Memories

22. ಸದ್ಗುರು ಮಹಾರಾಜರು ನನಗೆ ಅನುಗ್ರಹ ಕೊಟ್ಟು ಪಾವನ ಮಾಡಿದರು ಮತ್ತು ನನ್ನ ಭಾಗ್ಯ ಲಕಲಕಿಸಿತು

(ನಿರೂಪಣೆ : ಶ್ರೀಧರಭಕ್ತ ಶ್ರೀ ಕಿಸನರಾವ ಚಿಂಚೋಳೀಕರ, ಹೈದರಾಬಾದ)

ದಿನಾಂಕ ೧ ಜಾನೇವರಿ, ೧೯೬೦
ಈ ದಿನ ಪೂಜ್ಯ ಸ್ವಾಮಿಗಳ ಮೊಟ್ಟ ಮೊದಲ ದರ್ಶನವಾಯಿತು. ಅವರು ನನಗೆ, ‘ಮಗಾ! ನೀನು ನಿನ್ನ ಉದ್ಧಾರ ಮಾಡಿಕೋ. ಇನ್ನೂ ಎಷ್ಟು ದಿನ ಹೀಗೇ ಕುಳಿತಿರುವೆ?’ ಎಂದು ಹೇಳಿದರು. ನಂತರ ಅವರು ನನ್ನ ತಂದೆಯವರ ಸಂಗಡ ನಮ್ಮ ಗ್ರಾಮದೇವತೆ ಮತ್ತು ಕುಲದೈವತದ ಬಗ್ಗೆ ಮಾತನಾಡಹತ್ತಿದರು. ಆಗ ನಮ್ಮ ತಂದೆಯವರ ಬಳಿಗೆ ಆಗಾಗ ಬರುವ ಒಬ್ಬ ಸಾಧು ಪೂಜ್ಯ ಮುಕುಂದ ಮಹಾರಾಜರು ನನಗೆ, ‘ನಮ್ಮದಲ್ಲದಿದ್ದರೂ ನಮ್ಮ ಪರಂಪರೆಯ ಆದೇಶ, ಈ ಮೊದಲೇ ನಮ್ಮ ಮಹಮದ ಹುಸೇನನು ಕೊಟ್ಟಿದ್ದಾನೆ. ಈಗ ನಿನ್ನ ಪ್ರಶ್ನೆಗಳ ಉತ್ತರಗಳನ್ನು ಸಜ್ಜನಗಡದಿಂದ ಬಂದಿರುವ ಈ ಶ್ರೀ ಪ.ಪ. ಭಗವಾನ ಶ್ರೀಧರ ಸ್ವಾಮಿ ನಿಶ್ಚಿತವಾಗಿಯೂ ಕೊಡುತ್ತಾರೆ. ಅವರೀಗ ನಿನ್ನ ತಂದೆಯವರ ಹತ್ತಿರ ಮಾತನಾಡುತ್ತ ಕುಳಿತಿದ್ದಾರೆ. ನೀನೂ ಅಲ್ಲಿಗೆ ಹೋಗು’ ಎಂದು ಹೇಳಿ, ನನ್ನ ಕೈ ಹಿಡಿದು, ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋದರು.

ದಿನಾಂಕ ೧೧ ಜಾನೇವರಿ, ೧೯೬೦
ನನಗೆ ಸ್ವಾಮಿಗಳ ದರ್ಶನ ಮಾಡಬೇಕೆಂಬ ಇಚ್ಛೆಯಾಯಿತು ಮತ್ತು ಅದರಂತೆ, ಕಾಚಿಗುಡಾದಲ್ಲಿನ ತುಳಜಾಭುವನದ ರಾಮಮಂದಿರಕ್ಕೆ ನಾನು ಹೋದೆನು. ಸ್ವಾಮಿಗಳ ಉಪದೇಶ ತೆಗೆದುಕೊಳ್ಳಬೇಕೆಂದೂ ಅನಿಸಿತು ಮತ್ತು ಅದರಂತೆ ಅದರ ಬಗ್ಗೆ ಅವರಿವರ ಹತ್ತಿರ ಕೇಳೂ ಕೇಳಿದೆ. ಅಲ್ಲಿ ಬಹಳಿಷ್ಟು ಸ್ವಾಮಿಗಳ ಶಿಷ್ಯವರ್ಗ ಕುಳಿತುಕೊಂಡಿದ್ದರು. ಅವುಗಳಲ್ಲಿ ಒಬ್ಬನು, ‘೧೦೧ ರೂಪಾಯಿ ಕೊಟ್ಟು ಪಾದಪೂಜೆ ಮಾಡಿದ ಮೇಲೆ ಉಪದೇಶ ಸಿಗುವದು’ ಎಂದು ಹೇಳಿದನು. ಅದನ್ನು ಕೇಳಿ ನಾನು ಮನೆಗೆ ಹಿಂತಿರುಗಿದೆ ಮತ್ತು ಮನೆಗೆ ಬಂದ ಮೇಲೆ ತಂದೆಯವರ ಪಾದಕ್ಕೆ ಮಸ್ತಕವನ್ನಿಟ್ಟೆ. ಆಗ ಅವರು, ‘ಇನ್ನೂ ಸಮಯ ಬಂದಿಲ್ಲ. ಬಡವರ ಮೇಲೆ ಮಹಾತ್ಮರ ಕೃಪೆ ಇದ್ದೇ ಇರುತ್ತದೆ. ಬಡವರ ಮತ್ತು ಸಂತರ ಸೇವೆ ಮಾಡುತ್ತಿರು ಮತ್ತು ಗ್ರಾಮದೈವತ ಮಥುರಾಪುರಿಗೆ ನಡೆದುಕೊಳ್ಳುತ್ತಿರು; ಆಗ ಶ್ರೀದೇವಿ ತಾನಾಗಿಯೇ ದಾರಿ ತೋರಿಸುತ್ತಾಳೆ’ ಎಂದು ಹೇಳಿದರು.

