Memories

21. ಸ್ವಾಮಿ ದರ್ಶನದಿಂದ ನಾಸ್ತಿಕನು ಆಸ್ತಿಕನಾದನು

(ನಿರೂಪಣೆ : ಶ್ರೀಧರಭಕ್ತ ಶ್ರೀಗೋವಿಂದ ಕುಲಕರ್ಣಿ, ಹೈದರಾಬಾದ)

ಭಗವಾನ ಶ್ರೀ ಶ್ರೀಧರಸ್ವಾಮಿಗಳು ೧೫ -೨೦ ವರ್ಷಗಳ ಮೊದಲು ಹೈದರಾಬಾದಿಗೆ ಬಂದಿದ್ದರು. ಬೇಗಂಬಾಜಾರಿನಲ್ಲಿನ ಸತ್ಯನಾರಾಯಣ ಭಾಂಗಾಡಿಯಾ ಎಂಬ ಹೆಸರಿನ ವ್ಯಾಪಾರಿಯವರಲ್ಲಿ ಸ್ವಾಮಿಗಳ ಪಾದಪೂಜೆಯಿತ್ತು. ನನಗೆ ಆ ವ್ಯಾಪಾರಿಯು ಆಮಂತ್ರಣ ಕೊಟ್ಟಿದ್ದನು. ಆದರೆ ನಾನು ಹೋಗಲಿಲ್ಲ. ಯಾಕೆಂದರೆ ಆಗ ನನಗೆ ದೇವರ ಮೇಲೆ ವಿಶ್ವಾಸವಿರಲಿಲ್ಲ ಮತ್ತು ಸಾಧು – ಸಂತರ ಮೇಲಂತೂ ವಿಶ್ವಾಸ ಇಲ್ಲವೇ ಇಲ್ಲಾಗಿತ್ತು. ಸೌ. ಗಯಾಬಾಯಿ (ನನ್ನ ಹೆಂಡತಿ) ನನಗೆ ಗೊತ್ತಾಗದಂತೆ ಪಾದಪೂಜೆಗೆ ಹೋದಳು ಮತ್ತು ಅಲ್ಲಿ ಅವಳು ಸದ್ಗುರುವಿನ ದರ್ಶನ ಪಡೆದು, ಸ್ವಾಮಿಗಳಿಗೆ, ‘ನನ್ನ ಯಜಮಾನರಿಗೆ ದೇವರ ಮೇಲೆ ವಿಶ್ವಾಸವೇ ಇಲ್ಲ’ ಎಂದು ಹೇಳಿದಳು. ಅದಕ್ಕೆ ಸ್ವಾಮಿಗಳು, ‘ನಿನ್ನ ಯಜಮಾನರನ್ನು ಪ್ರತ್ಯಕ್ಷ ನೋಡಿದ ಹೊರತು, ನನಗೆ ಏನೂ ಹೇಳಲಿಕ್ಕೆ ಬರುವದಿಲ್ಲ’ ಎಂದು ಹೇಳಿದರು. ನನ್ನ ಹೆಂಡತಿ ಅವರಿಗೆ ನಮ್ಮ ಮನೆಗೆ ಬರಲು ನಿಮಂತ್ರಣ ಕೊಡಲು, ‘ಈಗಲೇ ಬರುತ್ತೇನೆ’, ಎಂದು ಹೇಳುತ್ತ ಸ್ವಾಮಿಗಳು ಮುಂದೆ, ‘ನನಗಾದರೂ ಮನೆಯೊಳಗೆ ಒಳಬರಲು ಕೊಡುತ್ತಾನೋ, ಇಲ್ಲವೋ ನೋಡುತ್ತೇನೆ. ನಾನು ಮಧ್ಯಾಹ್ನ ಹನ್ನೊಂದು ಗಂಟೆಯೊಳಗೆ ಬರುತ್ತೇನೆ’ ಎಂದು ಹೇಳಿದರು. ನನ್ನ ಹೆಂಡತಿ ತಕ್ಷಣ ಮನೆಗೆ ಬಂದು, ರಾನಡೆ ಮಾಮಾನ ಸಂಮತಿ ಪಡೆದು, ಪೂಜೆಯ ತಯಾರಿಗೆ ತೊಡಗಿಕೊಂಡಳು. ನನಗೆ ಇಚ್ಛೆಯಿಲ್ಲದ್ದರಿಂದ, ನಾನು ಮನೆಯಿಂದ ಹೊರಬಿದ್ದು ಹೋದೆ ಮತ್ತು ಹನ್ನೊಂದು ಗಂಟೆ ಕಳೆದು ಹೋದಮೇಲೆ ೧ – ೧|| ಗಂಟೆ ಸುಮಾರಿಗೆ ಮನೆಗೆ ತಿರುಗಿ ಬಂದೆ. ಸ್ವಾಮಿಗಳು ಬರಲೇ ಇಲ್ಲವೆಂಬುದನ್ನು ನೋಡಿ ನನಗೆ ಆನಂದವಾಯಿತು ಮತ್ತು ಉಟ್ಟ ವಸ್ತ್ರಳನ್ನು ತೆಗೆದು, ಕೈ-ಕಾಲು-ಮುಖ ತೊಳೆದು, ನಾನು ಊಟ ಮಾಡಲು ತಯಾರಾಗುತ್ತಿದ್ದೆ. ಅಷ್ಟರಲ್ಲಿ ಮೋಟಾರಗಾಡಿಯ ಹಾರ್ನ ಬಾರಿಸಿತು. ಶ್ರೀ ರಾನಡೆ ಮಾಮಾರು ನನಗೆ ಸ್ವಾಮಿಯವರ ಸ್ವಾಗತ, ಆರತಿ ಮಾಡಲು ಹೇಳಿದರು. ನಾನು ಅದಕ್ಕೆ ಒಪ್ಪಲಿಲ್ಲ. ಎಲ್ಲರೂ ಕೂಡಿ, ಬಲವಂತದಿಂದ ಸ್ವಾಮಿಗಳ ಪಾದ ತೊಳೆಯಲು ಹೇಳಿದರು. ನಾನು ಅಷ್ಟರಲ್ಲೇ ದೊಡ್ಡದಾಗಿ ಕಿರುಚಿದೆ. ಸ್ವಾಮಿಗಳು ಅಷ್ಟೇಕರನಿಗೆ, ‘ಇವನಿಗೆ ಒಬ್ಬನೇ ನನ್ನ ಬಳಿಗೆ ಬರಲು ಬಿಡಿ; ಅವನ ಹತ್ತಿರ ಯಾರೂ ನಿಲ್ಲಬೇಡಿ’ ಎಂದು ಹೇಳಿದರು. ನಾನು ಸ್ವಾಮಿಗಳ ಪಾದ ತೊಳೆಯಲು ಹೋದೆ. ಆಗ ಅವರು ನನ್ನ ತಲೆಯನ್ನು ಸ್ಪರ್ಷ ಮಾಡಿ, ‘ನಾನು ರಾತ್ರಿ ಹನ್ನೆರಡು ಗಂಟೆಗೆ ನಿನ್ನನ್ನು ಸಿಗಲು ಬರುತ್ತೇನೆ; ಆಗ ನೀನು ಮತ್ತು ನಾನು ಮಾತ್ರವೇ ಇರಲಿ’ ಎಂದು ಹೇಳಿ ಚಿ. ಪ್ರಕಾಶನಿಂದ ಪಾದಪೂಜೆ ಮಾಡಿಸಿಕೊಂಡರು.

ಸ್ವಾಮಿಗಳು ಮತ್ತೆ ಬರುತ್ತಾರೆಂದು ನಾನು ಅದಕ್ಕೇ ಮೊದಲೇ ಮಲಗಿದೆ. ರಾತ್ರಿ ಹನ್ನೆರಡು ಗಂಟೆಗೆ ಸ್ವಾಮಿಗಳು ಮನೆಗೆ ಬಂದರು. ಆದರೆ ನನಗದು ತಿಳಿಯಲಿಲ್ಲ. ಎಲ್ಲರೂ ಕೂಡಿ ನನ್ನನ್ನೆಬ್ಬಿಸಿ, ಸ್ವಾಮಿಗಳ ಮುಂದೆ ಮಣೆಯ ಮೇಲೆ ಕುಳ್ಳಿಸಿದರು. ಶಿಷ್ಯಜನರು ಮಂತ್ರೋಚ್ಛಾರ ಮಾಡುತ್ತಾ ನನಗೆ, ಆಚಮನ ಮಾಡಲಿಕ್ಕೆ ಹೇಳಿದ ಕೂಡಲೇ, ನಾನು ದೊಡ್ಡ ಧ್ವನಿಯಲ್ಲಿ, ‘ಮುಝೇ ಮಾಲೂಮ ನಹಿ, ಹಮ ಕುಛ ನಹೀ ಕರತೇ’ (‘ನನಗೆ ಗೊತ್ತಿಲ್ಲ; ನಾವು ಅದೇನೂ ಮಾಡುವದಿಲ್ಲ’) ಎಂದು ಕೂಗಿದೆ. ಆಗ ಸ್ವಾಮಿಗಳು, ‘ತುಮ ಕೌನ ಹೋ? ಔರ ಯಹಾಂ ಕ್ಯೋಂ ಆಯೇ ಹೋ?’ (‘ನೀನು ಯಾರು? ಮತ್ತೆ ಇಲ್ಲಿಗೇಕೆ ಬಂದಿದ್ದೀಯೆ?’) ಎಂದು ಕೇಳುತ್ತ, ನನ್ನ ತಲೆಯ ಮೇಲೆ ಪಾದುಕೆಗಳನ್ನು ಇಟ್ಟರು. ಪಾದುಕೆಯ ಸ್ಪರ್ಷವಾದ ಕೂಡಲೇ ನಾನು, ‘ಮೈ ಫಕೀರ ಸಾಧು ಹೂಂ’ (‘ನಾನು ಮುಸ್ಲಿಂ ಸಾಧುವು’) ಎಂದು ಹೇಳಿದೆನು. ಆಗ, ‘ಈಗ ಯಾವುದೋ ಅವಲಿಯಾ(ಮುಸ್ಲಿಂ ಸಾಧು) ಮಾತನಾಡುತ್ತಿದ್ದಾನೆ; ಇವನು ಅವನು ಅಲ್ಲವೇ ಅಲ್ಲ. ಇವನು ಬಹಳಿಷ್ಟು ನಾಸ್ತಿಕರೀತಿಯ ಕೆಲಸ ಮಾಡಿದ್ದಾನೆ; ಸಂತರಿಗೆ ತೊಂದರೆ ಕೊಟ್ಟಿದ್ದಾನೆ; ತಪ್ಪಾದದ್ದು ಒಪ್ಪಿಕೊಂಡು, ಕ್ಷಮೆ ಕೇಳು’ ಎಂದು ಸ್ವಾಮಿಗಳು ಹೇಳಿದರು ಮತ್ತು ಅಷ್ಟೇಕರನು ನನ್ನ ಕುತ್ತಿಗೆಗೆ ಮಾಲೆ ಹಾಕಿ, ನನ್ನ ಶಿರಸ್ಸನ್ನು ಸ್ವಾಮಿಗಳ ಪಾದದ ಮೇಲೆ ಇಟ್ಟರು. ಆಗ ನಾನು ಎಲ್ಲವನ್ನೂ ಮರೆತುಬಿಟ್ಟೆ ಮತ್ತು ನನ್ನಲ್ಲಿ ಶಾಂತಿ ಪಸರಿಸಿತು. ನಂತರ ಸತತ ಹದಿನೈದು ದಿನ ಸ್ವಾಮಿಗಳ ಸನ್ನಿಧಿಯಲ್ಲಿ ನಾನು ಹೋಗುತ್ತಿದ್ದೆ. ಸ್ವಾಮಿಗಳೊಂದಿಗೇ ಇರುವದು, ಉಣ್ಣುವದು ಎಲ್ಲಾ ಮಾಡುತ್ತಿದ್ದೆ. ಬೇಗಮಪೇಠದಲ್ಲಿರುವ ಶ್ರೀರಾಜಾ ಧುಂಡಿರಾಜಬಹಾದ್ದೂರರವರ ಬಂಗಲೆಯಲ್ಲಿ ನನ್ನನ್ನು ಇಟ್ಟುಕೊಂಡರು. ಅಲ್ಲಿ ನನ್ನಿಂದ ಪ್ರತಿದಿನ ಪಂಚಮುಖಿ ಹನುಮಾನ ಕವಚ ಓದಿಸಿಕೊಳ್ಳುತ್ತಿದ್ದರು ಮತ್ತು ‘ದಿಗಂಬರಾ, ದಿಗಂಬರಾ, ಶ್ರೀಪಾದವಲ್ಲಭ ದಿಗಂಬರಾ’ ಮಂತ್ರವನ್ನು ಜಪಿಸಲು ಹೇಳಿದರು. ನಂತರ ಸ್ವಾಮಿಗಳು ಹುಬ್ಬಳ್ಳಿ, ಧಾರವಾಡದ ಕಡೆಗೆ ಹೋಗಲು ಹೊರಟರು. ಆಗ ನಾನು ಸ್ವಾಮಿಗಳಿಗೆ, ‘ಸ್ವಾಮೀಜೀ! ನೀವು ಎಲ್ಲರಿಗೂ ಗುರುಮಂತ್ರ ಕೊಟ್ಟಿದ್ದೀರಿ, ದೀಕ್ಷೆ ಕೊಟ್ಟಿದ್ದೀರಿ; ಆದರೆ ನನಗೆ ಕೊಟ್ಟಿಲ್ಲ’, ಎಂದು ಹೇಳಿದೆ. ಆಗ ಸ್ವಾಮಿಗಳು, ‘ಅರೇ! ನಿನಗೆ ಯಾವಾಗಲೇ ಗುರುಮಂತ್ರ ಕೊಟ್ಟೆ, ದೀಕ್ಷೆ ಕೊಟ್ಟೆ. ನೆನಪಾಗುತ್ತಿಲ್ಲವೇ ನಿನಗೆ? ೧೫-೨೦ ದಿನಗಳ ಮೊದಲೇ ಧೋಂಡೀರಾಜ ತ್ರಿಬಕರಾಜ ಜಹಾಗೀರದಾರರ ಮನೆಯ ಮುಂದೆ, ಪೂರ್ವದಿಕ್ಕಿನ ತೋಟದಲ್ಲಿ ಸಾಯಂಕಾಲ ಆರು ಗಂಟೆಗೆ ಮಂತ್ರ ಕೊಟ್ಟೆನಲ್ಲ ಮಂತ್ರ; ಅದೇ ದೀಕ್ಷೆ, ಅದೇ ಮಂತ್ರ’ ಎಂದು ಹೇಳಿದರು. ಆಗ ನಾನು, ‘ಅದನ್ನು ನಾನು ಪ್ರತಿದಿನ ಹೇಳುತ್ತಿದ್ದೇನೆ’, ಎಂದು ನಾನು ಉತ್ತರಿಸಿದೆ. ಆಗ ಸ್ವಾಮಿಗಳು, ‘ನೀನು ಇಲ್ಲಿಯ ಕೆಲಸ ನಿಯಮದಂತೆ ನಡೆಸುತ್ತಿರು. ಅದರೊಂದಿಗೆ ಗುರುಚರಿತ್ರದ ಹನ್ನೆರಡು ಸಪ್ತಾಹ ಮಾಡು’, ಎಂದು ಹೇಳಿದರು.

ಸ್ವಾಮಿಗಳು ಹುಬ್ಬಳ್ಳಿಗೆ ಬರಲು ಹೇಳಿದ್ದರು. ಆದರೆ ಹೋಗಲಾಗಲಿಲ್ಲ. ಪಾರಾಯಣಗಳನ್ನು ಮಾತ್ರ ಪೂರ್ಣ ಮಾಡಿದೆ. ಆವಾಗಿನಿಂದ ‘ದೇವರಿದ್ದಾನೆ’, ಎಂದು ನಿಶ್ಚಿತವಾಗಿ ಅನಿಸಿತು. ಪಾರಾಯಣ ಮುಗಿದ ಮೇಲೆ ದೇವರು ಮತ್ತು ಸಾಧುಸಂತರ ಮೇಲೆ ಪ್ರೇಮಭಾವ ಅನಿಸಹತ್ತಿತು. ಮನೋವೃತ್ತಿಯಲ್ಲಿ ಬದಲಾವಣೆ ಆಯಿತು. ದೇವದರ್ಶನಕ್ಕೆ ಹೋಗಬೇಕೆಂದು ಅನಿಸಹತ್ತಿತು. ಸಾಧುಸಂತರು ಸಿಕ್ಕಿದಾಗ, ಅವರಿಗೆ ಬಗ್ಗಿ ನಮಸ್ಕಾರ ಮಾಡಬೇಕೆಂದು ಅನಿಸಹತ್ತಿತು. ಸಿಟ್ಟು – ಸಂತಾಪ ಕಡಿಮೆಯಾಯಿತು. ಆಗಿನಿಂದ ಇಲ್ಲಿಯವರೆಗೆ ಶ್ರೀ ಸದ್ಗುರು ಭಗವಾನ ಶ್ರೀಧರಸ್ವಾಮಿ ಮಹಾರಾಜರು ಹೇಳಿದ ಮಂತ್ರ ಮತ್ತು ಪಂಚಮುಖಿ ಹನುಮಾನ ಕವಚ ಪಠಣ ನಿತ್ಯ ನಡೆದಿದೆ. ಶ್ರೀ ಸದ್ಗುರು ಕೃಪೆಯಿಂದ ನನ್ನ ಜೀವನ ನಾಸ್ತಿಕದಿಂದ, ಆಸ್ತಿಕಕ್ಕೆ ತಿರುಗಿತು. ಇದು ಗುರುಮಾವುಲಿಯ ಕೃಪೆಯಿಂದಲೇ! ಇಷ್ಟು ಮಹಾನ್ ಸತ್ಪುರುಷರ ಸತ್ಸಂಗದ ಲಾಭ ನನಗೆ ಆಯಿತು. ಇದು ನನ್ನ ಮಹದ್ಭಾಗ್ಯವೇ!

|ಓಂ ಶಾಂತಿ ಶಾಂತಿ ಶಾಂತಿ|
|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಭಾದ್ರಪದ, ಶಕೆ ೧೯೦೧ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img