Memories

23. ಶ್ರೀ ಸಮರ್ಥರ ಮೂಲರೂಪ ದರ್ಶನ’ ಎಂದೊಡನೆ, ಸ್ವಾಮಿಗಳು, ಅದೆಷ್ಟು ಗದ್ಗದರಾದರೆಂದರೆ, ಅವರಿಗೆ ಕೆಲ ಕ್ಷಣ ಮುಂದಿನ ಮಾತನಾಡಲಿಕ್ಕೇ ಆಗಲಿಲ್ಲ.

(ನಿರೂಪಣೆ : ಶ್ರೀಧರಭಕ್ತೆ ಶ್ರೀಮತಿ ಸುಮಿತ್ರಾ ಸೋಹನಿ, ಬೆಳಗಾವಿ)

ಶಕೆ ೧೮೮೧ …
ಶ್ರೀ ರಾಮ ನವಮಿಯ ಉತ್ಸವವನ್ನು ಸಾಧ್ಯತೆಗನುಸಾರವಾಗಿ, ಆದಷ್ಟು ಬೇರೆ ಬೇರೆ ಸ್ಥಳಗಳಲ್ಲಿಯೂ ಆಚರಿಸಬೇಕು, ಎಂಬ ಸ್ವಾಮಿಗಳ ಆದೇಶದಂತೆ, ಬೆಳಗಾವಿಯಲ್ಲಿಯೂ ಆ ವರ್ಷ ರಾಮನವಮಿಯ ಉತ್ಸವ ಪ್ರಾರಂಭವಾಯಿತು. ಸ್ವಾಮಿಗಳ ಪ್ರವಚನ ಕೇಳಲು ಅಸಂಖ್ಯ ಭಕ್ತಜನ ನೆರೆದಿದ್ದರು.

ಶ್ರೀ ಸಮರ್ಥರರ ಮೇಲೆ ಪ್ರವಚನ ಪ್ರಾರಂಭವಾಯಿತೆಂದರೆ, ಶ್ರೀಸಮರ್ಥರ ಹೆಸರು ಉಚ್ಛರಿಸಿದೊಡನೆ ಸ್ವಾಮಿಗಳಲ್ಲಿ ಅಷ್ಟಸಾತ್ವಿಕ ಭಾವ ಅರಳುತ್ತಿತ್ತು. ಸ್ವಾಮಿಗಳಿಗೆ ಮುಂದೆ ಕುಳಿತ ಅಸಂಖ್ಯ ಶ್ರೋತ್ರಜನರು ಅವರಿಗೆ ಕಾಣಿಸುತ್ತಲೇ ಇರಲಿಲ್ಲ. ಕೇವಲ ಶ್ರೀಸಮರ್ಥರೇ ಸ್ವಾಮಿಗಳಿಗೆ ಕಣ್ಮುಂದೆ ಇದ್ದು, ಪ್ರವಚನದ ಘಟನೆ, ಆ ಕ್ಷಣದಲ್ಲಿ ಅಲ್ಲಿ ಪ್ರತ್ಯಕ್ಷ ಘಟಿಸುತ್ತಿದೆ ಎಂಬ ಭಾವ ಸ್ವಾಮಿಗಳ ಮುಖದಿಂದ ಹೊರಹೊಮ್ಮುತ್ತಿತ್ತು. ಶ್ರೀಸಮರ್ಥ ಚರಿತ್ರೆಯಲ್ಲಿಯ ಯಾವುದಾದರೂ, ಮನಕ್ಕೆ ಮುದವೀಯುವ, ಮನವನ್ನು ಹದಗೊಳಿಸಿ, ಉಚ್ಚಸ್ಥರಕ್ಕೆ ಸೆಳೆದೊಯ್ಯುವ ಒಂದು ಪ್ರಸಂಗದ ಚುಟುಕು ಹೇಳಿ ನಂತರ ವಿಷಯ ಪ್ರಾರಂಭವಾಗುತ್ತಿತ್ತು.

ಒಮ್ಮೆ ಸಮರ್ಥ ಶಿಷ್ಯೆ ವೇಣಾಬಾಯಿ ಶ್ರೀಸಮರ್ಥರಿಗೆ ಮಜ್ಜಿಗೆ ಹುಳಿ ಬಡಿಸಲು ಮರೆತರೆಂದೂ ಮತ್ತು ಆಗ, ಮುಂದೆ ಬಡಿಸಲು ಹೊರಟ ವೇಣಾಬಾಯಿಗೆ ಶ್ರೀಸಮರ್ಥರ ಮೂಲರೂಪದ ದರ್ಶನವಾಯಿತು, ಎಂಬ ಆ ಪ್ರಸಂಗದ ಮಾತು ಹೇಳುತ್ತಿರುವಾಗ ‘ಶ್ರೀ ಸಮರ್ಥರ ಮೂಲರೂಪ ದರ್ಶನ’ ಎಂದೊಡನೆ, ಸ್ವಾಮಿಗಳು, ಅದೆಷ್ಟು ಗದ್ಗದರಾದರೆಂದರೆ, ಅವರಿಗೆ ಕೆಲ ಕ್ಷಣ ಮುಂದಿನ ಮಾತನಾಡಲಿಕ್ಕೇ ಆಗಲಿಲ್ಲ. ಈ ರೀತಿ ಪ್ರವಚನದಲ್ಲಿ ಯಾವಾಗಲೂ ಆಗುತ್ತಿತ್ತು. ಹೀಗಾಗಿ, ಆ ಗುರು – ಶಿಷ್ಯರ ಅಸೀಮ ಪ್ರೇಮದ ಪ್ರತ್ಯಕ್ಷ ಪ್ರಮಾಣ ಶ್ರೋತೃಗಳಿಗೆ ಅನೇಕ ವೇಳೆ ಕಾಣಿಸುತ್ತಿತ್ತು. ಸೌಭಾಗ್ಯದಿಂದ ನನಗೂ ಇದನ್ನು ಪ್ರತ್ಯಕ್ಷ ನೋಡಿ, ಆನಂದಿಸುವ ಅನುಭವ ದೊರೆಯಿತು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಭಾದ್ರಪದ ೧೯೦೧, ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img