ಸೋಮವಾರ, ದಿನಾಂಕ ೧೮ ಜಾನೇವರಿ, ೧೯೬೦
ಆ ದಿನ, ಭಾರತ ಗುಣವರ್ಧಕ ಸಂಸ್ಥೆಯಲ್ಲಿ ಸ್ವಾಮಿಗಳ ಪ್ರವಚನವಿತ್ತೆಂದು, ನಾನು ಅಲ್ಲಿಗೆ ಹೋದೆ. ಅಲ್ಲಿಗೆ ಹೋದ ಮೇಲೆ, ನನ್ನ ಕಡೆಗೆ ನೋಡಿ ಸ್ವಾಮಿಗಳು, ಶ್ರೀ ವೆಂಕಟರಾವ ಧನಾಶ್ರೀಯವರಿಗೆ, ‘ಅಲ್ಲಿ ಹೋಗುತ್ತಿದ್ದಾನಲ್ಲಾ ಅವನನ್ನು ಇಲ್ಲಿಗೆ ಕರೆ’, ಎಂದು ಹೇಳಿದರು. ಅದರಂತೆ, ನಾನು ಅವರ ಬಳಿಗೆ ಹೋದೆ. ಸ್ವಾಮಿಗಳು ನನ್ನ ಮೂರೂ ಪ್ರಶ್ನೆಗಳಿಗೆ ಉತ್ತರವಿತ್ತರು ಮತ್ತು ಅವುಗಳಿಂದ ನನಗೆ ಸಮಾಧಾನವಾಯಿತು.(ನನ್ನ ಮೂರು ಪ್ರಶ್ನೆಗಳಿಗೆ ಉತ್ತರ ಯಾರು ಕೊಡುತ್ತಾರೋ, ಅವರಿಂದಲೇ ಗುರುಮಂತ್ರ ತೆಗೆದುಕೊಳ್ಳುವದೆಂದು ನನ್ನ ನಿಶ್ಚಯವಾಗಿತ್ತು ಮತ್ತು ಇಲ್ಲಿಯವರೆಗೆ ಬಹಳಿಷ್ಟು ಸಾಧು ಸಂತರಿಗೆ ನಾನೀ ಪ್ರಶ್ನೆ ಕೇಳಿದ್ದೆ. ಆದರೆ ಯಾರೂ ನನಗೆ ಸಮಾಧಾನಕರ ಉತ್ತರ ಕೊಟ್ಟಿರಲಿಲ್ಲ)
ನಂತರ ಸ್ವಾಮಿಗಳು, ‘ಹಿಂದೆ ಹನ್ನೊಂದನೇ ದಿನಾಂಕ ಬಂದವನು ತಿರುಗಿ ಯಾಕೆ ಹೋದೆ?’ ಎಂದು ಕೇಳಿದರು. ಶ್ರೀ ಗೋಡಸೇ ಅಲ್ಲೇ ಇದ್ದರು. ಅವರ ಕಡೆಗೆ ಬೆರಳು ಮಾಡಿ ತೋರಿಸಿ, ‘ಇವರನ್ನೇ ಕೇಳಿರಿ’, ಎಂದು ಹೇಳಿದೆ. ಅವರ ಸಂಗಡ ಏನೋ ಮಾತನಾಡಿ ನನಗೆ, ‘ನಾಳೆ ಬೆಳಿಗ್ಗೆ ರಾಜೋಪಾಧ್ಯಾಯರಲ್ಲಿ ಬಾ; ಬರುವಾಗ ತೆಂಗಿನಕಾಯಿ ತೆಗೆದುಕೊಂಡು ಬಾ’, ಎಂದು ಹೇಳಿದರು.

ದಿನಾಂಕ ೧೯ ಜಾನೇವರಿ, ೧೯೬೦
ಈ ದಿನ ಸದ್ಗುರು ಮಹಾರಾಜರು ನನಗೆ ಅನುಗ್ರಹ ಕೊಟ್ಟು ಪಾವನ ಮಾಡಿದರು ಮತ್ತು ನನ್ನ ಭಾಗ್ಯ ಚಮಕಿಸಿತು.
ಮನದಿ ಪಿಡಿದವು ಬಕ್ಕು| ಸಕಲ ವಿಘ್ನನಾಶವು ಅಕ್ಕು|
ರಘುನಾಥನ ಕೃಪೆಯೊಂದಿರಲು| ಪ್ರಚೀತಿಯಕ್ಕು|

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಭಾದ್ರಪದ ೧೯೦೧, ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img