಾಗ, ನಾವು ಅಲ್ಲಿ ಪಾರಮಾರ್ಥಿಕ ವಿಷಯ ಎತ್ತಿ, ಸ್ವತಃ ಅದರಲ್ಲಿ ಆನಂದಪಡುತ್ತ, ನಮ್ಮ ಆನಂದದ ಸವಿ ಸಹಜವಾಗಿಯೇ ಉಳಿದವರಿಗೂ ತಗಲುವಂತೆ ಇದ್ದು ಬಿಡಬೇಕು. ಅದು ಸರ್ವರನ್ನೂ ಪಾರಮಾರ್ಥಿಕ ಮಾರ್ಗದ ಕಡೆ ಕೊಂಡೊಯ್ಯಲು ಸಹಾಯಕವಾಗುತ್ತದೆ. ಪ|ಪೂ| ಸ್ವಾಮಿಗಳು ಮುಂದುವರಿಸುತ್ತ, ‘ನೀವು ನನ್ನ ಪಾರಮಾರ್ಥಿಕದ ಕಾಳಜಿ ವಹಿಸಿರಿ; ನಾನು ನಿಮ್ಮ ಸಂಸಾರದ ಕಾಳಜಿ ವಹಿಸುತ್ತೇನೆ’ ಎಂದು ಹೇಳಿದರು.

ನಾನು ಈ ನಿರೂಪಣೆಯಲ್ಲಿ, ಸ್ವಾಮಿಗಳ ಶಬ್ದ ಭಂಡಾರವೆಂಬ ಉದ್ಯಾನದಿಂದ, ಅಮೃತತುಲ್ಯ ಶಬ್ದರೂಪಿ ಹೂವುಗಳನ್ನು ಆರಿಸಿ, ಅವುಗಳ ಹಾರ ಮಾಡಿ ಸ್ವಾಮಿಗಳ ಪಾದಕಮಲಕ್ಕೆ ಅರ್ಪಿಸುತ್ತಿದ್ದೇನೆ. ಇದರಲ್ಲಿ ನನ್ನದೇನೂ ಇಲ್ಲ. ಉದ್ಯಾನವೂ ಅವರದೇ. ಹೂಗಳೂ ಅವರದೇ.

ನಮ್ಮ ಶ್ರೀಧರರಿರಲು ವರದಪುರಿ | ಎಲ್ಲರಿಗು ಕಲ್ಪತರುವಿನ ಪರಿ|
ಸರ್ವ ಸುಖ ಸಕಲರಿಗೆ | ಮೇಲೆ ಆಯುರಾರೋಗ್ಯ ಸಂಪದವು|
ಸರ್ವರಿಗೆ ಸನ್ಮಂಗಲವು | ದುಃಖವಿಲ್ಲವು ಸಕಲ ಭಕ್ತ ಜನಕೆ|
|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|
(ಗತಕಾಲದ ‘ಶ್ರೀಧರ ಸಂದೇಶ’ ಸಂಚಿಕೆಗಳ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img